ಲೈಫ್‌ಸ್ಟೈಲ್

ಪ್ರೆಗ್ನನ್ಸಿಯಲ್ಲಿ ಕಂಡುಬರುವ ಸಾಮಾನ್ಯ ತೊಂದರೆಗಳೇನು? ಅವುಗಳಿಗೆ ಇರುವ ಪರಿಹಾರಗಳೇನು?

shastrimath

ಬೆಂಗಳೂರು: ಗರ್ಭಧಾರಣೆ ಮಾಡಿದ ನಂತರ ಕೆಲವು ಸಾಮಾನ್ಯ ತೊಂದರೆಗಳು ಗರ್ಭಿಣಿಯಲ್ಲಿ ಕಾಣಿಸಿಕೊಳ್ಳುವುದು ಎಲ್ಲರಿಗೂ ಗೊತ್ತೇ ಇದೆ. ಅವು ಯಾವ ರೀತಿಯ ತೊಂದರೆಗಳು ಮತ್ತು ಅವು ಕಾಣಿಸಿಕೊಂಡಾಗ ಧೃತಿಗೆಡದೇ ಯಾವ ರೀತಿ ಅವುಗಳನ್ನು ಪರಿಹರಿಸಿಕೊಳ್ಳಬೇಕು ಎಂಬುದರ ಕುರಿತು ಶಿವಮೊಗ್ಗದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ದ್ರಾಕ್ಷಾಯಿಣಿ ಸಿ.ಎಲ್. ಅವರು ಇಲ್ಲಿ ವಿವರಿಸಿದ್ದಾರೆ.

‘‘ಗರ್ಭಧಾರಣೆ ನಂತರ 3-4 ತಿಂಗಳು ವಾಮಿಟಿಂಗ್ (ವಾಂತಿ) ಸರ್ವೇಸಾಮಾನ್ಯ. ಅದಕ್ಕೆ ಭಯಪಡುವ ಅವಶ್ಯಕತೆಯೇ ಇಲ್ಲ. ನಾಲ್ಕು ತಿಂಗಳ ಬಳಿಕ ಅದು ತನ್ನಿಂತಾನೇ ಕಡಿಮೆಯಾಗುತ್ತ ಹೋಗುತ್ತದೆ. ಇದು ಕೆಲವರಿಗೆ ಜಾಸ್ತಿ ಇದ್ದರೆ ಇನ್ನು ಕೆಲವರಿಗೆ ಕಡಿಮೆ ಇರುತ್ತದೆ. ಯಾರ‌್ಯಾರಿಗೆ ಜಾಸ್ತಿ ಇರುತ್ತದೆ ಎಂಬುದು ಕೂಡ ಗಮನಿಸಬೇಕಾಗುತ್ತದೆ. ಮೊದಲ ಬಾರಿಗೆ ಗರ್ಭ ಧರಿಸಿದವರಿಗೆ, ವಾಮಿಟಿಂಗ್ ಸೆನ್ಸೇಷನ್ ಜಾಸ್ತಿ ಇರುವುದರ ಫ್ಯಾಮಿಲಿ ಹಿಸ್ಟರಿ ಇರುವವರಿಗೆ, ಅವಳಿ-ತ್ರಿವಳಿ ಮಕ್ಕಳು ಇದ್ದರೆ ಅಂಥವರಿಗೆ ವಾಂತಿಯಾಗುವುದು ಹೆಚ್ಚು. ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲದಿದ್ದರೂ, ಅಸಾಧಾರಣ ರೀತಿಯಲ್ಲಿ ವಾಂತಿಯಾಗುತ್ತಿದ್ದರೆ, ಮೂತ್ರ ಸ್ವಲ್ಪ ಡಾರ್ಕ್ ಕಲರ್ ಹೋಗುತ್ತಿದ್ದರೆ, ಮೂತ್ರದಲ್ಲಿ ರಕ್ತ ಹೋಗುತ್ತಿದೆ ಎಂಬ ಸಂಶಯ ಬಂದರೆ ಆಗ ವೈದ್ಯರನ್ನು ಕಾಣಬೇಕಾಗುತ್ತದೆ.’’

‘‘ವಾಮಿಟಿಂಗ್ ಕಡಿಮೆ ಮಾಡುವುದಕ್ಕೂ ಕೆಲವು ಸುಲಭ ಉಪಾಯಗಳಿವೆ. ಏನನ್ನು ತಿಂದರೆ ನಿಮಗೆ ಸುಲಭವಾಗಿ ಜೀರ್ಣವಾಗುತ್ತದೆಯೋ ಅಂತಹ ಆಹಾರವನ್ನೇ ಸೇವಿಸಿ. ಅದು ಕೂಡ ಸ್ವಲ್ಪಸ್ವಲ್ಪ ಪ್ರಮಾಣದಲ್ಲಿ, ಕೆಲ ಸಮಯ ಬಿಟ್ಟುಬಿಟ್ಟು ತೆಗೆದುಕೊಳ್ಳಬೇಕು. ಒಂದೇ ಸಲಕ್ಕೆ ಹೆಚ್ಚು ಸೇವಿಸಬಾರದು. ಬೆಳಗ್ಗೆ ನೇರವಾಗಿ ಉಪಾಹಾರ ಸೇವಿಸುವುದಕ್ಕಿಂತ, ಬೆಡ್‌ನಲ್ಲಿದ್ದಾಗಲೇ ಡ್ರೈಟೋಸ್ಟ್ ರೀತಿಯ ಅಲ್ಪಾಹಾರ ಸೇವಿಸುವುದರಿಂದ ವಾಮಿಟಿಂಗ್ ಸೆನ್ಸೇಷನ್ ಕಡಿಮೆಯಾಗುತ್ತದೆ. ಶುಂಠಿಯ ಪಾನೀಯಗಳನ್ನು ಕುಡಿಯುವುದು ಕೂಡ ಪ್ರಯೋಜನಕಾರಿ. ಕೆಲವೊಮ್ಮೆ ಒತ್ತಡ ಜಾಸ್ತಿ ಮಾಡಿಕೊಂಡಾಗಲೂ ವಾಮಿಟಿಂಗ್ ಸೆನ್ಸೇಷನ್ ಹೆಚ್ಚಾಗುತ್ತದೆ. ಸ್ಟ್ರೆಸ್ ಲೆವೆಲ್ ಕಡಿಮೆ ಮಾಡಿಕೊಳುವುದು ಅನಿವಾರ್ಯ.’’

‘‘ವಾಂತಿಯ ಜತೆಗೆ ಸುಸ್ತು ಕೂಡ ಗರ್ಭಾವಸ್ಥೆಯಲ್ಲಿ ಸಾಮಾನ್ಯ. ಈ ಸುಸ್ತು ಹಾರ್ಮೋನ್ ಬದಲಾವಣೆಯಿಂದ ಬರುತ್ತದೆ. ಅದಕ್ಕೆ ಅತ್ಯುತ್ತಮ ಚಿಕಿತ್ಸೆಯೆಂದರೆ ವಿಶ್ರಾಂತಿ. ಯೂರಿನರಿ ಇನ್‌ಫೆಕ್ಷನ್ ಜಾಸ್ತಿ ಇರುವಾಗಲೂ ವಾಂತಿಯ ಅನುಭವವಾಗುತ್ತದೆ. ಹಾಗಾಗಿ ಆ ಇನ್‌ಫೆಕ್ಷನ್‌ಗೆ ಚಿಕಿತ್ಸೆ ತೆಗೆದುಕೊಳ್ಳಬೇಕು. ಇದಲ್ಲದೇ ಕೆಲವರಿಗೆ ಬೆನ್ನುನೋವು, ಪೆಲ್ವಿಕ್ ಗರ್ಡಲ್ (ಪ್ಯೂಬಿಕ್ ಬೋನ್) ನೋವು ಬರುತ್ತದೆ. ಪೆಲ್ವಿಕ್ ಜಾಯಿಂಟ್ಸ್ ಮೂವ್‌ಮೆಂಟ್ಸ್ ಅಸಮತೋಲನ ಆಗುವುದರಿಂದ ಹೀಗಾಗುತ್ತದೆ. ಅದು ತುಂಬಾ ತೊಂದರೆ ಕೊಡುತ್ತಿದ್ದರೆ ಮಾತ್ರ ವೈದ್ಯರನ್ನು ಸಂಪರ್ಕಿಸಿ, ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಮಗ್ಗುಲು ಬದಲಿಸುವಾಗ, ಮಲಗಿ ಏಳುವಾಗ, ಹಾಸಿಗೆ ಮೇಲೆ ಹತ್ತುವಾಗ, ವಾಹನದಿಂದ ಇಳಿಯುವಾಗ, ಕಾಲುಗಳನ್ನು ಪ್ರತ್ಯೇಕ ಮಾಡುವಾಗ ಈ ನೋವು ಕಾಣಿಸಿಕೊಳ್ಳುತ್ತದೆ. ಯಾವ ಪೊಸಿಷನ್‌ನಲ್ಲಿ ನೋವು ಕಾಣಿಸಿಕೊಳ್ಳುತ್ತದೆಯೋ ಆ ಪೊಸಿಷನ್‌ನಲ್ಲಿ ಮಲಗುವುದು, ಏಳುವುದು ಮುಂತಾದ್ದನ್ನು ತಪ್ಪಿಸಬೇಕು. ಅದಕ್ಕೂ ಮೀರಿ ನೋವಿದ್ದರೆ ಫಿಸಿಯೋಥೆರಪಿಸ್ಟ್ ಸಂಪರ್ಕಿಸಿ, ಕೆಲವು ನಿರ್ದಿಷ್ಟ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ.’’

‘‘ಮತ್ತೊಂದು ತುಂಬ ಸಾಮಾನ್ಯವಾದ ತೊಂದರೆಯೆಂದರೆ ಎದೆಉರಿ. ಅಜೀರ್ಣ. ಇದು ಗರ್ಭಾವಸ್ಥೆ ಇರುವಷ್ಟು ದಿನವೂ ಇರುತ್ತದೆ. 20 ವಾರಗಳಾದ ಮೇಲೆ ಜಾಸ್ತಿಯಾಗುತ್ತದೆ. ಏಸೋಫೇಗಸ್ ಮತ್ತು ಹೊಟ್ಟೆಯ ಮಧ್ಯೆ ಇರುವ ಅಂತರದಲ್ಲಿನ ವಾಲ್ವ್ ಸರಿಯಾಗಿ ಮುಚ್ಚದೇ ಇರುವುದರಿಂದ ರೀಫ್ಲಕ್ಸ್ ಜಾಸ್ತಿಯಾಗುತ್ತದೆ. ಪರಿಣಾಮವಾಗಿ ಎದೆಉರಿ ಉಂಟಾಗುತ್ತದೆ. ಇದೆಲ್ಲಕ್ಕೂ ಮೂಲ ಕಾರಣವೇ ಹಾರ್ಮೋನ್ ಅಸಮತೋಲನ. ಊಟ ಮಾಡಿದ ತಕ್ಷಣ ಮಲಗುವುದು, ಸ್ಪೈಸಿ ಫುಡ್ ಜಾಸ್ತಿ ತೆಗೆದುಕೊಳ್ಳುವುದು, ಫ್ಯಾಟ್ ಫುಡ್ ಜಾಸ್ತಿ ಸೇವಿಸುವುದು ಈ ರೀತಿಯ ಸಮಸ್ಯೆಗೆ ಕಾರಣ. ಇದನ್ನು ಕಡಿಮೆ ಮಾಡುವುದು ಹೇಗೆ? ಊಟ ಮಾಡಿದ ತಕ್ಷಣ ಮಲಗಬೇಡಿ. ಊಟ ಮತ್ತು ನಿದ್ದೆಗೆ ಕನಿಷ್ಠ 2 ತಾಸು ಅಂತರ ಇರಲಿ. ತುಂಬಾ ಸೀದಾ ಮಲಗಿದರೂ ಸಮಸ್ಯೆ ಆಗುತ್ತದೆ. ಎಡಗಡೆ ತಿರುಗಿ ಮಲಗಿದರೆ ಒಳ್ಳೆಯದು. ಅದಲ್ಲದೇ ಬೆನ್ನಿಗೆ ಏನಾದರೂ ಸಪೋರ್ಟ್ ಕೊಟ್ಟು ಮಲಗುವುದರಿಂದ ಹೊಟ್ಟೆಯಲ್ಲಿನ ಆ್ಯಸಿಡ್ ರೀಫ್ಲಕ್ಸ್‌ನ ತಪ್ಪಿಸಬಹುದು. ಆದಾಗ್ಯೂ ಉರಿ ಇದ್ದರೆ ತಣ್ಣೀರು, ಜ್ಯೂಸ್ ಕುಡಿಯುವ ಮೂಲಕ ಅದನ್ನು ಸರಿಪಡಿಸಿಕೊಳ್ಳಬಹುದು. ಅದಕ್ಕೂ ಮೀರಿ ಜಾಸ್ತಿ ಸಮಸ್ಯೆ ಇದ್ದರೆ, ವೈದ್ಯರನ್ನು ಸಂಪರ್ಕಿಸಬೇಕು. ಅದಕ್ಕೆ ಕೆಲವು ಸಿರಪ್‌ಗಳನ್ನು ವೈದ್ಯರು ಸೂಚಿಸುತ್ತಾರೆ.’’