ಲೈಫ್‌ಸ್ಟೈಲ್

ಊಟದ ರುಚಿ ಮತ್ತು ಆರೋಗ್ಯ

ಬೆಕ್ಕಿಗೆ ಮತ್ತು ಮಕ್ಕಳಿಗೆ ನಾವು ಕಲಿಸಿದಂತೆ ಇರುತ್ತದೆ ಎಂದು ಹಿರಿಯರು ಹೇಳುತ್ತಿದ್ದರು. ನಮ್ಮ ಜ್ಞಾನೇಂದ್ರಿಯಗಳೂ ಹಾಗೆಯೇ. ನಾವು ಅವಕ್ಕೆ ಅಭ್ಯಾಸ ಮಾಡಿಸಿದಂತೆ ಅವು ಕಲಿಯುತ್ತಾ ಹೋಗುತ್ತವೆ. ಸಣ್ಣ ಬೆಳದಿಂಗಳಿನ ಬೆಳಕಿನಲ್ಲಿ ನಡೆಯುತ್ತಿದ್ದಾಗ ಅಷ್ಟೇ ಬೆಳಕಿಗೆ ನಮ್ಮ ಕಣ್ಣು ಹೊಂದಿಕೊಳ್ಳುತ್ತದೆ.

ಆದರೆ ಒಂದು ಕಾರು ಹಾದುಹೋದರೆ ಆ ಕ್ಷಣಕ್ಕೆ ಎಲ್ಲ ಚೆನ್ನಾಗಿ ಕಂಡಂತೆ ಕಂಡರೂ ನಂತರ ಪೂರ್ತಿ ಕತ್ತಲೆನಿಸುತ್ತದೆ. ಅತೀಯಾದ ದೊಡ್ಡ ಶಬ್ದವನ್ನು ಕೇಳಿದ ಕಿವಿಗೆ ಸಣ್ಣ ಶಬ್ದವನ್ನು ಕೇಳಿಸಿಕೊಳ್ಳಲು ಸುಮಾರು ಸಮಯ ಹಿಡಿಯುತ್ತದೆ. ತುಂಬ ತಂಪಿನ ಅಥವಾ ತುಂಬ ಬಿಸಿ ಪದಾರ್ಥವನ್ನು ತಾಗಿಸಿದಾಗ ನಮ್ಮ ಚರ್ಮ ತನ್ನ ಸಂವೇದನಾಶಕ್ತಿಯನ್ನೇ ಕಳೆದುಕೊಳ್ಳುತ್ತದೆ.

ಹಾಗೆಯೇ ನಾಲಿಗೆಗೂ ಕೂಡ. ನಾವು ರುಚಿ ಕೊಡುತ್ತ ಹೋದಂತೆ ಅದು ತನ್ನ ಸಂವೇದನಾಶೀಲತೆಯನ್ನು ಕಡಿಮೆ ಮಾಡಿಕೊಳ್ಳುತ್ತದೆ. ಉತ್ತರ ಭಾರತದ ಒಬ್ಬ ರೋಗಿ ಹೇಳುತ್ತಿದ್ದರು, ‘ನಾನು ಆರೋಗ್ಯದ ಬಗ್ಗೆ ಯೋಚಿಸದೆ ರುಚಿಗಾಗಿ ಏನೇನನ್ನೂ ಮಾಡಬಹುದೋ ಅಷ್ಟೆಲ್ಲವನ್ನೂ ಮಾಡಿ, ಅಡುಗೆ ಮಾಡಿದ ನಂತರ ಅದಕ್ಕೆ ಟೇಸ್ಟಿಂಗ್ ಪೌಡರ್ ಹಾಕಿ ತಿನ್ನುತ್ತಿದ್ದೆ. ಏಕೆಂದರೆ ರುಚಿ ಹೆಚ್ಚಿಸಬೇಕೆಂದು ಅತಿಯಾದ ಉಪ್ಪು, ಹುಳಿ, ಖಾರಗಳನ್ನು ಬಳಸಿ ಅದು ಸಾಲದೆ ನಾಲಿಗೆಯು ಇನ್ನೂ ಹೆಚ್ಚಿನ ರುಚಿಯನ್ನು ಬೇಡತೊಡಗಿತ್ತು.’ ಅವರ ದೇಹವು ರೋಗದ ಗೂಡಾಗಿತ್ತು. ರುಚಿ ಹೆಚ್ಚಲೆಂದು ಉಪ್ಪು, ಹುಳಿ, ಖಾರಗಳನ್ನು ಅತಿಯಾಗಿ ಬಳಸಿದರೆ ನಾಲಿಗೆಯು ತನ್ನ ಸಂವೇದನಾಶೀಲತೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋಗುತ್ತದೆ. ಇದರಿಂದಾಗಿ ನಮಗೆ ಆಹಾರ ಎಷ್ಟು ರುಚಿಯಾಗಿದ್ದರೂ ಅದು ಕಡಿಮೆಯೆನಿಸುತ್ತದೆ. ಆದರೆ ಅವುಗಳನ್ನು ಕಡಿಮೆ ತಿನ್ನುತ್ತಾ ಹೋದರೆ ನಾಲಿಗೆ ಸಂವೇದನಾಶೀಲತೆ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಸೇವಿಸುವ ಆಹಾರಗಳು ರುಚಿಯೆನಿಸಲು ಪ್ರಾರಂಭವಾಗುತ್ತದೆ.

ಉತ್ತರ ಕರ್ನಾಟಕದವರ ನಾಲಿಗೆಗೆ ಕಡಕ್ ರೊಟ್ಟಿ ಅತ್ಯಂತ ಪ್ರಿಯವಾದರೆ ಮಂಡ್ಯದವರ ನಾಲಿಗೆಗೆ ರಾಗಿಮುದ್ದೆ ಅಂದರೆ ಅತಿ ರುಚಿ. ಏಕೆಂದರೆ ಅವರವರ ನಾಲಿಗೆಗೆ ಅದು ಒಗ್ಗಿಹೋಗಿದೆ. ಆಯುರ್ವೆದದಲ್ಲಿ ಇದನ್ನೇ ಸಾತ್ಮ್ಯಹಾರ ಎನ್ನುತ್ತಾರೆ. ಹಾಗೆಯೇ ಸತ್ವಯುತ ಆಹಾರವನ್ನು ರೂಢಿ ಮಾಡಿಸಿದರೆ ನಿಧಾನವಾಗಿ ನಾಲಿಗೆಗೆ ಅದೇ ರುಚಿಯೆನ್ನಿಸಲು ಪ್ರಾರಂಭವಾಗುತ್ತದೆ. ಹಾಗಾದರೆ ಆರೋಗ್ಯವಾಗಿರಲು ರುಚಿಯಿಲ್ಲದೆ ಸಪ್ಪೆಯಾದ ಆಹಾರವನ್ನೇ ಸೇವಿಸಬೇಕೆ ಎಂಬುದು ಹಲವರ ಪ್ರಶ್ನೆ. ಖಂಡಿತ ಹಾಗಿಲ್ಲ. ಆಯುರ್ವೆದವಂತೂ ‘ನಿತ್ಯಂ ಸರ್ವರಸಾಭ್ಯಾಸಃ ಆರೋಗ್ಯಕರಣಾಂ ಶ್ರೇಷ್ಠಂ’ ಎಂದು ಹೇಳಿದೆ.

ಅಂದರೆ ನಿತ್ಯವೂ ಷಡ್ರಸೋಪೇತವಾದ ಭೋಜನವನ್ನು ಮಾಡುವುದು ಅಂದರೆ ಎಲ್ಲ ರೀತಿಯ ರುಚಿಗಳನ್ನು ಸೇವಿಸುವುದು ಆರೋಗ್ಯವನ್ನು ಉಂಟುಮಾಡುವ ವಿಷಯಗಳಲ್ಲಿ ಶ್ರೇಷ್ಠವಾದದ್ದು ಎಂದರ್ಥ. ಅಷ್ಟಾಂಗ ಹೃದಯ ಗ್ರಂಥದಲ್ಲಿ ‘ಷಡ್ರಸಂ ಮಧುರಪ್ರಾಯಂ’ ಎಂದು ಹೇಳಿದ್ದಾರೆ. ಅಂದರೆ ಎಲ್ಲ ರುಚಿಯ ಆಹಾರವನ್ನು ಸೇವಿಸಬೇಕು. ಅದರಲ್ಲೂ ಸಿಹಿ ಪ್ರಧಾನವಾಗಿರಬೇಕು ಎಂದು. ಇಲ್ಲಿ ಸಿಹಿ ಎಂದರೆ ಯಾವುದು ನೈಸರ್ಗಿಕವಾಗಿ ಸಿಹಿಯಾಗಿರುತ್ತದೆಯೇ ಅದು. ಹಾಗಾಗಿ ನಿಸರ್ಗದತ್ತವಾಗಿ ಸಿಗುವ ಸಿಹಿ, ಹುಳಿ, ಖಾರ, ಕಹಿ ಇತ್ಯಾದಿ ಆರೋಗ್ಯಕ್ಕೆ ಅನುಕೂಲಕರ ರುಚಿಗಳನ್ನು ಬಳಸಬೇಕೇ ಹೊರತು ಸಿಹಿ ತಿನ್ನಲು ಹೇಳಿದ್ದಾರೆಂದು ಎಲ್ಲದಕ್ಕೂ ಸಕ್ಕರೆ ಹಾಕುವುದಲ್ಲ. ಅದರ ಬದಲಿಗೆ ಹಣ್ಣುಗಳು, ಹಾಲು, ತುಪ್ಪ, ಎಳನೀರು ಇತ್ಯಾದಿಗಳನ್ನು ಬಳಸಬೇಕು. ಖಾರ ಸೇವಿಸಬೇಕಾದಾಗ ಕಾಳುಮೆಣಸು, ಶುಂಠಿ ಮುಂತಾದವನ್ನು ಬಳಸಬಹುದು; ಸಾಸ್ ಬಳಸಬೇಕಿಲ್ಲ. ಸಾಂಬಾರು ಬಟ್ಟಲಿನಲ್ಲಿರುವ ಎಲ್ಲ ದ್ರವ್ಯಗಳೂ ಆರೋಗ್ಯಕರವೇ ಜೊತೆಗೆ ರುಚಿಯನ್ನು ಹೆಚ್ಚು ಮಾಡುವಂಥವು. ಚಕ್ಕೆಪೌಡರ್ ಊಟದ ರುಚಿಯನ್ನಷ್ಟೇ ಅಲ್ಲ, ಆರೋಗ್ಯವನ್ನೂ ವೃದ್ಧಿಸುತ್ತದೆ. ಇಂಥವುಗಳನ್ನು ನಮ್ಮ ಊಟದ ರುಚಿಯನ್ನೂ, ಆರೋಗ್ಯವನ್ನೂ ಹೆಚ್ಚಿಸಿಕೊಳ್ಳಬಹುದು. ನಮ್ಮ ಹಿರಿಯರಿಗೆ ಇದೆಲ್ಲ ತಿಳಿದಿತ್ತು.

ಕರಿಬೇವಿನ ಸೊಪ್ಪು ಒಗ್ಗರಣೆಗಾಗಿ ಬಳಸುತ್ತಿದ್ದ ಕಾರಣ ಊಟದ ರುಚಿಗಾಗಿ ಒಂದೇ ಅಲ್ಲ, ಆಹಾರದಲ್ಲಿರುವ ವಿಷವನ್ನೂ ತೆಗೆಯುತ್ತದೆ; ದೇಹಕ್ಕೆ ಪುಷ್ಟಿ ನೀಡುತ್ತದೆ ಎಂಬುದೂ ಆಗಿತ್ತು. ಇವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತ ಊಟದ ರುಚಿ ಹೆಚ್ಚಿಸಿಕೊಳ್ಳೋಣ. ಆರೋಗ್ಯಯುತ ಊಟವೇ ರುಚಿ ಎಂಬಂತೆ ನಾಲಿಗೆಯನ್ನೂ ಒಗ್ಗಿಸಿಕೊಳ್ಳೋಣ.