ಬೆಂಗಳೂರು: ಅತಿ ಹೆಚ್ಚು ಜನರನ್ನು ಬಾಧಿಸುವ ಚರ್ಮ ಕ್ಯಾನ್ಸರ್ ಅನ್ನು ಬ್ಯಾಂಡೇಜ್ ರೀತಿಯ ಸರಳ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯ ಎಂಬುದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದ(ಐಐಎಸ್ಸಿ) ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.
ಸಂಕೀರ್ಣ, ವೆಚ್ಚಭರಿತ ಚಿಕಿತ್ಸೆಗಳಿಗೆ ಪರ್ಯಾಯ ಐಐಎಸ್ಸಿ ವಿಜ್ಞಾನಿಗಳ ಸಂಶೋಧನೆ
ಸಾಮಾನ್ಯವಾಗಿ, ಸೂರ್ಯನ ನೇರಳಾತೀತ (ಅಲ್ಟ್ರಾವೈಲೆಟ್) ಕಿರಣಗಳಿಗೆ ಹೆಚ್ಚೆಚ್ಚು ತೆರೆದುಕೊಂಡಿದ್ದರ ಪರಿಣಾಮವಾಗಿ ಚರ್ಮದ ಕ್ಯಾನ್ಸರ್ ಉಂಟಾಗುತ್ತದೆ. ಇದನ್ನು ಗುಣಪಡಿಸಲು ಶಸ್ತ್ರಚಿಕಿತ್ಸೆ, ರೇಡಿಯೇಷನ್ ಹಾಗೂ ಕಿಮೋಥೆರಪಿಯಂತಹ ವಿಧಾನಗಳನ್ನು ಬಳಸಲಾಗುತ್ತದೆ. ಆದರೆ ಈ ಚಿಕಿತ್ಸೆಗಳು ಸಂಕೀರ್ಣ ಹಾಗೂ ವೆಚ್ಚದಾಯಕವಾಗಿವೆ. ಇದಕ್ಕೆ ಪರ್ಯಾಯ ಚಿಕಿತ್ಸಾ ವಿಧಾನಗಳ ಸಂಶೋಧನೆಯಲ್ಲಿ ವಿಜ್ಞಾನಿಗಳು ನಿರತವಾಗಿದ್ದು, ಕ್ಯಾನ್ಸರ್ ಕೋಶಗಳಿಗೆ ಶಾಖವನ್ನು ಅನ್ವಯಿಸಿ ಗುಣಪಡಿಸುವ ಹೈಪರ್ಥರ್ವಿುಯಾ ವಿಧಾನ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ಅಯಸ್ಕಾಂತೀಯ ನ್ಯಾನೊಕಣಗಳನ್ನು ಬಳಸಿಕೊಂಡು ಕೋಶಗಳ ಮೇಲೆ ಶಾಖ ಹೆಚ್ಚಿಸುವ ವಿಧಾನವನ್ನು ಐಐಎಸ್ಸಿಯಲ್ಲಿರುವ ಬಯೋಸಿಸ್ಟಮ್್ಸ ಸೈನ್ಸ್ ಆಂಡ್ ಇಂಜಿನಿಯರಿಂಗ್(ಬಿಎಸ್ಎಸ್ಇ) ಹಾಗೂ ಮಾಲಿಕ್ಯುಲಾರ್ ಉತ್ಪಾದನೆ, ಅಭಿವೃದ್ಧಿ ಹಾಗೂ ಜೆನೆಟಿಕ್ಸ್ ವಿಭಾಗದ(ಎಂಆರ್ಡಿಜಿ) ವಿಜ್ಞಾನಿಗಳು ಬಳಸಿದ್ದಾರೆ. ಎಲೆಕೊ್ಟ್ರೕಸ್ಪಿನ್ನಿಂಗ್ ಎಂಬ ವಿಧಾನವನ್ನು ಬಳಸಿ ಅಯಾಸ್ಕಾಂತೀಯ ನ್ಯಾನೊ ಕಣಗಳನ್ನು ವಿಜ್ಞಾನಿಗಳು ತಯಾರಿಸಿದ್ದಾರೆ. ಇದನ್ನು ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಬ್ಯಾಂಡೇಜ್ ಮೇಲೆ ಅಂಟಿಸಿದ್ದು, ಅದರಿಂದ ಶಾಖ ಉತ್ಪಾದನೆಯಾಗಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ.
ಪ್ರಯೋಗದಲ್ಲಿ ಯಶಸ್ವಿ
ಈ ವಿಧಾನವನ್ನು ಮಾನವನ ಕೋಶಗಳ ಮೇಲೆ ಹಾಗೂ ಇಲಿಗಳಲ್ಲಿ ಕೃತಕವಾಗಿ ರೂಪಿಸಿದ ಚರ್ಮ ಕ್ಯಾನ್ಸರ್ ಮೇಲೆ ಪ್ರಯೋಗ ಮಾಡಲಾಗಿದೆ ಎಂದು ಸಂಶೋಧನೆಯ ಮೊದಲ ಲೇಖಕ ಕೌಶಿಕ್ ಸುನೀತ್ ಹೇಳಿದ್ದಾರೆ. ಎರಡೂ ವಿಧಾನಗಳಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದರಲ್ಲಿ ಯಶಸ್ವಿಯಾಗಿದ್ದೇವೆ. ಇಲಿಗಳ ಮೇಲಿನ ಪ್ರಯೋಗದಲ್ಲಿ, ಕೇವಲ ಕ್ಯಾನ್ಸರ್ ಕೋಶಗಳಷ್ಟೆ ಕೊಲ್ಲಲ್ಪಟ್ಟಿವೆ. ಇತರೆ ಆರೋಗ್ಯಕರ ಅಂಗಾಂಶಗಳು ಯಾವುದೇ ಹಾನಿಯಿಲ್ಲದೆ ಉಳಿದುಕೊಂಡಿರುವುದು ಸಂಶೋಧನೆಯ ಯಶಸ್ಸನ್ನು ತೋರಿಸಿದೆ. ಮುಂದಿನ ಹಂತದಲ್ಲಿ ಹೆಚ್ಚಿನ ಸಂಖ್ಯೆಯ ಮೊಲಗಳು, ನಾಯಿಗಳು, ಕೋತಿಗಳ ಮೇಲೆ ಪ್ರಯೋಗ ನಡೆಸಿ ನಂತರದಲ್ಲಿ ಪ್ರಿ-ಕ್ಲಿನಿಕಲ್ ಹಾಗೂ ಕ್ಲಿನಿಕಲ್ ಸಂಶೋಧನೆಗೆ ಕೊಂಡೊಯ್ಯಬಹುದು ಎಂದು ಹಿರಿಯ ಸಂಶೋಧಕಿ ಶಿಲ್ಪಿ ಜೈನ್ ಹೇಳಿದ್ದಾರೆ.