ಸಾಂದರ್ಭಿಕ ಚಿತ್ರ  
ಟೆಕ್ನಾಲಜಿ

ಈ ವಸ್ತುಗಳಿಲ್ಲದೆ ಮನೆಯಿಂದ ಹೊರಹೋಗಲ್ವಂತೆ ಜೆನ್​ಜೀಗಳು! ಬ್ಯಾಗ್​ನಲ್ಲಿ ಈ 6 ಐಟಂಗಳಂತು ಇರಲೇಬೇಕು... | Gen Z

Gen Z Gadgets: ಊಟ, ನೀರು ಬಿಟ್ಟು ಕೆಲವು ದಿನಗಳು ಬೇಕಾದರೂ ಇರಬಹುದು. ಆದ್ರೆ, ಅದೇ ಆರು ಇಂಚಿನ ಸ್ಮಾರ್ಟ್‌ಫೋನ್ ಇಲ್ಲದಿದ್ದರೆ ಒಂದು ನಿಮಿಷವೂ ಸುಮ್ಮನಿರಲು ಸಾಧ್ಯವಿಲ್ಲ ಎನ್ನುವುದಕ್ಕೆ ಕಣ್ಣು ಮುಂದಿರುವ ಜ್ವಲಂತ ಸಾಕ್ಷಿಯೇ ನಮ್ಮ ಯುವಜನತೆ. ಅದರಲ್ಲೂ ಡಿಜಿಟಲ್​ ಯುಗದಲ್ಲಿ ಬಿಗ್ ಲೈಫ್​ ನೋಡುತ್ತಿರುವ ಸೋ ಕಾಲ್ಡ್​ ಜೆನ್​ಜೀಗಳು.
ಕೈಯಲ್ಲಿ ಸ್ಮಾರ್ಟ್​ಫೋನ್​ ಸೇರಿದಂತೆ ಒಂದಷ್ಟು ಡಿಜಿಟಲ್​ಗೆ ಸಂಬಂಧಿಸಿದ ವಸ್ತುಗಳು ತಮ್ಮ ಬಳಿ ಇಲ್ಲದಿದ್ದರೆ, ಆಸ್ತಿಯೇ ಹೋಯಿತು ಎನ್ನುವಂತೆ ಕೂಗಾಡಿ, ಚೀರಾಡುತ್ತಾರೆ. ಆ ಮಟ್ಟಿಗೆ ಇಂದಿನ ಜೆನ್​ಜೀಗಳು ಬದುಕು ಕಟ್ಟಿಕೊಂಡಿದ್ದಾರೆ. ಇದರಲ್ಲಿ ಜೆನ್​ಜೀಗಳು ಮಾತ್ರವಲ್ಲ ಜೆನ್​ ಆಲ್ಫಾ (Gen Alpha) ಮಂದಿಯದ್ದು ಕೂಡ ಅದೇ ಪಾಡು. ಬೆಳಗ್ಗೆ ಎಳುವುದರಿಂದ ಮಲಗುವವರೆಗೆ ಕೆಲವು ಗ್ಯಾಜೆಟ್‌ಗಳು ಇವರ ದಿನಚರಿಯ ಅತ್ಯಗತ್ಯ ಭಾಗವಾಗಿ ಮಾರ್ಪಟ್ಟಿವೆ. 
ಕೇವಲ ಸಿಜೆಪಿ ಜತೆ ಕೈಜೋಡಿಸಿ ಕೇಂದ್ರ ಶಿಕ್ಷಣ ಸಚಿವರನ್ನು ಕೆಳಗಿಳಿಸುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಜೆನ್​ಜೀಗಳು, ಸ್ಟೈಲಿಶ್​ ಹಾಗೂ ಶೋಕಿ ಜೀವನ ಮಾಡುವುದರಲ್ಲಿಯೂ ಹೈಫೈ. ಸ್ಮಾರ್ಟ್​ಫೋನ್​, ಇಯರ್​ ಬಡ್ಸ್​, ಹೆಡ್​ಫೋನ್​ ಸೇರಿದಂತೆ ಒಂದಷ್ಟು ವಸ್ತುಗಳ ಮೌಲ್ಯವನ್ನು ಇನ್ನಷ್ಟು ಡಬಲ್​ ಮಾಡುತ್ತಿರುವುದೇ ಇವರು. ಪ್ರಸ್ತುತ ಕಾಲಘಟ್ಟದಲ್ಲಿ ಟ್ರೆಂಡ್​ಗೆ ತಕ್ಕಂತೆ ಬದಲಾಗುತ್ತಿರುವ ಜೆನ್​ಜೀಗಳು, ಯಾವೆಲ್ಲ ಎಲೆಕ್ಟ್ರಾನಿಕ್​ ವಸ್ತುಗಳನ್ನು ಸಿಕ್ಕಾಪಟ್ಟೆ ಬಳಸುತ್ತಾರೆ ಎಂಬುದರ ವಿವರ ಹೀಗಿದೆ ಗಮನಿಸಿ.  

1. ಸ್ಮಾರ್ಟ್‌ಫೋನ್ 

ಬೆಳಗ್ಗೆ ಎದ್ದೇಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಸ್ಮಾರ್ಟ್‌ಫೋನ್ ಕೈಯಲ್ಲಿದ್ದರೆ ಜೆನ್​ಜೀಗಳಿಗೆ ದಿನ ಪೂರ್ಣ ಎಂಬ ಭಾವನೆ. ಕಾಲೇಜಿಗೆ ಸಂಬಂಧಿಸಿದ ನೋಟ್ಸ್, ಫುಡ್ ಆರ್ಡರ್, ಬ್ಯಾಂಕಿಂಗ್, ಟಿಕೆಟ್ ಬುಕಿಂಗ್, ಫೋಟೋ ಶೂಟ್‌ನಿಂದ ಹಿಡಿದು ವಿಶ್ವದಲ್ಲಿ ನಡೆಯುವ ಹೊಸ ಹೊಸ ಅಪ್‌ಡೇಟ್ಸ್‌ವರೆಗೆ ಪ್ರತಿಯೊಂದಕ್ಕೂ ಫೋನೇ ಬೇಕೇ ಬೇಕಿದೆ. ಇಂದಿನ ಯುವಕರಿಗೆ ಫೋನ್ ಕೇವಲ ಮಾತುಕತೆಯ ಸಾಧನವಲ್ಲ, ಅದು ಅವರ ಜೀವನದ ಅವಿಭಾಜ್ಯ ಅಂಗ ಎಂದೇ ಹೇಳಬಹುದು. 

2. ಟ್ರೆಂಡಿ ಇಯರ್‌ಬಡ್ಸ್

ಬಸ್, ಮೆಟ್ರೋ, ಜಿಮ್, ಕಾಲೇಜು, ಉದ್ಯೋಗ ಸ್ಥಳ ಹೀಗೆ ಎಲ್ಲಿ ನೋಡಿದರೂ ಜೆನ್​ಜೀಗಳ ಕಿವಿಯಲ್ಲಿ ಸಖತ್​ ಟ್ರೆಂಡೀ ಆಗಿರುವ ವೈರ್‌ಲೆಸ್ ಇಯರ್‌ಬಡ್ಸ್ ಕಾಣಬಹುದು. ತಮ್ಮ ನೆಚ್ಚಿನ ಹಾಡುಗಳು, ಪಾಡ್​ಕಾಸ್ಟ್​, ಆನ್‌ಲೈನ್ ಕ್ಲಾಸ್, ಗೇಮಿಂಗ್ ಹಾಗೂ ವಿಡಿಯೋ ಕಾಲ್‌ಗಳಿಗೆ ಇವುಗಳನ್ನು ಬಳಸುತ್ತಿದ್ದಾರೆ. ಇದನ್ನು ಹಾಕಿಕೊಂಡರೇ ಮುಗಿಯಿತು ಹೊರಗಿನ ಪ್ರಪಂಚದಲ್ಲಿ ಏನಾದರೂ ನಮಗೇನು ಎನ್ನುವಂತೆ ಮುಂದೋಗುತ್ತಿರುತ್ತಾರೆ. 

3. ಸ್ಟೈಲಿಶ್​ ಸ್ಮಾರ್ಟ್‌ವಾಚ್

ಒಂದಾನೊಂದು ಕಾಲದಲ್ಲಿ ಗಡಿಯಾರ ಕೇವಲ ಸಮಯ ನೋಡಲು ಮಾತ್ರ ಬಳಕೆಯಾಗುತ್ತಿತ್ತು. ಆದರೆ, ಇಂದಿನ ಫಿಟ್​ ಜಗತ್ತಿನಲ್ಲಿ ಯುವಕರಿಗೆ ಸ್ಮಾರ್ಟ್‌ವಾಚ್ ತೀರ ಅಗತ್ಯ ಎನ್ನುವಂತಾಗಿದೆ. ಡಿಜಿಟಲ್​ ಕಾಲದಲ್ಲಿ ಬದುಕುತ್ತಿರುವಾಗ ಡಿಜಿಟಲ್​ ವಾಚ್​ಗಳು ಇಲ್ಲ ಎಂದರೆ ಹೇಗೆ? ಹೃದಯ ಬಡಿತ, ನಿದ್ರೆಯ ಪ್ರಮಾಣ ಹಾಗೂ ಕ್ಯಾಲೋರಿಗಳ ಲೆಕ್ಕಾಚಾರ ನೀಡುವ ಇವುಗಳನ್ನು ಮಿಸ್​ ಮಾಡದೆ, ದಿನನಿತ್ಯದ ಬಹುತೇಕ ಸಮಯ ಧರಿಸಿಯೇ ಇರುತ್ತಾರೆ.  

4. ಲ್ಯಾಪ್‌ಟಾಪ್

ಈ ಹಿಂದೆ ಸಿನಿಮಾ ಅಥವಾ ಇಮೇಲ್​ಗಳಿಗೆ ಲ್ಯಾಪ್‌ಟಾಪ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರಿಂದು, ಜೆನ್​ಜೀ ಯುವಕರಿಗೆ ಲ್ಯಾಪ್​ಟಾಪ್​ ಕೇವಲ ಸಿನಿಮಾ, ಉದ್ಯೋಗಕ್ಕೆ ಮಾತ್ರವಲ್ಲ, ಆದಾಯಕ್ಕೂ ಮೂಲವಾಗಿದೆ. ಕೋಡಿಂಗ್, ಗ್ರಾಫಿಕ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್, ಯೂಟ್ಯೂಬ್ ಹಾಗೂ ಆನ್‌ಲೈನ್ ಕ್ಲಾಸ್‌ಗಳ ಮೂಲಕ ಸಣ್ಣ ವಯಸ್ಸಿನಲ್ಲೇ ಹಣ ಗಳಿಸಲು ಲ್ಯಾಪ್‌ಟಾಪ್ ದೊಡ್ಡ ಕೊಡುಗೆಯಾಗಿದೆ.

5. ಟ್ಯಾಬ್ಲೆಟ್​ 

ದಪ್ಪ ದಪ್ಪ ಪುಸ್ತಕಗಳನ್ನು ಹೊತ್ತು ತಿರುಗುವ ಬದಲಿಗೆ ಯುವಕರು ಈಗ ಕಿರಿದಾದ ದುಬಾರಿ ಮೌಲ್ಯದ ಟ್ಯಾಬ್ಲೆಟ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಿಡಿಎಫ್ ಓದಲು, ಡಿಜಿಟಲ್ ನೋಟ್ಸ್ ಬರೆಯಲು, ಡ್ರಾಯಿಂಗ್ ಹಾಗೂ ತಮಿಷ್ಟದ ಕ್ಲಾಸ್​ಗಳನ್ನು ಕೇಳಲು ಟ್ಯಾಬ್ಲೆಟ್‌ಗಳು ಅತ್ಯಂತ ಅನುಕೂಲಕರವಾಗಿವೆ. ಮನುಷ್ಯರ ಜತೆ ಸಂಪರ್ಕ ಬೆಳೆಸಲು, ಅವರೊಡೆನೆ ಮುಖಾಮುಖಿಯಾಗಿ ಮಾತನಾಡುವುದಕ್ಕೆ ಹಿಂದೇಟು ಹಾಕುವ ಜೆನ್​ಜೀಗಳು ಮೊಬೈಲ್​ ಬಿಟ್ಟರೆ ಇಂತಹ ಟ್ಯಾಬ್​. ಲ್ಯಾಪ್​ಟ್ಯಾಪ್​ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. 

6. ಗೇಮಿಂಗ್ ಡಿವೈಸ್‌ಗಳು

ಪ್ಲೇಸ್ಟೇಷನ್, ಎಕ್ಸ್‌ಬಾಕ್ಸ್ ಸೇರಿ ಮುಂತಾದ ಗೇಮಿಂಗ್ ಸಾಧನಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಗೇಮ್ ಆಡುತ್ತಾ ಅದನ್ನು ಯೂಟ್ಯೂಬ್ ಹಾಗೂ ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ಜೆನ್​ಜೀ ಯುವಕರು ಇಂದು ಲಕ್ಷ ಲಕ್ಷ, ಕೆಲವರಂತು ಕೋಟಿಗಟ್ಟಲೇ ಹಣ ದುಡಿಯುತ್ತಿದ್ದಾರೆ ಎಂಬುದು ನಿಜಕ್ಕೂ ಹುಬ್ಬೇರಿಸುವ ಸಂಗತಿ,(ಏಜೆನ್ಸೀಸ್).