ತರಕಾರಿ ಇಲ್ಲದಾಗ ಮಾಡಿ ತಿನ್ನಿ ಟೊಮ್ಯಾಟೋ ಕರಿ.
20 ನಿಮಿಷದಲ್ಲಿ ಮಾಡಬಹುದಾದ ಟೊಮ್ಯಾಟೋ ಕರಿಗೆ ಏನೇನು ಬೇಕು?.
ಬ್ಯಾಚುಲರ್ಸ್ಗಾಗಿ ತಕ್ಷಣ ಮಾಡಬಹುದಾದ ಅಡುಗೆ ಈ ಟೊಮ್ಯಾಟೋ ಕರಿ.
ಅನ್ನ, ಮುದ್ದೆ, ಚಪಾತಿ ದೋಸೆ ಜೊತೆಗೆ ತಿನ್ನಬಹುದಾದ ಒಂದು ಖಾದ್ಯ.
ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಸಿಕ್ಕರೂ ಸಹ ಹಣಕ್ಕೆ ತಕ್ಕಂತೆ ರುಚಿಯಾದದ್ದು, ಹೊಟ್ಟೆ ತುಂಬುವಷ್ಟು ತಿನ್ನಲು ಸಾಧ್ಯವಾಗೋದೆ ಇಲ್ಲ. ಹೀಗಾಗಿ ಮನೆಯಲ್ಲಿಯೇ ಕಡಿಮೆ ಖರ್ಚಿನಲ್ಲಿ ನಾಲಿಗೆಗೆ ರುಚಿ ಹಿಡಿಸುವಂತಹ ಆಹಾರ ತಯಾರಿ ಮಾಡಿಕೊಂಡು ಸೇವಿಸುವ ಸಿಂಪಲ್ ರೆಸಿಪಿ ಇಲ್ಲಿದೆ. ನಿಮ್ಮ ರೂಂನಲ್ಲಿ ತರಕಾರಿ ಅಷ್ಟಾಗಿ ತಂದಿಡೋದಿಲ್ಲ ಎಂದರೆ, ಇರುವ ಟೊಮ್ಯಾಟೋ, ಈರುಳ್ಳಿ ಬೆಳ್ಳುಳ್ಳಿಯಿಂದ ಬಾಯಲ್ಲಿ ನೀರೂರುವಂತಹ ಟೊಮ್ಯಾಟೋ ಕರಿ ಮಾಡಿ ತಿನ್ನಿ.
ಸಣ್ಣಗೆ ಕತ್ತರಿಸಿದ ಟೊಮ್ಯಾಟೋ-3
ಸ್ಲೈಸ್ ಮಾಡಿದ ಈರುಳ್ಳಿ-1 ದೊಡ್ಡ ಗಾತ್ರದ್ದು
ಬೆಳ್ಳುಳ್ಳಿ-5-6 ಎಸಳು
ಕೊತ್ತಂಬರಿ-ನಿಂಬೆ ಗಾತ್ರದ್ದು
ಉಪ್ಪು-ರುಚಿಕೆ ತಕ್ಕಷ್ಟು
ಸಾಸಿವೆ - ಚಿಟಿಕೆ
ಎಣ್ಣೆ- 5 ಟೀ ಸ್ಪೂನ್
ಅರಿಶಿನ- ಚಿಟಿಕೆಯಷ್ಟು
ಶುಂಠಿ ಪೇಸ್ಟ್- 1 ಚಮಚ
2 ಸ್ಪೂನ್ ಖಾರದ ಪುಡಿ
1 ಸ್ಪೂನ್ ಸಾಂಬಾರ್ ಪುಡಿ
ಮೊದಲಿಗೆ ಪಾತ್ರೆಗೆಎಣ್ಣೆ ಸಾಸಿವೆ ಹಾಕಿ, ಬೆಳ್ಳುಳ್ಳಿ ಹಾಕಿ ಉರಿದುಕೊಳ್ಳುತ್ತಲೇ ಈರುಳ್ಳಿ ಸೇರಿಸಿ. ಈರುಳ್ಳಿ ಕೆಂಪು ಬಣ್ಣಕ್ಕೆ ತಿರುಗುವವೆಗೂ ಚೆನ್ನಾಗಿ ಹುರಿದುಕೊಳ್ಳಿ. ಈಗ ಈರುಳ್ಳಿ ಮೆತ್ತಗಾದ ಅಥವಾ ಕ್ರಿಸ್ಪಿಯಾದ ಬಳಿಕ ಶುಂಠಿ ಪೇಸ್ಟ್, ಅರಿಶಿನ, 2 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಸಾಂಬಾರ್ ಪುಡಿ ಹಾಕಿ ಹುರಿದುಕೊಳ್ಳಿ. ಹಸಿ ವಾಸನೆ ಹೋದ ನಂತರ ಅದಕ್ಕೆ ಟೊಮ್ಯಾಟೋ ಹಾಕಿ ಎಣ್ಣೆ ಮೇಲಕ್ಕೆ ತೇಲುವವರೆಗೂ ಚೆನ್ನಾಗಿ ಹುರಿದುಕೊಳ್ಳಲು ಬಿಡಿ. ಈಗ ಕೊತ್ತಂಬರಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ ಒಂದೈದು ನಿಮಿಷವಾದ ಬಳಿಕ ನಿಮ್ಮ ಟೊಮ್ಯಾಟೋ ಕರಿ ರೆಡಿ. ನೀವು ಇದಕ್ಕೆ ಬೇರೇನೋ ಬೇಕು ಎಂದು ಬಯಸಿದರೆ ಮನೆಯಲ್ಲಿರುವ ಮೊಟ್ಟೆಯನ್ನು ಕೂಡ ಹೊಡೆದು ಒಂದಷ್ಟು ಹೊತ್ತು ರೋಸ್ಟ್ ಮಾಡಬಹುದಾಗಿದೆ.
ಟೊಮ್ಯಾಟೋ ಕರಿಯನ್ನು ನೀವು ಬಿಸಿ ಅನ್ನ, ಚಪಾತಿ ಹಾಗೂ ರೊಟ್ಟಿ, ದೋಸೆ, ಮುದ್ದೆ ಜೊತೆ ತಿನ್ನಬಹುದು. ಮನೆಯಲ್ಲಿ ಯಾವುದೇ ತರಕಾರಿ ಇಲ್ಲದಿರುವಾಗ ಸುಲಭವಾಗಿ ಈ ಟೊಮ್ಯಾಟೋ ಕರಿಯನ್ನು ಮಾಡಿಕೊಂಡು ತಿನ್ನಬಹುದಾಗಿದೆ.
ಟೊಮ್ಯಾಟೋದಲ್ಲಿರುವ ಸಿಟ್ರಿಕ್ ಆಮ್ಲವು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಇಷ್ಟೇ ಅಲ್ಲದೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ತೂಕ ಇಳಿಕೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಟೊಮ್ಯಾಟೋ ನಿಮ್ಮ ಚರ್ಮವನ್ನು ಸೂರ್ಯನ ಶಾಖದಿಂದ ಕಾಪಾಡುತ್ತದೆ. ಇದರಲ್ಲಿರುವ ವಿಟಮಿನ್ ಎ, ಲುಟಿನ್ ಕಣ್ಣಿನ ದೃಷ್ಟಿಯನ್ನು ಸುಧಾರಿಸುವಂತೆ ಮಾಡುತ್ತದೆ.
ಬೆಳ್ಳುಳ್ಳಿಯಲ್ಲಿ ಆರೋಗ್ಯದ ಗುಣವಿದೆ. ಇದನ್ನು ಆಯುರ್ವೇದದಲ್ಲಿಯೂ ಬಳಕೆ ಮಾಡಲಾಗುತ್ತಿತ್ತು. ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ, ಜೀರ್ಣಕ್ರಿಯೆ ಸೇರಿದಂತೆ ಹಲವಾರು ವಿಚಾರಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ, (ಏಜೆನ್ಸೀಸ್).