| ರೇಖಾ ಬೆಳವಾಡಿ
ಜ್ಯೋತಿ ಒಂದು ವಾರದ ರಜೆಗಾಗಿ ಆಫೀಸಿನಲ್ಲಿ ಅರ್ಜಿ ಸಲ್ಲಿಸುತ್ತಾಳೆ. ಕಾರಣ ತನ್ನ ಮಕ್ಕಳ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಅವರನ್ನು ಓದಿಸಬೇಕು ಎಂದು. ಮಕ್ಕಳ ಪುನರಾವರ್ತನೆ ಅಭ್ಯಾಸ ಮಾಡಿಸಬೇಕು ಎಂದು ಆಫೀಸಿನ ಬಿಡುವಿನ ಸಮಯದಲ್ಲಿ ಪರೀಕ್ಷೆಗೆ ಬರಬಹುದಾದ ಸಂಭವನೀಯ ಪ್ರಶ್ನೆಗಳನ್ನು ತಾನೇ ತಯಾರು ಮಾಡುತ್ತಿರುತ್ತಾಳೆ. ತಾನೇ ಪರೀಕ್ಷೆ ಬರೆಯಬೇಕೇನೋ ಎಂಬಂತೆ ತಯಾರಿ ನಡೆಸಿದ್ದಾಳೆ.
ಬೆಳಗಿನಿಂದ ಮೌನವಾಗಿದ್ದ ಕುಲಕರ್ಣಿ ಅವರನ್ನು ಅವರ ಸ್ನೇಹಿತರು ಗಮನಿಸುತ್ತಲೇ ಇದ್ದರು. ಕಾರಣ ಕೇಳಿದಾಗ, ಇಂದು ಮಗನ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ, ಪ್ರಶ್ನೆಪತ್ರಿಕೆ ಹೇಗಿರುತ್ತದೋ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಮೊಮ್ಮಗಳ ಪರೀಕ್ಷೆಗಳು ಹತ್ತಿರ ಬರುತ್ತಿದೆ ಎಂದು ಅಜ್ಜಿ-ತಾತ ನಮ್ಮ ದೈನಿಕ ಧಾರಾವಾಹಿ ನೋಡುವುದನ್ನೇ ನಿಲ್ಲಿಸಿದ್ದಾರೆ. ಮನೆಯ ಇತರ ಮಕ್ಕಳು ಹೆಚ್ಚಾಗಿ ಮಾತನಾಡದೆ, ಬಹಳ ಮೆದು ದನಿಯಲ್ಲಿ ಮಾತನಾಡುವಂತೆ ಸೂಚನೆ ಇದೆ. ಮನೆಯ ಕಾಲಿಂಗ್ ಬೆಲ್ ಕೂಡ ಆಫ್ ಮಾಡಲಾಗಿದೆ.
ಅಮರ್ ಪರೀಕ್ಷೆಯ ಒತ್ತಡ ಹಾಗೂ ಆತಂಕಕ್ಕೆ ದೇಹದ ಆರೋಗ್ಯದಲ್ಲಿ ಏರುಪೇರಾಗಿದೆ. ಉಸಿರಾಟದ ತೊಂದರೆ ಹಾಗೂ ಜ್ವರದಲ್ಲೇ ಪರೀಕ್ಷೆ ಬರೆಯುತ್ತಾನೆ. ಬಹಳ ಚೆನ್ನಾಗಿ ಓದಿಕೊಂಡಿದ್ದ, ಈಗ ಹೀಗಾಯಿತಲ್ಲಾ ಎಂಬ ದುಃಖ ತಂದೆ-ತಾಯಿಗೆ.
ಬಿಸಿಲಿನ ಕಾವು ಒಂದು ಕಡೆಯಾದರೆ ಪರೀಕ್ಷೆ ಕಾವು ಸಹ ಹೆಚ್ಚಾಗುತ್ತಿದೆ. ಪರೀಕ್ಷೆ ಎಂದರೆ ಮಕ್ಕಳ ಜೊತೆ ತಂದೆ-ತಾಯಿಗೂ, ಮನೆಯವರಲ್ಲೂ ಒಂದು ರೀತಿಯ ಭಯ-ಆತಂಕ ಆವರಿಸುತ್ತದೆ. ಮನೆಗಳಲ್ಲಿ ಒಂದು ರೀತಿಯ ವಿಭಿನ್ನ ಬಿಗಿ ವಾತಾವರಣ ಸೃಷ್ಟಿಯಾಗುತ್ತದೆ. ಅದು ಕಿರಿಯ ತರಗತಿಗಳೂ ಇರಬಹುದು ಅಥವಾ ಪಬ್ಲಿಕ್ ಪರೀಕ್ಷೆಗಳೂ ಇರಬಹುದು.
ಇಂತಹ ಕಾಲೇಜಿನಲ್ಲೇ ಸೀಟ್ ತೆಗೆದುಕೊಳ್ಳಬೇಕು, ಇದೇ ವಿಷಯ ತೆಗೆದುಕೊಳ್ಳಬೇಕು, ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕು, ಹೆಚ್ಚುತ್ತಿರುವ ಸಹಪಾಠಿಗಳೊಂದಿಗಿನ ಸ್ಫರ್ಧೆ, ಇತರರೊಂದಿಗೆ ಹೋಲಿಕೆ, ಶಾಲೆ ಹಾಗೂ ಕಾಲೇಜು ತಮ್ಮ ಉತ್ತಮ ಸ್ಥಾನ ಕಾಯ್ದಿರಿಸಿಕೊಳ್ಳಲು ಉಂಟಾಗುವ ಸ್ಫರ್ಧೆ, ಪೋಷಕರ ಹೆಚ್ಚಿನ ನಿರೀಕ್ಷೆಗಳ ಕಾರಣ ಮಕ್ಕಳಲ್ಲಿ ಒತ್ತಡ, ಆತಂಕ ಮತ್ತು ಭಯ ಹೆಚ್ಚಾಗುತ್ತದೆ.
ಒತ್ತಡ, ಭಯ ಹಾಗೂ ಆತಂಕವನ್ನು ವಿದ್ಯಾರ್ಥಿಗಳಂತೆ ಅವರ ತಂದೆ ತಾಯಿಯರೂ ಅನುಭವಿಸುತ್ತಿರುತ್ತಾರೆ. ತಂದೆ-ತಾಯಿ ಇಬ್ಬರೂ ದುಡಿಯಲು, ಹೊರಗೆ ಹೋಗುತ್ತಿದ್ದರೆ ಮನಸ್ಸಿನ ಒಂದು ಮೂಲೆಯಲ್ಲಿ ತಾನು ಮಕ್ಕಳಿಗೆ ಸರಿಯಾಗಿ ಸಮಯ ಕೊಡುತ್ತಿದ್ದೇನೋ ಇಲ್ಲವೋ, ಭಾವನಾತ್ಮಕ ಬೆಂಬಲ ನೀಡುತ್ತಿದ್ದೇನೋ ಇಲ್ಲವೋ ಎಂಬ ವಿಷಯವೂ ಕೊರೆಯುತ್ತಿರಬಹುದು. ಮಕ್ಕಳ ಪರೀಕ್ಪಾ ಸಮಯದಲ್ಲಿ , ಅಭ್ಯಾಸ ಮಾಡಲು, ತಯಾರಿ ನಡೆಸಲು, ಜೊತೆಗಿರಲು, ನೈತಿಕ ಬೆಂಬಲಕ್ಕೆ, ಪರೀಕ್ಷಾ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಿಟ್ಟುಬರಲು ಬೇಕಾಗುವ ವ್ಯವಸ್ಥೆಗಳಿಗೆ ತಮ್ಮ ತಮ್ಮ ಕೆಲಸಗಳಿಗೆ ಯಾರು ಎಂದು ರಜೆ ಹಾಕಬೇಕು ಎಂಬ ಹಲವಾರು ಅಂಶಗಳ ಬಗ್ಗೆ ಯೋಚಿಸುತ್ತಾರೆ. ಮನೆ, ಕೆಲಸ, ಮಕ್ಕಳ ಪರೀಕ್ಷೆ ಹಾಗೂ ಕೆಲವು ಅನಿವಾರ್ಯ ವೈಯುಕ್ತಿಕ ಸವಾಲುಗಳು, ಆರೋಗ್ಯ ಹಾಗೂ ಅನೇಕ ಅಂಶಗಳು ತಂದೆ-ತಾಯಿಯರಲ್ಲಿ ಒತ್ತಡ ಆತಂಕ ಹೆಚ್ಚಿಸುತ್ತದೆ.
* ಆಹಾರ ಸರಿಯಾಗಿ ಸೇವಿಸುವುದಿಲ್ಲ
* ನಿದ್ದೆಯ ಕೊರತೆ ಅನುಭವಿಸುತ್ತಾರೆ.
* ಹೆಚ್ಚು ಮೌನವಾಗಿರುತ್ತಾರೆ.
* ಸಣ್ಣ ಸಣ್ಣ ವಿಷಯಗಳಿಗೂ ಇರಿಸು-ಮುರಿಸು ಉಂಟಾಗುತ್ತದೆ
* ಮಾಡುವ ಕೆಲಸದಲ್ಲಿ ಆಸಕ್ತಿ ಇಲ್ಲ
* ಪದೇಪದೆ ಮಕ್ಕಳು ಓದುವ ಕೊಠಡಿಗೆ ಹೋಗಿ ಓದುತ್ತಿದ್ದಾರೋ ಇಲ್ಲವೋ ಎಂದು ನೋಡುವುದು.
* ಮೌಖಿಕವಾಗಿ "ನಿನ್ನ ಪರೀಕ್ಷೆಗಳು ಮುಗಿಯುವ ತನಕ ನನಗೆ ಆತಂಕ" ಎಂದು ತಮ್ಮ ಭಯ ಮಕ್ಕಳ ಮುಂದೆ ವ್ಯಕ್ತಪಡಿಸುವುದು.
* ಮಗ-ಮಗಳು ಪರೀಕ್ಷಾ ಒತ್ತಡದಲ್ಲಿ ಇರುವುದು ತಿಳಿಯುತ್ತಿದೆ, ಆದರೆ ತಂದೆ- ತಾಯಿಯಾಗಿ ನಾವು ಯಾವ ರೀತಿ ಸಹಕರಿಸಬಹುದು ಎಂದು ತಿಳಿಯುತ್ತಿಲ್ಲ ಎಂಬ ಗೊಂದಲ ಇತ್ಯಾದಿ.
ಹೆಚ್ಚಿನ ಒತ್ತಡ ಹಾಗೂ ಆತಂಕದಿಂದ ವಿದ್ಯಾರ್ಥಿಗಳು ಎಷ್ಟೇ ಕಷ್ಟಪಟ್ಟು ಉತ್ತಮವಾಗಿ ತಯಾರಾಗಿದ್ದರೂ ಪರೀಕ್ಷೆಯಲ್ಲಿ ಉತ್ತಮವಾಗಿ ಉತ್ತರಿಸಲು ವಿಫಲರಾಗಬಹುದು. ಒತ್ತಡ ಮತ್ತು ಆತಂಕ ಮಕ್ಕಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸಂಧರ್ಭದಲ್ಲಿ ತಂದೆ-ತಾಯಂದಿರು ಸಹ ಒತ್ತಡ ನಿರ್ವಹಣಾ ಕ್ರಮಗಳ ಬಗ್ಗೆ ಅರಿತಿದ್ದರೆ ಒಳಿತು. ಇದರಿಂದ ತಮ್ಮನ್ನು ಹಾಗೂ ಮಕ್ಕಳನ್ನು ಪರೀಕ್ಷಾ ಒತ್ತಡ ಹಾಗೂ ಆತಂಕದಿಂದ ಮುಕ್ತರನ್ನಾಗಿಸಲು ಸಹಕಾರಿ. ಇದು ಅವಶ್ಯಕ ಕೂಡ.
* ಶಾಂತವಾಗಿರಿ: ಪರೀಕ್ಷೆ ಸಮಯದಲ್ಲಿ ಸ್ವಲ್ಪ ಒತ್ತಡ ಹಾಗೂ ಆತಂಕ ಸಹಜ. ನಿರ್ವಹಣೆ ಕ್ರಮಗಳನ್ನು ಅನುಕರಿಸಿ. ತಂದೆ-ತಾಯಂದಿರು ಮಕ್ಕಳ ಮುಂದೆ ತಮ್ಮ ಭಯ ಆತಂಕ ವ್ಯಕ್ತಪಡಿಸಿದರೆ ಅದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಧನಾತ್ಮಕವಾಗಿ ಯೋಚಿಸಿ ಆದಷ್ಟೂ ಶಾಂತವಾಗಿರಿ.
* ಪೌಷ್ಟಿಕ ಆಹಾರ ಸೇವನೆ.
* ಸಾಕಷ್ಟು ನಿದ್ರೆ
* ಉತ್ತಮ ಉಸಿರಾಟದ ಕ್ರಮಗಳು
* ಧ್ಯಾನ
* ಪ್ರಕೃತಿ( ಹಸಿರಿನಲ್ಲಿ) ಸ್ವಲ್ಪ ಕಾಲ ಓಡಾಡಿ
* ಸರಳ ವ್ಯಾಯಾಮ, ಯೋಗ
* ಸಂಗೀತ ಕೇಳುವುದು
* ಆಸಕ್ತಿದಾಯಕ ಪುಸ್ತಕ ಓದಿ
* ಸ್ನಾಯುಬಿಗಿತ ಇದ್ದರೆ ಆ ಭಾಗದ ಒತ್ತಡ ನಿವಾರಣೆಗಾಗಿ ಮಸಾಜ್ ಸಹ ಒತ್ತಡ ನಿವಾರಣೆಯಲ್ಲಿ ಸಹಕಾರಿಯಾಗುತ್ತದೆ. ಮೈ ಮನಸು ಹಗುರವಾಗುತ್ತದೆ.
* ಪ್ರೀತಿಪಾತ್ರರೊಂದಿಗೆ ಮುಕ್ತ ಮಾತುಕತೆ.
*ಅಭ್ಯಾಸದ ವೇಳಾಪಟ್ಟಿ ತಯಾರಿಸಿ: ವೇಳಾಪಟ್ಟಿಯಿಂದ ಪರೀಕ್ಷೆಯ ತಯಾರಿಗೆ ಸಹಾಯವಾಗುತ್ತದೆ. ಇದರಿಂದ ಎಲ್ಲಾ ವಿಷಯಗಳಿಗೂ ಸಮಯ ನೀಡಿದಂತಾಗುತ್ತದೆ. ಎಲ್ಲಾ ವಿಷಯಗಳನ್ನು ಅಭ್ಯಾಸ ಮಾಡಿದಂತಾಗುತ್ತದೆ. ಯಾವ, ವಿಷಯಕ್ಕೆ ಉಳಿದ ವಿಷಯಕ್ಕಿಂತ ಹೆಚ್ಚಿನ ಅಭ್ಯಾಸ ಬೇಕಿದೆ ಎಂದು ಅರಿತು ಅದಕ್ಕೆ ತಕ್ಕಂತೆ ತಯಾರಿ ನಡೆಬಹುದು. ತಂದೆ-ತಾಯಂದಿರೂ ಕೆಲವು ವಿಷಯಗಳಲ್ಲಿ(subjects) ಮಕ್ಕಳಿಗೆ ಅಭ್ಯಾಸ ಮಾಡಿಸಲು ಸುಲಭವಾಗುತ್ತದೆ.
* ವೇಳಾಪಟ್ಟಿಯಲ್ಲಿ ಪ್ರತಿ ಒಂದು ವಿಷಯದ ಅಭ್ಯಾಸದ ನಂತರ ಸಣ್ಣ ಐದು ನಿಮಿಷಗಳ ಕಾಲದ ವಿರಾಮವೂ ಅಗತ್ಯ.
* ಮಕ್ಕಳು ಅಭ್ಯಾಸ ಮಾಡುತ್ತಿರುವಾಗ, ತಂದೆ-ತಾಯಂದಿರು ಸದಾ ಪಕ್ಕದಲ್ಲೇ ಕುಳಿತಿರುವ ಅಗತ್ಯವಿಲ್ಲ.
* ಮಕ್ಕಳಿಗೆ ಪರಿಣಾಮಕಾರಿ ಹಾಗೂ ವೈಯುಕ್ತಿಕವಾಗಿ ಅವರಿಗೆ ಸರಿ ಹೊಂದುವ ವಿವಿಧ ಅಧ್ಯಯನ ತಂತ್ರಗಳ (Study techniques) ಬಗ್ಗೆ ಹೆಚ್ಚಿನ ಗಮನ ವಹಿಸುವಂತೆ ಸಹಕರಿಸಬಹುದು.
* ಪಾಠದ ಮುಖ್ಯ ಅಂಶಗಳನ್ನು ಸಣ್ಣ ಪುಸ್ತಕವೊಂದರಲ್ಲಿ ಪಟ್ಟಿಮಾಡುವುದು ಉತ್ತಮ ಅಭ್ಯಾಸ.
* ಅಭ್ಯಾಸ/ಮಾದರಿ ಪ್ರಶ್ನೆಪತ್ರಿಕೆಗಳು, ಪರೀಕ್ಷೆಗಳು (Practice exam) ಬರವಣಿಗೆಯನ್ನು ಉತ್ತಮಗೊಳಿಸಲು ಹಾಗೂ ಸಮಯವನ್ನು ನಿರ್ವಹಿಸುವಲ್ಲಿ ಬಹಳ ಸಹಕಾರಿ.
* ಪ್ರಶ್ನೆಪತ್ರಿಕೆಯ ಸೂಚನೆಗಳು ಹಾಗೂ ಪ್ರಶ್ನೆಗಳನ್ನು ಮೊದಲು ಓದಿ ಅರ್ಥ ಮಾಡಿಕೊಂಡ ನಂತರವಷ್ಟೇ ಉತ್ತರಿಸಲು ಪ್ರಾರಂಭಿಸಬೇಕು.
* ಉತ್ತರದಲ್ಲಿ ಇರುವ ಪ್ರಮುಖ ಪದಗಳ ( key words) ಕೆಳಗೆ ಗೆರೆ ಎಳೆಯಿರಿ.
* ಪರೀಕ್ಷಾ ಬರವಣಿಗೆಗೆ ಬೇಕಾದ ವಸ್ತುಗಳು, ಹಾಲ್ ಟಿಕೆಟ್, ಕೈ ಗಡಿಯಾರ ಹಾಗೂ ಇತರ ವಸ್ತುಗಳು ಇವೆಯೇ ಎಂದು ಹಿಂದಿನ ದಿನವೇ ಖಾತರಿ ಮಾಡಿಕೊಳ್ಳಿ.
* ನಿಮ್ಮ ಸಾಮರ್ಥ್ಯ ಹಾಗೂ ಪರೀಕ್ಷೆ ತಯಾರಿಯ ಮೇಲೆ ನಂಬಿಕೆ ಇರಲಿ.
* ನೀರು, ಆಹಾರ, ಸ್ವಲ್ಪ ವ್ಯಾಯಾಮ ಹಾಗೂ ನಿದ್ರೆ ಅವಶ್ಯಕ.
* ಆದಷ್ಟೂ ಮೊಬೈಲ್ ಫೋನ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ.
* ಧನಾತ್ಮಕವಾಗಿ ಯೋಚಿಸಿ
* ಮನೆಯ ವಾತಾವರಣ ಹೆಚ್ಚು ಬಿಗಿಯಾಗಿರದೆ ತಿಳಿಯಾಗಿದ್ದರೆ ಮನಸ್ಸು ಸಹ ಉಲ್ಲಾಸವಾಗಿರುತ್ತದೆ.
ಸ್ವಲ್ಪ ಮಟ್ಟಿನ ಒತ್ತಡ ನಮ್ಮ ಕಾರ್ಯಕ್ಷಮತೆಯನ್ನು ಪುರಸ್ಕೃತ ಗೊಳಿಸುತ್ತದೆ. ಪರೀಕ್ಷಾ ಸಮಯದಲ್ಲಿ ನಮ್ಮ ಶಕ್ತಿ ಹಾಗೂ ಯೋಚನೆಗಳು, ಪರೀಕ್ಷಾ ತಯಾರಿಯ ಕಡೆ ಇರಬೇಕೇ ಹೊರತು , ಮುಂಬರುವ ಫಲಿತಾಂಶದ ಕಡೆ ಅಲ್ಲ.
ಫಲಿತಾಂಶ ಹೇಗೇ ಇದ್ದರೂ ನಿಮ್ಮ ಮಗ ಹಾಗೂ ಮಗಳನ್ನು ತಂದೆತಾಯಿಯಾಗಿ ನೀವು ಎಂದಿನಂತೆಯೇ ಅಷ್ಟೇ ಪ್ರೀತಿಸುತ್ತೀರಿ, ನಿಮ್ಮ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಮಕ್ಕಳಿಗೆ ತಿಳಿಸುವುದು ಒಳಿತು. ಇದು ನಾವು ಮಕ್ಕಳೆಡೆ ಅವರ ಸುಂದರ, ಮೌಲ್ಯಯುತ ಜೀವನಕ್ಕೆ ಸಲ್ಲಿಸುವ ಗೌರವ. ಅವರನ್ನು ಜೀವನದ ಪರೀಕ್ಷೆಗಳಿಗೆ ಧೈರ್ಯತುಂಬಿ ತಯಾರು ಮಾಡುವ ಜವಾಬ್ದಾರಿ ಸಹ ನಮ್ಮದು.