ಲೈಫ್‌ಸ್ಟೈಲ್

ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಪ್ರಕೃತಿದತ್ತ ಮಾರ್ಗಗಳು ಹೀಗಿವೆ ತಪ್ಪದೇ ಓದಿ

ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ಆರೋಗ್ಯ ಆವಶ್ಯಕ. ಇದು ನೆರವೇರಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಸೋಂಕುಗಳು ಬರದ ಹಾಗೆ ತಡೆಯುವುದು ಬಹಳ ಮುಖ್ಯ. ಸರಿಯಾದ ಆಹಾರಪದ್ಧತಿ ಹಾಗೂ ಜೀವನಶೈಲಿಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತವೆ.

ಪ್ರಕೃತಿದತ್ತ ಆಹಾರವು ಆರೋಗ್ಯಕ್ಕೆ ಉಪಯುಕ್ತ. ಆಯಾ ಪ್ರದೇಶಗಳಲ್ಲಿ, ಆಯಾ ಕಾಲದಲ್ಲಿ ಸಿಗುವ ಮತ್ತು ಬೆಳೆಯುವ ಹಣ್ಣು, ತರಕಾರಿಗಳನ್ನು ಸೇವಿಸಬೇಕು. ದೈನಂದಿನ ಆಹಾರದಲ್ಲಿ ಮೊಳಕೆಕಾಳುಗಳು, ನಟ್ಸ್ ಸೇವಿಸಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಅಂಶ ಹೊಂದಿರುವ ಆಹಾರಪದಾರ್ಥಗಳು ಬಹು ಮುಖ್ಯ. ಕಿವಿ ಹಣ್ಣು, ನೆಲ್ಲಿಕಾಯಿ, ನಿಂಬೆಹಣ್ಣು, ಪೇರಳೆ (ಸೀಬೆ) ಹಣ್ಣು, ಪಪ್ಪಾಯ, ಅನಾನಸ್ ಮುಂತಾದವು ವಿಟಮಿನ್ ಸಿ ಇರುವ ಪದಾರ್ಥಗಳು. ಅರಿಶಿಣದಲ್ಲಿರುವ ಕರ್ಕ್ಯುಮಿನ್, ಗ್ರೀನ್ ಟೀಯಲ್ಲಿರುವ ಕಾಟೆಕಿನ್, ಶುಂಠಿಯಲ್ಲಿರುವ ಜಿಂಜೆರಾಲ್, ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಅಂಶಗಳು ದೇಹದಲ್ಲಿರುವ ವೈರಾಣುಗಳ ಶಕ್ತಿಯನ್ನು ಕುಂದಿಸಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಕಾಮಕಸ್ತೂರಿ ಬೀಜ ಸೇರಿಸಿದ ಲಿಂಬು ಮತ್ತು ಜೇನುತುಪ್ಪ ಮಿಶ್ರಿತ ನೀರನ್ನು ಅಗಾಗ ಕುಡಿಯುತ್ತಿರಬೇಕು. ಕಾಳುಮೆಣಸಿನ ಪುಡಿ ಹಾಗೂ ಶುಂಠಿ ಸೇರಿಸಿದ ನೆಲ್ಲಿಕಾಯಿ ಪೇಯವನ್ನು ಬೆಳಗ್ಗೆ ಎದ್ದ ಕೂಡಲೇ ಕುಡಿಯುವುದು ಉತ್ತಮ. ಜ್ಯೇಷ್ಠಮಧುವಿನ ಕಷಾಯವನ್ನು ಜೇನುತುಪ್ಪದೊಂದಿಗೆ ಸೇವಿಸಿ. ದಿನಕ್ಕೆರಡು ಬಾರಿ ಗ್ರೀನ್ ಟೀ ಸೇವಿಸಿ. ಜರ್ನಲ್ ಆಫ್ ಲ್ಯುಕೋಸೈಟ್ ಬಯಾಲಜಿಯ ವರದಿಯಲ್ಲಿ ಒಮೆಗಾ 3 ಕೊಬ್ಬಿನಾಂಶ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿಸಿದೆ.

2012ರಲ್ಲಿ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಪ್​ಮೇಶನ್ ಪ್ರಕಟಿಸಿದ ವರದಿಯ ಪ್ರಕಾರ, ನಮ್ಮ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಸಹ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ. ಯಾವುದೇ ತರಕಾರಿಯನ್ನು (ಉದಾ: ಕ್ಯಾರೆಟ್, ಎಲೆಕೋಸು) ಸಣ್ಣಗೆ ಹೆಚ್ಚಿಕೊಂಡು ಅದಕ್ಕೆ ಉಪ್ಪನ್ನು ಬೆರೆಸಿ ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಒಂದು ವಾರ ಬಿಡಬೇಕು. ನಂತರ ಪ್ರತಿದಿನ ಈ ಮಿಶ್ರಣವನ್ನು ಎರಡು ಚಮಚ ಸೇವಿಸಬೇಕು. ಇದರಿಂದ ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳು ಹೆಚ್ಚಲು ಸಹಾಯವಾಗುತ್ತದೆ.

ದೇಹದಲ್ಲಿರುವ ವಿಷವಸ್ತುಗಳನ್ನು ಹೊರಹಾಕುವುದರಿಂದ ರೋಗನಿರೋಧಕ ಶಕ್ತಿಯ ವರ್ಧನೆ ಸಾಧ್ಯ. ವಾರಕ್ಕೊಂದು ಬಾರಿ ಎನಿಮಾ ತೆಗೆದುಕೊಳ್ಳುವುದು ಹಾಗೂ ಜಲನೇತಿ, ವಮನ ಧೌತಿ, ಉಪವಾಸ ಚಿಕಿತ್ಸೆಗಳು ದೇಹವನ್ನು ಪುನಶ್ಚೇತನಗೊಳಿಸಿ ರೋಗಾಣುಗಳ ವಿರುದ್ಧ ಹೋರಾಡಲು ಶಕ್ತಿ ಕೊಡುತ್ತದೆ. ತಂಪು ಕಟಿ ಸ್ನಾನ, ಸೂರ್ಯಸ್ನಾನ - ಬೆಳಗ್ಗೆ ಅಥವಾ ಸಂಜೆ ಅರ್ಧಗಂಟೆಗಳ ಕಾಲ ಕನಿಷ್ಠ ಬಟ್ಟೆಯನ್ನು ಧರಿಸಿ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು, ಖಾಲಿ ಹೊಟ್ಟೆಯಲ್ಲಿ ದಿನಕ್ಕೆ 30 ನಿಮಿಷ ಮಣ್ಣಿನ ಪಟ್ಟಿಯನ್ನು ಹೊಟ್ಟೆಯ ಭಾಗಕ್ಕೆ ಹಾಕಿಕೊಳ್ಳುವುದು ಸಹಾಯಕಾರಿ. ದಿನಕ್ಕೊಂದು ಗಂಟೆ ಯೋಗ, ಪ್ರಾಣಾಯಾಮದ ಅಭ್ಯಾಸವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ.