Kolkata Biryani Recipe ಸಾಂದರ್ಭಿಕ ಚಿತ್ರ
Kolkata Biryani Recipe: ಬಿರಿಯಾನಿ ಪ್ರಿಯರಲ್ಲಿ ಹೈದರಾಬಾದಿ, ಲಕ್ನೋವಿ ಬಿರಿಯಾನಿಗಳಷ್ಟೇ ಕ್ರೇಜ್ ಹೊಂದಿರುವ ಮತ್ತೊಂದು ರಾಯಲ್ ಡಿಶ್ ಕೋಲ್ಕತ್ತಾ ಬಿರಿಯಾನಿ. 19ನೇ ಶತಮಾನದಲ್ಲಿ ಅವಧಿಯ ಕೊನೆಯ ನವಾಬ ವಾಜಿದ್ ಅಲಿ ಶಾ ಕೋಲ್ಕತ್ತಾಗೆ ಬಂದಾಗ ಅವರ ಬಾಣಸಿಗರು ಇದನ್ನು ಪರಿಚಯಿಸಿದರು. ಅಂದು ಮಾಂಸದ ಕೊರತೆ ಅಥವಾ ಆರ್ಥಿಕ ಕಾರಣಗಳಿಂದ ಬಿರಿಯಾನಿಯ ಪ್ರಮಾಣ ಹೆಚ್ಚಿಸಲು ಮಾಂಸದೊಂದಿಗೆ ದೊಡ್ಡದಾಗಿ ಹೆಚ್ಚಿದ ಆಲೂಗಡ್ಡೆ ಹಾಗೂ ಬೇಯಿಸಿದ ಮೊಟ್ಟೆ ಬಳಸಲು ಆರಂಭಿಸಲಾಯಿತು. ಕಾಲಕ್ರಮೇಣ ಇದೇ ಆಲೂಗಡ್ಡೆ ಮತ್ತು ಮೊಟ್ಟೆ ಕೋಲ್ಕತ್ತಾ ಬಿರಿಯಾನಿಯ ಸಿಗ್ನೇಚರ್ ಗುರುತಾಗಿ ಜನಪ್ರಿಯವಾಯಿತು.
ನಿಮ್ಮ ಮನೆಯಲ್ಲೂ ಕೋಲ್ಕತ್ತಾದ ರೆಸ್ಟೋರೆಂಟ್ ಶೈಲಿಯ ಸಾಂಪ್ರದಾಯಿಕ ಬಿರಿಯಾನಿಯನ್ನು ಅತ್ಯಂತ ಸರಳವಾಗಿ ತಯಾರಿಸಲು ಇಲ್ಲಿದೆ ಕಂಪ್ಲೀಟ್ ರೆಸಿಪಿ ಗೈಡ್..
ಬೇಕಾಗುವ ಪದಾರ್ಥಗಳು
*500 ಗ್ರಾಂ ಚಿಕನ್ ಅಥವಾ ಮಟನ್
*2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
*2 ಚಮಚ ಕೋಲ್ಕತ್ತಾ ಬಿರಿಯಾನಿ ಮಸಾಲಾ ಪುಡಿ
*ಸ್ವಲ್ಪ ಹಾಲಿನಲ್ಲಿ ನೆನಸಿದ ಕೇಸರಿ
*ಸ್ವಲ್ಪ ತುಪ್ಪ ಮತ್ತು ಎಣ್ಣೆ
*ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಚ್ಚಖಾರದ ಪುಡಿ
ಮಾಡುವ ವಿಧಾನ
ಚಿಕನ್ ಅಥವಾ ಮಟನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಅರ್ಧ ಚಮಚ ಬಿರಿಯಾನಿ ಮಸಾಲಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ 1 ಗಂಟೆ ಕಾಲ ಪಕ್ಕಕ್ಕೆ ಇಡಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಮತ್ತು ಸ್ವಲ್ಪ ತುಪ್ಪ ಬಿಸಿ ಮಾಡಿ, ಹೆಚ್ಚಿದ ಈರುಳ್ಳಿಯನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದು ಎತ್ತಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸ್ವಲ್ಪ ಅರಿಶಿನ ಮತ್ತು ಉಪ್ಪು ಹಾಕಿ, ದೊಡ್ಡದಾಗಿ ಹೆಚ್ಚಿದ ಆಲೂಗಡ್ಡೆ ತುಂಡುಗಳನ್ನು ಲಘುವಾಗಿ ಹುರಿದುಕೊಳ್ಳಿ. ನಂತರ ಸ್ವಲ್ಪ ನೀರು ಮತ್ತು ಬಿರಿಯಾನಿ ಮಸಾಲಾ ಸೇರಿಸಿ ಆಲೂಗಡ್ಡೆಯನ್ನು ಶೇ 80 ರಷ್ಟು ಬೇಯಿಸಿ ನೀರನ್ನು ಬಸಿದು ಇಟ್ಟುಕೊಳ್ಳಿ.
ಉಳಿದ ಎಣ್ಣೆ ಮತ್ತು ತುಪ್ಪಕ್ಕೆ ಮ್ಯಾರಿನೇಟ್ ಮಾಡಿದ ಮಾಂಸವನ್ನು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಹುರಿದ ಈರುಳ್ಳಿಯ ಅರ್ಧ ಭಾಗ ಮತ್ತು ಸ್ವಲ್ಪ ನೀರು ಸೇರಿಸಿ ಮಾಂಸವು ಮೃದುವಾಗುವವರೆಗೆ ಬೇಯಿಸಿಕೊಳ್ಳಿ.
ಒಂದು ದೊಡ್ಡ ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದಕ್ಕೆ ಏಲಕ್ಕಿ, ಲವಂಗ, ದಾಲ್ಚಿನ್ನಿ, ಉಪ್ಪು ಮತ್ತು ಸ್ವಲ್ಪ ಎಣ್ಣೆ ಹಾಕಿ. ನೀರು ಕುದಿಯುವಾಗ ನೆನೆಸಿದ ಅಕ್ಕಿ ಹಾಕಿ ಶೇ. 70-80 ರಷ್ಟು ಬೇಯಿಸಿಕೊಳ್ಳಿ. ನೀರನ್ನು ಸಂಪೂರ್ಣವಾಗಿ ಬಸಿದು ಅನ್ನವನ್ನು ಹರವಿಡಿ.
ಇದಾದ ಬಳಿಕ ಬಿರಿಯಾನಿ ಮಾಡುವ ದಪ್ಪ ತಳದ ಪಾತ್ರೆಗೆ ಮೊದಲು ಸ್ವಲ್ಪ ತುಪ್ಪ ಸವರಿ. ಬೇಯಿಸಿದ ಮಾಂಸದ ತುಂಡುಗಳು ಮತ್ತು ಗ್ರೇವಿಯನ್ನು ಕೆಳ ಪದರವಾಗಿ ಹಾಕಿ. ಅದರ ಮೇಲೆ ಬೇಯಿಸಿದ ಆಲೂಗಡ್ಡೆ ಮತ್ತು ಬೇಯಿಸಿದ ಮೊಟ್ಟೆಗಳನ್ನು ಜೋಡಿಸಿ. ಇದರ ಮೇಲೆ ಸ್ವಲ್ಪ ಬಿರಿಯಾನಿ ಮಸಾಲಾ ಪುಡಿ ಮತ್ತು ಹುರಿದ ಈರುಳ್ಳಿ ಉದುರಿಸಿ.
ಈಗ ಅದರ ಮೇಲೆ ಬೇಯಿಸಿದ ಅನ್ನದ ಪದರವನ್ನು ಹಾಕಿ ಸಮತಟ್ಟು ಮಾಡಿ. ಅನ್ನದ ಮೇಲೆ ಕುಂಕುಮಪೂವು ಮಿಶ್ರಿತ ಹಾಲು, ರೋಜಾ ನೀರು, ಕೆವ್ಡಾ ನೀರು ಮತ್ತು ಮೀಠಾ ಅತ್ತರ್ ಹನಿಗಳನ್ನು ಚಿಮುಕಿಸಿ. ಕೊನೆಯಲ್ಲಿ ಮೇಲೆ 2 ಚಮಚ ತುಪ್ಪ ಸವರಿ. ಪಾತ್ರೆಯ ಬಾಯಿಯನ್ನು ಗೋಧಿ ಹಿಟ್ಟಿನಿಂದ ಅಥವಾ ಅಲ್ಯೂಮಿನಿಯಂ ಫಾಯಿಲ್‌ನಿಂದ ಗಾಳಿ ಹೋಗದಂತೆ ಮುಚ್ಚಿ, ಸಣ್ಣ ಉರಿಯಲ್ಲಿ 15 ರಿಂದ 20 ನಿಮಿಷಗಳ ಕಾಲ 'ದಮ್' ಕೊಡಿ. ಈಗ ಕೋಲ್ಕತ್ತಾ ಬಿರಿಯಾನಿ ಸವಿಯಲು ಸಿದ್ಧ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.