Peanut: ಚಳಿಗಾಲದಲ್ಲಿ ಕಡಲೆಕಾಯಿಯ ಹೆಸರು ಹೇಳಿದ್ರೆ ಸಾಕು ಹಲವರ ಬಾಯಲ್ಲಿ ನೀರೂರುತ್ತದೆ. ಯಾಕಂದ್ರೆ, ಇದರಲ್ಲಿರುವ ತರಹೇವಾರಿ ಕಡಲೆಬೀಜಗಳು, ನಾಲಿಗೆಗೆ ಒಳ್ಳೆಯ ಮಜಾ ನೀಡುತ್ತದೆ. ಒಮ್ಮೆ ತಿನ್ನಲು ಶುರು ಮಾಡಿದ್ರೆ ತಿಂತಲೇ ಇರಬೇಕು ಎನಿಸುವ ಶೇಂಗಾ, ಕೇವಲ ನಮ್ಮ ನಾಲಿಗೆ ರುಚಿಗೆ ಮಾತ್ರವಲ್ಲ, ದೇಹದ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.
ಇಂದಿಗೂ ನಮ್ಮಲ್ಲಿ ಕಡಲೆಕಾಯಿಯನ್ನು 'ಬಡವರ ಬಾದಾಮಿ' ಎಂದು ಕರೆಯುತ್ತಾರೆ. ಏಕೆಂದರೆ, ಬಾದಾಮಿ ಮತ್ತು ಗೋಡಂಬಿಯಂತಹ ದುಬಾರಿ ಡ್ರೈಫ್ರೂಟ್ಗಳಲ್ಲಿ ಕಂಡುಬರುವ ಎಲ್ಲಾ ಪೋಷಕಾಂಶಗಳನ್ನು ಇದೊಂದೇ ಒಳಗೊಂಡಿದೆ. ಪ್ರತಿದಿನ ಒಂದು ಹಿಡಿ ಅಥವಾ ಒಂದಿಷ್ಟು ಕಡಲೆಕಾಯಿ ತಿನ್ನೋದ್ರಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆ.
ಹೃದಯ, ಮಿದುಳು, ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡುವಲ್ಲಿ ಶೇಂಗಾ ಉತ್ತಮ. ಪ್ರತಿದಿನ ನಿಮ್ಮ ಆಹಾರದಲ್ಲಿ ಕಡಲೆಬೀಜಗಳನ್ನು ಸೇರಿಸುವುದರಿಂದ ನೀವು ದೀರ್ಘಕಾಲದವರೆಗೆ ಫಿಟ್ ಆಗಿ ಹಾಗೂ ಆ್ಯಕ್ಟಿವ್ ಆಗಿರಬಹುದು. ಪ್ರತಿದಿನ ಒಂದು ಹಿಡಿ ಕಡಲೆಕಾಯಿ ಅಥವಾ 25ರಿಂದ 30 ಗ್ರಾಂ ತಿನ್ನುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಂತ, ಹೆಚ್ಚು ತಿನ್ನಬೇಡಿ. ಏನೇ ಸೇವಿಸಿ, ಅದು ಮಿತವಾಗಿರಲಿ. ಮಿತಿ ಮೀರಿದರೆ ಎಲ್ಲವೂ ಅಪಾಯವೇ.
ಶೇಂಗಾ ಪ್ರೊಟೀನ್ ವಿಚಾರದಲ್ಲಿ ಅಧಿಕ. 100 ಗ್ರಾಂ ಕಡಲೆಬೀಜದಲ್ಲಿ ಸುಮಾರು 25ರಿಂದ 26 ಗ್ರಾಂ ಪ್ರೋಟೀನ್ ಇರುತ್ತದೆ. ಇದು ಮೊಟ್ಟೆ ಮತ್ತು ಗೋಡಂಬಿಗಿಂತ ಅಧಿಕ ಎನ್ನಲಾಗಿದೆ. 100 ಗ್ರಾಂ ಮೊಟ್ಟೆಯಲ್ಲಿ ಸುಮಾರು 13 ಗ್ರಾಂ ಪ್ರೋಟೀನ್ ಇರುತ್ತದೆ. 100 ಗ್ರಾಂ ಗೋಡಂಬಿಯಲ್ಲಿ 18 ಗ್ರಾಂ ಪ್ರೋಟೀನ್ ಇರುತ್ತದೆ. ಅದಕ್ಕಾಗಿಯೇ ಕಡಲೆಬೀಜಗಳನ್ನು ಸಸ್ಯಾಹಾರಿಗಳಿಗೆ ಪ್ರೋಟೀನ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಅವು ಸ್ನಾಯುಗಳನ್ನು ನಿರ್ಮಿಸಲು, ಅಂಗಾಂಶಗಳನ್ನು ಸರಿಪಡಿಸಲು ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಕಡಲೆಬೀಜದಲ್ಲಿ ಏಕ-ಅಪರ್ಯಾಪ್ತ ಮತ್ತು ಬಹು-ಅಪರ್ಯಾಪ್ತ ಕೊಬ್ಬಿನಾಮ್ಲಗಳಿವೆ. ಇವು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡುತ್ತದೆ. ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸುತ್ತವೆ. ಇದು ಹೃದಯದ ಅಡಚಣೆಗಳು ಮತ್ತು ಪಾರ್ಶ್ವವಾಯುಗಳ ಅಪಾಯವನ್ನು ನಿಯಂತ್ರಣಕ್ಕೆ ತರುತ್ತದೆ. ರೆಸ್ವೆರಾಟ್ರೊಲ್ ಎಂಬ ಉತ್ಕರ್ಷಣ ನಿರೋಧಕವೂ ಇದೆ. ಇದು ಹೃದಯವನ್ನು ಬಲಪಡಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ಇದರಲ್ಲಿ ನಿಯಾಸಿನ್ ಮತ್ತು ವಿಟಮಿನ್ ಬಿ 3 ಅಂಶವು, ಮಿದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇದು ನರಮಂಡಲವನ್ನು ಶಾಂತಗೊಳಿಸುತ್ತದೆ. ಆಲ್ಝೈಮರ್ನಂತಹ ಕಾಯಿಲೆಗಳನ್ನು ಸಹ ನಿಯಂತ್ರಿಸುತ್ತದೆ. ಕಡಲೆಬೀಜದಲ್ಲಿ ವಿಟಮಿನ್ ಇ ಮತ್ತು ಸತುವು ಚರ್ಮವನ್ನು ಕಾಂತಿಯುಕ್ತವಾಗಿ ಮಾಡುತ್ತದೆ. ಕೂದಲ ಆರೋಗ್ಯವನ್ನು ಕಾಪಾಡುತ್ತೆ ಹಾಗೂ ಬಲಪಡಿಸುತ್ತದೆ. ಇನ್ನು ಕಡಲೆಕಾಯಿ ಎಣ್ಣೆ ಕೂದಲು ಮತ್ತು ಚರ್ಮಕ್ಕೆ ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ,(ಏಜೆನ್ಸೀಸ್).