- ಸಾಮಾನ್ಯವಾಗಿ ಒಬ್ಬರ ಹೆಸರಿನಲ್ಲಿ ಒಂದು ಅಥವಾ ಎರಡು ಸಿಮ್ ಕಾರ್ಡ್ ಬಳಕೆ
- ಎರಡಕ್ಕಿಂತ ಹೆಚ್ಚು ಬಳಕೆಯಲ್ಲಿದ್ದರೆ ಏನು ಕಥೆ?
- ನಿಮ್ಮ ಆಧಾರ್ನಲ್ಲಿ ಕೆಲವು ಗೊತ್ತಿಲ್ಲದ ಸಂಖ್ಯೆಗಳು ಬಳಕೆಯಲ್ಲಿದೆಯೇ? ಎಂಬುದನ್ನು ಹೀಗೆ ಪತ್ತೆಹಚ್ಚಿ
SIM Card: ನಮ್ಮದೊಂದು ಆಧಾರ್ ಸಂಖ್ಯೆಯಲ್ಲಿ ಅಬ್ಬಬ್ಬಾ ಎಂದರೆ ನಾವು ಒಂದು ಅಥವಾ ಎರಡು ಸಿಮ್ ಕಾರ್ಡ್ ಖರೀದಿ ಮಾಡಿ, ಉಪಯೋಗಿಸುತ್ತಿರಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಸಾಂಕ್ರಾಮಿಕ ರೋಗದಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಮ್ಮ ಹೆಸರಿನಲ್ಲಿ ಕಿಡಿಗೇಡಿಗಳು ಸಿಮ್ ಕಾರ್ಡ್ ಖರೀದಿಸಿ ಬಳಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ತಿಳಿಯುವುದು ಹೇಗೆ? ನಮ್ಮ ಆಧಾರ್ನಲ್ಲಿ ಎಷ್ಟು ಸಿಮ್ ಕಾರ್ಡ್ಗಳು ಚಾಲ್ತಿಯಲ್ಲಿವೆ ಎಂಬುದನ್ನು ಪತ್ತೆಹಚ್ಚುವುದು ಈಗ ಬಹಳ ಸುಲಭ.
ಇತ್ತೀಚೆಗಷ್ಟೇ ಸೈಬರ್ ವಂಚನೆ ಮತ್ತು ನಕಲಿ ಸಿಮ್‌ಗಳ ಹಾವಳಿ ತಡೆಗಟ್ಟಲು ದೂರಸಂಪರ್ಕ ಇಲಾಖೆ (DoT) ಹೊಸದೊಂದು ಕಠಿಣ ಕ್ರಮ ಕೈಗೊಂಡಿದೆ. ಅದುವೇ ಒಬ್ಬರ ಹೆಸರಿನಲ್ಲಿ ಹೆಚ್ಚು ಅಂದರೆ 9 ಸಿಮ್ ಕಾರ್ಡ್‌ಗಳಿಗಷ್ಟೇ ಅನುಮತಿ ಎಂಬ ನಿಯಮವನ್ನು ಜಾರಿಗೊಳಿಸಿದೆ. ದೂರಸಂಪರ್ಕ ಇಲಾಖೆಯ ಹೊಸ ಮಾರ್ಗಸೂಚಿಯ ಪ್ರಕಾರ, ದೇಶದ ಪ್ರತಿಯೊಬ್ಬರ ಹೆಸರಿನಲ್ಲಿ ಗರಿಷ್ಠ ಎಂದರೆ 9 ಮೊಬೈಲ್ ಕನೆಕ್ಷನ್‌ಗಳನ್ನು ಮಾತ್ರ ಹೊಂದಲು ಅವಕಾಶ ಕಲ್ಪಿಸಲಾಗಿದೆ.
ಚೆಕ್ ಮಾಡುವುದು ಹೇಗೆ ಅಂತೀರಾ?
ಪ್ರಸ್ತುತ ಕಾಲಘಟ್ಟದಲ್ಲಿ ನಿಮ್ಮ ಅರಿವಿಗೆ ಬಾರದಂತೆ ಯಾರು ಬೇಕಾದರೂ ನಿಮ್ಮ ಯುಐಡಿ ಸಂಖ್ಯೆಯನ್ನು ಬಳಸುವ ಸಾಧ್ಯತೆಗಳಿವೆ. ದೂರಸಂಪರ್ಕ ಇಲಾಖೆ (ಡಿಒಟಿ) TAFCOP ವ್ಯವಸ್ಥೆಯ ಅಡಿಯಲ್ಲಿ ಸಂಚಾರ್ ಸಾಥಿ ಆನ್ಲೈನ್ ಪೋರ್ಟಲ್ ಮೂಲಕ ಒಂದು ಸಾಧನವನ್ನು ಲಭ್ಯವಾಗುವಂತೆ ಮಾಡಿದೆ. ಇದರ ಸಹಾಯದಿಂದ ನೀವು ಕುಳಿತ ಜಾಗದಿಂದಲೇ ನಿಮ್ಮ ಸ್ಮಾರ್ಟ್ಫೋನ್ ಅಥವಾ ಲಾಪ್ಟಾಪ್/ ಕಂಪ್ಯೂಟರ್ನಲ್ಲಿ ಈಗ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಹಾಕಿ ತಿಳಿಯಬಹುದಾಗಿದೆ.
ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಗರಿಷ್ಠವೇ 6
ಈ ಮೂಲಕ ಬಳಕೆದಾರರು ತಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದಾಗಿದೆ. ಭಾರತ ಸರ್ಕಾರವು ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ದೇಶಾದ್ಯಂತ 9 ಸಕ್ರಿಯ ಸಿಮ್‌ಗಳೊಂದಿಗೆ ಒಂದು ಆಧಾರ್ ಅನ್ನು ನೋಂದಾಯಿಸಬಹುದು. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಗರಿಷ್ಠವೇ 6. ನಿಮ್ಮ ಮೊಬೈಲ್ ಸಂಖ್ಯೆಗೆ ಎಷ್ಟು ಸಿಮ್ ಕಾರ್ಡ್‌ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ತಿಳಿಯಲು ಕೆಳಗೆ ನೀಡಲಾದ ಕ್ರಮಗಳನ್ನು ಅನುಸರಿಸಿ.
- ಸಂಚಾರ್ ಸಾಥಿ ಪೋರ್ಟಲ್‌ಗೆ ಕ್ಲಿಕ್ ಮಾಡಿ (sancharsaathi.gov.in ) ಮುಖಪುಟದಲ್ಲಿ, Citizen Centric Services ವಿಭಾಗಕ್ಕೆ ಹೋಗಿ 'Know Your Mobile Connections' ಮೇಲೆ ಟ್ಯಾಪ್ ಮಾಡಿ.
- ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒನ್ ಟೈಮ್ ಪಾಸ್‌ವರ್ಡ್ (OTP) ಅನ್ನು ಕೊಡಲಾದ ಬಾಕ್ಸ್ನಲ್ಲಿ ನಮೂದಿಸಿ.
- ಅದಾದ ಬಳಿಕ, ಆಧಾರ್ ಐಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿ ಪರದೆಯ ಮೇಲೆ ಗೋಚರಿಸುತ್ತದೆ.
ಗೊತ್ತಿಲ್ಲದ ಮೊಬೈಲ್ ಸಂಖ್ಯೆ ಕಿತ್ತುಬಿಸಾಡಲು ಹೀಗೆ ಮಾಡಿ
ನಿಮಗೆ ಸಂಬಂಧಿಸದ ಮೊಬೈಲ್ ಸಂಖ್ಯೆಗಳು ಏನಾದರೂ ಗೋಚರಿಸಿದರೆ, ಅದರ ಸಂಪರ್ಕ ಕಡಿತಗೊಳಿಸಿ. ಇದು "ನನ್ನ ಸಂಖ್ಯೆಯಲ್ಲ" ಎಂದು ಫ್ಲ್ಯಾಗ್ ಮಾಡಬಹುದು ಅಥವಾ ನೀವು ಹಳೆಯ ಸಿಮ್ ಹೊಂದಿದ್ದರೆ, ನೀವು ಅದನ್ನು "ಅಗತ್ಯವಿಲ್ಲ" ಎಂಬ ಆಯ್ಕೆ ಆಯ್ಕೆ ಕ್ಲಿಕ್ ಮಾಡಬಹುದು. ನಿಮ್ಮ ವರದಿಯ ಆಧಾರದ ಮೇಲೆ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನಿಮ್ಮ ಹೆಸರಿನಲ್ಲಿ 9ಕ್ಕಿಂತ ಅಧಿಕ ಸಿಮ್ ಕಾರ್ಡ್ ನೋಂದಣಿ ಆಗಿದ್ದಲ್ಲಿ, ಕೂಡಲೇ ಸಂದೇಶದ (SMS) ಮೂಲಕ ಎಚ್ಚರಿಕೆ ಗಂಟೆ ನಿಮ್ಮನ್ನು ತಲುಪಲಿದೆ,(ಏಜೆನ್ಸೀಸ್).