ಪ್ರತಿಯೊಂದು ಆಯಗಳೂ ಪ್ರತ್ಯೇಕ ಪ್ರಭಾವವನ್ನು ಹೊಂದಿರುತ್ತವೆ. ಆ ಕಾರಣಕ್ಕಾಗಿ ಮನೆ ನಿರ್ವಿುಸುವಾಗ ಆಯ ನೋಡುವುದು ಬಹಳ ಪ್ರಾಚೀನ ಕಾಲದಿಂದ ಚಾಲ್ತಿಯಲ್ಲಿದೆ. ಒಂದು ಕಟ್ಟಡದ ಒಳಗಿನ ಆಯದ ಜೊತೆಗೆ ಪಂಚಭೂತಗಳನ್ನು ಆಧರಿಸಿದ ಶಕ್ತಿಪಾತದ ಅನುಸರಣೆ ಕೂಡ ಅಷ್ಟೇ ಮುಖ್ಯ. ಮೂಲ ವಾಸ್ತುವಿಗೆ ಆಧಾರವಾಗಿರುವ ಪಂಚಮಹಾಭೂತಗಳ ಅಳವಡಿಕೆಯೊಂದಿಗೆ ಶಾಸ್ತ್ರಬದ್ಧವಾದ ಆಯಗಳನ್ನು ಅನುಸರಿಸುವುದರಿಂದ ಪರಿಣಾಮಕಾರಿಯಾದ ಫಲಿತಾಂಶ ಪಡೆಯಲು ಸಾಧ್ಯ.
ಆಯ ಎಂದರೆ...: ಭಾರತೀಯ ಇತಿಹಾಸದಲ್ಲಿ ಅತ್ಯಂತ ಪುರಾತನ ಕಾಲದಿಂದಲೂ ವಾಸ್ತು ಅಳವಡಿಕೆ ಹಾಗೂ ವಿಶೇಷವಾಗಿ ಆಯಗಳನ್ನು ಅನುಸರಿಸುವುದನ್ನು ಕಾಣಬಹುದು. ಆಯ ಎಂದರೆ ಗಣಿತಶಾಸ್ತ್ರವನ್ನು ಅವಲಂಬಿಸಿರುವ ನಿಖರ ಅನುಪಾತ ಮತ್ತು ಪ್ರಮಾಣ. ವಿಶೇಷವಾಗಿ ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳು ಅಥವಾ ಜ್ಞಾನ ಪ್ರಸಾರ ಕೇಂದ್ರಗಳು ವಾಸ್ತು ಹಾಗೂ ಆಯ ಅಳವಡಿಕೆಗೆ ಹೆಚ್ಚಿನ ಆದ್ಯತೆ ನೀಡಿವೆ. ಇದರ ಪರಿಣಾಮ ಮತ್ತು ಪ್ರಭಾವಕ್ಕೆ ಸಾಕ್ಷಿ ಎಂಬಂತೆ ಶತಮಾನಗಳ ಹಿಂದೆ ಭಾರತೀಯ ವಿಶ್ವವಿದ್ಯಾಲಯಗಳಿಗೆ ಅಧ್ಯಯನ ಮಾಡುವುದಕ್ಕಾಗಿ ಜಗತ್ತಿನ ಮೂಲೆ ಮೂಲೆಗಳಿಂದ ಜ್ಞಾನಾರ್ಥಿಗಳು ಬರುತ್ತಿದ್ದರು. ಹಾಗೆ ಜಗತ್ತಿನಾದ್ಯಂತ ಇದ್ದ ಜನರನ್ನು ಭಾರತೀಯ ವಿಶ್ವವಿದ್ಯಾಲಯಗಳು ಸೆಳೆಯುತ್ತಿದ್ದುದಕ್ಕೆ ಕಾರಣ ಅದರ ವಾಸ್ತು ಮತ್ತು ಆಯ ಅಳವಡಿಕೆ.
ವಿಭಿನ್ನ ಆಯಗಳಿಂದ ನಿಖರ ಚೈತನ್ಯಶಕ್ತಿ ಲಭ್ಯ: ವಾಸ್ತು ಪ್ರಕಾರ ಆಯ ಬಳಕೆ ಮಾಡುವುದೆಂದರೆ ಕೇವಲ ಕಟ್ಟಡದೊಳಗಿನ ಒಂದು ಕೋಣೆಯ ವಿಸ್ತೀರ್ಣಕ್ಕೆ ಸಂಬಂಧಪಟ್ಟಿದ್ದಲ್ಲ. ಬದಲಾಗಿ ವಿಭಿನ್ನ ಆಯಗಳು ಪ್ರತ್ಯೇಕವಾಗಿ ನಿಖರ ಚೈತನ್ಯಶಕ್ತಿಯನ್ನು ಹೊರಸೂಸುವ ಪ್ರಬಲ ಅಂಶವನ್ನು ಒಳಗೊಂಡಿರುತ್ತದೆ. ಆಯ ನಿರ್ಧರಿಸುವಾಗ ಸಂಬಂಧಪಟ್ಟ ಸ್ಥಳದಲ್ಲಿ ನಡೆಯುವ ಕಾರ್ಯಚಟುವಟಿಕೆಗಳಿಗೆ ಅನುಸರಿಸಿ ಹೊಂದಿಕೆಯಾಗುವ ಆಯವನ್ನು ಅಳವಡಿಸುವ ಕ್ರಮವಿದೆ. ಸಾಮಾನ್ಯವಾಗಿ ಭಾರತೀಯ ವಾಸ್ತು ಶಾಸ್ತ್ರದಲ್ಲಿ ವೃತ್ತಾಕಾರದ ಕಟ್ಟಡಗಳ ಪರಿಕಲ್ಪನೆ ಇಲ್ಲ. ಕಾರಣ ಆಯತಾಕಾರದ ಕಟ್ಟಡದಲ್ಲಿ ಪ್ರವಹಿಸುವಂತೆ ಅಲ್ಲಿನ ಚೈತನ್ಯಶಕ್ತಿ ವೃತ್ತಾಕಾರದ ಕಟ್ಟಡದಲ್ಲಿ ಹೆಚ್ಚು ಕಾಲದವರೆಗೆ ನಿಲ್ಲುವುದಿಲ್ಲ. ಈ ಹಿನ್ನೆಲೆಯಲ್ಲಿ ಆಯ ಅಳವಡಿಕೆಯ ಹಿಂದೆ ಚೈತನ್ಯಶಕ್ತಿಯ ಸದ್ಭಳಕೆಯ ಸದುದ್ದೇಶ ಇರುವುದರಿಂದ ಆಯತಾಕಾರಕ್ಕೆ ಮಹತ್ವ ಬಂದಿದೆ. ಇದೇ ಅರ್ಥದಲ್ಲಿಯೇ ವೃತ್ತಾಕಾರಕ್ಕೆ ಶೂನ್ಯ ಎಂಬ ಮತ್ತೊಂದು ಹೆಸರಿದೆ. ಅಂದರೆ ಯಾವುದೇ ಶಕ್ತಿಸಂಚಯವಿಲ್ಲ ಎಂದರ್ಥ.
ದ್ವಜಾಯ: ಧ್ವಜ ಎಂದರೆ ವಿಜಯದ ಸಂಕೇತ ಎನ್ನಲಾಗುತ್ತದೆ. ಧ್ವಜಾಯದ ಕೋಣೆ ಯಶಸ್ಸಿನಿಂದ ಕೂಡಿರುತ್ತದೆ. 1:1 ಅನುಪಾತದಲ್ಲಿ ಇದರ ಗಣಿತ ಲೆಕ್ಕವಿರುತ್ತದೆ. ಈ ಸೂತ್ರದ ಅನ್ವಯ ಧ್ವಜಾಯವನ್ನು ವಿನ್ಯಾಸಗೊಳಿಸಲಾಗುತ್ತದೆ.
ದೂಮಾಯ: ದೂಮ ಎಂದರೆ ಬಾಲ ಎಂಬ ಅರ್ಥವಿದ್ದು, ಇದು 2ನೇ ಮುಖ್ಯಸ್ಥನ ಸ್ಥಾನವಾಗಿದೆ. ಈ ಆಯವನ್ನು 1:1.111 ಈ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತದೆ.
ಸಿಂಹಾಯ: ಹೆಸರೇ ಸೂಚಿಸುವಂತೆ ನಾಯಕತ್ವದ ಗುಣ ಹೊಂದಿರುವ ಆಯ. ಮುಖ್ಯಸ್ಥನ ಕಾರ್ಯಸ್ಥಾನದಲ್ಲಿ ಈ ಆಯವನ್ನು ಅಳವಡಿಸಲಾಗುತ್ತದೆ. ಇದು 1:1.222 ಅನುಪಾತದಲ್ಲಿರುತ್ತದೆ
.
ಶ್ವಾನಾಯ: ಪ್ರಾಣಿಗಳಲ್ಲೇ ಅತ್ಯಂತ ನಿಷ್ಠೆಯ ಪ್ರಾಣಿ ನಾಯಿ. ಆದ್ದರಿಂದ ಶ್ರಮಿಕ ವರ್ಗದವರು ಕೆಲಸ ಮಾಡುವ ಸ್ಥಳದಲ್ಲಿ ಈ ಆಯ ಅಳವಡಿಸುವುದರಿಂದ ನಿಯತ್ತಿನ ಕರ್ತವ್ಯ ನಿರೀಕ್ಷಿಸಬಹುದು. ಇದು 1:1.333 ಅನುಪಾತದಲ್ಲಿ ವಿನ್ಯಾಸಗೊಳ್ಳಲಿದೆ.
ವೃಷಭಾಯ: ಶ್ರಮ ಮತ್ತು ಗುಣಮಟ್ಟದ ಕೆಲಸಕ್ಕೆ ಎತ್ತುಗಳ ಪಾತ್ರ ಪ್ರಮುಖವಾಗಿರುತ್ತದೆ. ಅಂತಹ ಫಲಿತಾಂಶ ನಿರೀಕ್ಷಿಸುವ ಸ್ಥಳಗಳಲ್ಲಿ ಈ ಆಯವನ್ನು ಅಳವಡಿಸಬೇಕು. ಇದು 1:1.444 ಅನುಪಾತದಲ್ಲಿ ವಿನ್ಯಾಸಗೊಳ್ಳುತ್ತದೆ.
ಖರಾಯ: ಖರ ಎಂದರೆ ಕತ್ತೆ ಎಂದರ್ಥ. ಕೇವಲ ದೈಹಿಕ ಶ್ರಮದಿಂದ ಕೆಲಸ ನಡೆಯುವ ಸ್ಥಳಗಳಲ್ಲಿ ಈ ಆಯವನ್ನು ಅಳವಡಿಸಲಾಗುತ್ತದೆ. ಇದು 1:1.555 ಅನುಪಾತದಲ್ಲಿ ವಿನ್ಯಾಸಗೊಳಿಸಲಾಗುತ್ತದೆ.
ಗಜಾಯ (ಹಸ್ತಿ): ಹಸ್ತಿ ಅಥವಾ ಗಜ ಎಂದರೆ ಆನೆ. ಶ್ರಮ, ಗುಣಮಟ್ಟ, ಬೌದ್ಧಿಕತೆ, ದೈಹಿಕ ದೃಢತೆ, ಸಂಪತ್ತು, ವಿಶ್ವಾಸದ ಕಾರ್ಯನಿರ್ವಹಣೆ ಸ್ಥಳದಲ್ಲಿ ಈ ಆಯವನ್ನು ಅಳವಡಿಸಬಹುದು. ಇದು 1:1.666 ಅನುಪಾತವನ್ನು ಹೊಂದಿದೆ.
ವಾಯಸಾಯ: ಒಂದೇ ಕಾರಣಕ್ಕಾಗಿ ಹೆಚ್ಚು ಜನರು ಒಂದೆಡೆ ಸೇರುವ ಸ್ಥಳವನ್ನು ಈ ಆಯದಿಂದ ವಿನ್ಯಾಸಗೊಳಿಸಲಾಗುತ್ತದೆ. ಇದು 1:1.777 ಅನುಪಾತವನ್ನು ಹೊಂದಿದೆ. ಈ ರೀತಿ ಒಟ್ಟು 8 ಆಯಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದ್ದು, ಪ್ರತಿ ಆಯದ ಲಕ್ಷಣ, ಮಹತ್ವ, ಪ್ರಯೋಜನ ಮತ್ತು ಪರಿಣಾಮಗಳ ಕುರಿತು ಮುಂದಿನ ಸಂಚಿಕೆಗಳಲ್ಲಿ ತಿಳಿಸಲಾಗುವುದು.