ಕಹಿಬೇವಿನಂತೆ ಕಹಿರುಚಿಯನ್ನು ಹೊಂದಿರುವ ನೆಲಬೇವು ಸಣ್ಣ ಸಸ್ಯವಾಗಿದೆ. ಇದು ‘ಕಹಿಯ ರಾಜ’ ಎಂದೇ ಪ್ರಸಿದ್ಧವಾಗಿದೆ. ಬೀಜ ಅಥವಾ ಕಾಂಡದ ತುಂಡುಗಳಿಂದ ನೆಲಬೇವಿನ ಗಿಡವನ್ನು ಸುಲಭವಾಗಿ ಬೆಳೆಸಬಹುದು. ಇದನ್ನು ಮನೆಯ ಸುತ್ತಮುತ್ತ ಬೆಳೆಸಬಹುದಾದರೂ ತಂಪು ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ನೆಲಬೇವನ್ನು ಜಿರತ್ ಕಡ್ಡಿಗಿಡ ಎಂದೂ ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲೇಟ್. ಸಣ್ಣ ಸಣ್ಣ ಹೂಗಳನ್ನು ಹೊಂದಿರುವ ನೆಲಬೇವಿನ ಹೂಗಳ ಮಧ್ಯ ಭಾಗದಲ್ಲಿ ನೇರಳೆ ಬಣ್ಣವಿರುತ್ತದೆ. ನೆಲಬೇವಿನ ಎಲೆ, ಕಾಂಡ, ಹೂ, ಬೇರು ಎಲ್ಲ ಭಾಗಗಳೂ ಔಷಧೀಯ ಗುಣಗಳನ್ನು ಹೊಂದಿವೆ.
ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೆಲಬೇವಿನ ಎಲೆಗಳನ್ನು ತಿನ್ನಬಹುದು. ನೇರವಾಗಿ ತಿನ್ನಲು ಕಹಿಯೆನಿಸಿದರೆ ಕಷಾಯ ಮಾಡಿಕೊಂಡು ಕುಡಿಯಬಹುದು. ಹೀಗೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಪ್ರತಿದಿನ ರಾತ್ರಿ ಮಲಗುವ ಮೊದಲು ನೆಲಬೇವಿನ ಕಷಾಯ ಕುಡಿಯುವುದರಿಂದ ಜಂತುಹುಳುಗಳು ಕಡಿಮೆಯಾಗುತ್ತವೆ. ತಾಜಾ ನೆಲಬೇವಿನ ಗಿಡವನ್ನು ನಯವಾಗಿ ರುಬ್ಬಿ ಪೇಸ್ಟ್ ಮಾಡಿ, ಚರ್ಮದ ತುರಿಕೆ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಕಜ್ಜಿ, ತುರಿಕೆಗಳು ಕಡಿಮೆಯಾಗುತ್ತವೆ. ನೆಲಬೇವಿನ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಕ್ರಮೇಣ ಬಾಣಂತಿಯರಲ್ಲಿ ಹಾಲು ಉತ್ಪತ್ತಿಯಾಗುತ್ತದೆ.
ನೆಲಬೇವಿನ ಕಾಂಡವನ್ನು ಮಜ್ಜಿಗೆಯಲ್ಲಿ ನೆನಸಿಟ್ಟು, ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಬಾಯಿಹುಣ್ಣಿನ ಸಮಸ್ಯೆ ಕಂಡುಬಂದಲ್ಲಿ ಈ ಪುಡಿಯನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬಹುದು. ನೆಲಬೇವಿನ ಕಷಾಯ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆದು ಅಜೀರ್ಣದ ಸಮಸ್ಯೆ ಪರಿಹಾರವಾಗುತ್ತದೆ. ಸಣ್ಣ ಪುಟ್ಟ ಹಾವು ಕಡಿದಾಗ ನೆಲಬೇವಿನ ಕಷಾಯ ಕುಡಿಯುವುದರಿಂದ ಅದು ವಿಷನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ನೆಲಬೇವಿನ ಎಲೆಗಳನ್ನು ಚೆನ್ನಾಗಿ ಕುದಿಸಿದ ನೀರನ್ನು ತಣ್ಣಗೆ ಮಾಡಿಕೊಂಡು ಅದರಿಂದ ಗಾಯಗಳನ್ನು ತೊಳೆಯುವುದರಿಂದ ಗಾಯ ಬೇಗನೆ ಗುಣವಾಗುತ್ತದೆ. ನೆಲಬೇವಿನ ಕಷಾಯ ಸೇವನೆಯಿಂದ ಕಫ, ಶೀತ, ಗಂಟಲುನೋವನ್ನು ನಿವಾರಣೆಯಾಗುವುದರ ಜತೆಗೆ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಹೃದಯಸಂಬಂಧಿ ತೊಂದರೆಗಳಿಂದ ದೂರವಿರಲು, ಕ್ಯಾನ್ಸರ್ ಬರುವ ಸಂಭವವನ್ನು ಕಡಿಮೆ ಮಾಡಲು, ಅಲರ್ಜಿಗಳನ್ನು ಕಡಿಮೆ ಮಾಡಲು ನೆಲಬೇವು ಸಹಕಾರಿಯಾಗಿದೆ.