ಲೈಫ್‌ಸ್ಟೈಲ್

ಬಾಡಿ ಮಸಾಜ್​ ಮಾಡಿಸಿಕೊಂಡ ಬೆನ್ನಲ್ಲೇ ಗಾಯಕಿಯ ದುರಂತ ಅಂತ್ಯ! ತಜ್ಞರು ಕೊಟ್ಟ ಶಾಕಿಂಗ್​ ಕಾರಣ ಹೀಗಿದೆ... Thai Singer

Thai Singer : ಬಾಡಿ ಮಸಾಜ್ ಮಾಡುವಾಗ ಕುತ್ತಿಗೆಗೆ ಗಾಯವಾಗಿ ಥಾಯ್ಲೆಂಡ್​ ಮೂಲದ ಗಾಯಕಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

ಮೃತ ಗಾಯಕಿಯನ್ನು ಛಾಯದಾ ಪ್ರಾವ್​ ಹೋಮ್​ (20) ಎಂದು ಗುರುತಿಸಲಾಗಿದೆ. ಕುತ್ತಿಗೆ ಮಸಾಜ್​, ಮೆದುಳಿಗೆ ರಕ್ತವನ್ನು ಪೂರೈಸುವ ಅಪಧಮನಿಗಳನ್ನು ಹಾನಿಗೊಳಿಸಿದ ಪರಿಣಾಮ ಸಾವು ಸಂಭವಿಸಿದೆ.

ಭುಜದ ನೋವಿನಿಂದ ಬಳಲುತ್ತಿದ್ದ ಗಾಯಕಿ ಕಳೆದ ಅಕ್ಟೋಬರ್​ ತಿಂಗಳಲ್ಲಿ ಮಸಾಜ್ ಮಾಡಿಸಿಕೊಳ್ಳಲು ಸಮೀಪದ ಪಾರ್ಲರ್‌ಗೆ ಭೇಟಿ ನೀಡಿದ್ದಳು. ಈ ವೇಳೆ ಆಕೆಯ ಕುತ್ತಿಗೆಗೆ ಬಲವಾಗಿ ಮಸಾಜ್ ಮಾಡಲಾಗಿತ್ತು. ಇದಾದ ಮೊದಲ ದಿನ ಗಾಯಕಿಗೆ ಕತ್ತಿನ ಹಿಂಭಾಗದಲ್ಲಿ ನೋವು ಕಾಣಿಸಿಕೊಂಡಿತು. ಎರಡನೇ ದಿನ ದೇಹದಾದ್ಯಂತ ತೀವ್ರವಾದ ನೋವು ಕಾಣಿಸಿಕೊಂಡಿತು. ಇದಾದ ಎರಡೇ ವಾರಗಳಲ್ಲಿ ಆಕೆಯಿಂದ ಚಲಿಸಲು ಸಾಧ್ಯವಾಗಲಿಲ್ಲ. ನಂತರ ಆಕೆ ತನ್ನ ಬಲಗೈ ಸ್ವಾಧೀನ ಕಳೆದುಕೊಂಡಳು.

ನವೆಂಬರ್​ ಮಧ್ಯದ ವೇಳೆಗೆ, ಗಾಯಕಿ ಶೇ. 50ಕ್ಕಿಂತ ಹೆಚ್ಚು ಪಾರ್ಶ್ವವಾಯುವಿಗೆ ಒಳಗಾದರು. ನಂತರದ ಪರೀಕ್ಷೆಗಳಲ್ಲಿ ಆಕೆಯ ಮೆದುಳಿನಲ್ಲಿ ರಕ್ತದ ಸೋಂಕು ಮತ್ತು ಊತವಾಗಿರುವುದು ಬಹಿರಂಗವಾಯಿತು. ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿ ಅಂತಿಮವಾಗಿ ಆಕೆ ಕೊನೆಯುಸಿರೆಳೆದಳು.

ಈ ಘಟನೆ ನಂತರ ಮಸಾಜ್​ ಮಾಡಿದ ಪಾರ್ಲರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪಾರ್ಲರ್​ನಲ್ಲಿದ್ದ ಏಳು ಮಂದಿ ಮಸಾಜ್ ಮಾಡುವವರ ಪೈಕಿ ಇಬ್ಬರಿಗೆ ಮಾತ್ರ ಲೈಸೆನ್ಸ್ ಇದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಅತ್ಯಂತ ಸಂಕೀರ್ಣವಾದ ಮಸಾಜ್‌ಗಳನ್ನು ಮಾಡಲು ಅವರು ಸಾಕಷ್ಟು ಪರಿಣತರಲ್ಲ ಎಂಬುದು ಸ್ಪಷ್ಟವಾಗಿದೆ. ಗಾಯಕಿಯ ನಿಧನಕ್ಕೆ ಪಾರ್ಲರ್ ಮಾಲೀಕರು ಸಂತಾಪ ಸೂಚಿಸಿದ್ದಾರೆ.

ಕುತ್ತಿಗೆಯನ್ನು ಬಲವಂತವಾಗಿ ಮತ್ತು ತಿರುಚುವ ಮಸಾಜ್‌ಗಳು ಮೆದುಳಿಗೆ ರಕ್ತವನ್ನು ಪೂರೈಸುವ ಅಪಧಮನಿಗಳನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಇದು ಸ್ನಾಯುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೆಲವೊಮ್ಮೆ ಪಾರ್ಶ್ವವಾಯುವಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)