ಹಲ್ಲಿನ ಆರೋಗ್ಯಕ್ಕೆ ಯಾವ ಬ್ರಷ್ ಬೆಸ್ಟ್?
- ಎಲೆಕ್ಟ್ರಿಕ್ ಬ್ರಷ್ ಸಾಮಾನ್ಯ ಬ್ರಷ್‌ಗಿಂತ ಒಳ್ಳೆಯದ್ದಾ?
- 56 ಅಧ್ಯಯನಗಳ ಪರಿಶೀಲನೆಯಲ್ಲಿ ಗೊತ್ತಾಗಿದ್ದು ಏನು?
- ತಪ್ಪಾಗಿ ಹಲ್ಲು ಉಜ್ಜಿದರೆ ಹಲ್ಲಿಗೆ ಹಾನಿಯಾಗುತ್ತಾ?
Manual vs Electric Toothbrush: ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳೋಕೆ ದಿನವೂ ಬ್ರಷ್ ಮಾಡೋದು ಎಷ್ಟು ಮುಖ್ಯ ಅನ್ನೋದು ಗೊತ್ತೇ ಇದೆ. ಭಾರತದಲ್ಲಿ ಹಿಂದೆ ದಾತುನ್ ಬಳಸುತ್ತಿದ್ದವರು, ಬಳಿಕ ಮ್ಯಾನುಯಲ್ ಟೂತ್‌ಬ್ರಶ್‌ಗೆ ಶಿಫ್ಟ್ ಆದರು. ಇದೀಗ ಟೆಕ್ನಾಲಜಿ ಬೆಳೆದಂತೆ ಎಲೆಕ್ಟ್ರಿಕ್ ಟೂತ್‌ಬ್ರಶ್‌ಗಳೂ ಮಾರ್ಕೆಟ್‌ನಲ್ಲಿ ಭರ್ಜರಿಯಾಗಿ ಸದ್ದು ಮಾಡ್ತಿವೆ.
ಆದ್ರೆ, ಎಲೆಕ್ಟ್ರಿಕ್ ಬ್ರಷ್ ಬಳಸಿದ್ರೆ ಮಾತ್ರ ಹಲ್ಲು ಕ್ಲೀನ್ ಆಗುತ್ತಾ? ಅಥವಾ ಸರಿಯಾದ ರೀತಿಯಲ್ಲಿ ಮ್ಯಾನುಯಲ್ ಬ್ರಷ್ ಮಾಡಿದ್ರೂ ಸಾಕಾ? ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಜಗತ್ತಿನಲ್ಲಿ ಸುಮಾರು 370 ಕೋಟಿ ಜನರು ಬಾಯಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅಸಲಿ ಪ್ರಶ್ನೆ ಯಾವ ಬ್ರಷ್ ಬೆಸ್ಟ್ ಅನ್ನೋದಕ್ಕಿಂತ, ನಾವು ಸರಿಯಾಗಿ ಹಲ್ಲು ಉಜ್ಜುತ್ತಿದ್ದೀವಾ? ಅನ್ನೋದು.
ಎಲೆಕ್ಟ್ರಿಕ್ ಟೂತ್‌ಬ್ರಶ್ ನಿಜಕ್ಕೂ ಬೆಸ್ಟಾ?
56 ಅಧ್ಯಯನಗಳ ಪರಿಶೀಲನೆಯಲ್ಲಿ, ಎಲೆಕ್ಟ್ರಿಕ್ ಬ್ರಷ್‌ಗಳು ಪ್ಲಾಕ್ ಮತ್ತು ಜಿಂಜಿವೈಟಿಸ್ ಕಡಿಮೆ ಮಾಡುವಲ್ಲಿ ಮ್ಯಾನುಯಲ್ ಬ್ರಷ್‌ಗಿಂತ ಸ್ವಲ್ಪ ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದಿದೆ. ಕೈ ಚಲನೆ ನಿಯಂತ್ರಿಸಲು ಕಷ್ಟವಾಗುವ ವೃದ್ಧರು ಹಾಗೂ ವಿಶೇಷ ಅಗತ್ಯವಿರುವವರಿಗೆ ಇದು ಹೆಚ್ಚು ಅನುಕೂಲ.
ಎಲೆಕ್ಟ್ರಿಕ್ ಬ್ರಷ್ ಬಳಸೋವಾಗ ಎಚ್ಚರ
ಎಲೆಕ್ಟ್ರಿಕ್ ಬ್ರಷ್ ಅನ್ನು ತಪ್ಪಾಗಿ ಬಳಸಿದ್ರೆ ಹಲ್ಲು ಅಥವಾ ಒಸಡುಗಳಿಗೆ ಗಾಯವಾಗಬಹುದು. ಜೊತೆಗೆ, ನೀರಿನ ಗುಣಮಟ್ಟವೂ ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಮ್ಯಾನುಯಲ್‌ನಿಂದ ಎಲೆಕ್ಟ್ರಿಕ್ ಬ್ರಷ್‌ಗೆ ಬದಲಾದ್ರೆ ಮಾತ್ರ ಎಲ್ಲಾ ಹಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲ್ಲ ಎಂದು ವೈದ್ಯರು ಹೇಳಿದ್ದಾರೆ.
ಟೆಕ್ನಾಲಜಿ ಅಂದ್ರೆ ಯಾವಾಗಲೂ ಬೆಸ್ಟ್ ಅಲ್ಲ
ಎಲೆಕ್ಟ್ರಿಕ್ ಬ್ರಷ್ ಬಳಸಿದ್ರೆ ಮಾತ್ರ ಸಾಕಾಗಲ್ಲ, ಸರಿಯಾದ ಟೆಕ್ನಿಕ್ ಕೂಡ ಮುಖ್ಯ. ಜೋರಾಗಿ ಅಥವಾ ತಪ್ಪಾದ ರೀತಿಯಲ್ಲಿ ಬ್ರಷ್ ಮಾಡಿದ್ರೆ ಹಲ್ಲು ಮತ್ತು ಒಸಡುಗಳಿಗೆ ಸಮಸ್ಯೆಯಾಗಬಹುದು. ಹೀಗಾಗಿ ಹೆಚ್ಚು ಒತ್ತಡ ಹಾಕದೆ, ಮೃದುವಾಗಿ ಪ್ಲಾಕ್ ತೆಗೆಯೋದು ಮುಖ್ಯ ಎಂದು ವೈದ್ಯರು ಹೇಳಿದ್ದಾರೆ..
ದುಬಾರಿ ಅನ್ನೋದೇ ಎಲೆಕ್ಟ್ರಿಕ್ ಬ್ರಷ್‌ಗೆ ದೊಡ್ಡ ಅಡ್ಡಿ
ಎಲೆಕ್ಟ್ರಿಕ್ ಟೂತ್‌ಬ್ರಶ್ ಇನ್ನೂ ಹಲವರಿಗೆ ದುಬಾರಿ ಆಯ್ಕೆಯಾಗಿದೆ. ಹೀಗಾಗಿ ಮ್ಯಾನುಯಲ್ ಬ್ರಷ್ ಹೆಚ್ಚಿನವರಿಗೆ ಪ್ರಾಯೋಗಿಕ ಆಯ್ಕೆ. ಆದ್ರೆ, ಸರಿಯಾದ ಟೆಕ್ನಿಕ್‌ನಲ್ಲಿ ಪ್ರತಿದಿನ ಬ್ರಷ್ ಮಾಡಿದ್ರೆ ಮ್ಯಾನುಯಲ್ ಬ್ರಷ್‌ನಿಂದಲೂ ಉತ್ತಮ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಡಾಕ್ಟರ್ ಹೇಳಿದ್ದಾರೆ.
ಅಂತಿಮವಾಗಿ, ಯಾವ ಬ್ರಷ್ ಬಳಸಬೇಕು ಅನ್ನೋದಕ್ಕಿಂತ ಅದನ್ನು ಸರಿಯಾಗಿ, ನಿಯಮಿತವಾಗಿ ಮತ್ತು ಮೃದುವಾಗಿ ಬಳಸುವುದೆ ಮುಖ್ಯ ಅನ್ನೋದು ತಜ್ಞರ ಮಾತು.(ಏಜೆನ್ಸೀಸ್)