ಸಾಂದರ್ಭಿಕ ಚಿತ್ರ, ವಿಶೇಷ ಅಂಕಣ  
ಲೈಫ್‌ಸ್ಟೈಲ್

ಸುಖನಿದ್ರೆ ಅರ್ಧ ಔಷಧ ಸರಿಯಾದ ದಿಕ್ಕು ಸಂಪೂರ್ಣ ಆರೋಗ್ಯ

ಬೆಂಗಳೂರು: ಯೋಗಶಾಸ್ತ್ರದ ಪ್ರಕಾರ ನಿದ್ರೆ (ನಿದ್ರಾ) ಎನ್ನುವುದು ಕೇವಲ ದೈಹಿಕ ವಿಶ್ರಾಂತಿಯಲ್ಲ. ಇದು ಪ್ರಾಣಶಕ್ತಿಯ ಪುನರ್ಸಂಯೋಜನೆ, ಮನೋಮಲದ ಶುದ್ಧೀಕರಣ ಮತ್ತು ಚಿತ್ತದ ಮೌನ ವಿಶ್ರಾಂತಿ. ಪತಂಜಲಿ ಮಹರ್ಷಿಗಳು ಯೋಗಸೂತ್ರದಲ್ಲಿ ನಿದ್ರೆಯನ್ನು ಹೀಗೆ ವಿವರಿಸುತ್ತಾರೆ.

ಅಭಾವಪ್ರತ್ಯಯಾಲಂಬನಾ ವೃತ್ತಿರ್ನಿದ್ರಾ (1.10)- ಅಂದರೆ, ಜಾಗೃತ ಮತ್ತು ಸ್ವಪ್ನಾವಸ್ಥೆಗಳ ಅನುಪಸ್ಥಿತಿಯಲ್ಲಿ ಮನಸ್ಸು ಲೀನವಾಗುವ ಸ್ಥಿತಿಯೇ ನಿದ್ರೆ. ಆಧುನಿಕ ಜಗತ್ತು ಎಷ್ಟು ಗಂಟೆ ನಿದ್ರಿಸುತ್ತೇವೆ? ಎಂಬ ಅಂಕಿ-ಅಂಶಕ್ಕೆ ಮಾರುಹೋಗಿದೆ. ಆದರೆ ಯೋಗವು ಕೇಳುವುದು ಹೇಗೆ ನಿದ್ರಿಸುತ್ತೀರಿ? ಯಾವ ಭಾವದಿಂದ ಮತ್ತು ಯಾವ ದಿಕ್ಕಿನಲ್ಲಿ? ಎಂಬ ಪ್ರಶ್ನೆಯನ್ನು. ನಮ್ಮ ಪೂರ್ವಜರು ಉತ್ತರಕ್ಕೆ ತಲೆ ಹಾಕಿ ಮಲಗಬೇಡ ಎಂದು ಹೇಳಿದ್ದು ಕೇವಲ ಸಂಪ್ರದಾಯವಲ್ಲ; ಅದು ಭೂಮಿಯ ಕಾಂತೀಯ ಕ್ಷೇತ್ರ ಮತ್ತು ಮಾನವ ದೇಹದ ಪ್ರಾಣಚಲನೆಯ ನಡುವಿನ ಅದ್ಭುತ ವಿಜ್ಞಾನ.

ನಿದ್ರೆಯ ಮಹತ್ವ: ದೇಹದ ಆಂತರಿಕ ಸರ್ವೀಸ್ ಸೆಂಟರ್ ಎಂದು ಕರೆಯಬಹುದಾದ ನಿದ್ರೆಯು ಒಂದು ನೈಸರ್ಗಿಕ ಯೋಗ ಪ್ರಕ್ರಿಯೆ. ಈ ಸಮಯದಲ್ಲಿ ನಮ್ಮ ದೇಹವು ಅದ್ಭುತವಾದ ಕೆಲಸಗಳನ್ನು ಮಾಡುತ್ತದೆ, ಅವುಗಳೆಂದರೆ...

ಮಿದುಳಿನ ಶುದ್ಧೀಕರಣ: ನಿದ್ರೆಯ ಸಮಯದಲ್ಲಿ ಮಿದುಳಿನಲ್ಲಿ ರುವ ವಿಷಪದಾರ್ಥಗಳು ಹೊರಹಾಕಲ್ಪಡುತ್ತವೆ. ಇದು ಆಲ್ಝೈಮರ್ಸ್​ನಂತಹ ದೀರ್ಘಕಾಲಿಕ ಮರೆವು ಸಮಸ್ಯೆಗಳನ್ನು ತಡೆಯಲು ಸಹಾಯಕ.

ಹೃದಯದ ಲಯ: ಆಳವಾದ ನಿದ್ರೆಯು ರಕ್ತದೊತ್ತಡವನ್ನು ಸಮತೋಲನಗೊಳಿಸಿ, ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿ: ದೇಹವು ಸೋಂಕಿನ ವಿರುದ್ಧ ಹೋರಾಡುವ ‘ಸೈಟೊಕಿನ್’ ಪೊ›ಟೀನ್ ಬೆಳೆಸುವುದೇ ನಿದ್ರೆಯ ಅವಧಿಯಲ್ಲಿ.

ಭಾವನಾತ್ಮಕ ಸಮತೋಲನ: ಯೋಗದೃಷ್ಟಿಯಲ್ಲಿ ನಿದ್ರೆ ‘ಚಿತ್ತವೃತ್ತಿಗಳ ವಿರಾಮ’. ಸರಿಯಾದ ನಿದ್ರೆ ಮುಂದಿನ ದಿನದ ಧನಾತ್ಮಕ ಚಿಂತನೆಗೆ ಮತ್ತು ಧ್ಯಾನಕ್ಕೆ ಅಡಿಪಾಯ.

ದಿಕ್ಕುಗಳ ಯೋಗಶಾಸ್ತ್ರ: ಇದು ಪ್ರಾಣಶಕ್ತಿಯ ಪಯಣ. ನಮ್ಮ ದೇಹವು ಒಂದು ಸೂಕ್ಷ್ಮ ವಿದ್ಯುತ್-ಕಾಂತೀಯ ಕ್ಷೇತ್ರವನ್ನು ಹೊಂದಿದೆ. ಭೂಮಿಯ ಕಾಂತೀಯ ರೇಖೆಗಳೊಂದಿಗೆ ನಮ್ಮ ದೇಹವು ಹೇಗೆ ಸ್ಪಂದಿಸುತ್ತದೆ ಎಂಬುದು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ದಿಕ್ಕು, ವೈಜ್ಞಾನಿಕ ಮತ್ತು ಯೋಗಿಕ ಹಿನ್ನೆಲೆ ಹಾಗೂ ಲಭಿಸುವ ಫಲಗಳ ಕುರಿತು ತಿಳಿಯೋಣ.

ದಕ್ಷಿಣ: ಶ್ರೇಷ್ಠ ದಿಕ್ಕು: ಭೂಮಿಯ ಕಾಂತೀಯ ರೇಖೆಗಳು ಮತ್ತು ದೇಹದ ಧ್ರುವೀಯತೆ ಸಮತೋಲನಗೊಳ್ಳುತ್ತದೆ. ಗಾಢ ನಿದ್ರೆ, ಕಡಿಮೆ ರಕ್ತದೊತ್ತಡ, ದೀರ್ಘಾಯುಷ್ಯ.

ಪೂರ್ವ: ಇದು ಜ್ಞಾನದ ದಿಕ್ಕು: ಸೂರ್ಯನ ಸಕಾರಾತ್ಮಕ ಶಕ್ತಿಯ ಹರಿವು ಆಗುವುದರಿಂದ ಏಕಾಗ್ರತೆ, ಸೃಜನಶೀಲತೆ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ,

ಪಶ್ಚಿಮ: ರಾಜಸಿಕ ದಿಕ್ಕು ಎಂದು ಇದನ್ನು ಕರೆಯಲಾಗುತ್ತದೆ. ಶಕ್ತಿಯ ಚಲನೆಯು ಚುರುಕಾಗಿರುತ್ತದೆ. ಯಶಸ್ಸಿನ ಹಂಬಲ ಹೆಚ್ಚುತ್ತದೆ, ಆದರೆ ಕೆಲವೊಮ್ಮೆ ಅಶಾಂತ ಕನಸುಗಳು ಬೀಳುತ್ತವೆ.

ಉತ್ತರ: ಇದು ಅಪಾಯದ ವಲಯ. ಕಾಂತೀಯ ಸೆಳೆತವು ರಕ್ತವನ್ನು ಮಿದುಳಿನತ್ತ ಅತಿಯಾಗಿ ಎಳೆಯುತ್ತದೆ. ತಲೆನೋವು, ಆತಂಕ, ಪಾರ್ಶ್ವವಾಯುವಿನ ಅಪಾಯ (ದೀರ್ಘಕಾಲಿಕ) ಉಂಟಾದೀತು.

ಯೋಗಿಕ ನಿದ್ರೆಗೆ ಪೂರಕವಾದ ಟಿಪ್ಸ್: ಎಡಮಗ್ಗುಲಲ್ಲಿ ಮಲಗಿ, ಯೋಗದ ಪ್ರಕಾರ ಎಡಭಾಗದಲ್ಲಿ ಮಲಗುವುದು ‘ಸೂರ್ಯನಾಡಿ’ಯನ್ನು ಸಕ್ರಿಯಗೊಳಿಸುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೃದಯಕ್ಕೆ ಆರಾಮ ನೀಡುತ್ತದೆ. ್ಝಜಿಟಲ್ ಉಪವಾಸ: ಮಲಗುವ 1 ಗಂಟೆ ಮುನ್ನ ಮೊಬೈಲ್, ಟಿವಿ ಬಿಡಿ. ನೀಲಿ ಬೆಳಕು ’ಮೆಲಟೋನಿನ್’ (ನಿದ್ರೆಯ ಹಾರ್ವೇನ್) ಉತ್ಪತ್ತಿಯನ್ನು ತಡೆಯುತ್ತದೆ.

ಪ್ರಾಣಾಯಾಮ: ಮಲಗುವ ಮುನ್ನ 5 ನಿಮಿಷ ಮಾಡುವ ‘ಭ್ರಮರಿ’ ಅಥವಾ ದೀರ್ಘ ಉಸಿರಾಟವು ನಿದ್ರೆಯನ್ನು ಧ್ಯಾನದ ಸ್ಥಿತಿಗೆ ಕೊಂಡೊಯ್ಯುತ್ತದೆ.

ನಿದ್ರೆ ಎಂಬುದು ಸಣ್ಣ ಸಮಾಧಿ: ನಮ್ಮ ಪೂರ್ವಜರ ಸೂಚನೆಗಳು ಕೇವಲ ನಂಬಿಕೆಗಳಲ್ಲ; ಅವು ಪ್ರಕೃತಿ, ವಿಜ್ಞಾನ ಮತ್ತು ಪ್ರಾಣಶಕ್ತಿಯ ಸುಂದರ ಸಮನ್ವಯ. ಸರಿಯಾದ ದಿಕ್ಕಿನಲ್ಲಿ ತಲೆ ಇಡುವುದು ಎಂದರೆ ಪ್ರಕೃತಿಯ ಲಯಕ್ಕೆ ನಮ್ಮನ್ನು ನಾವು ಒಪ್ಪಿಸಿಕೊಡುವುದು ಎಂದರ್ಥ.