ಆಯುರ್ವೇದದ ಚರಕಸಂಹಿತೆಯಲ್ಲಿ ಈ ಕುರಿತಾದ ನುಡಿಗಳು ಗಮನ ಸೆಳೆಯುತ್ತವೆ. ಮನಸ್ಸು ಸಂತೋಷದಿಂದ ಇದ್ದಾಗ ಸೇವಿಸುವ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಚಿಂತೆಯಿದ್ದಾಗ, ಬೇಸರವಾದಾಗ, ಭಯವಿದ್ದರೆ, ಕೋಪವಿರುವಾಗ, ರಾತ್ರಿ ನಿದ್ದೆ ಸರಿಯಾಗದಿದ್ದರೆ ತಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಸಾತ್ವಿಕಗುಣದ ವ್ಯಕ್ತಿಗಳು ಯೋಗ್ಯ ಹಾಗೂ ಸಮಪ್ರಮಾಣದ ಆಹಾರವನ್ನು ಸೇವಿಸುತ್ತಾರೆ. ರಾಜಸಿಕ ವ್ಯಕ್ತಿಗಳು ಹೊಟ್ಟೆ ಪೂರ್ಣವಾಗಿ ತುಂಬುವವರೆಗೆ ರುಚಿಯಾದ ಆಹಾರವನ್ನು ಸೇವಿಸಬಯಸುತ್ತಾರೆ! ತಾಮಸಿಕ ಜನರು ನಾಲಿಗೆಯ ಮೇಲೆ ನಿಯಂತ್ರಣವಿಲ್ಲದೆ ಮಿತಿಮೀರಿ ತಿನ್ನುತ್ತಾರೆ!
ಭಗವದ್ಗೀತೆಯು ಮನಸ್ಸಿನ ಮೇಲೆ ಆಹಾರದ ಪರಿಣಾಮವನ್ನು ಸ್ಪಷ್ಟ ವಾಕ್ಯಗಳಲ್ಲಿ ಹೇಳಿದೆ. ಹಣ್ಣುಗಳ ರಸ, ದ್ರವಾಹಾರ, ಹಾಲು, ಬೆಣ್ಣೆ, ತುಪ್ಪಗಳಿಂದ ಕೂಡಿದ ದೇಹಪೋಷಕ ಜಿಡ್ಡುಗಳು, ಒಣಹಣ್ಣುಗಳು, ಹೃದಯಕ್ಕೆ ಹಿತವಾಗಿರುವ, ರುಚಿಕರವಾದ ಸಾತ್ವಿಕ ಆಹಾರ ಸೇವನೆಯಿಂದ ಆಯುಸ್ಸು, ಆರೋಗ್ಯ, ಸುಖ, ಪ್ರೀತಿ, ದೈಹಿಕ ಹಾಗೂ ಮಾನಸಿಕ ಬಲಗಳು ಸಂವರ್ಧನೆಯಾಗುತ್ತದೆ. ಸಾತ್ವಿಕ ಜನರು ಸಾತ್ವಿಕ ಆಹಾರವನ್ನೇ ಬಯಸುವುದರಿಂದ ಅವರ ಸತ್ತ್ವಗುಣ ಇನ್ನಷ್ಟು ಉತ್ಕರ್ಷಗೊಳ್ಳುತ್ತದೆ. ಅತಿಯಾದ ಖಾರ, ಹುಳಿ, ಉಪ್ಪು, ಅತಿಬಿಸಿ, ತೀಕ್ಷ್ಣ, ಒಣ, ಹುಳಿ ಬಂದ ಆಹಾರಗಳು ರಜೋಗುಣ ಹೆಚ್ಚಿಸುವವುಗಳಾಗಿದ್ದು ರಾಜಸಿಕ ವ್ಯಕ್ತಿಗಳು ಇಷ್ಟಪಡುತ್ತಾರೆ. ಪರಿಣಾಮವಾಗಿ ದುಃಖ, ಬೇಸರ, ರೋಗಗಳಿಗೆ ತುತ್ತಾಗಿ ಕಷ್ಟಪಡುತ್ತಾರೆ! ತಯಾರಿಸಿ ಮೂರು ಗಂಟೆ ಕಳೆದ, ರುಚಿ ಕಳೆದುಕೊಂಡ, ವಾಸನೆ ಬದಲಾಗುತ್ತಿರುವ, ಉಳಿದ ಹಳೆಯದಾದ, ಇನ್ನೊಬ್ಬರು ತಿಂದ, ಮನಸ್ಸನ್ನು ಕೆಡಿಸುವ ಆಹಾರ ತಾಮಸಿಕರಿಗಷ್ಟೇ ಪ್ರೀತಿ! ಇದರಿಂದ ಮಿದುಳು, ಮನಸ್ಸು, ಬುದ್ಧಿಗಳ ಅವನತಿ ಖಾತರಿ!
ಕೊನೇಹನಿ: ಅಶೋಕಮರದ ಒಣಗಿದ ಹೂವಿನ ಅರ್ಧ ಲೋಟ ಕಷಾಯದ ನಿತ್ಯಸೇವನೆ ಮಧುಮೇಹದಲ್ಲಿ ಪ್ರಯೋಜನಕಾರಿ.