ಲೈಫ್‌ಸ್ಟೈಲ್

ಅಲರ್ಜಿ ನಿಯಂತ್ರಣಕ್ಕೆ ಪ್ರಾಣಾಯಾಮ

kumarvrl

ನನಗೆ ಸೈನಸೈಟಿಸ್ ಅಲರ್ಜಿ, ಶೀತ ಇದೆ. ಯೋಗದ ಪರಿಹಾರ ತಿಳಿಸಿ.

| ದಿನೇಶ್ ಬೆಂಗಳೂರು (25 ವರ್ಷ)

ಸೈನಸ್​ಗಳು ಹಣೆಯ ಕೆನ್ನೆಯ ಮೂಳೆಗಳು ಮೂಗು ಮತ್ತು ಕಣ್ಣುಗಳ ಹಿಂದೆ ಇರುವ ಸಣ್ಣ ಟೊಳ್ಳಾದ ಕುಳಿಗಳಾಗಿವೆ. ಸೈನಸ್​ಗಳು ಲೋಳೆಗಳೊಂದಿಗೆ ಆವರಿಸಲ್ಪಟ್ಟಿವೆ. ಕೆಲವೊಮ್ಮೆ ಮೂಗಿನ ಕುಳಿಯಲ್ಲಿ ಸಿಲುಕಿರುವ ಬ್ಯಾಕ್ಟೀರಿಯಾ ಅಥವಾ ಅಲರ್ಜನ್ ಲೋಳೆಯ ಶೇಖರಣೆಗೆ ಕಾರಣವಾಗಬಹುದು. ಇದು ಸೈನಸ್ ತೆರೆಯುವಿಕೆಯನ್ನು ತಡೆಯುತ್ತದೆ. ಸೈನಸೈಟಿಸ್ ತಡೆಗಟ್ಟಲು ಯೋಗದ ಸರಳ ಕ್ರಿಯೆ ಪ್ರಾಣಾಯಾಮ ಮತ್ತು ಆಸನಗಳು ಸಹಕಾರಿ. ಯೋಗಾಸನಗಳಿಂದ ದೇಹದ ಒಳಗಿನ ಅಂಗಕ್ಕೆ ವ್ಯಾಯಾಮ ದೊರಕಿ, ರಕ್ತ ಸಂಚಲನೆ ಸುಗಮವಾಗಿ ರಕ್ತ ಶುದ್ಧಿಯಾಗುತ್ತದೆ. ಪ್ರಾಣಾಯಾಮದಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗುತ್ತದೆ. ಮೂಗಿನ ವಾಯುಸಂಚಾರದ ಮಾರ್ಗ ಬಲಗೊಂಡು ಶ್ವಾಸನಾಳಗಳು ಆರೋಗ್ಯಕರವಾಗುತ್ತವೆ. ಅದರಲ್ಲಿ ಮುಖ್ಯವಾಗಿ ಉಸಿರಾಟದ ವ್ಯಾಯಾಮ (ಶಶಾಂಕಾಸನ) ಅಲರ್ಜಿ ಶೀತವನ್ನು ನಿಯಂತ್ರಿಸುತ್ತದೆ.

ಆಸನಗಳು: ಅರ್ಧಚಕ್ರಾಸನ, ಪಾದಹಸ್ತಾಸನ, ವೀರಭದ್ರಾಸನ, ತ್ರಿಕೋನಾಸನ, ಪ್ರಸಾರಿತ ಪಾದೋತ್ಥಾನಾಸನ, ಪದ್ಮಾಸನದಲ್ಲಿ ಪರ್ವತಾಸನ, ಪಶ್ಚಿಮೋತ್ಥಾನಾಸನ, ಶಶಂಕಾಸನ, ಸರ್ವಾಂಗಾಸನ, ಹಲಾಸನ, ಸರ್ಪಾಸನ, ಅಧೋಮುಖ ಶ್ವಾನಾಸನ, ಶವಾಸನ ಇತ್ಯಾದಿ.

ಪ್ರಾಣಾಯಾಮ, ಕ್ರಿಯೆ, ಮುದ್ರೆಗಳು: ನಾಡಿಶುದ್ಧಿ, ಉಜ್ಜಾಯಿ, ಸೂರ್ಯಾನುಲೋಮ, ಸುಖಪ್ರಾಣಾಯಾಮ ಮಾಡಿ. ಶುದ್ಧೀಕರಣಕ್ಕಾಗಿ ಕಪಾಲಭಾತಿ, ಜಲನೇತಿ ಸೂತ್ರನೇತಿ ಮಾಡಿ. ಪ್ರಾಣಮುದ್ರೆ, ಅದಿತಿ ಮುದ್ರೆ, ಭ್ರಮರ ಮುದ್ರೆ ಮಾಡಿ.

ವೈದ್ಯರ ತಪಾಸಣೆ, ಉಪಚಾರದೊಂದಿಗೆ, ಸರಿಯಾದ ಸಮಯದಲ್ಲಿ ತಿನ್ನುವುದು, ಮಲಗುವುದು ಅಭ್ಯಾಸ ಮಾಡಿ. ಜಂಕ್ ಫುಡ್​ನಿಂದ ದೂರವಿರಿ. ಸಮತೋಲಿತ ಆಹಾರ ಸೇವಿಸಿ. ಬೆಚ್ಚಗಿನ ನೀರು ಕುಡಿಯಿರಿ. ರಾತ್ರಿ ಬೇಗನೆ ಊಟ ಮಾಡಿ. ನಿಮ್ಮ ಆಹಾರವನ್ನು ನಿಧಾನವಾಗಿ ಜಗಿದು ತಿನ್ನಿ. ಮುಂಜಾನೆ ಸೂರ್ಯನ ಬಿಸಿಲಿನಲ್ಲಿ ಇಪ್ಪತ್ತು ನಿಮಿಷ ನಿಲ್ಲಿ.

ಉಷ್ಟ್ರಾಸನ ಮಾಡುವ ಬಗೆ ಹೇಗೆ? ಇದರ ಪ್ರಯೋಜನಗಳು ಏನೇನು?

| ಲಕ್ಷ್ಮಣ ರಾಯಚೂರು (40 ವರ್ಷ)

ಉಷ್ಟ್ರಾಸನ ಎಂಬುದು ಒಂಟೆಯ ಭಂಗಿ. ದೇಹವನ್ನು ಸದೃಢವಾಗುವಂತೆ ಮಾಡುತ್ತದೆ. ಸೊಂಟದ ಬಾಗುವಿಕೆಯನ್ನು ವಿಸ್ತರಿಸುತ್ತದೆ.

ವಿಧಾನ: ಜಮಖಾನದ ಮೇಲೆ ಮೊಣಕಾಲೂರಿ ನಿಂತುಕೊಳ್ಳಿ. ಪಾದಗಳ ಮೇಲ್ಭಾಗ ಜಮಖಾನಕ್ಕೆ ತಾಗುವಂತೆ ಹಿಂದೆ ಚಾಚಿ. ಬೆನ್ನು ತಲೆಯನ್ನು ಹಿಂದಕ್ಕೆ ಬಗ್ಗಿಸಿ ಕೈಗಳೆರಡನ್ನೂ ಪಾದಗಳ ಮೇಲೆ ಉಸಿರನ್ನು ಬಿಡುತ್ತ ಇಡಿ. ತೊಡೆ ಮತ್ತು ಸೊಂಟದ ಭಾಗವನ್ನು ಬಿಗಿ ಮಾಡಿ ಮುಂದಕ್ಕೆ ತನ್ನಿ. ತಲೆ ಮತ್ತು ಕುತ್ತಿಗೆಯನ್ನು ಅದಷ್ಟೂ ಹಿಂದಕ್ಕೆ ತನ್ನಿ. ಈಗ ಸಹಜ ಉಸಿರಾಟದಲ್ಲಿ 1/2 ನಿಮಿಷ ಇರಿ. ಕೈಗಳೆರಡನ್ನೂ ಸಡಿಲಿಸಿ ಮೊದಲಿನ ಸ್ಥಿತಿಗೆ ಬನ್ನಿ. ನಂತರ ತುಸು ವಿಶ್ರಾಂತಿ ಪಡೆಯಿರಿ.

ಪ್ರಯೋಜನ: ಭುಜಗಳು, ಬೆನ್ನಿನ ಸ್ನಾಯು, ತೊಡೆ ಮತ್ತು ತೋಳುಗಳನ್ನು ಬಲಪಡಿಸುತ್ತದೆ. ತೊಡೆ ಮತ್ತು ಹೊಟ್ಟೆಯ ಬೊಜ್ಜು ನಿಯಂತ್ರಣ. ಅಸ್ತಮಾ ನಿಯಂತ್ರಣ. ಥೈರಾಯ್್ಡ ಗ್ರಂಥಿಯ ಆರೋಗ್ಯವರ್ಧನೆ, ಮುಖದ ಕಾಂತಿ ಹೆಚ್ಚಳ. ಕಣ್ಣುಗಳು ಹೊಳಪಾಗುತ್ತವೆ. ಚಕ್ರಗಳ ಸುಸ್ಥಿತಿಗೆ ಸಹಕಾರಿ. ನರಮಂಡಲ ಚೇತನಗೊಳ್ಳುತ್ತದೆ. ಆದರೆ ಹರ್ನಿಯಾ, ಉದರಭಾಗದಲ್ಲಿ ಗಾಯಗಳಿಂದ ತೊಂದರೆ, ಸಂಧಿವಾತ, ತಲೆಸುತ್ತುವಿಕೆ ಇರುವವರು, ಗರ್ಭಿಣಿಯರು ಉಷ್ಟ್ರಾಸನ, ಅರ್ಧ ಉಷ್ಟ್ರಾಸನ ಮಾಡಬಾರದು.