| ವಿದ್ವಾನ್ ಬಿ.ಜಿ.ಅನಂತ
ನಮ್ಮಲ್ಲಿ ದುಷ್ಟ ಅಭ್ಯಾಸಗಳು, ಅನಾತ್ಮ ಗುಣಗಳೆಲ್ಲ ಬಹುಕಾಲದಿಂದ ಇರುತ್ತವೆ. ಇದ್ದಕ್ಕಿದ್ದಂತೆ ಅವುಗಳನ್ನು ಅಂಕೆ ಮಾಡಲು ನೋಡಿದರೆ ಅವು ಸುಲಭಕ್ಕೆ ಬಗ್ಗುವುದಿಲ್ಲ. ಈ ಮಾತುಗಳಿಗೆ ಶ್ರೀರಂಗ ಮಹಾಗುರುಗಳು ಘಟನೆಯೊಂದನ್ನು ಉದಾಹರಿಸುತ್ತಿದ್ದರು.
ಅವರ ಹಿರಿಯರ ಕಾಲದಲ್ಲಿ ಒಮ್ಮೆ ಕಾಲರಾ ರೋಗ ಬಂದಿತ್ತಂತೆ. ಆಗಿನ ವಾಡಿಕೆಯಂತೆ ಊರಿನ ಎಲ್ಲರೂ ಹಳ್ಳಿಯನ್ನು ತೊರೆದು ಊರಹೊರಗೆ ವಾಸಿಸತೊಡಗಿದರು. ತಾತ್ಕಾಲಿಕವಾದ ವ್ಯವಸ್ಥೆಯಾದ್ದರಿಂದ ಅಡಿಕೆ-ತೆಂಗಿನ ಗರಿಗಳಿಂದ ಗುಡಿಸಲುಗಳನ್ನು ನಿರ್ವಿುಸಿಕೊಂಡಿದ್ದರು. ಗುರುಗಳ ಪೂರ್ವಜರ ಗುಡಿಸಿಲಿನಲ್ಲಿ ಒಂದು ಉಪ್ಪಿನಕಾಯಿಯ ಜಾಡಿ, ಅದರ ತುಂಬ ರುಚಿಯಾದ ಉಪ್ಪಿನಕಾಯಿಗಳು. ದಿನಗಳು ಕಳೆದಂತೆ ಜಾಡಿಯಲ್ಲಿದ್ದ ಉಪ್ಪಿನಕಾಯಿ ನಿರೀಕ್ಷೆಗಿಂತ ವೇಗವಾಗಿ ಖಾಲಿಯಾಗತೊಡಗಿತು. ಒಂದು ದಿವಸ ಮನೆಯವರು ನೋಡುತ್ತಿದ್ದಂತೆಯೇ ಗುಡಿಸಲಿನ ಸಂದಿಯಿಂದ ಕೈಯ್ಯೊಂದು ಜಾಡಿಯಿಂದ ಉಪ್ಪಿನಕಾಯಿಯನ್ನು ಕದಿಯುತ್ತಿದೆ! ಇವರು, ‘ಕಳ್ಳನು ಸಿಕ್ಕಿಬಿದ್ದ’ ಎಂದು ಹೋಗಿ ಹಿಡಿದುಕೊಂಡರಂತೆ. ಸಿಕ್ಕಿಬಿದ್ದ ವ್ಯಕ್ತಿ ಆಶ್ಚರ್ಯ ವ್ಯಕ್ತಪಡಿಸುತ್ತ, ‘ಎಷ್ಟೋ ದಿನಗಳಿಂದ ನಾನು ಇಲ್ಲಿಂದ ಉಪ್ಪಿನಕಾಯಿಯನ್ನು ತೆಗೆದುಕೊಳ್ಳುತ್ತಿದ್ದೇನೆ, ಇಂದೇಕೆ ವೃಥಾ ಹುಯಿಲೆಬ್ಬಿಸುತ್ತಿದ್ದೀರಿ?’ ಎಂದನಂತೆ. ಕಳ್ಳನಿಂದಲೇ ಯಜಮಾನನ ಮೇಲೆ ಆಕ್ಷೇಪ!. ಎಂದರೆ ದುರ್ಗಣಗಳು ಬಹುಕಾಲ ನಮ್ಮೊಳಗೆ ನೆಲೆಯೂರದಂತೆ ನೋಡಿಕೊಳ್ಳಬೇಕು. ಒಂದುವೇಳೆ ದೀರ್ಘಕಾಲದಿಂದ ತಳವೂರಿಬಿಟ್ಟಿದ್ದರೆ ಉಪಾಯವಾಗಿ ಹೊರಹಾಕಬೇಕಾಗುತ್ತದೆ. ಅದಕ್ಕಾಗಿ ನಮ್ಮ ನಮ್ಮ ಪ್ರಕೃತಿಯನ್ನು ಓಲೈಸಿ ಅದನ್ನು ಒಲಿಸಿಕೊಂಡು, ನಿಧಾನವಾಗಿ ನಮಗೆ ಬೇಡದ ಸಂಸ್ಕಾರಗಳನ್ನು ಹೊರಹಾಕಿ, ಬೇಕಾದ ಆತ್ಮಗುಣಗಳನ್ನು ಒಳಗೆ ಬರಮಾಡಿಕೊಳ್ಳಬೇಕು.
ಇದನ್ನೂ ಓದಿ: ಗಂಡ ಹೆಂಡತಿಯಾಗಲು ಅಡ್ಡಿಯಾದ ಕರ್ನಾಟಕ-ಕೇರಳ ಬಾರ್ಡರ್!
ಪ್ರಕೃತಿಯಲ್ಲಿ ಇದಕ್ಕೆ ಇನ್ನೊಂದು ಉಪಾಯವೂ ಉಂಟು. ರಾತ್ರಿಯ ಹೊತ್ತು ಎಲ್ಲರೂ ಮಲಗಿರುವಾಗ ಕಳ್ಳನೊಬ್ಬನು ಮನೆಯನ್ನು ಪ್ರವೇಶಿಸಿದ ಎಂದಿಟ್ಟುಕೊಳ್ಳೋಣ. ಕಳ್ಳನು ಒಳಗೆ ಬಂದಿರುವುದು ಮನೆಯ ಯಜಮಾನನ ಗಮನಕ್ಕೆ ಬಂದಿದೆ. ತಾನು ಬಂದಿರುವುದು, ಯಜಮಾನನಿಗೆ ತಿಳಿದಿದೆ ಎಂಬುದು ಕಳ್ಳನಿಗೂ ತಿಳಿದುಹೋದರೆ, ಆಗೇನಾಗುತ್ತದೆ? ಯಜಮಾನನು ವಿಶೇಷವಾಗಿ ಮತ್ತೇನನ್ನೂ ಮಾಡದಿದ್ದರೂ ಕಳ್ಳನೇ ತಾನೇತಾನಾಗಿ ಮನೆಯಿಂದ ಹೊರಗೆ ಹೋಗಲು ಪ್ರಯತ್ನಿಸುತ್ತಾನಷ್ಟೇ. ನಮಗೆ ಬೇಡದ ದುರ್ಗಣವೂ ಹಾಗೆಯೇ. ಅದರ ಇರುವು ನಮ್ಮ ಅರಿವಿಗೆ ಬಂದ ಪಕ್ಷದಲ್ಲಿ, ಆ ದುರ್ಗಣವು ತಾನೇತಾನಾಗಿ ಹೊರಹೋಗುತ್ತದೆ. ಅದಕ್ಕೆ ಸ್ವಲ್ಪ ಸಮಯ ಹಿಡಿದೀತು.
ಇದು ನಮ್ಮ ನಮ್ಮ ಮನಸ್ಸಿಗೆ ಇರುವ ಸಾಮರ್ಥ್ಯ. ಯಾವುದನ್ನು ಬೇಡ ಎಂದುಕೊಳ್ಳುತ್ತೇವೆಯೋ ಅದು ಹೊರಟುಹೋಗುತ್ತದೆ, ಯಾವುದು ಬೇಕು ಎಂದು ಸ್ವಾಗತಿಸುತ್ತೇವೆಯೋ ಅದು ಒಳಬಂದು ನಿಧಾನವಾಗಿ ಗೂಡುಮಾಡಿಕೊಳ್ಳುತ್ತದೆ. ಹಾಗಾಗಿ ನಮ್ಮೊಳಗೆ ನಮಗೇ ಬೇಡದ ದುರ್ಗಣಗಳು ಯಾವ ಯಾವುದು ಸೇರಿಕೊಂಡಿದೆ ಎಂಬುದನ್ನು ಪ್ರಾಮಾಣಿಕವಾಗಿ ಗುರುತಿಸಿಕೊಳ್ಳುವ ಕೆಲಸ ಅತ್ಯಂತ ಮುಖ್ಯ. ಗುರುತಿಸಿಕೊಂಡ ಮೇಲೆ ‘ನನಗೆ ಇದು ಖಂಡಿತವಾಗಿಯೂ ಬೇಡ’ ಎಂಬ ಸಂಕಲ್ಪ ಮಾಡಿಕೊಳ್ಳುವುದು ಮುಂದಿನ ನಡೆ. ‘ದೈವವೇ! ಈ ಸಲ್ಲದ ಗುಣದಿಂದ ನನ್ನನ್ನು ಪಾರುಮಾಡು’ ಎಂಬ ಗಟ್ಟಿ ಪ್ರಾರ್ಥನೆಯನ್ನು ಮಾಡಿದರಂತೂ ದುರ್ಗಣವು ಖಂಡಿತವಾಗಿಯೂ ಹೆಚ್ಚು ಕಾಲ ಉಳಿಯಲಾರದು.
(ಲೇಖಕರು ಆಧ್ಯಾತ್ಮಿಕ ಚಿಂತಕರು)