Dangerous Hotels: ಐಷಾರಾಮಿ, ದುಬಾರಿ ಹೋಟೆಲ್ಗಳಿಗೆ ಭೇಟಿ ನೀಡುವುದು, ಅಲ್ಲಿನ ಊಟ-ಉಪಚಾರ ಸವಿಯುವುದು ಎಂದರೆ ಅದೇನೋ ಒಂಥರಾ ಖುಷಿ ಜನರಿಗೆ. ಅದರಲ್ಲೂ, ಈ ಕಡಲ ತೀರದಲ್ಲಿ, ದ್ವೀಪದಲ್ಲಿ ಅಥವಾ ಸಮುದ್ರದೊಳಗೆ ಕಟ್ಟಲಾದ ಹೋಟೆಲ್ಗಳ ದಿನಚರಿ ಹೇಗಿರುತ್ತೆ? ಅಲ್ಲಿನ ಅನುಭವ ನಿಜಕ್ಕೂ ಭಯಾನಕವೇ ಎಂಬುದನ್ನು ಅನ್ವೇಷಿಸೋದು ಬಲು ಮಜಾ ಬಿಡಿ.
ಒಂದು ಸಣ್ಣ ಅಕ್ವೇರಿಯಂನಲ್ಲಿ ಮೀನು ಈಜಾಡಿದರೆ, ಅದನ್ನು ಆನಂದಿಸುವ ನಾವು, ಅದೇ ಗಾಜಿನಿಂದ ನಿರ್ಮಿಸಲಾದ ಬೃಹತ್ ಆಕಾರದ ಐಷಾರಾಮಿ ಹೋಟೆಲ್‌ಗಳಲ್ಲಿ ಮತ್ಸ್ಯ ಲೋಕವನ್ನು ಕಂಡರೆ ಉತ್ಸುಕತೆಗೆ ಪಾರವೇ ಇಲ್ಲ. ಶಾರ್ಕ್, ಆಕ್ಟೋಪಸ್, ಏಡಿ ಹೀಗೆ ಮುಂತಾದ ನೀರಿನಲ್ಲಿ ಬದುಕುವ ಜೀವರಾಶಿಗಳು ನಮ್ಮ ತಲೆಯ ಮೇಲೆ ಸುತ್ತಾಡುತ್ತಿರುವ ದೃಶ್ಯ ಒಂದು ಅಮೋಘ ಅನುಭವ ನೀಡುವುದೇ ಆದರೂ, ಅದೇ ಅಲ್ಲಿನ ಗಾಜು ಒಂದು ಸಣ್ಣ ಬಿರುಕು ಬಿಟ್ಟರೆ ಅಥವಾ ಒಡೆದು ಹೋದರೆ ಏನು ಗತಿ ಎಂಬ ಭಯ ಖಂಡಿತ ಹಲವರಿಗೆ ಕಾಡುತ್ತಿರುತ್ತದೆ. ಮತ್ಸ್ಯ ಲೋಕದಲ್ಲಿ ನಿರ್ಮಿಸಲಾದ ಈ ಭಯಾನಕ ಐಷಾರಾಮಿ ಹೋಟೆಲ್ಗಳು ಯಾವುವು? ಇವು ಎಲ್ಲಿವೆ? ಎಂಬುದರ ವಿವರ ಹೀಗಿದೆ ನೋಡಿ.
ಮಾಲ್ಡೀವ್ಸ್‌ನ 'ದಿ ಮುರಕಾ'
ಬಹುತೇಕರಿಗೆ ಈ ಮಾಲ್ಡೀವ್ಸ್ ಬಗ್ಗೆ ಗೊತ್ತೇ ಇದೆ. ಈಗ ತಾನೇ ಮದುವೆಯಾದ ಅನೇಕ ನವ ಜೋಡಿಗಳು ಹನಿಮೂನ್ಗೆಂದು ಭೇಟಿ ನೀಡುವ ಜನಪ್ರಿಯ ತಾಣ. ಚಿಕ್ಕದಾದ ಈ ದ್ವೀಪದಲ್ಲಿ 'ಮುರಕಾ' ಎಂಬ ಅದ್ಭುತ ವಿಲ್ಲಾ ಇದೆ. ಅದು ಸಮುದ್ರ ಮಟ್ಟಕ್ಕಿಂತ ಸುಮಾರು 16 ಅಡಿ ಕೆಳಗಿದೆ. ಇದರ ವಿನ್ಯಾಸವೇ ಅದ್ಭುತ. ಕಟ್ಟಡದ ಮೇಲಿನ ಎಲ್ಲವೂ ಗಾಜಿನ ಸೀಲಿಂಗ್!
ನೀವು ಹಾಸಿಗೆಯ ಮೇಲೆ ಆರಾಮವಾಗಿ ಮಲಗಿ ಮೇಲಕ್ಕೆ ನೋಡಿದರೆ, ನೀಲಿ ನೀರು ಮತ್ತು ಅದರಲ್ಲಿ ಚಲಿಸುವ ಸಮುದ್ರ ಜೀವಿಗಳನ್ನು ಮಾತ್ರ ನೋಡಬಹುದು. ಅಂತಹ ವಿಶೇಷ ಹಾಗೂ ವಿಭಿನ್ನ ಡಿಸೈನ್ ಇಲ್ಲಿದೆ. ಗಾಜಿನ ಪಕ್ಕದಲ್ಲೇ ಶಾರ್ಕ್ನಂತಹ ದೈತ್ಯ ಜೀವಿಗಳು ಓಡಾಡುವುದನ್ನು ನೋಡುವ ಭಯಾನಕ ಅನುಭವ ನಿಜಕ್ಕೂ ಒಂದು ನಿಮಿಷ ಮೈನಡುಗಿಸುತ್ತದೆ. ಇಲ್ಲಿ ಒಂದು ರಾತ್ರಿ ಉಳಿಯಲು ಬರೋಬ್ಬರಿ 15 ಲಕ್ಷದಿಂದ 40 ಲಕ್ಷ ರೂ. ತಗುಲುತ್ತದೆ ಎನ್ನಲಾಗಿದೆ.
ಅಟ್ಲಾಂಟಿಸ್, ದಿ ಪಾಮ್, ದುಬೈ
ದುಬೈ ಐಷಾರಾಮಿಯ ಪ್ರತೀಕ. ಇಲ್ಲಿನ ಗಾಜಿನ ವಿನ್ಯಾಸ ನೋಡಿದರೆ ಹುಬ್ಬೇರೋದು ಖಚಿತ. ಈ ಕಿಟಕಿಗಳ ಆಚೆ ಸುಮಾರು 65,000 ಸಮುದ್ರ ಜೀವಿಗಳು ಸಂಚರಿಸುತ್ತವೆ ಎಂದರೆ ನಂಬುತ್ತೀರಾ? ಇಲ್ಲ ಎಂದರೂ ನಂಬುವಂತ ವಿಷಯವೇ ಬಿಡಿ. ನೀವು ಹಲ್ಲುಜ್ಜುತ್ತಿರಲಿ ಅಥವಾ ಕಾಫಿ ಕುಡಿಯುತ್ತಿರಲಿ, ದೈತ್ಯ ಸ್ಟಿಂಗ್ ರೇನಂತಹ ಜೀವಿಗಳು ನಿಮ್ಮನ್ನು ನೋಡಿ ಹೋಗುತ್ತದೆ. ಇಲ್ಲಿನ ಸೌಲಭ್ಯಗಳು ಅರಮನೆಯಂತೆ ಭವ್ಯವಾಗಿ ಕಂಡರೂ, ಇಡೀ ಹೋಟೆಲ್ ನೀರಿನಂದಲೇ ಕೂಡಿರುವುದು ಅದ್ಭುತ.
ಏನಂಥಾ ವಿಶೇಷ?
ಈ ಹೋಟೆಲ್‌ಗಳಲ್ಲಿನ ಸುತ್ತಲೂ ಯಾವುದೇ ಮಾನವ ಕಿರುಚಾಟ ಅಥವಾ ಸಂಚಾರ ಶಬ್ದಗಳಿರುವುದಿಲ್ಲ. ಅಲೆಗಳ ಶಬ್ದ ಮತ್ತು ಮೀನಿನ ಚಲನೆ ಮಾತ್ರ ಕೇಳಲು ಸಾಧ್ಯ. ನೀವು ಭೂಮಿ ಮೇಲೆ ತಿನ್ನುವ ಆಹಾರಗಳನ್ನು ಸಮುದ್ರದ ಒಳಗೇ ಉಣಬಡಿಸಲಾಗುತ್ತೆ ಅನ್ನೋದು ಮತ್ತೊಂದು ವಿಶೇಷ. ಮೀನುಗಳ ಓಡಾಟವನ್ನು ನೇರವಾಗಿ ನೋಡುತ್ತ, ಮೀನಿನ ಕರಿಯನ್ನು ತಿನ್ನುವ ಅನುಭವ ನಿಜಕ್ಕೂ ಜೀವನದಲ್ಲಿ ಉಳಿಯುವ ಒಂದೊಳ್ಳೆ ನೆನಪು.
ಇದೆಲ್ಲವೂ ಕೇಳಲು ತುಂಬಾ ಆಸಕ್ತಿದಾಯಕ ಅನಿಸಿದರೂ, ಈ ವಿನ್ಯಾಸದ ಬಗ್ಗೆ ಒಂದು ಸಣ್ಣ ಅನುಮಾನ ಮೂಡಲೇಬೇಕು. ಸಮುದ್ರದೊಳಗೆ ನಿರ್ಮಿಸಲಾದ ಇಂತಹ ಹೋಟೆಲ್‌ಗಳಲ್ಲಿ ಊಟ ಸವಿಯುವುದು ಚೆಂದ. ಆದರೆ, ಒಂದು ರಾತ್ರಿ ಉಳಿದು ಹೋಗುವುದು ನಿಜಕ್ಕೂ ಭಯಾನಕ ಅನುಭವವೇ. ಕಾರಣ, ಗಾಜಿನ ಕಿಟಕಿಯಲ್ಲಿ ಮಿಸ್ಟೇಕ್ ಆಗಿ ಒಂದು ಸಣ್ಣ ಬಿರುಕು ಮೂಡಿದರೆ, ಏನು ಗತಿ? ನೀರಿನೊಳಗಿನ ಈ ಅಕ್ವೇರಿಯಂ ಜೀವನ ಖಂಡಿತ ಒಂದು ಹುಚ್ಚು ಸಾಹಸವೇ ನಿಜ,(ಏಜೆನ್ಸೀಸ್).