ಲೈಫ್‌ಸ್ಟೈಲ್

30 ದಾಟಿದ ಮೇಲೆ ಈ ಪದಾರ್ಥಗಳಿಂದ ದೂರವಿರಿ! ಹೆಚ್ಚು ಬಳಕೆ ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟಬುತ್ತಿ | Health Tips

Health Tips: ಪ್ರಸ್ತುತ ಕಾಲಘಟ್ಟದಲ್ಲಿ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ವಿಷಯ ಹಾಗೂ ಸವಾಲಾಗಿ ಪರಿಣಮಿಸಿದೆ. ಆಹಾರ ಕ್ರಮ, ವ್ಯಾಯಾಮ ಮತ್ತು ರೂಢಿಸಿಕೊಂಡಿರುವ ಜೀವನಶೈಲಿ ನಮ್ಮ ಆರೋಗ್ಯ ಉತ್ತಮವಾಗಿದೆಯೇ? ಅಥವಾ ಹದಗೆಟ್ಟಿದೆಯೇ? ಎಂಬುದನ್ನು ಕನ್ನಡಿಯಂತೆ ನಮಗೆ ತೋರಿಸುತ್ತದೆ. ಆದರೆ, ಈ ಬಗ್ಗೆ ಮೊದಲ ಹಂತದಲ್ಲಿ ತಲೆಕಡಿಸಿಕೊಳ್ಳದೆ ಸಾಗುವ ನಾವು, ಆಸ್ಪತ್ರೆ ಅಲೆಯುವ ಪರಿಸ್ಥಿತಿ ಎದುರಾದಾಗ ಅಯ್ಯೋ ಹೀಗಾಯ್ತಲ್ಲ ಎಂದು ಚಿಂತಿಸುತ್ತೇವೆ.

ಮಾನವನ ಜೀವಿತಾವಧಿ ಬಹಳಷ್ಟು ಕುಸಿದಿದೆ. ಹೀಗಾಗಿ, ಆಹಾರದ ವಿಷಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕ. ಈಗ, ಮೂವತ್ತು ವರ್ಷ ವಯಸ್ಸಿನಲ್ಲಿ ಅನೇಕ ರೀತಿಯ ರೋಗಗಳು ಆವರಿಸಿಕೊಳ್ಳುತ್ತಿವೆ. ಕಿರಿಯ ವಯಸ್ಸಿಗೆ ಕಾಣಿಸಿಕೊಳ್ಳುತ್ತಿವೆ. ಆದರೆ, ಪ್ರತ್ಯೇಕವಾಗಿ 30 ವರ್ಷ ದಾಟಿದವರಲ್ಲಿ ಕೆಲವು ಸಮಸ್ಯೆಗಳು ಗೋಚರಿಸುತ್ತ ಹೋಗುತ್ತದೆ. ಅದಕ್ಕೆ ಕಾರಣ, ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳು, ಚಯಾಪಚಯ ಕ್ರಿಯೆ ನಿಧಾನವಾಗುವುದು ಸೇರಿವೆ. ಆದ್ದರಿಂದ, ಕೆಲವು ರೀತಿಯ ಆಹಾರವನ್ನು ಮಿತವಾಗಿ ಸೇವಿಸುವುದು ಅಥವಾ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳಿತು. ಹಾಗಿದ್ದರೆ, ಯಾವುದು ಆ ಆಹಾರ ಪದಾರ್ಥಗಳು? ಎಂಬುದರ ವಿವರ ಹೀಗಿದೆ ನೋಡಿ.

1. ಅತಿಯಾದ ಸಕ್ಕರೆ ಸೇವನೆ

ನಾಲಿಗೆಗೆ ಸಿಹಿ ಕೊಡುವೆ ಸಕ್ಕರೆ ದೇಹಕ್ಕೆ ಕಹಿ ಎಂಬುದು ನೆನಪಿರಲಿ. ಇದರ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗುವುದಲ್ಲದೇ, ನಾನಾ ರೀತಿಯ ಸಮಸ್ಯೆಗೂ ದಾರಿಯಾಗುತ್ತದೆ. ಟೈಪ್-2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಚರ್ಮವು ವೇಗವಾಗಿ ಸುಕ್ಕುಗಟ್ಟುತ್ತದೆ. ಹೃದಯಕ್ಕೆ ಹಾನಿ ಮಾಡುತ್ತದೆ. ಹೀಗಾಗಿ, ಸಕ್ಕರೆಯಿಂದ ಕೂಡಿರುವ ತಿನಿಸುಗಳನ್ನು ಆದಷ್ಟು ದೂರವಿಡಿ.

2. ಸಂಸ್ಕರಿಸಿದ ಆಹಾರ

ಚಿಪ್ಸ್, ಬಿಸ್ಕತ್ತು, ಫ್ರೀಜರ್​ನಲ್ಲಿಟ್ಟ ಆಹಾರ ಮತ್ತು ಜಂಕ್ ಫುಡ್‌ನಂತಹ ಆಹಾರಗಳಲ್ಲಿ ಟ್ರಾನ್ಸ್ ಕೊಬ್ಬು ಮತ್ತು ಸೋಡಿಯಂ ಅಧಿಕವಾಗಿರುತ್ತದೆ. ಇವುಗಳಲ್ಲಿ ಕೃತಕ ಬಣ್ಣಗಳು ಮತ್ತು ರಾಸಾಯನಿಕಗಳು ಕೂಡ ಅಧಿಕವಾಗಿರುತ್ತವೆ. ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಹೃದಯ, ಯಕೃತ್ತು ಮತ್ತು ಕರುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.

3. ಬಿಳಿ ಬ್ರೆಡ್, ಮೈದಾ

ಬಿಳಿ ಬ್ರೆಡ್, ಮ್ಯಾಗಿ, ಪಾಸ್ತಾ, ಸಮೋಸಾ ಮುಂತಾದ ಪದಾರ್ಥಗಳನ್ನು ಮೈದಾದಿಂದಲೇ ತಯಾರಿಸಲಾಗುತ್ತದೆ. ಇವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಮೈದಾ ಬದಲಿಗೆ, ಗೋಧಿ ಬ್ರೆಡ್, ರಾಗಿ ಹಿಟ್ಟು, ಬೇಳೆ ಅಥವಾ ಸಿರಿಧ್ಯಾನಗಳಿಂದ ಮಾಡಿದ ಆಹಾರವನ್ನು ಸೇವಿಸುವುದು ಒಳಿತು.

4. ಅಧಿಕ ಉಪ್ಪು

30 ವರ್ಷಗಳ ನಂತರ, ಅತಿಯಾದ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಹೃದಯ ಕಾಯಿಲೆ, ಮೂತ್ರಪಿಂಡದ ಸಮಸ್ಯೆಗಳು ಮತ್ತು ಕೀಲು ನೋವಿಗೆ ಕಾರಣವಾಗುತ್ತದೆ. ಹೀಗಾಗಿ, ಉಪ್ಪಿನ ಬದಲಿಗೆ ಗುಲಾಬಿ ಉಪ್ಪು ಮತ್ತು ಕಲ್ಲು ಉಪ್ಪನ್ನು ಸೀಮಿತ ಪ್ರಮಾಣದಲ್ಲಿ ಬಳಸುವುದು ಒಳಿತು.

5. ಮಸಾಲೆಯುಕ್ತ, ಕೆಂಪು ಆಹಾರ

ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸಿ. ಅಲ್ಲದೆ, ಹುರಿದ ಆಹಾರವನ್ನು ಆದಷ್ಟು ತಪ್ಪಿಸಿ. ಈ ಆಹಾರಗಳನ್ನು ಸೇವಿಸುವುದರಿಂದ ಆಮ್ಲೀಯತೆ ಮತ್ತು ಗ್ಯಾಸ್​ ಸಮಸ್ಯೆಗಳು ಉಂಟಾಗಬಹುದು. ಈ ಆಹಾರಗಳು ಯಕೃತ್ತಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಕಡಿಮೆ ಮಸಾಲೆಯುಕ್ತ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಿತ,(ಏಜೆನ್ಸೀಸ್).ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.