ಲೈಫ್‌ಸ್ಟೈಲ್

ಮನೋಲ್ಲಾಸ: ದಾನದ ಮಹಿಮೆ

rameshmysuru

ಶುಭಾ ಗಿರಣಿಮನೆ

ಒಂದೂರಲ್ಲಿ ಒಬ್ಬ ಬಡವನಿದ್ದ. ಕೂಲಿಕೆಲಸದಿಂದ ಬಂದ ಕೂಡಲೇ ದಿನವೂ ಒಂದು ಮುಷ್ಟಿ ಅಕ್ಕಿಯನ್ನು ಬೆತ್ತದ ಪೆಟ್ಟಿಗೆಯಲ್ಲಿ ಹಾಕಿ, ಆರು ತಿಂಗಳಿಗೊಮ್ಮೆಆ ಅಕ್ಕಿಯನ್ನು ತನಗಿಂತ ಬಡವರಿಗೆ ಹಂಚಿಬಿಡುತ್ತಿದ್ದ. ಅದೇ ಊರಿನಲ್ಲಿ ಒಬ್ಬ ಧನಿಕನಿದ್ದ. ಆದರೂ ಜಿಪುಣ.

ಬಡವನ ಈ ದಾನದ ವಿಚಾರ ತಿಳಿದಾಗ ಧನಿಕನು ‘ಅವನೊಬ್ಬ ಮುಠ್ಠಾಳ’ ಎಂದು ಲೇವಡಿ ಮಾಡಿದ್ದ. ಹೀಗಿರುವಾಗ ಒಮ್ಮೆ ಭಯಂಕರ ಅಕಾಲಿಕ ಮಳೆ ಬಂತು. ಆ ಊರಿನಿಂದ ಪೇಟೆಗೆ ಹೋಗಲು ನದಿ ದಾಟಬೇಕಿತ್ತು. ನದಿ ತುಂಬಿ ಹರಿಯುತ್ತಿತ್ತು. ಹದಿನೈದು ದಿನವಾದರೂ ಮಳೆ ಕಡಿಮೆಯಾಗುವ ಲಕ್ಷಣಗಳೇ ಕಾಣಿಸಲಿಲ್ಲ. ಮಳೆಗಾಲದ ಪ್ರಾರಂಭದಲ್ಲಿ ಮೂರು ತಿಂಗಳಿಗೆ ಆಗುವಷ್ಟು ಅಕ್ಕಿ, ಬೇಳೆಕಾಳನ್ನು ತಂದುಕೊಳ್ಳುವ ರೂಢಿ ಆ ಊರಿನವರಿಗಿತ್ತು. ಆದರೆ ಮಳೆಗಾಲ ಪ್ರಾರಂಭವಾಗುವ ಮೊದಲೇ ಅಕಾಲಿಕ ಮಳೆ ಬಂದು ಆ ಊರಿನ ಮನೆಗಳಲ್ಲಿ ದಿನಸಿಗಳು, ಬೇಳೆ, ಅಕ್ಕಿ ಖಾಲಿಯಾಗುತ್ತ ಬಂದವು.

ಶ್ರೀಮಂತರು ಬಡವರಿಗೆ ಹಂಚಲಿಲ್ಲ. ಬಡವರು ಕಂಗಾಲಾದರು, ಹಸಿವಿನಿಂದ ನರಳಿದರು. ದಿನಗಳೆದಂತೆ ಇತರ ಶ್ರೀಮಂತರ ಮನೆಗಳಲ್ಲೂ ಅಕ್ಕಿ ಖಾಲಿಯಾಗುತ್ತ ಬಂತು. ಆದರೂ ಆ ಧನಿಕನ ಮನೆಯಲ್ಲಿ ಮಾತ್ರ ಅಕ್ಕಿ ಇತ್ತು. ಎಲ್ಲರೂ ಹಣ ಕೊಟ್ಟು ಆತನ ಬಳಿಯಿಂದ ಅಕ್ಕಿ ತೆಗೆದುಕೊಂಡು ಹೋದರು. ಆದರೆ ಬಡವನು ಮಾತ್ರ ಧನಿಕನ ಮನೆಗೆ ಬರಲಿಲ್ಲ. ಈ ಧನಿಕನಿಗೆ ಆ ಬಡವ ಹೇಗೆ ಬದುಕುತ್ತಾನೆ ಎಂದು ನೋಡುವ ಕುತೂಹಲ. ಯಾಕೆಂದರೆ ಯಾವಾಗಲೂ ಅಕ್ಕಿಯನ್ನುದಾನ ಮಾಡುತ್ತಿದ್ದ. ‘ಆ ಅಕ್ಕಿಯನ್ನು ಮಾರಿ ಹಣ ಸಂಪಾದಿಸಿದ್ದರೆ ಈಗ ಅನುಕೂಲವಾಗುತಿತ್ತು. ಈಗ ಹಣವಿಲ್ಲ. ಹಣ ಕೊಡದೆ ನಾನು ಅಕ್ಕಿ ಕೊಡುವುದಿಲ್ಲ. ಅವನ ದಾನ-ಧರ್ಮಗಳು ಯಾವ ಪುಣ್ಯಕ್ಕೆ ಬರುತ್ತವೆ ನೋಡಬೇಕು’ ಎಂದುಕೊಂಡ.

ತಿಂಗಳು ಕಳೆದರೂ ಬಡವ ತನ್ನ ಪಾಡಿಗೆ ತಾನಿದ್ದ. ನದಿಯ ನೀರು ಇಳಿಯಿತು. ಜನಸಂಚಾರ ಸುಗಮವಾಯಿತು. ಆದರೆ ಧನಿಕನ ಪ್ರಶ್ನೆ ಹಾಗೇ ಉಳಿದಿತ್ತು. ಒಂದು ದಿನ ಬಡವ ಎದುರಾದಾಗ ಧನಿಕ ಕೇಳಿದ-‘ಆ ಭಯಂಕರ ಮಳೆಯಲ್ಲಿ ನೀನು ಊಟಕ್ಕೇನು ಮಾಡಿದೆ?’ ಬಡವ, ‘ಸ್ವಾಮಿ ದಿನವೂ ಮುಷ್ಟಿ ಅಕ್ಕಿ ತೆಗೆದಿಡುತ್ತಿದ್ದೆ. ಆ ದಿನಗಳಲ್ಲಿ ಮನೆಯ ಅಕ್ಕಿ ಖಾಲಿಯಾದ ಮೇಲೆ ಮುಷ್ಟಿ ಅಕ್ಕಿ ತೆಗೆದು ಗಂಜಿ ಮಾಡಿದೆವು. ಉಪ್ಪು ಸೇರಿಸಿಕೊಂಡು ಊಟ ಮಾಡಿದೆವು. ಸಾಲ ಮಾಡುವ ಹಂಗಿಲ್ಲದೆ ಹಸಿವಿನಿಂದ ಸಾಯದೆ ಆರಾಮಾಗಿ ಬದುಕಿದೆವು. ಇನ್ನೊಬ್ಬರಿಗೆ ದಾನ ಮಾಡಲು ಇಟ್ಟಿದ್ದು ನನ್ನ ಹೊಟ್ಟೆಗೆ ಪುಣ್ಯವಾಗಿ ಬಂತು ಸ್ವಾಮಿ’ ಎಂದು ಕೈ ಮುಗಿದ.

ದಾನಧರ್ಮಗಳು ಬೇರೆಯವರ ಉಪಕಾರಕ್ಕಲ್ಲ. ನಾವು ಮಾಡಿದ ದಾನ ನಮ್ಮ ಹಿಂದೆಯೇ ಬರುವುದು. ದೊಡ್ಡ ದಾನ ಮಾಡಬೇಕೆಂದೇನೂ ಇಲ್ಲ. ದಾನ ಯಾವುದೇ ರೂಪದಲ್ಲಿ ಕೊಟ್ಟರೂ ಅದು ಪುಣ್ಯದ ಕೆಲಸ. ದಾನ ಪಡೆದವನಿಗೆ ಬದುಕು ಸಿಗುತ್ತದೆ, ಕೊಟ್ಟವನಿಗೆ ಪುಣ್ಯದ ಫಲ ಬೆಳೆಯುತ್ತದೆ. ದಾನದ ಮಹಿಮೆಯನ್ನು, ಮಹತ್ವವನ್ನು ಅರಿತು ನಿತ್ಯ ಜೀವನದಲ್ಲಿ ಅನುಷ್ಠಾನಕ್ಕೆ ತರೋಣ.

(ಲೇಖಕರು ಹವ್ಯಾಸಿ ಬರಹಗಾರರು)