ಚಿದಂಬರ ಮುನವಳ್ಳಿ
ಸ್ಕಾಟ್ಲೆಂಡ್ ದೇಶದ ಹಳ್ಳಿಯೊಂದರಲ್ಲಿ ಬಾಲಕನೊಬ್ಬ ಆಟವಾಡುತ್ತಿರುವಾಗ ಕಾಲು ಜಾರಿ ಕೆಸರು ತುಂಬಿದ ಕೆರೆಯಲ್ಲಿ ಬಿದ್ದು ಬಿಟ್ಟ. ದೂರ ಆಳದವರೆಗೆ ನೆಲ ಗಟ್ಟಿ ಇಲ್ಲದ್ದರಿಂದ ಮೇಲೇಳಲು ಪ್ರಯತ್ನಿಸಿದರೂ ಸಾಧ್ಯವಾಗದಾದಾಗ ಸಹಾಯಕ್ಕಾಗಿ ಜೋರಾಗಿ ಕಿರುಚತೊಡಗಿದ. ಅದನ್ನು ಕೇಳಿ ಹತ್ತಿರವೇ ಕೆಲಸ ಮಾಡುತ್ತಿದ್ದ ಫ್ಲೆಮಿಂಗ್ ಎಂಬ ರೈತ ಧಾವಿಸಿ ಬಂದ.
ಬಾಲಕನ ಮುಖ ಮಾತ್ರ ಮೇಲೆ ಕಾಣುತ್ತಿತ್ತು. ಕೂಡಲೇ ಮರದ ಟೊಂಗೆಯೊಂದನ್ನು ಮುರಿದು ಅವನತ್ತ ಚಾಚಿ ಗಟ್ಟಿಯಾಗಿ ಹಿಡಿಯಲು ಹೇಳಿ ಅವನನ್ನು ಜಗ್ಗಿ ಹೊರಗೆ ತೆಗೆದು ಸಮಾಧಾನ ಪಡಿಸಿ ಮನೆಗೆ ಕಳುಹಿಸಿ ಕೊಟ್ಟ. ಮರುದಿನ ಫ್ಲೆಮಿಂಗ್ನ ಗುಡಿಸಿಲಿನ ಮುಂದೆ ಒಬ್ಬ ಶ್ರೀಮಂತ ವ್ಯಕ್ತಿ ದೊಡ್ಡ ಕಾರಿನಿಂದ ಇಳಿದು, ‘ನಿನ್ನೆ ನೀನು ಜೀವ ಉಳಿಸಿದ ಹುಡುಗನ ತಂದೆ ನಾನು. ನೀನು ಮಾಡಿದ ಕೆಲಸಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಿನ್ನ ಋಣ ತೀರಿಸಲು ಸಾಧ್ಯವಿಲ್ಲ. ನಿನಗೆ ಯಾವ ರೀತಿ ನೆರವಾಗಬಲ್ಲೆ ಎಂಬುದನ್ನು ದಯಮಾಡಿ ತಿಳಿಸು’ ಎಂದ. ಫ್ಲೆಮಿಂಗ್ ಹೇಳಿದ, ‘ನಾನು ಕೇವಲ ಒಬ್ಬ ಮನುಷ್ಯ ಮಾಡಬೇಕಾದ ಕರ್ತವ್ಯವನ್ನು ನಿಭಾಯಿಸಿದ್ದೇನೆ. ನನಗೆ ಏನೂ ಬೇಡ. ನಿಮ್ಮ ಪ್ರೀತಿಯು ಸಂತೋಷ ನೀಡಿದೆ’.
ಅಷ್ಟರಲ್ಲಿ ಆ ರೈತನ ಮಗ ಅಲೆಕ್ಸಾಂಡರ್ ಗುಡಿಸಿಲಿನಿಂದ ಹೊರಗೆ ಬಂದ. ಅವನ ಮಾಸಿದ ಬಟ್ಟೆ, ಗೆದರಿದ ತಲೆಗೂದಲು ನೋಡಿ ಅವರ ಬಡತನದ ಅರಿವಾಗಿ ಆ ಶ್ರೀಮಂತ ನುಡಿದ. ‘ನಿನಗೆ ಒಪ್ಪಿಗೆಯಾದರೆ ನಿನ್ನ ಮಗನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ’. ‘ಆಗಬಹುದು’ ಸಂಕೋಚದಿಂದ ಹೇಳಿದ ರೈತ ಫ್ಲೆಮಿಂಗ್. ಆ ಹುಡುಗನನ್ನು ಒಳ್ಳೆಯ ಸ್ಕೂಲಿಗೆ ಸೇರಿಸಿದರು. ಅದರಲ್ಲಿ ಉಚ್ಚ ಶ್ರೇಣಿಯನ್ನು ಪಡೆದು ಲಂಡನ್ನಿನ ಪ್ರತಿಷ್ಠಿತ ಸೆಂಟ್ ಮೇರಿಸ್ ಹಾಸ್ಪಿಟಲ್ ಮೆಡಿಕಲ್ ಸ್ಕೂಲ್ನಲ್ಲಿ ಕಲಿತು ಸಂಶೋಧನೆ ಮಾಡಿದ. 1928ರಲ್ಲಿ ಪೆನ್ಸಿಲಿನ್ ಎಂಬ ಔಷಧ ಕಂಡುಹಿಡಿದು ಲಕ್ಷಾಂತರ ಜನರ ಜೀವ ಉಳಿಸಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ ಎಂದು ಹೆಸರುವಾಸಿಯಾದ. ಕೆಸರಲ್ಲಿ ಸಿಕ್ಕಿ ಹಾಕಿಕೊಂಡ ಆ ಬಾಲಕ ಹಲವು ವರ್ಷಗಳ ನಂತರ ನ್ಯೂಮೋನಿಯಾ ಜ್ವರದಿಂದ ಬಳಲಿ ಮತ್ತೊಮ್ಮೆ ಜೀವನ್ಮರಣ ಹೋರಾಟ ನಡೆಸುತ್ತಿರುವಾಗ ಅಲೆಕ್ಸಾಂಡರ್ ಫ್ಲೆಮಿಂಗ್ನ ಪೆನ್ಸಿಲಿನ್ ಔಷಧ ಅವನ ಜೀವ ಉಳಿಸಿತು
. ಅವನೇ ಮುಂದೆ ಬ್ರಿಟನ್ ಪ್ರಧಾನಿಯಾಗಿ ದ್ವಿತೀಯ ಮಹಾಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದ ವಿನ್ಸ ್ಟ್ ರ್ಚಚಿಲ್. ಸಮುದ್ರ ಹೇಗೆ ತನ್ನತ್ತ ಎಸೆದ ವಸ್ತುಗಳನ್ನು ತನ್ನ ಹತ್ತಿರ ಇಟ್ಟುಕೊಳ್ಳದೆ ತಿರುಗಿ ದಡಕ್ಕೆ ತಲುಪಿಸುವುದೋ ಹಾಗೆ ಇನ್ನೊಬ್ಬರಿಗೆ ಮಾಡಿದ ಸಹಾಯದ ಫಲ ನಿಸ್ಸಂಶಯವಾಗಿ ತಿರುಗಿ ಬರುತ್ತದೆ. ಡಿವಿಜಿಯವರು ‘ಗುಪ್ತಗಾಮಿನಿಯೊ ಋಣ ಮಂಕುತಿಮ್ಮ’ ಎಂದು ಸತ್ಕರ್ಮದ ಅನಂತ ಫಲದ ಬಗ್ಗೆ ಮಾರ್ವಿುಕವಾಗಿ ನುಡಿದಿದ್ದಾರೆ. ಅಂಥ ಕಾರ್ಯವೆಸಗುವ ಅವಕಾಶ ಒದಗಿ ಬಂದಾಗ ಹಿಂದೆ ಸರಿಯಬಾರದು ಅಷ್ಟೇ.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ) ಪ್ರತಿಕ್ರಿಯಿಸಿ: manollasavv@gmail.com