ಯೋಗಿಗಳು ಹಠಯೋಗದಿಂದ ಅನೇಕ ರೀತಿಯ ಯೋಗ ಸಾಮರ್ಥ್ಯ ಪಡೆಯುವುದಕ್ಕೆ ಸಿದ್ಧಿ ಎಂದು ಕರೆಯುವರು. ಯಾವ ಕ್ರಿಯೆಯಿಂದ ಸಿದ್ಧಿಯನ್ನು ಪಡೆಯುವರೋ ಅದಕ್ಕೆ ಸಾಧನವೆಂದು ಕರೆಯುತ್ತಾರೆ. ಇಂತಹ ಸಾಧನಗಳಲ್ಲಿ ಪ್ರಾಣಾಯಾಮವು ಒಂದು ಅತ್ಯಂತ ಪ್ರಮುಖ ಸಾಧನವು ಯೋಗಾಸನಗಳ ಸಾಧನೆಯಿಂದ ದೇಹದ ಕ್ರಿಯೆಗಳ ಮೇಲೆ ಪ್ರಾಣಾಯಾಮ ಸಾಧನೆಯಿಂದ ಸೂಕ್ಷ್ಮ ಶರೀರ, ಲಿಂಗ ಶರೀರದ ಮೇಲೆ ಪ್ರಭುತ್ವ ಸಾಧಿಸಬಹುದು. ಶ್ವಾಸೋಚ್ವಾಸ ಮತ್ತು ನರಮಂಡಲದ ಮಧ್ಯೆ ನಿಕಟ ಸಂಬಂಧವಿದೆ. ಉಸಿರಾಟದ ಗತಿಯನ್ನು ನಿಯಂತ್ರಿಸಿದರೆ, ಆಂತರಿಕ ಪ್ರವಾಹವನ್ನು ನಿರ್ಬಂಧಿಸಿ ದಂತಾಗುವುದು ಎಂದು ಸ್ವಾಮಿ ಶಿವಾನಂದರು ಹೇಳಿದ್ದಾರೆ.
ಅರ್ಹತೆ ಏನು?: ಶಾಂತ ಮನಸ್ಸು, ಇಂದ್ರಿಯ ನಿಗ್ರಹ, ಗುರು ಹಿರಿಯರ ಶಾಸ್ತ್ರಗಳಲ್ಲಿ ವಿಶ್ವಾಸ, ದೇವರಲ್ಲಿ ನಂಬಿಕೆ (ಆಸ್ತಿಕತೆ), ಊಟ, ನೀರು, ನಿದ್ರೆ ವಿಹಾರದಲ್ಲಿ ನಿಯಮಿತವಾಗಿರುವವನು ಮತ್ತು ಹುಟ್ಟು ಸಾವುಗಳ ಚಕ್ರದಿಂದ ಮುಕ್ತಿ ಹೊಂದುವ ಹೆಬ್ಬಯಕೆ ಹೊಂದಿದವನು ಯೋಗಾಭ್ಯಾಸ ಮಾಡಲು ಅರ್ಹನಾಗುತ್ತಾನೆ. ಇಂತಹ ಗುಣ ಹೊಂದಿದಾತ ಮಾತ್ರ ಯೋಗಾಭ್ಯಾಸದಲ್ಲಿ ಜಯ, ಸಿದ್ಧಿ ಸಾಧಿಸುತ್ತಾನೆ. ಪ್ರಾಣಾಯಾಮವನ್ನು ಕಾಳಜಿ, ದೃಢ ಹಾಗೂ ಅವಿರತ ಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ಮಾಡಬೇಕು.
ಯಾರು ಅನರ್ಹರು?: ಇಂದ್ರಿಯಗಳ ದಾಸ, ಸೊಕ್ಕಿನ ಸ್ವಾಭಾವದವ, ಅಪ್ರಾಮಾಣಿಕ, ಕಪಟಿ, ವಿಶ್ವಾಸಘಾತಕ, ಸಾಧು-ಸಂತರಿಗೆ ಗೌರವ, ಗುರುಗಳಿಗೆ ಮರ್ಯಾದೆ ಕೊಡದವ, ವ್ಯರ್ಥ ಅನಾವಶ್ಯಕ ವ್ಯಂಗ್ಯ ಮಾತಾಡುವವ, ದುರಾಸೆ, ಅಪನಂಬಿಕೆ, ಸಂಸಾರ ವ್ಯವಹಾರದಲ್ಲಿ ಅತಿಯಾಗಿ ಬೆರೆಯುವವ, ಕೆಟ್ಟ ದೃಷ್ಟಿ ಹೊಂದಿರುವವ ಎಂದೆಂದಿಗೂ ಪ್ರಾಣಾಯಾಮ ಅಥವಾ ಯಾವುದೇ ಯೋಗಸಾಧನೆಯಲ್ಲಿ ಯಶ ಹೊಂದಲಾರ.
ಗುರುವನ್ನು ಅರಸಿ: ವ್ಯಕ್ತಿಯ ಸಂಸ್ಕಾರ, ಜಾಣ್ಮೆ ವೈರಾಗ್ಯದ ಯೋಗ್ಯತೆ, ವಿವೇಕ, ಮುಮುಕ್ಷತ್ವ ಮತ್ತು ಸಾಧನೆಯ ಸಾಮರ್ಥ್ಯದ ಆಧಾರದ ಮೇಲೆ ಸಾಧಕರಲ್ಲಿ ಉತ್ತಮ, ಮಧ್ಯಮ, ಸಾಧಾರಣ ಎಂದು ಮೂರು ಪ್ರಕಾರಗಳು ಯೋಗಸಾಧಕನು ಯೋಗಶಾಸ್ತ್ರ ಅರಿತ, ಅದರಲ್ಲಿ ಪ್ರಭುತ್ವ ಪಡೆದ ಗುರುವನ್ನು ಭೇಟಿಯಾಗಬೇಕು, ಗುರುವಿನ ಸಾನ್ನಿಧ್ಯದಲ್ಲಿ ಸಾಧನೆ ಮಾಡಿದರೆ ಸಿದ್ಧಿ ಸುಲಭ. ಗುರುಗಳು ಹೇಳಿದ ಎಲ್ಲ ನಿಯಮಗಳನ್ನು ಶ್ರದ್ಧೆ, ನಂಬಿಕೆ, ಕುತೂಹಲದಿಂದ ಕೇಳಿ ಪಾಲಿಸಬೇಕು.
ಪ್ರಾಣಾಯಾಮ ಸಾಧಕನು ಯಾವಾಗಲೂ ದಯಾಪರನೂ, ಮಿತಭಾಷಿ, ಪ್ರಾಮಾಣಿಕ, ಸತ್ಯವಂತ, ಸಾಧಕತ್ವ, ವೈರಾಗ್ಯ, ತಾಳ್ಮೆ, ಶ್ರದ್ಧೆ, ಭಕ್ತಿ, ಕರುಣೆ ಮುಂತಾದ ಮಾನವೀಯ ಗುಣಗಳನ್ನು ರೂಢಿಸಿಕೊಳ್ಳಬೇಕು.