ಬಣ್ಣಗಳು ಕೇವಲ ಕಣ್ಣಿಗೆ ಕಾಣುವ ಬೇರೆ ಬೇರೆ ರೂಪಗಳಲ್ಲ. ಬದಲಾಗಿ ಬಣ್ಣಗಳು ನೋಡುಗನಿಗೆ ಅಕ್ಕ ಪಕ್ಕದಲ್ಲಿರುವ ಜೀವಿಗಳಿಗೆ ಚೈತನ್ಯ ನೀಡುವ ನೈಸರ್ಗಿಕ ಶಕ್ತಿಗಳು. ಪ್ರತಿಯೊಂದು ಬಣ್ಣಕ್ಕೂ ಅದರದೇ ಆದ ಪ್ರತ್ಯೇಕ ಚೈತನ್ಯ ಶಕ್ತಿಗಳಿವೆ.
7 ಪ್ರಮುಖ ಬಣ್ಣಗಳೆಂದರೆ, ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಕಂದು ನೀಲಿ, ನೇರಳೆ. ಈ ಬಣ್ಣಗಳು ಮನುಷ್ಯನ ಬದುಕಿನ ಮೇಲೆ ಬೀರುವ ಪರಿಣಾಮ ಮತ್ತು ಪ್ರಭಾವಗಳ ಬಗ್ಗೆ ಒಂದೊಂದಾಗಿ ವಿಶ್ಲೇಷಿಸೋಣ.
ಕೆಂಪು ಬೇರೆಲ್ಲ ಬಣ್ಣಗಳಿಗಿಂತ ಮನುಷ್ಯನ ಗ್ರಹಿಕೆಯ ಅನುಭವಕ್ಕೆ ಬೇಗ ಬರುವ ಪ್ರಮುಖ ಬಣ್ಣ. ಈ ಬಣ್ಣದ ತರಂಗಾಂತರವು ಎಲ್ಲ ಬಣ್ಣಗಳಿಗಿಂತ ಪ್ರಖರವಾಗಿರುತ್ತದೆ. ಕೆಂಪುಬಣ್ಣದ ಆವರ್ತನ ಇತರೆ ಬಣ್ಣಗಳಿಗಿಂತ ಚೆನ್ನಾಗಿದೆ. ಬಹುತೇಕ ಜನರಿಗೆ ಕೆಂಪು ಬಣ್ಣದ ಬಗ್ಗೆ ಸ್ವೀಕಾರಾರ್ಹ ಮನಸ್ಸು ಇರುವುದಿಲ್ಲ. ಆದರೆ ಕೆಲವು ಜನರಿಗೆ ಅವರ ಚೈತನ್ಯ ವೃದ್ಧಿಸಲು ಕೆಂಪು ಬಣ್ಣದ ಅವಶ್ಯಕತೆ ಇರುತ್ತದೆ. ಇದೇ ಕಾರಣಕ್ಕಾಗಿ ಕೆಂಪು ಬಣ್ಣವನ್ನು ಆಹಾರ ಪದಾರ್ಥದಲ್ಲಿ ಅತಿಯಾಗಿ ಬಳಸುವುದು ನಿಷಿದ್ಧ. ಕೆಂಪು ಬಣ್ಣವು ಮನುಷ್ಯನ ದೇಹದೊಳಗೆ ಅಷ್ಟು ಸಲೀಸಾಗಿ ಪ್ರವೇಶಿಸುವುದಿಲ್ಲ. ಕೆಂಪು ಮನುಷ್ಯನ ಮೂಲಾಧಾರ ಚಿತ್ತಕ್ಕೆ ಸಂಬಂಧಿಸಿದೆ.
ಕೆಂಪು ಬಣ್ಣದಲ್ಲಿ ವಿವಿಧ ಮಾದರಿಗಳಿವೆ. ಪ್ರತಿಯೊಂದು ಮಾದರಿಯೂ ಅದರದ್ದೇ ಆದ ಪ್ರತ್ಯೇಕ ಪ್ರಭಾವವನ್ನು ಹೊಂದಿರುತ್ತವೆ. ಮನೆಯಲ್ಲಿ ಬಳಸುವಾಗ ಆ ಪ್ರಭಾವಗಳನ್ನು ಅರಿತುಕೊಂಡು ಬಳಸಬೇಕು. ಉದಾಹರಣೆಗೆ ನವ ವಿವಾಹಿತ ದಂಪತಿಗಳು ಮಲಗುವ ಕೋಣೆಯಲ್ಲಿ ಒಂದು ಭಾಗದ ಗೋಡೆಗೆ ಬಿಳಿಮಿಶ್ರಿತ ತಿಳಿಗೆಂಪು ಬಣ್ಣವನ್ನು ಹಚ್ಚಬೇಕು. ಅಥವಾ ಕೆಂಪು ಬಣ್ಣದಿಂದ ಬರೆದಿರುವ ದೊಡ್ಡ ಅಳತೆಯ ಚಿತ್ರವನ್ನಾದರೂ ಕಣ್ಣಿಗೆ ಕಾಣುವಂತೆ ಅಳವಡಿಸುವುದು ಸೂಕ್ತ.
ಗೋಡೆ, ನೆಲ, ಸೀಲಿಂಗ್ ಮಾತ್ರವಲ್ಲದೆ ಮನೆಯಲ್ಲಿ ಬಳಸುವ ವಸ್ತುಗಳಲ್ಲಿ ಯಾವುದು ಕೆಂಪು ಇರಬೇಕು, ಯಾವುದು ಇರಬಾರದು ಎಂಬುದನ್ನು ತಿಳಿದುಕೊಂಡು ತರಬೇಕು. ಮನೆಯಲ್ಲಿ ಉಪಯೋಗಿಸುವ ಪೀಠೋಪಕರಣಗಳಾದ ಸೋಫಾ ಸೆಟ್ ಬಿಳಿಮಿಶ್ರಿತ ಲೈಟ್ ರೆಡ್ ಬಳಸಬಹುದು. ಆದರೆ ಹಾಲ್ನಲ್ಲಿ ಕಣ್ಣಿಗೆ ರಾಚುವಂತಹ ಕೆಂಪು ಬಣ್ಣದ ಕಾರ್ಪೆಟ್ ಬಳಸಬಾರದು. ಮನೆಯಲ್ಲಿ ಪರಸ್ಪರ ಕುಳಿತು ನಡೆಸುವ ಯಾವುದೇ ಚರ್ಚೆಗಳು ಹಾಗೂ ತೆಗೆದುಕೊಳ್ಳುವ ಪ್ರಮುಖ ನಿರ್ಧಾರದ ದೃಢತೆಗೆ ಮನೆಯಲ್ಲಿ ಬಳಸುವ ಕೆಂಪು ಮುಖ್ಯವಾಗಿರುತ್ತದೆ.
ಮನೆಯ ಗೋಡೆಗಳಿಗೆ ರಕ್ತಗೆಂಪು ಬಣ್ಣವನ್ನು ಬಳಸಬಾರದು. ಇದರಿಂದ ಮನಸ್ಸು ವಿಚಲಿತಗೊಳ್ಳುತ್ತದೆ. ಮನಸ್ಸು ಶಾಂತಿ ಮತ್ತು ಏಕಾಗ್ರತೆಯನ್ನು ಕಳೆದುಕೊಂಡರೆ ಎಲ್ಲ ವ್ಯವಹಾರಗಳು ಕೆಟ್ಟು ಹೋಗುತ್ತವೆ.
ಕೆಂಪು ಮೊದಲಿನಿಂದಲೂ ಕ್ರಾಂತಿಯ ಸಂಕೇತ ವಾಗಿ ಬಳಕೆಯಲ್ಲಿದೆ. ನಮ್ಮನ್ನು ನಿಗದಿತ ಗುರಿ ತಲುಪಿಸಲು ಕೆಂಪು ಪ್ರೇರಣೆ ನೀಡುತ್ತದೆ. ಹಾಗೆಂದ ಮಾತ್ರಕ್ಕೆ ಸಿಕ್ಕ ಸಿಕ್ಕಲ್ಲಿ ಕೆಂಪು ಬಣ್ಣವನ್ನು ಬಳಸಬಾರದು. ಕೆಂಪು ಬಳಕೆ ಅತಿಯಾದರೆ ಮಾನಸಿಕ ನೆಮ್ಮದಿಯನ್ನು ಕಳೆದು ಕೊಳ್ಳುವುದರ ಜೊತೆಗೆ ತನ್ನ ಸುತ್ತಮುತ್ತಲಿನ ವಾತಾವರಣವನ್ನು ಹಾಳು ಮಾಡುತ್ತದೆ. ಕೆಂಪು ಸಾಮಾನ್ಯವಾಗಿ ಸರ್ವಾಧಿಕಾರಿ ಗುಣವನ್ನು ಪ್ರೇರೇಪಿಸುತ್ತದೆ. ಈ ಕಾರಣಕ್ಕೆ ಕೆಲವು ರಾಷ್ಟ್ರಗಳು ತಮ್ಮ ರಾಷ್ಟ್ರಧ್ವಜವನ್ನು ತೀವ್ರ ಕೆಂಪು ಬಣ್ಣದ್ದಾಗಿಸಿಕೊಂಡಿರುವ ಉದಾಹರಣೆಗಳನ್ನು ಕಾಣಬಹುದು. ಅದಕ್ಕೆ ಪೂರಕವೆಂಬಂತೆ ಆ ದೇಶಗಳು ಪರಿಣಾಮಗಾರಿ ನಿರ್ಣಯಗಳನ್ನು ತೆಗೆದುಕೊಂಡು ಪ್ರಗತಿಯಲ್ಲಿ ಮುಂದುವರೆಯುತ್ತಿರುವ ಸನ್ನಿವೇಶಗಳು ಕೂಡಾ ಕಣ್ಣಮುಂದಿವೆ. ಅದೇನೇ ಇದ್ದರೂ ಬಣ್ಣಗಳ ಬಳಕೆಯ ಹಿಂದೆ ವಾಸ್ತು ಮಹತ್ವ ಅಡಗಿದ್ದು ಅದನ್ನು ಅರಿತು ಬಳಕೆ ಮಾಡಬೇಕು.