ಜಗತ್ತನ್ನೇ ಗೆಲ್ಲಬಲ್ಲ ಮಾತಿನಮಲ್ಲರು ಕೆಲವರಿರುತ್ತಾರೆ. ಅವರಿಗೆ ಬೆನ್ನೆಲುಬಾಗಿ ಇರುವುದು ಎಲುಬಿಲ್ಲದ ನಾಲಿಗೆ! ಎಲ್ಲರ ಮನಸೂರೆ ಗೈಯುವ ನಳಪಾಕವನ್ನು ಮಾಡಬಲ್ಲ ಅಡುಗೆಯಲ್ಲಿ ಪಳಗಿದ ಕೈಗಳನ್ನು ಕೆಲವರು ಹೊಂದಿರುತ್ತಾರೆ. ಅವರ ಸಾಮರ್ಥ್ಯದ ಗೆಲುವಿನ ಹಿಂದಿರುವುದೂ ರುಚಿಯನ್ನು ಸಮರ್ಪಕವಾಗಿ ಗ್ರಹಿಸಬಲ್ಲ ನಾಲಿಗೆ! ಹೌದು, ನಾಲಿಗೆಯದು ದ್ವಿಪಾತ್ರ. ಐದು
ಜ್ಞಾನೇಂದ್ರಿಯಗಳಲ್ಲಿ ನಾಲಿಗೆ ಒಂದು. ಐದು ಕಮೇಂದ್ರಿಯಗಳಲ್ಲೂ ಒಂದು. ನಾಲಿಗೆ ರುಚಿಯನ್ನು ಗ್ರಹಿಸುವ ರಸನೇಂದ್ರಿಯ. ಮಾತನ್ನು ಆಡುವ ವಾಗಿಂದ್ರಿಯ. ಹಾಗೆ ನೋಡಿದರೆ ಇಂದ್ರಿಯ ಹಾಗೂ ಇಂದ್ರಿಯ ಅಧಿಷ್ಠಾನಗಳು ಬೇರೆಬೇರೆ. ರಸನೇಂದ್ರಿಯ ಹಾಗೂ ವಾಕ್ ಇಂದ್ರಿಯಗಳ ಅಧಿಷ್ಠಾನ ಈ ನಾಲಿಗೆ. ಇಂದ್ರ ಎಂದರೆ ಆದೇಶ ನೀಡುವವ ಅಥವಾ ಮೇಲು ಪದವಿಯವ ಎನ್ನುವ ಅರ್ಥವಿದೆ. ಇಂದ್ರ ಶಬ್ದದಿಂದ ಇಂದ್ರಿಯ ಶಬ್ದ ಹುಟ್ಟಿಕೊಂಡಿದೆ. ಮೆದುಳಿನ ನರಕೇಂದ್ರವನ್ನೇ ಇಂದ್ರಿಯವೆಂದು ಅರ್ಥೈಸಿಕೊಳ್ಳಬಹುದು. ನಾಲಿಗೆಯ ಸಂಪರ್ಕಕ್ಕೆ ಬರುವ ಆಹಾರವಸ್ತುವಿನ ರುಚಿಯ ವಿಚಾರ ಮನಸ್ಸಿಗೆ ತಲುಪಿ ಅದು ಆತ್ಮದೊಡನೆ ಸಂಪರ್ಕ ಪಡೆದಾಗ ರಸಜ್ಞಾನ ಪ್ರಾಪ್ತಿಯಾಗುತ್ತದೆ ಎಂದಿದೆ ಆಯುರ್ವೆದ.
ಪಂಚಮಹಾಭೂತಗಳಲ್ಲಿ ಒಂದಾದ ಜಲಮಹಾಭೂತದ ಆಧಿಕ್ಯತೆಯೊಂದಿಗೆ ಉತ್ಪತ್ತಿಯಾಗುವ ನಾಲಿಗೆಗೆ ಜಲವೇ ಇಂದ್ರಿಯ ದ್ರವ್ಯ. ರುಚಿ ಹಾಗೂ ಪಚನವೇ ಇಂದ್ರಿಯ ಅರ್ಥ ಅಥವಾ ಇಂದ್ರಿಯ ವಿಷಯ. ರಸವೇ ಇಂದ್ರಿಯ ಬುದ್ಧಿ. ರುಚಿ ಗ್ರಹಣ ಹಾಗೂ ಮಾತು ಇಂದ್ರಿಯ ವೃತ್ತಿ. ಅದೆಷ್ಟೋ ಬಾರಿ ಯಾವುದೋ ಆಹಾರ ವಸ್ತುವನ್ನು ಬಾಯಿಗೆ ಹಾಕಿದರೂ ಅದರ ರುಚಿಯೇ ಗೊತ್ತಾಗುವುದಿಲ್ಲ. ಕೆಲವರಿಗೆ ಏನು ತಿಂದಿದ್ದೇವೆಂಬ ಅರಿವೇ ಇರುವುದಿಲ್ಲ. ಆಹಾರವನ್ನು ನಾಲಿಗೆ ಸವಿದದ್ದೂ ಸತ್ಯ. ಮನಸ್ಸು ಅಲ್ಲೇ ಇದ್ದದ್ದೂ ನಿಜ. ಆದರೆ ಜ್ಞಾನ ಉತ್ಪತ್ತಿಗೆ ಇವಿಷ್ಟೇ ಸಾಕಾಗುವುದಿಲ್ಲ. ಆತ್ಮವೂ ಜೊತೆಯಲ್ಲಿರಬೇಕು. ಆಗ ಮಾತ್ರ ರುಚಿ ಮನಸ್ಸಿಗೆ ಮುದನೀಡುತ್ತದೆ, ಹೃದಯಕ್ಕೆ ಹಿತವಾಗುತ್ತದೆ. ರೂಢಿಯಲ್ಲಿ ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತಿದೆ. ಮಾತು,
ಮೌನದಿಂದ ಹೋಲಿಕೆಗೆ ಒಳಪಟ್ಟ ಬೆಳ್ಳಿ ಬಂಗಾರ ಎರಡರ ಪ್ರಾಪ್ತಿಗೂ ಇದೇ ನಾಲಿಗೆಯ ಮೇಲೆ ಹಿಡಿತವಿರಬೇಕು. ಅದು ಆಚಾರವಿಲ್ಲದ ನಾಲಿಗೆ ಆಗಬಾರದು, ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ನುಡಿಗಳೆಲ್ಲಾ ಈ ನಾಲಿಗೆಯ ಮಹತ್ವವನ್ನು ಸಾರುತ್ತವೆ. ಆಹಾರದ ರುಚಿ ತಿಳಿಯಲು ಸಾಧ್ಯವಿದ್ದರೆ ಮಾತ್ರ ಚೆನ್ನಾಗಿ ಉಣ್ಣಬಹುದು. ದೇಹದ ಏಳೂ ಧಾತುಗಳು ಸರಿಯಾಗಿ ಪೋಷಿಸಲ್ಪಟ್ಟು ದಷ್ಟಪುಷ್ಟವಾಗಿ ಬೆಳೆಯುತ್ತವೆೆ. ನುಡಿ ಒಳ್ಳೆಯದಾಗಿದ್ದರಷ್ಟೇ ಬದುಕಿನ ನಡೆ ಉತ್ತಮ ದಿಕ್ಕಿನಲ್ಲಿ ಸಾಗಿ ನೆಮ್ಮದಿಯಿಂದ ಇರಬಹುದು. ಹೀಗೆ ಶರೀರ ಹಾಗೂ ಮನಸ್ಸು ಎರಡರ ಆರೋಗ್ಯಕ್ಕೂ ಈ ನಾಲಿಗೆಗೂ ನೇರವಾದ ನಂಟಿದೆ! ಇಂತಹ ನಾಲಿಗೆಯ ಸ್ವಾಸ್ಥö ರಕ್ಷಣೆಯು ಶರೀರ ಬಾಂಧವ್ಯ, ಸಮಾಜ ಬಾಂಧವ್ಯ ಎರಡರ ದೃಷ್ಟಿಯಿಂದಲೂ ಅಷ್ಟೇ ಪ್ರಾಮುಖ್ಯವಾಗಿರುತ್ತದೆ. ಜೀರ್ಣಾಂಗವ್ಯೂಹವೆಂಬ ಹೆದ್ದಾರಿಯ ಮಹಾದ್ವಾರವೇ ಬಾಯಿ. ಇಲ್ಲಿಂದಲೇ ಜೀರ್ಣಕ್ರಿಯೆಯ ಪ್ರಾರಂಭ.
ಆಯುರ್ವೆದದಲ್ಲಿ ಬಾಯಿಯ ಒಳಗಿನ ವ್ಯಾಧಿಗಳಿಗೆ ಮುಖರೋಗಗಳೆಂದು ಹೆಸರು. ಚರಕ ಸಂಹಿತೆಯಲ್ಲಿ 64, ಸುಶ್ರುತ ಸಂಹಿತೆಯಲ್ಲಿ 65, ಅಷ್ಟಾಂಗ ಸಂಗ್ರಹ ಗ್ರಂಥದಲ್ಲಿ 75 ಮುಖರೋಗಗಳ ಸಂಪೂರ್ಣ ವಿವರಣೆಯಿದೆ. ಇದರಲ್ಲಿ ನಾಲಿಗೆಗೆ ಸಂಬಂಧಿಸಿದ ಆರು ರೋಗಗಳೂ ಸೇರಿವೆ. ವಾತಜ, ಪಿತ್ತಜ, ಕಫಜ, ಜಿಹ್ವಾಕಂಟಕಗಳೆಂಬ ರೋಗಗಳು, ಅಲಸವೆಂಬ ನಾಲಿಗೆಯ ಕೆಳಗಿನ ಅರ್ಬುದ ರೋಗ, ನಾಲಿಗೆಯ ಮೇಲೆ ಕಂಡುಬರುವ ಉಪಜಿಹ್ವಕ, ನಾಲಿಗೆಯ ಕೆಳಭಾಗದಲ್ಲಿ ಗುಳ್ಳೆಯಂತಾಗುವ ಅಧಿಜಿಹ್ವಕ ರೋಗಗಳು ಇದರಲ್ಲಿ ಸೇರಿವೆ. ಬಾಯಿಹುಣ್ಣು ಮುಂತಾದ ಬಾಯಿಯೊಳಗಿನ ಎಂಟು ವ್ಯಾಧಿಗಳನ್ನು ಪ್ರತ್ಯೇಕವಾಗಿ ಹೇಳಲಾಗಿದೆ. ಅಲಸವೆಂಬ ಅರ್ಬುದ ರೋಗವನ್ನು ಅಂದೇ ವಿವರಿಸಿ ಹೇಳಿದ್ದು ಹಾಗೂ ದೀರ್ಘ ಕಾಲದಿಂದ ಇದ್ದರೆ ಅದನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ಅರುಹಿದ್ದು ಆಯುರ್ವೆದದ ವಿದ್ಯಾಪ್ರೌಢಿಮೆ ಹಾಗೂ ಪಾರದರ್ಶಕತೆಗೆ ಹಿಡಿದ ಕೈಗನ್ನಡಿ.