ಲೈಫ್‌ಸ್ಟೈಲ್

ಬೆನ್ನುನೋವಿಗೆ ರಾಮಬಾಣ ಫಿಸಿಯೋಥೆರಪಿ: ಪಾರ್ಶ್ವವಾಯು, ಅಂಗವೈಕಲ್ಯ ಸಮಸ್ಯೆಗೂ ಇದೆ ಪರಿಹಾರ

| ಹರೀಶ್ ಬೇಲೂರು ಬೆಂಗಳೂರು

ಆರೋಗ್ಯ ರಕ್ಷಣೆಯಲ್ಲಿ ಭೌತಚಿಕಿತ್ಸಕರ (ಫಿಸಿಯೋಥೆರೆಪಿಸ್ಟ್) ಕೊಡುಗೆ ಕುರಿತು ಜಾಗೃತಿ ಮೂಡಿಸಲು, ದೈಹಿಕವಾಗಿ ಸಕ್ರಿಯವಾಗಿರಲು ಹಾಗೂ ಉತ್ತಮ ಆರೋಗ್ಯ ರೂಪಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 8 ರಂದು (ಭಾನುವಾರ) ದೇಶಾದ್ಯಂತ ‘ಅಂತಾರಾಷ್ಟ್ರೀಯ ಫಿಸಿಯೋಥೆರಪಿ ದಿನ’ ಆಚರಿಸಲಾಯಿತು. ಪ್ರತಿ ವರ್ಷ ವಿಭಿನ್ನ ಥೀಮ್ ಅನುಸರಿಸಲಾಗುತ್ತದೆ. ಈ ಬಾರಿ ‘ಕೆಳ ಬೆನ್ನು ನೋವು, ಅದನ್ನು ತಡೆಗಟ್ಟಲು ಮತ್ತು ನಿವಾರಿಸಲು ಭೌತಚಿಕಿತ್ಸಕರು ಏನು ಮಾಡಬಹುದು’ ಎಂಬುದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಯಿತು. ಫಿಸಿಯೋಥೆರಪಿ ದಿನವನ್ನು ಮೊದಲ ಬಾರಿಗೆ 1996ರ ಸೆ.8ರಂದು ಆಚರಿಸಲಾಯಿತು.

ಅಪಘಾತ, ಪೆಟ್ಟು, ಮೂಳೆ ಮುರಿತ, ಪಾರ್ಶ್ವವಾಯು, ಅಂಗವೈಕಲ್ಯ ಮೊದಲಾದ ಸಮಸ್ಯೆಗಳಿಂದ ಬಳಲಿದ ವ್ಯಕ್ತಿಗಳಿಗೆ ಫಿಸಿಯೋಥೆರಪಿ ಚಿಕಿತ್ಸಾ ಕ್ರಮವು ಬಹು ಪ್ರಯೋಜನಕಾರಿ ಮತ್ತು ಪರಿಣಾಮಕಾರಿ. ವಿವಿಧ ವಿಧಾನಗಳನ್ನು ಬಳಸಿ ವ್ಯಕ್ತಿ ಮೊದಲಿನಂತಾಗಲೂ ಈ ಚಿಕಿತ್ಸೆ ಸಹಕರಿಸುತ್ತದೆ. ವಯಸ್ಸಾಗುತ್ತಿದಂತೆ ನರ ದೌರ್ಬಲ್ಯ ಮತ್ತು ನರಸಂಬಂಧಿ ಕಾಯಿಲೆಗಳು ಕಾಡುವುದು ಸಹಜ. ಇಂತಹ ಸಂದರ್ಭ ಗಳಲ್ಲಿ ಸ್ನಾಯುಗಳ ಮೊದಲಿನ ಕಾರ್ಯಕ್ಷಮತೆ ಪಡೆಯುವಲ್ಲಿ ಫಿಸಿಯೋಥೆರಪಿ ಪಾತ್ರ ಮಹತ್ವದು.

ಫಿಸಿಯೋಥೆರಪಿ ಲಾಭಗಳು

* ನರರೋಗದ ಸಮಸ್ಯೆಗೆ ಪರಿಹಾರ.

* ಹೃದಯ, ಶ್ವಾಸಕೋಶದ ತೊಂದರೆಗಳನ್ನು ಪೂರ್ಣವಾಗಿ ಗುಣಪಡಿಸುತ್ತದೆ.

* ವ್ಯಾಯಾಮ ದೇಹವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.

* ದೀರ್ಘಕಾಲದ ಕೀಲು ನೋವು, ಗಾಯದಿಂದ ಉಂಟಾಗುವ ತೊಂದರೆ ಸೇರಿ ಹಲವು ಸಮಸ್ಯೆಗಳಿಗೆ ಫಿಸಿಯೋಥೆರಪಿ ರಾಮಬಾಣವಾಗಿದೆ.

* ಶಸ್ತ್ರಚಿಕಿತ್ಸೆ ನಂತರ ವೇಗವಾಗಿ ಚೇತರಿಸಿಕೊಳ್ಳಲು ಫಿಸಿಯೋಥೆರಪಿ ಸಹಾಯ ಮಾಡುತ್ತದೆ. ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಗಾಯದಿಂದ ಬೇಗ ಚೇತರಿಸಿಕೊಳ್ಳುವುದು ಹೇಗೆ ಎಂದು ಹೇಳಿ ಕೊಡಲಾಗುತ್ತದೆ. ಶಸ್ತ್ರಕ್ರಿಯೆಯ ನಂತರ ರೋಗಿಗೆ ಫಿಸಿ ಯೋಥೆರಪಿ ತಜ್ಞರು ವ್ಯಾಯಾಮದ ವಿಧಾನಗಳನ್ನು ಹೇಳಿಕೊಡುತ್ತಾರೆ.

ವೈಶಿಷ್ಟ್ಯವೇನು?

* ಮೃದು ಅಂಗಾಂಶ ಸಜ್ಜುಗೊಳಿಸುವಿಕೆಯನ್ನು ‘ಚಿಕಿತ್ಸಕಾ ಮಸಾಜ್’ ಎನ್ನಲಾಗುತ್ತದೆ. ಇದು ರೋಗಿಯ ಸ್ನಾಯುಗಳಿಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ದೇಹದ ಕೆಲವೆಡೆ ಇರುವ ಊತವನ್ನು ಕಡಿಮೆ ಮಾಡುತ್ತದೆ. ್ಝ ಜೆರಿಯಾಟ್ರಿಕ್ ಫಿಸಿಯೋಥೆರಪಿ ಚಲನಶೀಲತೆಯನ್ನು ಕಾಪಾಡಿಕೊಳ್ಳಲು, ಭಂಗಿಗಳ ಮೇಲೆ ಕೆಲಸ ಮಾಡಲು, ದೀರ್ಘಕಾಲದ ಜಂಟಿ ನೋವು ನಿರ್ವಹಿಸಲು, ಶಾರೀರಿಕ ಅಸ್ವಸ್ಥತೆಗಳನ್ನು ನಿರ್ವಹಿಸಲು, ಸಹಿಷ್ಣುತೆ ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ್ಝ ಮಂಡಿ ಮರುಜೋಡಣೆ, ಚಪ್ಪೆ ಮೂಳೆ ಮರುಜೋಡಣೆ ನಂತರವೂ ಆ ಭಾಗದ ಸ್ನಾಯುಗಳಿಗೆ ಮೊದಲಿನ ಚಲನೆ ತರಲು ಫಿಸಿಯೋಥೆರಪಿ ಬಹಳ ಮುಖ್ಯ.

* ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿಗೆ ಫಿಸಿಯೋಥೆರಪಿ ಚಿಕಿತ್ಸೆಯೂ ಸ್ವಲ್ಪಮಟ್ಟಿನ ಸ್ನಾಯುಗಳ ಬಲ ಹೆಚ್ಚಿಸಲು ಸಹಕಾರಿ.

* ಕೆಲ ನರರೋಗಗಳಲ್ಲಿ ತೀವ್ರತರ ಸ್ನಾಯುಗಳ ಬಿಗಿತ ಕಡಿಮೆ ಮಾಡಲು ವಿದ್ಯುತ್ ಪ್ರಚೋದನೆ ಕೊಡುವಂಥ ಚಿಕಿತ್ಸೆಗಳ ಕ್ರಮಗಳಲ್ಲೂ ಫಿಸಿಯೋಥೆರಪಿಯಲ್ಲಿವೆ.

ವರ್ಷದಿಂದ ವರ್ಷಕ್ಕೆ ಫಿಸಿಯೋಥೆರಪಿ ಕೋರ್ಸ್​ಗೆ ಬೇಡಿಕೆ ಹೆಚ್ಚುತ್ತಿದೆ. ಮಲಗುವ ಭಂಗಿಯ ಆಧಾರದಲ್ಲಿ ನಮಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಹುಟ್ಟಿದ ಮಗುವಿಂದ ಹಿಡಿದು ವಯಸ್ಸಾದವರಿಗೆ ಒಂದಿಲ್ಲೊಂದು ಸಮಸ್ಯೆ ಇರುತ್ತದೆ. ಈ ಎಲ್ಲ ಸಮಸ್ಯೆಗಳನ್ನೂ ಫಿಸಿಯೋಥೆರಪಿ ಚಿಕಿತ್ಸಾ ಕ್ರಮಗಳಿಂದ ಗುಣಪಡಿಸಬಹುದು. ಬೆಂಗಳೂರಿನಲ್ಲಿ 15-20 ಕಾಲೇಜುಗಳಿದ್ದು, ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಪಿ.ಎಚ್​ಡಿ ಕೋರ್ಸ್​ಗಳಿವೆ. ನಾಲ್ಕೂವರೆ ವರ್ಷದ ಪದವಿ ಕೋರ್ಸ್ ಮತ್ತು 2 ವರ್ಷದ ಸ್ನಾತಕೋತ್ತರ ಕೋರ್ಸ್​ಗಳಿವೆ.

| ಡಾ. ಕಿರಣ್ ಎಸ್.ಮೂರ್ತಿ ರಾಯರ ಕಿರಣ ಆಸ್ಪತ್ರೆಯ ನಿರ್ದೇಶಕರು