ಜೀವನದಲ್ಲಿ ಕಲಿಯುವ ಪ್ರಕ್ರಿಯೆ ನಿರಂತರ. ಕಲಿಯಲು ಅಧಿಕಾರ- ಅಂತಸ್ತುಗಳ, ಸಮಯ- ಸಂದರ್ಭಗಳ, ಜಾತಿ- ಮತಗಳ ನಿರ್ಬಂಧಗಳಿಲ್ಲ; ನಾವು ಎರಡು ಮೂಲಗಳಿಂದ ಕಲಿತುಕೊಳ್ಳುತ್ತೇವೆ. ಒಂದು ಬಲ್ಲವರಿಂದ, ಇನ್ನೊಂದು ಸ್ವಾನುಭವದಿಂದ. ಬಲ್ಲವರಿಂದ ಕಲಿತುಕೊಳ್ಳುವ ವಿಧಾನದಲ್ಲಿ ನಮಗಿಂತ ಹೆಚ್ಚು ತಿಳಿದಿರುವ ಓರ್ವ ಗುರುವಿರುತ್ತಾನೆ. ಈ ತರಹದ ಕಲಿಕೆ, ಗುರು ಹೇಳಿದ ಬೋಧನೆ ಪಾಠಗಳಿಗಷ್ಟೇ ಸೀಮಿತವಾಗಿರುತ್ತದೆ. ಆದರೆ, ಯಾವುದೇ ಗುರುವಿನ ಸಹಾಯವಿಲ್ಲದೇನೇ ನಾವು ನಾವೇ ಕಲಿತುಕೊಂಡರೆ, ಅದು ಸ್ವಾನುಭವವೆನಿಸುತ್ತದೆ. ಅನುಭವದಿಂದ ಕಲಿತ ಪಾಠಗಳಿಗೆ ಬೆಲೆಯನ್ನು ಕಟ್ಟಲಾಗದು.
ಜೀವನ ಪರ್ಯಂತ ನಾವು ಏನಾದರೊಂದನ್ನು ಕಲಿಯುತ್ತಲೇ ಇರುತ್ತೇವೆ. ಸಾಮಾನ್ಯವಾಗಿ ಶಿಕ್ಷಕರು ಪಾಠ ಹೇಳಿ, ತದನಂತರ ಪರೀಕ್ಷೆಗಳನ್ನು ನಡೆಸುತ್ತಾರೆ. ಆದರೆ ಅನುಭವ, ಮೊದಲು ಪರೀಕ್ಷೆಗಳನ್ನೊಡ್ಡಿ, ನಂತರ ಮರೆಯಲಾರದ ಪಾಠವನ್ನು ತಿಳಿಹೇಳುತ್ತದೆ. ಅನುಭವವೆಂದರೆ, ನಾವು ಗೈದ ತಪ್ಪುಗಳಿಂದ, ಅಚಾತುರ್ಯದಿಂದ ಕಲಿತುಕೊಂಡ ಪಾಠ. ಒಳ್ಳೆಯ ಅನುಭವ, ಕೆಟ್ಟ ಅನುಭವ ಎರಡರಿಂದಲೂ ಕಲಿಯುವುದಿದೆ. ಒಳ್ಳೆಯ ಅನುಭವದಿಂದ ನಾವು ಇತರರಿಗೆ ಪಾಠವೊಂದನ್ನು ಹೇಳಬಹುದಾದರೆ ಕೆಟ್ಟ ಅನುಭವದಿಂದ ನಾವೇ ಪಾಠವೊಂದನ್ನು ಕಲಿತುಕೊಳ್ಳುತ್ತೇವೆ. ಅಕ್ಷರ ಜ್ಞಾನಕ್ಕಿಂತಲೂ ಅನುಭವ ಜ್ಞಾನವೇ ಶ್ರೇಷ್ಠ. ಶಾಲಾ ಜ್ಞಾನಕ್ಕಿಂತಲೂ ಲೋಕ ಜ್ಞಾನವೇ ಶ್ರೇಷ್ಠ! ವಿಷಯ ಜ್ಞಾನಕ್ಕಿಂತಲೂ ಸಾಮಾನ್ಯ ಜ್ಞಾನ, ವ್ಯವಹಾರ ಜ್ಞಾನವೇ ಮಿಗಿಲು. ಪ್ರಮಾದಗಳು ನಮ್ಮ ಅನುಭವವನ್ನು ಹೆಚ್ಚಿಸುತ್ತವೆ. ಅನುಭವಗಳು ಮುಂದೆ ನಡೆಯಬಹುದಾದ ಪ್ರಮಾದಗಳನ್ನು ತಪ್ಪಿಸುತ್ತವೆ.
ಕೆಲವೊಮ್ಮೆ ಶಾಲಾ ಕಾಲೇಜಿನಲ್ಲಿ ಕಲಿತ ಪಾಠಗಳು ಮರೆತು ಹೋಗಬಹುದು. ಆದರೆ, ಅನುಭವದಿಂದ ಕಲಿತ ಪಾಠಗಳು ಎಂದೂ ಮರೆಯಲಾರವು. ಅನುಭವಗಳ ಹಿಂದೆ, ಬರೇ ಗೆಲುವುಗಳೇ, ಸುಖ ಸಂತೋಷಗಳೇ ಇರಬೇಕೆಂದಿಲ್ಲ; ಸೋಲು ಕಹಿನೆನಪುಗಳು ಇರಬಹುದು. ಹಾಗೆ ನೋಡಿದರೆ, ಸೋಲುಗಳಿಂದ, ನೋವುಗಳಿಂದ ಕಲಿತ ಪಾಠ, ಗೆಲುವಿನಿಂದ ಕಲಿತ ಪಾಠಕ್ಕಿಂತಲೂ ಬಲು ಅಮೂಲ್ಯವಾದುದು. ಈ ಮಾತನ್ನು ಪುಷ್ಟೀಕರಿಸುವಂತೆ, ಪ್ರಸಿದ್ಧ ಲೇಖಕ ಥಾಮಸ್ ಕಾಲ್ವೇಲ್ ಬರೆಯುತ್ತಾನೆ ,‘ಅನುಭವವೇ ಅತ್ಯುತ್ತಮ ಶಿಕ್ಷಕ; ಆದರೆ ಶುಲ್ಕ ಮಾತ್ರ ದುಬಾರಿ’ ಎಂಬುದಾಗಿ.
ಯಾವುದೇ ಅಮೂಲ್ಯವಾದ ಅನುಭವವನ್ನು ಗಳಿಸಬೇಕಾದರೆ, ದೀರ್ಘಕಾಲ ಶ್ರಮಿಸಬೇಕಾಗುತ್ತದೆ. ಅನೇಕ ಬಾರಿ ಜಾರಿ, ಕುಸಿದು ಬಿದ್ದು ಮತ್ತೆ ಮೇಲೆದ್ದು ಪ್ರಯತ್ನಿಸಿದರೆ ಮಾತ್ರ ಉನ್ನತವಾದ ಗಿರಿ ಶಿಖರವನ್ನು ಏರಲು ಸಾಧ್ಯವಲ್ಲವೇ? ಅಂತೆಯೇ ಅನೇಕ ಸಲ ನೀರಲ್ಲಿ ಮುಳುಗಿ, ಕೈ ಕಾಲು ಬಡಿದು, ನೀರು ಕುಡಿದು, ಈಜಲು ಕಲಿತರೆ ಮಾತ್ರ ಹೊಳೆಯನ್ನೋ ನದಿಯನ್ನೋ ದಾಟಬಹುದಲ್ಲವೇ? ಈ ಹಿನ್ನೆಲೆಯಲ್ಲಿ ಈಜುವುದನ್ನು ಕಲಿಯಲು ಹೊರಟವನಿಗೆ ಅವನನ್ನು ನೀರಿಗೆ ತಳ್ಳದ ಹೊರತು ಎಷ್ಟೇ ಪಾಠ ಪ್ರವಚನಗಳನ್ನು ಮಾಡಿದರೂ ಅವು ಉಪಯೋಗಕ್ಕೆ ಬಾರವು. ಇದೇ ರೀತಿ ಓದಿ ಬರೆದು, ಹರಿದು, ತಿದ್ದಿ, ತೀಡಿ ತಪ್ಪುಗಳನ್ನು ಸರಿಪಡಿಸುತ್ತಾ, ಮತ್ತೆ ಮತ್ತೆ ಬರೆದಾಗ ಮಾತ್ರ ಒಳ್ಳೆಯ ಕೃತಿ ರಚನೆಯಾದೀತಲ್ಲವೇ? ಅನುಭವದಿಂದ ಆಗುವ ಲಾಭ ಇದೇ.
ತಪ್ಪು ಮಾಡೋದು ತಪ್ಪಲ್ಲ. ಆದರೆ, ಗೈದ ತಪ್ಪುಗಳಿಂದ ಏನನ್ನೂ ಕಲಿಯದೆ, ಮತ್ತೊಮ್ಮೆ ಅದೇ ತಪ್ಪನ್ನು ಮಾಡೋದು ಅತಿದೊಡ್ಡ ತಪ್ಪು. ಈ ಹಿನ್ನೆಲೆಯಲ್ಲಿ ಗೈದ ತಪ್ಪುಗಳು ಪುನರಾವೃತ್ತಿ ಆಗದಂತೆ, ನೋಡಿಕೊಳ್ಳುವಲ್ಲಿ, ಅನುಭವಗಳು ನೆರವಾಗುತ್ತವೆ. ನಿನ್ನೆಯ ಅನುಭವಗಳನ್ನು ಬಳಸಿಕೊಂಡು ನಾಳೆಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಎಷ್ಟು ಅನುಭವಗಳನ್ನು ಗಳಿಸಿಕೊಂಡಿದ್ದೀರಿ ಎನ್ನೋದಕ್ಕಿಂತಲೂ ಗಳಿಸಿಕೊಂಡ ಅನುಭವಗಳನ್ನು ಜೀವನದಲ್ಲಿ ಹೇಗೆ ಬಳಸಿಕೊಂಡಿರಿ ಅನ್ನೋದು ಮುಖ್ಯ
ಓರ್ವ ವ್ಯಕ್ತಿ ತಾನು ಎಷ್ಟೇ ಸಮರ್ಥ, ಪರಿಣತನೆಂದುಕೊಂಡರೂ, ಹೆಜ್ಜೆ ಹೆಜ್ಜೆಗೂ ಹೊಸ ಸವಾಲುಗಳನ್ನು ಎದುರಿಸುತ್ತಿರುತ್ತಾನೆ; ಹೊಸ ಹೊಸ ಪಾಠಗಳನ್ನು ಕಲಿಯುತ್ತಲೇ ಇರುತ್ತಾನೆ. ಇದು ಅವನ ಅನುಭವದ ಜೋಳಿಗೆಯನ್ನು ತುಂಬುತ್ತಿರುತ್ತದೆ. ಆದರೆ ಎಷ್ಟೋ ಬಾರಿ, ‘ಅನುಭವ’ ಒಂದು ಪಾಠವಾಗಿ, ಎಚ್ಚರಿಕೆಯ ಗಂಟೆಯಾಗಿ, ನಮ್ಮ ಅರಿವಿಗೆ ಮತ್ತು ನೆರವಿಗೆ ಬಂದಾಗ ತಡವಾಗಿರುತ್ತದೆ; ಕಾಲ ಮಿಂಚಿ ಹೋಗಿರುತ್ತದೆ. ಈ ಅರ್ಥದಲ್ಲಿ ಅನುಭವವೆಂದರೆ ತಡವಾಗಿ ಗಳಿಸಿದ ತಿಳಿವಳಿಕೆ - ತಲೆ ಬೋಳಾದ ಮೇಲೆ ದೊರಕುವ ಬಾಚಣಿಗೆಯಂತೆ!
ಅನುಭವದ ಮಹತ್ವವನ್ನು ಡಿ.ವಿ.ಜಿಯವರು ಹೀಗೆ ತಿಳಿಸಿದರು:
ಅನುಭವದ ಪಾಲೊಳು ವಿಚಾರ ಮಂಥನವಾಗೆ/ ಜನಿಯಿಕುಂ ಜ್ಞಾನ ನವನೀತವದೆ ಸುಖದಂ/ಗಿಣಿಯೋದು ಪುಸ್ತಕ ಜ್ಞಾನ/ ನಿನ್ನನುಭವವೆ, ನಿನಗೆ ಧರುಮದ ದೀಪ - ಮುಂಕುತಿಮ್ಮ.
ಅರ್ಥಾತ್ ಅನುಭವವೆಂಬ ಹಾಲನ್ನು ವಿಚಾರವೆಂಬ ಕಡೆಗೋಲಿನಿಂದ ಕಡೆದಾಗ, ಜ್ಞಾನವೆಂಬ ಬೆಣ್ಣೆ ಹುಟ್ಟಿ ಎಲ್ಲರಿಗೂ ಸುಖವನ್ನು ಕೊಡುತ್ತದೆ. ಪುಸ್ತಕದಿಂದ ದೊರೆತ ಜ್ಞಾನ ಕೇವಲ ಗಿಳಿಪಾಠ; ಸ್ವಾನುಭವವೇ ನಮಗೆ ದೊಡ್ಡ ದಾರಿ ದೀಪ.
ವಿವೇಕಿಗಳು, ಜಾಣರು, ಇತರರ ಅನುಭವಗಳಿಂದಲೂ ಲಾಭ ಪಡೆದುಕೊಳ್ಳುತ್ತಾರೆ. ಆದರೆ ಇಂಥವರ ಸಂಖ್ಯೆ ಕಡಿಮೆ. ಏಕೆಂದರೆ, ಹೆಚ್ಚಿನವರಿಗೆ ಬೇರೆಯವರು ಹೇಳಿದ್ದಕ್ಕೆ ಬೆಲೆಯೂ ಇಲ್ಲ: ಅವರು ಹೇಳಿದ್ದರಲ್ಲಿ ನಂಬಿಕೆಯೂ ಇರೋದಿಲ್ಲ. ಅವರು ಹೇಳಿದ್ದನ್ನು ಪ್ರಶ್ನಿಸುವ, ವಿರೋಧಿಸುವ, ತಿರಸ್ಕರಿಸುವ ಗುಣ ಇವರದಾಗಿರುತ್ತದೆ. ಇಂಥವರು ಸ್ವಾನುಭವದಿಂದಲೇ ಪಾಠಗಳನ್ನು ಕಲಿಯದೆ ಬೇರೆ ದಾರಿಯೇ ಇಲ್ಲ. ಸ್ವಭಾವತಃ ಮನುಷ್ಯ ಇತರರ ಅನುಭವದಿಂದ ಪಾಠ ಕಲಿಯುವ ಬದಲು, ಸ್ವತಃ ತಪ್ಪು ಮಾಡಿ, ಅದರಿಂದಲೇ ಕಲಿತುಕೊಳ್ಳುವ ಸ್ವಭಾವದವನಾಗಿರುತ್ತಾನೆ. ಬೆಂಕಿಕಡ್ಡಿಗಳೊಂದಿಗೆ ಆಡುವ ಮಗುವಿಗೆ ಯಾರಾದರೂ ಎಚ್ಚರಿಸಿದರೆ, ಆ ಮಾತನ್ನು ಅದು ಕಿವಿಗೆ ಹಾಕಿಕೊಳ್ಳೋದೇ ಇಲ್ಲ. ಕೈಗೆ ಬೆಂಕಿ ತಾಗಿ ಸುಟ್ಟುಕೊಂಡ ಮೇಲೆಯೇ, ಬೆಂಕಿಯಿಂದ ದೂರವಿರುತ್ತದೆ. ಅನುಭವವಿಲ್ಲದೆ ಪಡೆದ ವಿದ್ಯೆಗಿಂತಲೂ, ವಿದ್ಯೆಯಿಲ್ಲದೆ ಪಡೆದ ಅನುಭವವೇ ಲೇಸು. ಅವಿದ್ಯಾವಂತರು ತಾವು ಗಳಿಸಿದ ಅನುಭವದಿಂದಾಗಿ, ವಿದ್ಯಾವಂತರೂ ಮಾಡಲಾಗದ ಎಷ್ಟೋ ಕೆಲಸಗಳನ್ನು ಸ್ವತಂತ್ರವಾಗಿ, ಸಮರ್ಪಕವಾಗಿ ಮಾಡುತ್ತಿಲ್ಲವೇ? ನಮ್ಮಜ್ಜಿ ಯಾವ ಕುಕಿಂಗ್ ಕ್ಲಾಸ್ಗಳಿಗೂ ಹೋಗಿರಲಿಲ್ಲ. ಆದರೂ ರುಚಿರುಚಿಯಾದ ಅಡುಗೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರಲ್ಲ, ಇದು ಅವರು ಗಳಿಸಿದ ಅನುಭವದಿಂದಲ್ಲವೇ? ಅನುಭವಗಳೇ ಜೀವನವೆಂಬ ಪರೀಕ್ಷೆಯನ್ನು ಪಾಸು ಮಾಡಲು ನೆರವಾಗುವ ಗುರುಗಳು. ಅನುಭವದ ಗಂಟು, ಕಟ್ಟಿಕೊಂಡರೆ ಅದರ ನಂಟು ಜೀವನದಿ ಭಾರೀ ಲಾಭವುಂಟು! ಒಟ್ಟಿನಲ್ಲಿ, Education is neither a UG course nor PG course, it is a life time course ಎಂಬ ಮಾತಿನಂತೆ ಈ ಜಗತ್ತೇ ಒಂದು ದೊಡ್ಡ ಪಾಠಶಾಲೆ, ಜೀವನವೇ ಕಲಿಯುವ ಅವಧಿ ಹಾಗೂ ಅನುಭವವೇ ದೊಡ್ಡ ಗುರು! ನಿನ್ನೆಯ ಅನುಭವಗಳನ್ನು ಬಳಸಿಕೊಂಡು, ನಾಳೆಯ ಭವಿಷ್ಯವನ್ನು ರೂಪಿಸಿಕೊಳ್ಳೋಣ.
ಅಂತಿಮ ಅನುಭವ!
ಅತಿಯಾದ ಯುದ್ಧೋತ್ಸುಕತೆಯಾಗಲೀ, ಮಿತಿಮೀರಿದ ಒಡವೆ, ಖರ್ಚು ವೆಚ್ಚಗಳಾಗಲೀ, ಅನುಕರಣೆಗೆ ಯೋಗ್ಯವಲ್ಲ ಎಂದು ಫ್ರಾನ್ಸಿನ ಚಕ್ರವರ್ತಿ 14ನೇ ಲೂಯಿ ತಾನು ಮರಣ ಶಯ್ಯೆಯಲ್ಲಿದ್ದಾಗ ತನ್ನ ಉತ್ತರಾಧಿಕಾರಿಗೆ ಹೇಳಿದ್ದು ತನ್ನ ಅನುಭವದಿಂದ. ಕ್ರೂರವಾದ ಸೈನಿಕ ಶಕ್ತಿಯು, ಶಾಶ್ವತವಾದುದನ್ನು ಎಂದಿಗೂ ಸಾಧಿಸಲಾರದು ಎಂಬ ಅನುಭವ ರಣಧೀರ ಅಲೆಕ್ಸಾಂಡರ್ಗೆ ಬಂದಿದ್ದು, ಆತ ಬ್ರಿಟಿಷರ ಬಂಧಿಯಾಗಿ, ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದಾಗ. ‘ನನ್ನ ಹೆಣವನ್ನು ಹೂತು ಬಿಡುವಾಗ, ಕೈಗಳು ಹೊರಗೆ ಚಾಚುವಂತಿರಲಿ. ಅರ್ಧ ಜಗತ್ತನ್ನೇ ಗೆದ್ದ ಚಕ್ರವರ್ತಿ ಈ ಜಗತ್ತನ್ನು ಬಿಟ್ಟು ಹೋಗುವಾಗ ಬರಿದಾದ ಕೈಗಳಿಂದ ಹೊರಟುಹೋದ ಎಂಬ ಸಂದೇಶ ರವಾನೆಯಾಗಲಿ’ ಎಂದು ಅಲೆಕ್ಸಾಂಡರ್ ಸಾಯೋದಕ್ಕೆ ಮುನ್ನ ತನ್ನ ಸೇನಾದಂಡಾಧಿಕಾರಿಗಳಿಗೆ ನೀಡಿದ ಆಜ್ಞೆ ಆತ ಜೀವನದಲ್ಲಿ ತಾನು ಪಡೆದ ಅಂತಿಮ ಅನುಭವದ ಪ್ರತೀಕವಾಗಿದ್ದು.
ಡಾ.ಕೆ.ಪಿ. ಪುತ್ತೂರಾಯ