ಲೈಫ್‌ಸ್ಟೈಲ್

ಕೋವಿಡ್-19 ಗುದ್ದು ತಾಳ್ಮೆಯೇ ಮದ್ದು

ಕೋವಿಡ್-19 ಈ ಶಬ್ದ ಬಹುಶಃ ಎಲ್ಲರೂ ಕೇಳಿದ್ದೀರಿ. ಸದ್ಯಕ್ಕಂತೂ ಈ ಶಬ್ದ ಸರ್ವತ್ರ ವ್ಯಾಪಿಸಿದೆ. ಬರೀ ಶಬ್ದವಷ್ಟೇ ಅಲ್ಲ. ಅದರ ಕರಾಳ ಛಾಯೆಯೂ ವ್ಯಾಪಿಸಿದೆ. ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಮನುಷ್ಯನನ್ನು ಇಂದು ಈ ಜೈವಿಕಾಸ್ತ್ರ ಮನೆ ಹಿಡಿದು ಕೂಡುವಂತೆ ಮಾಡಿದೆ. ಈ ಮಾರಣಾಂತಿಕ ವೈರಸ್ ಮನಸ್ಸಿನ ಮೇಲೆ ಬೀರಿದ ಪ್ರಭಾವ ಅಗಾಧ. ದೈಹಿಕ ಗಾಯವನ್ನು ಹೇಗಾದರೂ ಗುಣಪಡಿಸಬಹುದು, ಆದರೆ ಅದೇ ಮನಸ್ಸಿನ ಮೇಲೆ ಉಂಟಾಗುವ ಗಾಯ ಅಷ್ಟು ಸುಲಭವಾಗಿ ವಾಸಿಯಾಗುವುದು ಕಷ್ಟ ಎಂಬ ಮಾತು ಸುಮ್ಮನೆ ಹೇಳಿದ್ದಲ್ಲ. ಮನೆಯಲ್ಲಿ ದಿಗ್ಬಂಧನ ವಿಧಿಸಿದ ಪರಿಣಾಮ ನಮ್ಮ ನಿಮ್ಮೆಲ್ಲರ ಮನಸ್ಸಿನ ವ್ಯಾಕುಲತೆ, ಚಂಚಲತೆ ಹೆಚ್ಚಾಗಿದೆ. ಎಲ್ಲರಿಗೂ ಚಡಪಡಿಕೆ, ಕನವರಿಕೆ, ಏನೋ ಕಳೆದುಕೊಂಡ ಅನುಭವ ಆಗುತ್ತಿದೆ. ಈ ಅನಿವಾರ್ಯತೆ ತಾತ್ಕಾಲಿಕ. ತಾಳ್ಮೆ ಅತ್ಯಗತ್ಯ. ತ್ಯಾಗದ ಹಿಂದೆ ಸುಖ ಇದ್ದೇ ಇದೆ. ಮನೋನಿಗ್ರಹ ಇಲ್ಲಿ ಬಲು ಮುಖ್ಯ.

‘ಆದದ್ದೆಲ್ಲ ಒಳ್ಳೆಯದಕ್ಕೆ, ಕಳೆದುಕೊಳ್ಳಲು ನಿನ್ನದೇನು ಇಲ್ಲಿ?’ ಎಂದು ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣಪರಮಾತ್ಮ ಹೇಳಿದಂತೆ ಈ ಕೋವಿಡ್-19 ಗೃಹ ದಿಗ್ಬಂಧನ ಹಲವು ಅನುಕೂಲಗಳನ್ನು ಮಾಡಿಕೊಟ್ಟಿದೆ. ಅವಿಭಕ್ತ ಕುಟುಂಬ ಎಂಬ ಪರಿಕಲ್ಪನೆ ನಮ್ಮ ಭಾರತೀಯ ಸಂಸ್ಕೃತಿಯ ಮೂಲ. ಅದೊಂದು ಕಾಲವಿತ್ತು, ಮನೆ ಮಂದಿ ಎಲ್ಲರೂ ಕೂಡಿ ಬಾಳು ನಡೆಸುತ್ತಿದ್ದರು. ಮನೆಯೂ ದೊಡ್ಡದಿತ್ತು. ಕೂಡುಕುಟುಂಬದ ಸಂತೋಷವೇ ಅನನ್ಯವಾಗಿತ್ತು. ಕಾಲಕ್ರಮೇಣ ಉದ್ಯೋಗ ಇರಬಹುದು ಅಥವಾ ಅನಿವಾರ್ಯತೆಯಿಂದಲೋ ಏನೋ ಕುಟುಂಬ ಸದಸ್ಯರು ದೂರವಾಗತೊಡಗಿದರು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಾತ್ರ ಸೇರುವ ರೂಢಿ ಬಂದಿತು. ಇದು ಮುಂದಿನ ಪೀಳಿಗೆ ಮೇಲೂ ಪರಿಣಾಮ ಬೀರಿತು. ಮಕ್ಕಳಿಗೆ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅತ್ತೆ ಎಂಬ ಸಂಬಂಧಗಳ ಅರಿವಿನ ಕೊರತೆ ಕಾಡಹತ್ತಿತು. ಯಾಂತ್ರಿಕ ಬದುಕು, ಓದು, ಟ್ಯೂಶನ್ ಇಷ್ಟಕ್ಕೆ ಅವರ ಬದುಕು ಸೀಮಿತವಾಯಿತು. ವೀಕೆಂಡ್​ಗೆ ಹೊರಊಟ, ಶಾಪಿಂಗ್ ಇಷ್ಟಕ್ಕೆ ಜೀವನಕ್ರಮ ಬಂದು ನಿಂತಿತು. ಆದರೆ ಬದಲಾದ ಸನ್ನಿವೇಶದಲ್ಲಿ ಇಂದು ಕೋವಿಡ್-19 ಕಾರಣ ವಿಧಿಸಲಾದ ಲಾಕ್​ಡೌನ್​ನಿಂದಾಗಿ ಮನೆ ಮಂದಿ ಎಲ್ಲರೂ ಒಂದೆಡೆ ಸೇರುವಂತಾಗಿದೆ. ಹರಟೆ, ಹಳೆ ಆಟಗಳು ಗರಿಗೆದರಿವೆ. ಪರಸ್ಪರ ಮಾತು-ಸಂಬಂಧ ವೃದ್ಧಿಸುತ್ತಿವೆ. ಪುಸ್ತಕ ಓದುವ ಸಂಸ್ಕೃತಿ ಮತ್ತೆ ಶುರುವಾಗಿದೆ. ಮನೆಗೆಲಸಗಳಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ಅದರಲ್ಲೇ ಸಂತಸ ಕಂಡ ಹಲವು ಉದಾಹರಣೆಗಳಿವೆ.

ಮನೋವೈದ್ಯಲೋಕದ ಪ್ರಕಾರ ಹೇಳುವುದಾದರೆ ಒಂಟಿತನ, ಆಲಸ್ಯತನ ಸೇರಿದಂತೆ ಹಲವು ಕಾರಣಗಳಿಂದಾಗಿ ಖಿನ್ನತೆ ಎದುರಿಸುತ್ತಿದ್ದ ಅನೇಕರು ಇಂದು ಮನೆ ಮಂದಿ ಜತೆ ಬೆರೆಯುವುದರಿಂದ ಖಿನ್ನತೆಯಿಂದ ಹೊರಬಂದಿದ್ದಾರೆ. ಹೊಸ ವ್ಯವಸ್ಥೆಯಡಿ ಜೀವನೋಲ್ಲಾಸ ಕಂಡುಕೊಂಡಿದ್ದಾರೆ. ಉತ್ಸಾಹದ ಜತೆ ಜತೆಗೆ ಸ್ಪೂರ್ತಿಯನ್ನೂ ಪಡೆದುಕೊಂಡಿದ್ದಾರೆ. ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗಗಳು ಮತ್ತೆ ದಾರಿದೀಪವಾಗುತ್ತಿವೆ. ಕುಟುಂಬ ಮೌಲ್ಯಗಳು ಬೆಲೆ ಪಡೆದುಕೊಳ್ಳುತ್ತಿವೆ.

ಇಲ್ಲಿ ಪಾಲಿಸಬೇಕಾದ ಇನ್ನೊಂದು ಪ್ರಮುಖ ವಿಚಾರ ಎಂದರೆ ಈ ಲಾಕ್​ಡೌನ್​ನ ಉದ್ದೇಶ. ಇದು ಸಮಷ್ಟಿಹಿತಕ್ಕಾಗಿ ಜಾರಿಗೆ ತಂದ ವ್ಯವಸ್ಥೆ. ಇದರಲ್ಲಿ ಯಾರೊಬ್ಬರ ವೈಯಕ್ತಿಕ ಹಿತಾಸಕ್ತಿ ಇಲ್ಲ. ದೇಶಕ್ಕೆ ಇಂತಹದೊಂದು ವಿಪತ್ತು ಎದುರಾದಾಗ ಎಲ್ಲರೂ ಅದರ ಗಂಭೀರತೆ ಅರಿತು ನಡೆದಲ್ಲಿ ಉದ್ದೇಶ ಸಾರ್ಥಕತೆಯನ್ನು ಕಾಣುತ್ತದೆ.

ಕ್ಷಣಿಕ ತೊಳಲಾಟ, ಕನವರಿಕೆಗಳನ್ನು ನಿಯಂತ್ರಿಸಿಕೊಂಡು ಮನೆಯಲ್ಲಿ ಇರುವ ಮೂಲಕ ಕೋವಿಡ್-19 ಮಾರಿಯನ್ನು ಹಿಮ್ಮೆಟ್ಟಿಸಲು ಕೈ ಜೋಡಿಸಬೇಕು. ಮತ್ತೆ ನಮ್ಮ ರಕ್ಷಣೆಗಾಗಿ ತಾವು ಮನೆಯಿಂದ ಹೊರಗಿದ್ದು ಶ್ರಮಿಸುತ್ತಿರುವ ಪೊಲೀಸರು, ಅಧಿಕಾರಿಗಳು, ವೈದ್ಯರು, ಪೌರಕಾರ್ವಿುಕರು ಸೇರಿದಂತೆ ಹಲವರನ್ನು ಗೌರವಿಸಬೇಕು. ಇದು ಇಂದಿನ ತುರ್ತು ಅಗತ್ಯವೂ ಹೌದು.