ಅಮೋಲ ಮೂರನೇ ತರಗತಿ ವಿದ್ಯಾರ್ಥಿ. ಮುಗ್ಧ ಮನಸ್ಸಿನ ತುಂಟ ಬಾಲಕ. ಇದ್ದಕ್ಕಿದ್ದಂತೆ ಒಂದು ದಿನ ಬೆಳಗ್ಗೆ ಎದ್ದ ಅಮೋಲ ತನ್ನ ತಾಯಿಯ ಮುಖ ನೋಡಿ, ‘ಅಮ್ಮಾ, ನನ್ನ ಮನಸ್ಸಿನಲ್ಲಿ ನೀನು ಸಾಯುತ್ತಿ ಅಂತ ಹೇಳಿದ ಹಾಗೆ ಅನಿಸುತ್ತದೆ. ಯಾಕೋ ತಿಳಿಯುತ್ತಿಲ್ಲ. ನಾನು ಎಷ್ಟು ಪ್ರಯತ್ನಿಸಿದರೂ ಈ ರೀತಿ ಅನಿಸುವುದು ತಡೆಯಲಾಗುತ್ತಿಲ್ಲ. ನನಗೆ ತುಂಬ ಹೆದರಿಕೆಯಾಗುತ್ತಿದೆ’ ಎಂದು ಹೇಳತೊಡಗಿದ. ‘ರಾತ್ರಿ ನಿದ್ರೆಯಲ್ಲಿ ಏನೋ ಭಯಾನಕ ಕನಸುಗಳು ಬರುತ್ತವೆ. ನಿನಗೆ ಏನೂ ಆಗುವುದಿಲ್ಲ ಅಲ್ಲವೇ? ಹಾಗೂ ಮನೆಯಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ ಅಲ್ಲವೆ?’ ಅಂತ ಮತ್ತೆ ಮತ್ತೆ ಕೇಳತೊಡಗಿದ. ಈ ತೊಳಲಾಟಕ್ಕೆ ಹಾಳಾದದ್ದು ಮನೆ ಮಂದಿಯ ಮಾನಸಿಕ ನೆಮ್ಮದಿ.
ಮೊದಲನೇ ದಿನ ಆತನ ತಾಯಿ ಅವನಿಗೆ ಧೈರ್ಯ ಹೇಳಿ ತಿಳಿಹೇಳಿ ಶಾಲೆಗೆ ಕಳುಹಿಸಿದಳು. ಮರುದಿನ ಅಮೋಲ, ‘ನಾನು ಶಾಲೆಗೆ ಹೋಗುವುದಿಲ್ಲ. ನಾನು ಹೋದಾಗ ನಿನಗೇನಾದರೂ ಆದರೆ ನಾನೇನು ಮಾಡಲಿ?’ ಎನ್ನತೊಡಗಿದ. ಅವನ ತಾಯಿ ತಂದೆಯೊಂದಿಗೆ ರ್ಚಚಿಸಿ ಪಕ್ಕದ ದೇವಸ್ಥಾನದ ಶಾಸ್ತ್ರಿಗಳಿಗೆ ಭೇಟಿಯಾಗಿ ಪೂಜೆ ಮಾಡಿಸಿ ಕೊರಳಲ್ಲಿ ಧೈರ್ಯದ ದಾರ ಕಟ್ಟಿಸಿದರು. ತದನಂತರ ಒಂದು ತಿಂಗಳಾಯಿತು. ಪೂಜೆ, ಹರಕೆ ಹಲವಾರು ರೀತಿಯಲ್ಲಿ ಪ್ರಯತ್ನಿಸಿದರೂ ಅವನ ಮನಃಸ್ಥಿತಿ ಬದಲಾಗಲಿಲ್ಲ. ನಂತರ ಶಿಕ್ಷಕರೊಂದಿಗೆ ರ್ಚಚಿಸಲಾಗಿ ಅವರ ಸೂಚನೆ ಮೇರೆಗೆ ಅಮೋಲನನ್ನು ಮನೋವೈದ್ಯರ ಬಳಿ ಚಿಕಿತ್ಸೆಗೆ ಕಳಿಸುವುದು ಸೂಕ್ತ ಎಂದು ಭಾವಿಸಿ ನನ್ನ ಕಡೆಗೆ ಕಳುಹಿಸಿದರು.
ಮಗುವಿನ ಮನಸ್ಸನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ನಿಜಾಂಶ ತಿಳಿಯಿತು. ಅಮೋಲನ ಸ್ನೇಹಿತೆ ಅನುಷಾ ಶಾಲೆಗೆ ಬಂದಾಗ ಅವಳ ತಾಯಿ ಆಕಸ್ಮಿಕ ಹೃದಯಾಘಾತದಿಂದ ತೀರಿಹೋಗಿದ್ದ ಸುದ್ದಿ ಅವನಿಗೆ ತಿಳಿದಿತ್ತು. ತನ್ನ ತಾಯಿ ದೇವರ ಬಳಿಗೆ ಹೋಗಿದ್ದಾಳೆ, ಇನ್ನು ಬರುವುದಿಲ್ಲ ಎಂದು ಅನುಷಾ ಇತರರ ಮುಂದೆ ದುಃಖವನ್ನು ಹಂಚಿಕೊಂಡದ್ದು ಇವನಿಗೆ ಆಘಾತವನ್ನುಂಟುಮಾಡಿತ್ತು. ಆ ಸುದ್ದಿ ಕೇಳಿದಾಗಿನಿಂದ ತನ್ನ ತಾಯಿಗೆ ಏನಾಗುತ್ತದೋ ಎಂಬ ಭಯ ಅವನ ಮನಸ್ಸಿನಲ್ಲಿ ಶುರುವಾಯಿತು. ಅನೇಕ ವಿಚಾರಗಳು ತಲೆಯಲ್ಲಿ ಹರಿದಾಡಿದವು. ಹೇಳಲು ಬರುವಂತಿಲ್ಲ, ಕೇಳಲು ಬರುವಂತಿಲ್ಲ.
ಮನದಲ್ಲಿಯೇ ನೊಂದ ಅಮೋಲ ವೇದನೆ ತಾಳದೆ ರಾತ್ರಿ ಅಮ್ಮಾ ಅಂತ ಚೀರಿ ಎದ್ದು ತಾಯಿ ಪಕ್ಕಕ್ಕೆ ಇದ್ದಾಳೋ ಇಲ್ಲವೋ ಎಂದು ಭಯಪಡುತ್ತಿದ್ದುದೂ ಉಂಟು. ಇವೆಲ್ಲ ಘಟನೆಗಳಿಂದ ಸಾಕಷ್ಟು ಮಾನಸಿಕ ಒತ್ತಡ ಉಂಟಾಗಿತ್ತು. ಈ ಅನುಭವ ಹಾಗೂ ಒತ್ತಡದಿಂದ ಅವನ ನಡವಳಿಕೆಯಲ್ಲಿ ಅಪಾರ ಬದಲಾವಣೆಗಳು ಕಂಡುಬಂದವು. ಭೀತಿಯಿಂದ ಕಾಲ ಕಳೆಯತೊಡಗಿದ. ಅವನಿಗೆ ಆದ ವೇದನೆಯ ಪ್ರತಿಬಿಂಬವೇ ಆತನ ನಡವಳಿಕೆಯಲ್ಲಿತ್ತು.
ಇಂತಹ ಘಟನೆಗಳಾದಾಗ ಮಕ್ಕಳಿಗೆ ಸಾಮಾನ್ಯವಾಗಿ ಅಗಲುವಿಕೆಯ ಆತಂಕ, ಭಯ, ತಾತ್ಕಾಲಿಕವಾಗಿ ಖಿನ್ನತೆ ಉಂಟಾಗುತ್ತದೆ. ಇಂತಹ ಘಟನೆಗಳನ್ನು ಕೇಳಿ ನೋಡಿದ ಮಕ್ಕಳಲ್ಲಿ ಕೂಡ ಭಯವುಂಟಾಗುವುದು ಸಾಮಾನ್ಯ. ಅಮೋಲನಿಗೆ ವೈಜ್ಞಾನಿಕವಾಗಿ ಸೂಕ್ತ ಸಲಹೆ ನೀಡಿ ಸಮಾಧಾನ ಮಾಡಿದೆ. ವೈದ್ಯರಿಂದ ಅವನ ತಾಯಿಯ ತಪಾಸಣೆ ಮಾಡಿಸಿ; ಅವಳು ಆರೋಗ್ಯವಾಗಿದ್ದಾಳೆ, ಯಾವ ತೊಂದರೆಯೂ ಇಲ್ಲ ಎಂದು ಧೈರ್ಯ ಹೇಳಿದಾಗ ಸಮಸ್ಯೆ ಬಗೆಹರಿಯಿತು.
ಇದು ಒಬ್ಬ ಅಮೋಲನ ಉದಾಹರಣೆಯಷ್ಟೇ. ಹಲವು ವಿದ್ಯಾರ್ಥಿಗಳು ಇಂತಹ ಕಾರಣಗಳಿಂದಾಗಿ ಶಾಲೆಗೆ ಹೋಗಲು ನಿರಾಕರಿಸುವ ಸನ್ನಿವೇಶಗಳು ಎದುರಾಗಿವೆ, ಎದುರಾಗುತ್ತಿವೆ. ಈ ತರಹದ ನೈಜ ಸನ್ನಿವೇಶದ ಅನಿವಾರ್ಯತೆಯಲ್ಲಿ ಮುಗ್ಧ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.