ಲೈಫ್‌ಸ್ಟೈಲ್

ಆತ್ಮದ ಸ್ಥೈರ್ಯ, ಮನಸ್ಸಿನ ಧೈರ್ಯ, ಶರೀರದ ಶೌರ್ಯ- ಇದೇ ಗೆಲುವಿನ ಸೂತ್ರ

ಇದೊಂದು ವಿಚಿತ್ರವಾದ ಸನ್ನಿವೇಶ. ಜ್ವರದಿಂದ ಮೈ ಕುದಿಯುತ್ತಿರುವ ವ್ಯಕ್ತಿ ವೈದ್ಯರಲ್ಲಿಗೆ ಬಂದು, ‘ಡಾಕ್ಟ್ರೇ, ಸ್ವಲ್ಪ ಜ್ವರವಿದೆ. ನಿಮಗೆ ಬೇಕೆಂದು ಅನಿಸಿದರೆ, ಅಷ್ಟೂ ಅಗತ್ಯವಿದ್ದರೆ ಔಷಧ ಕೊಡಿ’ ಎಂದು ಬಿನ್ನವಿಸಿಕೊಳ್ಳುತ್ತಾನೆ.

ವೈದ್ಯರು ಕೊಟ್ಟ ಔಷಧದಿಂದ ಎರಡೇ ದಿನಗಳಲ್ಲಿ ರೋಗವು ಪೂರ್ತಿಯಾಗಿ ವಾಸಿಯಾಗುತ್ತದೆ. ಇನ್ನೊಬ್ಬ ವ್ಯಕ್ತಿಗೆ ಅಲ್ಪವೇ ಜ್ವರವಿರುತ್ತದೆ. ವೈದ್ಯರಲ್ಲಿಗೆ ಧಾವಂತದಿಂದ ಓಡೋಡಿ ಬಂದು, ‘ವೈದ್ಯಮಹಾಶಯರೇ, ನೀವೇ ನನಗೀಗ ದೇವರು. ಜೀವನದಲ್ಲೇ ಬರದಂತಹ ಜ್ವರ ಬಂದಿದೆ. ಬದುಕಿಸುವಂತಹ ಔಷಧ ನಿಮ್ಮಲ್ಲಿದ್ದರೆ, ನಾನು ಉಳಿಯುವ ಸಾಧ್ಯತೆಯಿದ್ದರೆ ಎಲ್ಲ ಪ್ರಯತ್ನಗಳನ್ನೂ ಹಾಕಿ ದಯವಿಟ್ಟು ಬದುಕಿಸಿ. ನಾನು ಎಂದೆಂದೂ ನಿಮಗೆ ಚಿರಋಣಿಯಾಗಿರುತ್ತೇನೆ.’ - ಹೀಗೆ ಗಾಬರಿಯಿಂದ ಅಂಗಲಾಚಿದ ರೋಗಿ ಅಲ್ಪ ಜ್ವರದಿಂದ ಹೊರಬರಲು ನಾಲ್ಕು ದಿನ ಬೇಕಾಗುತ್ತದೆ! ಒಬ್ಬ ವ್ಯಕ್ತಿಗೆ ಕಿಡ್ನಿಯ ವೈಫಲ್ಯದ ಆರಂಭಿಕ ಲಕ್ಷಣವಾಗಿ ಸಿರಮ್ ಕ್ರಿಯಾಟಿನಿನ್ ಮಟ್ಟ ತುಸು ಏರಿಕೆಯಾಯಿತು ಎಂದಿಟ್ಟುಕೊಳ್ಳಿ. ನಗರವಾಸಿಯಾಗಿದ್ದರಂತೂ ಅಂತರ್ಜಾಲದಲ್ಲಿ ಮೂತ್ರಪಿಂಡ ವೈಫಲ್ಯದ ವಿಚಾರಗಳನ್ನು ನಿರಂತರವಾಗಿ ಕೆದಕಿ ಅಧ್ಯಯನ ನಡೆಸಿ ಹೆದರಿ ಹಿಂಡಿ ಹಿಪ್ಪೆಯಾಗುತ್ತಾರೆ. ಆ ಪರೀಕ್ಷೆ ವರದಿಯೇ ತಪ್ಪೋ ಸರಿಯೋ ಎಂದು ಪರಾಂಬರಿಸಿ ನೋಡುವುದನ್ನೂ ಮರೆತಿರುತ್ತಾರೆ.

ಮಹಾರೋಗ ಬಂತೆಂದು ತಲೆಯ ಮೇಲೆ ಕಲ್ಲು ಬಿದ್ದವರಂತೆ ಉಡುಗಿಹೋಗಿರುತ್ತಾರೆ. ಇವರ ಆರೋಗ್ಯ ಮತ್ತೆ ಸರಿದಾರಿಗೆ ಬರಲು ಬಹಳ ಕಷ್ಟಪಡಬೇಕಾಗುತ್ತದೆ. ಅದೇ ಅಕ್ಷರಾಭ್ಯಾಸ ಇಲ್ಲದ ಹಳ್ಳಿಯ ವ್ಯಕ್ತಿಗೆ ಕ್ರಿಯಾಟಿನಿನ್ ಮಟ್ಟ ಏಳಕ್ಕೆ ತಲುಪಿದೆ ಎಂದಿಟ್ಟುಕೊಳ್ಳಿ. ಸಂಬಂಧಿತ ವೈದ್ಯರು ಡಯಾಲಿಸಿಸ್ ಆರಂಭಿಸಬೇಕು, ಇಲ್ಲವೇ ಮೂತ್ರಪಿಂಡ ಬದಲಾಯಿಸಬೇಕು ಎಂಬ ಸಲಹೆ ನೀಡಿರುತ್ತಾರೆ. ಅಂತಹ ರೋಗಿ ಬಂದಾಗ, ‘ವಾರಕ್ಕೆ ಮೂರು ಬಾರಿ ಆಸ್ಪತ್ರೆಗೆ ಹೋಗಬೇಕಂತೆ. ಮನೆಯಲ್ಲಿ ಎಲ್ಲ ಕೆಲಸ ನಾನೇ ಮಾಡಬೇಕು, ಅಂತಹ ವ್ಯವಸ್ಥೆ ನಮಗೆ ಸುಲಭವಿಲ್ಲ’ ಎಂದು ಕೆಲಸ ಹಾಗೂ ಸೌಕರ್ಯಗಳ ತೊಂದರೆಯ ಬಗ್ಗೆಯಷ್ಟೇ ಚಿಂತಿತರಾಗಿರುತ್ತಾರೆ. ಕಾಯಿಲೆಯ ಗಂಭೀರ ಸ್ವರೂಪದ ಅರಿವೇ ಇಲ್ಲದೆ, ರೋಗದ ಮುಂದಿನ ಹಾದಿಯ ತಿಳಿವಳಿಕೆಯೂ ಇಲ್ಲದೆ ಒಮ್ಮೆ ಇದು ಗುಣವಾದರೆ ಸಾಕೆಂಬ ಮನೋಭಾವವನ್ನಷ್ಟೇ ಇಟ್ಟುಕೊಂಡಿರುತ್ತಾರೆ. ಆಶ್ಚರ್ಯಕರ ರೀತಿಯಲ್ಲಿ ಬಲುಬೇಗ ಅವರು ಗುಣವಾಗುತ್ತ ಹೋಗುವುದನ್ನೂ ನೋಡುತ್ತೇವೆ!

ರೋಗದ ಬಗ್ಗೆ ರೋಗಿಯು ತಿಳಿಯುತ್ತ ಹೋಗುವುದೇ ಪರಿಹಾರವಲ್ಲ. ಸಮಸ್ಯೆಗೆ ಪರಿಹಾರವಾಗಿರುವ ಆಹಾರ-ವಿಹಾರ, ಆಚಾರ-ವಿಚಾರಗಳ ಜ್ಞಾನವೇ ಪರಿಹಾರಕ್ಕೆ ಸಹಾಯಕವಾಗುತ್ತದೆ ಎಂಬುದನ್ನು ನಾವೆಲ್ಲ ಮನಗಾಣಲೇಬೇಕು. ಮನಸ್ಸು ಎಂದಿಗೂ ರೋಗಕ್ಕೆ ಶರಣಾಗಲು ಬಿಡಕೂಡದು. ಸಾಂಕ್ರಾಮಿಕ ರೋಗ ಯಾವುದೇ ಇರಲಿ, ಗುರಿಯತ್ತ ಚಿತ್ತವಿರಬೇಕು. ಕಾಯಕದಲ್ಲಿ ಎಚ್ಚರವಿರಬೇಕು. ವ್ಯಾಧಿ ಎದುರಿಸುವ ವೀರತ್ವ ಇರಬೇಕು. ಇದಕ್ಕಾಗಿ ರೋಗದೊಡನೆ ಹೋರಾಡಿ ಗೆಲ್ಲುವ ಮನಃಸ್ಥಿತಿಯನ್ನು ಸದಾ ಇಟ್ಟುಕೊಂಡಿರಬೇಕು. ಆತ್ಮಕ್ಕೆ ಶಕ್ತಿ ತುಂಬಬೇಕು. ದೇಹವನ್ನು ಸದೃಢವಾಗಿರಿಸಲು ಬೇಕಾದ ಎಲ್ಲ ಉಪಚಾರಗಳನ್ನೂ ನಿಷ್ಠೆಯಿಂದ ಮಾಡಬೇಕು. ಆತ್ಮದ ಸ್ಥೆ ೖರ್ಯ, ಮನಸ್ಸಿನ ಧೈರ್ಯ, ಶರೀರದ ಶೌರ್ಯ - ಇದೇ ಗೆಲುವಿನ ಸೂತ್ರ.