ಚಾಣಕ್ಯ ನೀತಿ  
ಲೈಫ್‌ಸ್ಟೈಲ್

ಯಾವುದೇ ಕಾರಣಕ್ಕೂ ಈ ಗುಣಗಳಿರುವ ವ್ಯಕ್ತಿಗಳಿಗೆ ಸಹಾಯ ಮಾಡ್ಲೇಬೇಡಿ! ಚಾಣಕ್ಯ ನುಡಿದ ರಹಸ್ಯವಿದು

Chanakya Niti: ಅನ್ಯರಿಗೆ ಅಥವಾ ಕಷ್ಟದ ಸಮಯದಲ್ಲಿ ಪರದಾಡುತ್ತಿರುವವರಿಗೆ ಸಹಾಯ ಮಾಡುವುದು ನಿಜಕ್ಕೂ ಸಜ್ಜನರ ಗುಣ. ಇದು ಒಳ್ಳೆಯತನಕ್ಕೆ ಹಿಡಿದ ಕನ್ನಡಿ. ನಮ್ಮ ಸಹಾಯದಿಂದ ಯಾರದ್ದೋ ಜೀವನ ಬದಲಾಗುತ್ತೆ ಮತ್ತು ಸಂಬಂಧಗಳು ಗಟ್ಟಿಯಾಗುತ್ತೆ ಎಂದರೆ ಖಂಡಿತ ಅಂತವರಿಗೆ ಸಹಾಯ ಹಸ್ತ ನೀಡುವುದರಲ್ಲಿ ತಪ್ಪಿಲ್ಲ. ಆದರೆ, ಕೆಲವೇ ಕೆಲವು ವ್ಯಕ್ತಿಗಳಿಗೆ ಏನೇ, ಎಷ್ಟೇ ಒಳಿತು ಮಾಡಿದ್ರೂ ಅವರ ಕೀಳು ಬುದ್ಧಿ ಯಾವತ್ತಿಗೂ ಬದಲಾಗಲ್ಲ.
ಇದೇ ವಿಷಯವನ್ನು ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಹೆಚ್ಚು ಯೋಚಿಸದೆ ಎಲ್ಲರಿಗೂ ಸಹಾಯ ಮಾಡುವುದು ಸರಿಯಲ್ಲ ಎಂದು ಹೇಳುತ್ತಾರೆ. ವ್ಯಕ್ತಿಯ ಸ್ವರೂಪವನ್ನು ತಿಳಿದುಕೊಳ್ಳುವುದು ಮತ್ತು ಅಗತ್ಯವಿರುವವರಿಗೆ ಮಾತ್ರ ಸಹಾಯಹಸ್ತ ಚಾಚುವುದು ಒಳ್ಳೆಯ ನಿರ್ಧಾರ ಎಂದಿದ್ದಾರೆ. ಕಾರಣ, ಕೆಲವರು ನಮ್ಮ ಒಳ್ಳೆಯತನವನ್ನು ಅರ್ಥಮಾಡಿಕೊಳ್ಳದೆ, ಅದನ್ನು ಸಹಾಯ ತೀರಿದ ಮೇಲೆ ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಇದಕ್ಕೆ ಅದೆಷ್ಟೋ ಜ್ವಲಂತ ಸಾಕ್ಷಿಗಳು ನಮ್ಮ ನಿಮ್ಮ ಮುಂದಿವೆ.

ಸಹಾಯಕ್ಕೆ ಯೋಚನೆ ಏಕೆ?

ಸಹಾಯ ಮಾಡುವುದು ಒಳ್ಳೆಯದಾದರೂ, ಇನ್ನೊಬ್ಬ ವ್ಯಕ್ತಿಯು ನಾವು ನೀಡಿದ ಸಹಾಯಕ್ಕೆ ಹೇಗೆ ಋಣಿ ಆಗುತ್ತಾರೆ? ಅದನ್ನು ಹೇಗೆ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಒಳ್ಳೆಯ ಉದ್ದೇಶದಿಂದ ಮಾಡಿದ ಸಹಾಯವು ಕೆಲವೊಮ್ಮೆ ನಮಗೆ ಮುಳ್ಳಾಗುವುದು ತೀರ ಸಾಮಾನ್ಯ. ಯಾರನ್ನೋ ಬಚಾವ್​ ಮಾಡಲು ಹೋಗಿ, ಅವರ ಕಣ್ಣೀರು ಒರೆಸಲು ಹೋಗಿ ನಾವೇ ಕಣ್ಣೀರಿಡುವಂತ ಪರಿಸ್ಥಿತಿಗೆ ತಲುಪಬಾರದು. ಅದಕ್ಕಾಗಿಯೇ ಚಾಣಕ್ಯನು ದಯೆಯ ಜೊತೆಗೆ ಬುದ್ಧಿವಂತಿಕೆಯೂ ಇರಬೇಕು ಎಂದು ಹೇಳಿರುವುದು.

ಒಳ್ಳೆಯ ಮಾತು ಕೇಳದವರಿಗೆ ಪದೇ ಪದೇ ಸಹಾಯ ಬೇಡ

ಕೆಲವರು, ಎಷ್ಟೇ ಒಳ್ಳೆಯ ಸಲಹೆಯನ್ನು ನೀಡಿದರೂ, ಕೇಳುವುದಿಲ್ಲ. ಅವರಿಗೆ ಅಸಲಿಯತ್ತು, ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿಯೇ ಇರುವುದಿಲ್ಲ. ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿದ್ದರೂ ಸಹ ಪ್ರಯತ್ನಿಸುವುದಿಲ್ಲ. ಅಂತಹ ಜನರಿಗೆ ಪದೇ ಪದೇ ಸಹಾಯ ಮಾಡುವುದರಿಂದ ಸಮಯ ಮತ್ತು ಶ್ರಮ ವ್ಯರ್ಥ.

ಸ್ವಾರ್ಥದಿಂದ ವರ್ತಿಸುವವರೊಂದಿಗೆ ಜಾಗೃತೆ

ಇತರರನ್ನು ತಮ್ಮ ಸ್ವಂತ ಲಾಭಕ್ಕಾಗಿ ಮಾತ್ರ ಬಳಸಿಕೊಳ್ಳುವ ಮಂದಿಯಿಂದ ಸಹಾಯವಲ್ಲ, ಮಾತುಕತೆಯಿಂದಲೂ ದೂರವಿರಿ. ಅವರಿಗೆ ನಂಬಿಕೆ ಮತ್ತು ಕೃತಜ್ಞತೆಯಂತಹ ಮೌಲ್ಯಗಳಿಲ್ಲ. ಇಂತಹ ಜನರಿಗೆ ನಾವು ಎಷ್ಟೇ ಸಹಾಯ ಮಾಡಿದರೂ ಅವರು ನಮಗೆ ನೋವುಂಟು ಮಾಡುತ್ತಾರೆ. ಹೀಗಾಗಿ, ಈ ಜನರೊಂದಿಗೆ ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲಿ ಇರುವುದು ಉತ್ತಮ.

ಪದೇ ಪದೇ ತಪು ಮಾಡಿದವರಿಗೆ ಪ್ರೋತ್ಸಾಹ ಬೇಡ

ತಾವು ತಪ್ಪು ಮಾಡುತ್ತಿದ್ದೇವೆಂದು ತಿಳಿದಿದ್ದರೂ ಬದಲಾಗಲು ಪ್ರಯತ್ನಿಸದ ಜನರು ನಮ್ಮ ಸುತ್ತಲೇ ಇದ್ದಾರೆ. ಅವರ ಪಕ್ಕದಲ್ಲಿ ನಿಲ್ಲುವುದು ಸಹ ಅವರ ಕೆಟ್ಟ ಅಭ್ಯಾಸಗಳಿಗೆ ಪ್ರೋತ್ಸಾಹ ಕೊಟ್ಟಂತೆಯೇ ಸರಿ. ಅಕಸ್ಮಾತ್​ ಅವರು ನಿಜವಾಗಿಯೂ ಬದಲಾಗಲು ಆಸಕ್ತಿ ಹೊಂದಿದ್ದರೆ ಮಾತ್ರ ಅವರಿಗೆ ಮಾರ್ಗದರ್ಶನ, ಸಲಹೆ, ಸಹಾಯ ನೀಡುವುದು ಸರಿ.

ಕೃತಘ್ನ ಜನರನ್ನು ದೂರವಿಡಿ

ನಿಮ್ಮಿಂದ ಸಹಾಯ ಪಡೆದ ನಂತರವೂ ಕೃತಜ್ಞತೆಯನ್ನು ತೋರಿಸದ ಜನರಿರುತ್ತಾರೆ. ಉಪಕಾರವನ್ನು ಅವರು ಬಹುಬೇಗನೆ ಮರೆತುಬಿಡುತ್ತಾರೆ. ಕೆಲವೊಮ್ಮೆ ಅಂತಹ ಜನರಿಗೆ ಸಹಾಯ ಮಾಡುವುದು ನಿರಾಶೆ ಮತ್ತು ಮಾನಸಿಕ ಯಾತನೆಗೆ ಕಾರಣವಾಗಬಹುದು. ಪರಸ್ಪರ ಗೌರವವನ್ನು ಆಧರಿಸಿದ ಸಂಬಂಧಗಳಿಗೆ ಹೆಚ್ಚು ಮೌಲ್ಯ ನೀಡುವುದು ಒಳಿತು.

ದಯೆಯ ಜೊತೆಗೆ ಬುದ್ಧಿವಂತಿಕೆಯೂ ಬೇಕು.

ಸಹಾಯ ಮಾಡುವುದು ಮಾನವ ಒಂದು ಗುಣ. ಆದರೆ, ಆ ಸಹಾಯವನ್ನು ಸೂಕ್ತ ಸಮಯದಲ್ಲಿ ಸರಿಯಾದ ವ್ಯಕ್ತಿಗೆ ನೀಡಿದರೆ ಮಾತ್ರ ಒಳ್ಳೆಯ ಫಲಿತಾಂಶ ಲಭಿಸುತ್ತದೆ. ಅದಕ್ಕಾಗಿಯೇ ಚಾಣಕ್ಯನು ದಯೆಯ ಜೊತೆಗೆ ಬುದ್ಧಿವಂತಿಕೆಯೂ ಇರಬೇಕು ಎಂದು ಒತ್ತಿ ಹೇಳಿರುವುದು. ಒಳ್ಳೆಯ ಉದ್ದೇಶಗಳನ್ನು ಹೊಂದಿರುವವರ ಬೆನ್ನಿಗೆ ನಿಲ್ಲುವುದರಲ್ಲಿ ಅರ್ಥವಿದೆ,(ಏಜೆನ್ಸೀಸ್).