ಮಂಡಲದ ಹಾವು 
ಲೈಫ್‌ಸ್ಟೈಲ್

ಜನರೇ ಎಚ್ಚರ... ಈ ಒಂದು ಕಾಮನ್​ ಮಿಸ್ಟೇಕ್​ನಿಂದ ಹಾವು ಕಡಿತದ ಪ್ರಕರಣಗಳು ಹಚ್ಚುತ್ತಿವೆ! Snakes

ಪ್ರಮುಖ ಮುಖ್ಯಾಂಶಗಳು

  • ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಕೂಡ ಒಂದು
  • ಈ ಜೀವಿ ಶತಮಾನಗಳಿಂದಲೂ ಜನರ ಜೀವಕ್ಕೆ ಬೆದರಿಕೆಯಾಗಿದೆ
  • ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ
Snakes : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಕೂಡ ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಹಾವುಗಳ ಬೆದರಿಕೆ ಹೆಚ್ಚಾಗುವುದು ಸಹಜ. ಅಲ್ಲದೆ, ಚಳಿಗಾಲದಲ್ಲೂ ಹಾವುಗಳ ಉಪಟಳ ಇರುತ್ತವೆ. ಏಕೆಂದರೆ, ಚಳಿಗಾಲದಲ್ಲಿ ಹಾವುಗಳು ಬೆಚ್ಚನೆಯ ಪ್ರದೇಶವನ್ನು ಹುಡುಕಿ ಬರುತ್ತವೆ. ರಾಜ್ಯದಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಹಾವುಗಳ ಉಪಸ್ಥಿತಿ ಹೆಚ್ಚಿರುವುದರಿಂದ, ಅಪಾಯವು ಕೂಡ ಹೆಚ್ಚಾಗಿದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಇನ್ನು ಹಾವು ಕಡಿತದ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಕೊಳಕು ಮಂಡಲದ ಹಾವುಗಳಿಂದ ( Russell viper ) ಉಂಟಾಗುತ್ತವೆ. ಈ ಕೊಳಕು ಮಂಡಲ, ಹಾವುಗಳಲ್ಲೇ ಅತ್ಯಂತ ಅಪಾಯಕಾರಿ ಮತ್ತು ನಮ್ಮ ದೇಶದಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವ ಹಾವುಗಳಾಗಿವೆ. ಈ ಹಾವಿನ ವಿಚಾರದಲ್ಲಿ ಆ್ಯಂಟಿ ವೆನಮ್​ ಚಿಕಿತ್ಸೆ ತುಂಬಾ ಕಷ್ಟಕರವಾಗಿರುತ್ತದೆ. ಏಕೆಂದರೆ, ಇತರ ಹಾವುಗಳಿಗೆ ಹೋಲಿಸಿದರೆ ಒಂದೇ ಕಡಿತದಲ್ಲಿ ಹೆಚ್ಚಿನ ಪ್ರಮಾಣದ ವಿಷವನ್ನು ಹೊರಸೂಸುವ ಸಾಮರ್ಥ್ಯವು ಕೊಳಕು ಮಂಡಲವನ್ನು ಹೆಚ್ಚು ಅಪಾಯಕಾರಿಯನ್ನಾಗಿ ಮಾಡುತ್ತದೆ.
ಇದಿಷ್ಟೇ ಅಲ್ಲದೆ, ಕೊಳಕು ಮಂಡಲದಲ್ಲಿ ಒಳಮುಖವಾಗಿ ಬಾಗಿದ ವಿಷಕಾರಿ ಕೋರೆಹಲ್ಲುಗಳಿಂದ ಉಂಟಾಗುವ ಗಾಯಗಳು ಸಹ ಹೆಚ್ಚು ಸಮಸ್ಯೆಯನ್ನು ಉಂಟು ಮಾಡುತ್ತವೆ. ಕೆಲವೊಮ್ಮೆ ಕಚ್ಚಿದ ಸ್ಥಳವನ್ನೇ ಕತ್ತರಿಸಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾವು ಹಿಡಿಯುವವರು ಸಹ ಬಹಳ ಎಚ್ಚರಿಕೆಯಿಂದ ಮತ್ತು ಭಯದಿಂದ ಹಿಡಿಯುತ್ತಾರೆ. ಕೊಳಕು ಮಂಡಲದ ಬಾಲದ ತುದಿಯಲ್ಲಿ ನಿಂತು ಹಿಡಿಯುವ ಪ್ರಯತ್ನ ಮಾಡಿದರು ಸಹ, 360 ಡಿಗ್ರಿ ತಿರುಗಿ, ಜಿಗಿದು ಎದುರಾಳಿಯನ್ನು ಕಚ್ಚುವ ಸಾಮರ್ಥ್ಯವು ಈ ಹಾವಿಗಿದೆ.
ಇನ್ನು ಹಾವನ್ನು ಕೊಲ್ಲಲು ಪ್ರಯತ್ನಿಸುವ ಸಂದರ್ಭಗಳಲ್ಲಿ ಹಾವು ಕಡಿತದ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಹೀಗಾಗಿ ಮುಂದಿನ ಎರಡು ತಿಂಗಳುಗಳಲ್ಲಿ ನೀವು ಬಹಳ ಜಾಗರೂಕರಾಗಿರಬೇಕು. ಏಕೆಂದರೆ, ಹಾವುಗಳ ಮಿಲನ ಸಮಯ ಇದಾಗಿದೆ. ಬೇರೆ ಹಾವುಗಳನ್ನು ಹುಡುಕಿ ಬರುವಾಗ ಜನ ವಸತಿ ಪ್ರದೇಶಗಳನ್ನು ಹಾದು ಹೋಗಬಹುದು. ಅಂತಹ ಸಂದರ್ಭಗಳಲ್ಲಿ ಹಾವು ಕಡಿತಕ್ಕೆ ಒಳಗಾಗಬಹುದು. ಹೀಗಾಗಿ, ನಿಮ್ಮ ಪ್ರದೇಶದಲ್ಲಿ ಆ್ಯಂಟಿ ವೆನಮ್​ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗಳ ಬಗ್ಗೆ ಮೊದಲೇ ತಿಳಿದುಕೊಂಡರೆ ಒಳಿತು.
ಅಂದಹಾಗೆ, ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡದ ಸ್ಥಳಕ್ಕೆ ಹಾವುಗಳು ಪ್ರವೇಶಿಸುವ ಸಾಧ್ಯತೆಯು ಹೆಚ್ಚಿನ ಹಾವು ಕಡಿತಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ನಿಮ್ಮ ಮನೆಯ ಆವರಣವನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು ಮರೆಯಬೇಡಿ, (ಏಜೆನ್ಸೀಸ್​).