ಲೈಫ್‌ಸ್ಟೈಲ್

ಮೈಗ್ರೇನ್​ಗೆ ಶಾಶ್ವತ ಪರಿಹಾರವೇನು?

ರಮೇಶ್​ ಕುಮಾರ್​​ ಬಿ ಎಡಮೋಳೆ

ಬಿಸಿಲಿಗೆ ಹೋದಾಗ, ಟೆನ್ಷನ್ ಆದಾಗ, ಊಟ ತಡವಾದಾಗ, ನಿದ್ದೆಗೆಟ್ಟಾಗ, ಜನಜಂಗುಳಿಯಲ್ಲಿದ್ದಾಗ, ಹೊರಗೆ ಅಡ್ಡಾಡಿದಾಗ, ಹಠಾತ್ತಾಗಿ ದೊಡ್ಡ ಬೆಳಕು, ದೊಡ್ಡ ಶಬ್ದ ಅಥವಾ ಸುಗಂಧದ್ರವ್ಯಗಳಿಂದ ಜ್ಞಾನೇಂದ್ರಿಯಗಳು ಪ್ರಚೋದಿಸಲ್ಪಟ್ಟಾಗ ಅರ್ಧ ತಲೆನೋವು ಅಥವಾ ಮೈಗ್ರೇನ್ ಬಹಳಷ್ಟು ಜನರನ್ನು ಕಾಡುತ್ತದೆ. ಕೆಲವೊಮ್ಮೆ ಎಡಭಾಗದಲ್ಲಿ ನೋವಿದ್ದರೆ ಕೆಲವೊಮ್ಮೆ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕೆಲವರಿಗೆ ಯಾವುದಾದರೂ ಒಂದು ಭಾಗದಲ್ಲಿ ಮಾತ್ರ ನೋವು ಕಾಣಿಸಿಕೊಂಡರೆ, ಇನ್ನೂ ಕೆಲವರಿಗೆ ಇಡೀ ತಲೆಯಲ್ಲಿಯೂ ನೋವುಂಟಾಗಬಹುದು.

ಮೈಗ್ರೇನ್ ಅಂದರೆ ತಲೆನೋವಷ್ಟೇ ಅಲ್ಲ, ವಾಂತಿ ಬಂದಂತೆನಿಸುವುದು, ವಾಂತಿ ಆಗುವುದು, ಗೊಂದಲವಾದಂತೆ ಅನಿಸುವುದು, ಕಣ್ಣುನೋವು ಮುಂತಾದ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಅತಿಯಾದ ಮಾನಸಿಕ ಕಿರಿಕಿರಿ ಉಂಟುಮಾಡುತ್ತದೆ. ಮೈಗ್ರೇನ್ ಸಮಸ್ಯೆಯನ್ನು ಅನುಭವಿಸುತ್ತಿರುವವರು ಈ ಮೇಲೆ ಹೇಳಿದ - ಬಿಸಿಲಿಗೆ ಹೋಗುವುದು, ತಡವಾಗಿ ಊಟ ಮಾಡುವುದು ಮುಂತಾದ ಅಂಶಗಳಷ್ಟೇ ಮೈಗ್ರೇನ್​ಗೆ ಕಾರಣ ಎಂಬ ತಪ್ಪು ಕಲ್ಪನೆಯಲ್ಲಿರುತ್ತಾರೆ. ಆದರೆ ಇವು ಆ ಕ್ಷಣಕ್ಕೆ ಮೈಗ್ರೇನ್ ಪ್ರಚೋದಿಸುವ ಅಂಶಗಳು. ಈ ಅಂಶಗಳ ಜತೆಗೆ, ಮಲಮೂತ್ರಾದಿ ನೈಸರ್ಗಿಕ ಕರೆಗಳನ್ನು ತಡೆಹಿಡಿಯುವುದು; ಇಷ್ಟ ಬಂದ ಸಮಯದಲ್ಲಿ ಊಟ-ನಿದ್ದೆ ಮಾಡುವುದು; ಸದಾ ಸಿಟ್ಟು, ಅಸೂಯೆ, ಒತ್ತಡ, ಚಿಂತೆ, ಉದ್ವೇಗದಲ್ಲಿರುವುದು; ಕಲುಷಿತ ಮತ್ತು ಕೆಮಿಕಲ್ ಭರಿತ ಆಹಾರ ಸೇವಿಸುವುದು; ಅತಿಯಾಗಿ ಉಪ್ಪು, ಹುಳಿ, ಖಾರವಿರುವ ಮತ್ತು ಕರಿದ ಆಹಾರ ಸೇವಿಸುವುದು; ತುಂಬ ಸಮಯ ಮೊಬೈಲ್, ಕಂಪ್ಯೂಟರ್, ಟಿವಿ ನೋಡುತ್ತ ಕಳೆಯುವುದು - ಇವೆಲ್ಲ ಮೈಗ್ರೇನ್ ಸಮಸ್ಯೆ ಪ್ರಾರಂಭವಾಗಲು ಕಾರಣಗಳಾಗುತ್ತವೆ. ಈ ಕಾರಣಗಳಿದ್ದರೆ ಅದನ್ನು ಬಿಡುವುದು ಮೊದಲ ಚಿಕಿತ್ಸೆಯಾಗಿರುತ್ತದೆ.

ಬಹುತೇಕ ಜನರು ಮೈಗ್ರೇನ್ ಪ್ರಾರಂಭದಲ್ಲಿ ಉದಾಸೀನ ಮಾಡುತ್ತಾರೆ. ನಿಧಾನವಾಗಿ ನೋವಿನ ತೀವ್ರತೆ ಹೆಚ್ಚಾಗುವುದರ ಜತೆಗೆ ತಿಂಗಳಿಗೊಮ್ಮೆ ಕಾಡುತ್ತಿದ್ದುದು ವಾರಕ್ಕೊಮ್ಮೆ ಬರತೊಡಗುತ್ತದೆ. ಮೊದಮೊದಲು ವಾಂತಿ ಮಾಡಿದಾಗ, ನಿದ್ದೆ ಮಾಡಿದಾಗ, ಟೀ ಕುಡಿದಾಗ ಆರಾಮವಾಯಿತೆನ್ನಿಸುವುದು ಕೆಲವು ತಿಂಗಳು ಅಥವಾ ವರ್ಷಗಳು ಕಳೆದ ನಂತರ ಇದ್ಯಾವುದಕ್ಕೂ ಬಗ್ಗದಾಗುತ್ತದೆ. ಹಾಗಾಗಿ ಅನಿವಾರ್ಯವಾಗಿ ನೋವಿನ ಮಾತ್ರೆಗಳನ್ನು ನುಂಗಲು ಪ್ರಾರಂಭಿಸಿ ನಂತರ ಅದರಿಂದಾಗುವ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನೋವಿನ ಮಾತ್ರೆಗಳು ತಾತ್ಕಾಲಿಕವಷ್ಟೇ. ನಮ್ಮ ಜೀವನಶೈಲಿಯಲ್ಲಿಯೇ ಬದಲಾವಣೆ ಮಾಡಿಕೊಂಡು ಕೆಲವು ಚಿಕಿತ್ಸೆಗಳನ್ನು ತೆಗೆದುಕೊಂಡರೆ ಮೈಗ್ರೇನ್ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸಿಕೊಳ್ಳಬಹುದು.

ವಮನಧೌತಿ, ಜಲನೇತಿ, ಸೂತ್ರನೇತಿಯಂತಹ ಪ್ರಕೃತಿ ಚಿಕಿತ್ಸೆಗಳು ಮೈಗ್ರೇನ್ ಸಮಸ್ಯೆಯನ್ನು ನಿವಾರಿಸಲು ಸಹಕಾರಿ. ಆಕ್ಯುಪಂಕ್ಚರ್, ಆಕ್ಯುಪ್ರೆಶರ್​ಗಳೂ ಈ ಸಮಸ್ಯೆಯನ್ನು ಸರಿಪಡಿಸುತ್ತವೆ. ಅನುಲೋಮ ವಿಲೋಮ, ಶೀತಲೀ, ಶೀತ್ಕಾರಿಯಂತಹ ಪ್ರಾಣಾಯಾಮಗಳನ್ನು ಮಾಡುವವರಿಗೆ ಈ ಸಮಸ್ಯೆ ಬರುವುದಿಲ್ಲ; ಬಂದರೆ ಬಹುಬೇಗ ಗುಣವಾಗುತ್ತವೆ. ವಮನ, ವಿರೇಚನ, ನಸ್ಯ, ಶಿರೋಧಾರಾದಂತಹ ಪಂಚಕರ್ಮ ಚಿಕಿತ್ಸೆಗಳು ತೀವ್ರಾವಸ್ಥೆಯಲ್ಲಿರುವ ಮೈಗ್ರೇನ್ ತೊಂದರೆಯನ್ನೂ ಗುಣಮಾಡುತ್ತವೆ. ಜ್ಯೇಷ್ಠಮಧು, ನೆಲ್ಲಿಕಾಯಿ, ಶುಂಠಿ, ಅಳಲೆಕಾಯಿ, ಸೊಗದೆಬೇರುಗಳ ಕಷಾಯ ಮಾಡಿ ಕುಡಿಯುತ್ತಿದ್ದರೆ ಮೈಗ್ರೇನ್ ಹತೋಟಿಗೆ ಬರುತ್ತದೆ. ಇವೆಲ್ಲ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತವೆ.

ಸುಮಾರು 100 ಮಿ.ಲೀ. ಗರಿಕೆ ಹುಲ್ಲಿನ ಜ್ಯೂಸ್​ಗೆ ನಾಲ್ಕು ಚಿಟಿಕೆ ಅಣಲೆಕಾಯಿಯ ಪುಡಿಯನ್ನು ಹಾಕಿ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಕುಡಿಯಬೇಕು. ಈ ರೀತಿ 45 ದಿನ ಕುಡಿದರೆ ಮೈಗ್ರೇನ್ ಹತೋಟಿಗೆ ಬರುತ್ತದೆ. ಇದನ್ನು ಸೇವಿಸುವಾಗ ನೆಗಡಿಯಾಗದಂತೆ ನೋಡಿಕೊಳ್ಳಲು ಫ್ರಿಜ್​ನಲ್ಲಿಟ್ಟ ವಸ್ತುಗಳ ಸೇವನೆ ಮಾಡಬಾರದು. ಭೇದಿಯಾದರೆ ಅಣಲೆಕಾಯಿಯ ಪ್ರಮಾಣವನ್ನು ಕಡಿಮೆ ಮಾಡಬೇಕು. ಮಧ್ಯಾಹ್ನ ಊಟದ ನಂತರ ಈ ಜ್ಯೂಸ್ ಕುಡಿಯುವುದು ಬೇಡ. ಜಾಜಿಮಲ್ಲಿಗೆಯ ಎಲೆಯ ರಸವನ್ನು ಬೆಳಗ್ಗೆ ಮತ್ತು ಸಂಜೆ ಮೂಗಿನ ಎರಡೂ ಹೊಳ್ಳೆಗಳಲ್ಲಿ ಎರಡೆರಡು ಹನಿ ಹಾಕಿದರೆ ತುಂಬ ತಲೆನೋವಿರುವಾಗ ಅನುಕೂಲವಾಗುತ್ತದೆ.