Tea/Coffee: ನಮ್ಮಲ್ಲಿ ಬಹುತೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿಯಾದ ಚಹಾ ಅಥವಾ ಕಾಫಿ ಇರಬೇಕು. ಇದನ್ನು ಕುಡಿಯದೆ ದಿನವೇ ಪ್ರಾರಂಭವಾಗದು ಎನ್ನುವ ರೀತಿಯಲ್ಲಿ ರೂಢಿಸಿಕೊಂಡಿರುತ್ತಾರೆ. ಗರಮ್ ಗರಮ್ ಟೀ/ಕಾಫಿ ನಮ್ಮ ತುಟಿಗಳನ್ನು ಸ್ಪರ್ಶಿಸಿದಾಗ, ಅದೇನೋ ಮನಸ್ಸಿಗೊಂದು ರೀತಿ ಉಲ್ಲಾಸವಾಗುವುದು ದಿಟ. ಇದರಲ್ಲಿ ಅನುಮಾನವೇ ಬೇಡ. ಕೆಲವರು ಮಾತ್ರ ಖಾಲಿ ಹೊಟ್ಟೆಯಲ್ಲಿ ಟೀ/ಕಾಫಿ ಕುಡಿಯುವ ಮೂಲಕ ಹಲವು ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ಪಾಲಿಕೆಯಿಂದ ಮಣ್ಣಿನ ಗಣೇಶ ಮೂರ್ತಿ ಸಿದ್ಧಪಡಿಸುವ ಕಾರ್ಯಾಗಾರ -ಪಾಲಿಕೆಯಿಂದ ಬದಲಾವಣೆ ಪರ್ವ ಪ್ರಾರಂಭ- ಸಚಿವ
ಅಸಲಿಗೆ ಈ ಅಭ್ಯಾಸ ದೇಹದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಇದು ನಮ್ಮ ಊಹೆಗೂ ಮೀರಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟಕ್ಕೂ ಖಾಲಿ ಹೊಟ್ಟೆಯಲ್ಲಿ ಟೀ/ಕಾಫಿ ಸೇವನೆ ಯಾವೆಲ್ಲ ಸಮಸ್ಯೆಗಳಿಗೆ ಕಾರಣವಾಗಬಹುದು? ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ.
ಚಹಾ/ಕಾಫಿಯಲ್ಲಿರುವ ಕೆಫೀನ್ ಅಂಶ ಮತ್ತು ಆಮ್ಲಗಳು ಖಾಲಿ ಹೊಟ್ಟೆಯಲ್ಲಿ ಜೀರ್ಣಕಾರಿ ರಸಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದು ಹೊಟ್ಟೆಯ ಒಳಪದರವನ್ನು ಹಾನಿಗೊಳಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚಿದ ಆಮ್ಲೀಯತೆಯು ಗ್ಯಾಸ್, ಮಲಬದ್ಧತೆ ಮತ್ತು ವಿಪರೀತ ನೋವನ್ನು ಉಂಟುಮಾಡುವ ಸಾಧ್ಯತೆಯಿದೆ.
ಖಾಲಿ ಹೊಟ್ಟೆಯಲ್ಲಿ ಚಹಾ/ಕಾಫಿಯನ್ನು ಪದೇ ಪದೇ ಕುಡಿಯುವುದರಿಂದ ಹೊಟ್ಟೆಯಲ್ಲಿ ಉರಿಯೂತ ಸಂಭವಿಸುತ್ತದೆ. ದೀರ್ಘಕಾಲದವರೆಗೆ ಹೀಗೆ ಮಾಡಿದರೆ, ಜಠರದುರಿತದ ಅಪಾಯ ಕಾಡುವ ಸಾಧ್ಯತೆಗಳು ಹೆಚ್ಚು.
ಟೀ/ಕಾಫಿಯಲ್ಲಿರುವ ಕೆಫೀನ್ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದರರ್ಥ ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಈ ರೀತಿ ಕುಡಿಯುವುದರಿಂದ ದೇಹದಲ್ಲಿನ ನೀರಿನ ಮಟ್ಟವನ್ನು ಕಡಿಮೆಗೊಳಿಸುತ್ತದೆ ಮತ್ತು ತಲೆನೋವು, ಆಯಾಸವನ್ನು ಉಂಟುಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವಿಸುವುದರಿಂದ ಹಾರ್ಮೋನ್ಗಳ ಅಸಮತೋಲನ ಉಂಟಾಗುತ್ತದೆ. ಇದು ಮಾನಸಿಕ ಆತಂಕ, ಉದ್ವೇಗ ಮತ್ತು ಮನಸ್ಥಿತಿ ಬದಲಾವಣೆಗಳಿಗೆ ಕಾರಣವಾಗಬಹುದು.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.