ಲೈಫ್‌ಸ್ಟೈಲ್

ಮನಿ ಮಾತು; ತೆರಿಗೆ ಉಳಿಸಲು ಯಾವ ಪದ್ಧತಿ ಅನುಕೂಲ?

  • ವೇತನದಾರರು ಹಳೆಯ ತೆರಿಗೆ ಪದ್ಧತಿ ಬೇಕಿದ್ದರೂ ಪಾಲಿಸಬಹುದು ಅಥವಾ ಹೊಸ ತೆರಿಗೆ ಪದ್ಧತಿಯ ಮೊರೆ ಹೋಗಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಆದರೆ ನನ್ನ ವಾರ್ಷಿಕ ಆದಾಯ ರೂ. 15 ಲಕ್ಷ ಇದ್ದು ಯಾವ ತೆರಿಗೆ ಪದ್ಧತಿ ಪಾಲಿಸಿದರೆ ಒಳಿತು. ದಯವಿಟ್ಟು ಈ ಬಗ್ಗೆ ವಿವರವಾದ ಮಾಹಿತಿ ಒದಗಿಸಿ.

| ಸತೀಶ್. ಬಿ ಮೈಸೂರು

ನೀವು ಉಳಿತಾಯ, ಹೂಡಿಕೆ ಮಾಡಿ ತೆರಿಗೆ ವಿನಾಯಿತಿಗಳನ್ನು ಪಡೆದುಕೊಳ್ಳುವಂತಹವರಾಗಿದ್ದರೆ ಹಳೆಯ ತೆರಿಗೆ ಪದ್ಧತಿಯೇ ಉತ್ತಮ ಎನ್ನಬಹುದು. ನೀವು ಯಾವುದೇ ಉಳಿತಾಯ, ಹೂಡಿಕೆ ಮಾಡಲು ಇಷ್ಟಪಡುವುದಿಲ್ಲ ಎಂದಾದಲ್ಲಿ ಹೊಸ ತೆರಿಗೆ ವ್ಯವಸ್ಥೆಯ ಪ್ರಕಾರ ನಡೆದುಕೊಳ್ಳುವುದು ಉತ್ತಮ. ಕೆಳಗಿನ ಪಟ್ಟಿಯಲ್ಲಿ ಯಾವ ಪದ್ಧತಿ ಅನುಸರಿಸಿದರೆ ಹೇಗೆ ಅನುಕೂಲವಾಗುತ್ತದೆ ಎಂಬುದರ ಸಂಪೂರ್ಣ ವಿವರ ಇದೆ. ದಯವಿಟ್ಟು ಗಮನಿಸಿ.

ಗಮನಿಸಿ:  ಹಳೆಯ ತೆರಿಗೆ ಪದ್ಧತಿಯಲ್ಲಿ ವಿನಾಯಿತಿಗೆ ಅವಕಾಶವಿದೆ. ವೇತನದಾರರು ಎಚ್ ಆರ್ ಎ, ಪಿಎಫ್, ಪಿಪಿಎಫ್, ಇನ್ಶೂರೆನ್ಸ್, ಆರೋಗ್ಯ ವಿಮೆ, ಗೃಹ ಸಾಲದ ಮೇಲಿನ ಅಸಲು ಮತ್ತು ಬಡ್ಡಿ, ಎನ್ ಪಿಎಸ್ ಹೂಡಿಕೆ, ಶಿಕ್ಷಣ ಸಾಲ ಸೇರಿ ಇನ್ನಿತರ ವಿನಾಯಿತಿಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ಆ ಅವಕಾಶಗಳನ್ನು ಗಣನೆಗೆ ತೆಗೆದುಕೊಂಡು ಪಟ್ಟಿಯಲ್ಲಿರುವಂತೆ ತೆರಿಗೆ ಲೆಕ್ಕಾಚಾರ ಮಾಡಲಾಗಿದೆ.

ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿಗಳಿಗೆ ಅವಕಾಶವಿಲ್ಲ. ಇಲ್ಲಿ ಏನೇ ಉಳಿತಾಯ ಮಾಡಿದರೂ ಹೆಚ್ಚುವರಿ ತೆರಿಗೆ ವಿನಾಯಿತಿ ಸಿಗುವುದಿಲ್ಲ.

ಒಟ್ಟಾರೆಯಾಗಿ ಉಳಿತಾಯ ಮತ್ತು ಹೂಡಿಕೆ ವಿನಾಯಿತಿಗಳನ್ನು ಪಡೆದುಕೊಳ್ಳುವವರಿಗೆ ಹಳೆಯ ಪದ್ಧತಿ ಸೂಕ್ತ, ವಿನಾಯಿತಿಗಳನ್ನು ಪಡೆಯಲು ನಮ್ಮಲ್ಲಿ ಹಣವಿಲ್ಲ, ಅಲ್ಪ ಸ್ವಲ್ಪ ತೆರಿಗೆಯನ್ನೇ ಕಟ್ಟುತ್ತೇವೆ ಎನ್ನುವವರು ಹೊಸ ಪದ್ಧತಿ ಪರಿಗಣಿಸಬಹುದು.

  • ನಾನು ಸರ್ಕಾರಿ ಶಾಲಾ ಶಿಕ್ಷಕನಾಗಿದ್ದು , 2016 ನವಂಬರ್ ನಲ್ಲಿ 20 ಲಕ್ಷ ಗೃಹಸಾಲ ಪಡೆದು ಮನೆ ನಿರ್ಮಾಣ ಮಾಡಿರುತ್ತೇನೆ. ಸಾಲ ಪಡೆದ ಸಂದರ್ಭದಲ್ಲಿ ನನ್ನ ವಾರ್ಷಿಕ ಆದಾಯ ರೂ. 5.5 ಲಕ್ಷ ಇತ್ತು. ಶಿಕ್ಷಕರ ಸಹಕಾರಿ ಸಂಘದಿಂದ ಸಾಲ ಪಡೆದಿರುವುದರಿಂದ ನನಗೆ ಈಗ ಪ್ರಧಾನ ಮಂತ್ರಿ ಆವಾಜ್ ಯೋಜನೆ ಅಡಿಯಲ್ಲಿ 2.67 ಲಕ್ಷ ಸಬ್ಸಿಡಿ ಸಿಗುವುದೇ ?

| ಎಸ್ ಎನ್ ವಸಿಷ್ಠ ವಿಟ್ಲ

ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್, ಹೌಸಿಂಗ್ ಫೈನಾನ್ಸ್ ಕಂಪನಿಗಳು, ರೀಜನಲ್ ರೂರಲ್ ಬ್ಯಾಂಕ್ ಗಳು, ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು, ಸಹಕಾರಿ ಬ್ಯಾಂಕ್ ಗಳು ಮತ್ತು ಬ್ಯಾಂಕೇತ್ತರ ಹಣಕಾಸು ಸಂಸ್ಥೆಗಳಿಂದ (ಎನ್ ಬಿಎಫ್ ಸಿ) ಪಡೆದಿರುವ ಗೃಹ ಸಾಲಗಳಿಗೆ ಪ್ರಧಾನಮಂತ್ರಿ ಆವಾಜ್ ಯೋಜನೆಯ ಸೌಲಭ್ಯ ದೊರೆಯುತ್ತದೆ.

ಶಿಕ್ಷಕರ ಸಹಕಾರಿ ಸಂಘದಿಂದ ಸಾಲ ಪಡೆದಿರುವುದರಿಂದ ನಿಮಗೆ ಸಬ್ಸಿಡಿ ಸೌಲಭ್ಯ ಸಿಗಬೇಕು. 2016ರಲ್ಲಿ ಗೃಹ ಸಾಲ ಪಡೆದಾಗ ನಿಮ್ಮ ವಾರ್ಷಿಕ ಆದಾಯ ರೂ. 6 ಲಕ್ಷದ ಒಳಗೆ ಇರುವುದರಿಂದ ನಿಮಗೆ ಲೋವರ್ ಇನ್ ಕಮ್ ಗ್ರೂಪ್ (ಆರ್ಥಿಕವಾಗಿ ಹಿಂದುಳಿದ ವರ್ಗ) ಅಡಿ ರೂ. 2.67 ಲಕ್ಷ ಸಬ್ಸಿಡಿ ಕೊಡಬೇಕಾಗುತ್ತದೆ. ಲೋ ಇನ್ ಕಮ್ ಗ್ರೂಪ್ ನವರಿಗೆ 2022 ರ ವರೆಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಯಲ್ಲಿದೆ. ಕೂಡಲೇ ನಿಮ್ಮ ಬ್ಯಾಂಕ್ ನವರ ಜೊತೆ ಮಾತುಕತೆ ನಡೆಸಿ ಅರ್ಜಿ ಸಲ್ಲಿಸಿ.

  • ಎಲ್ ಐಸಿಯಲ್ಲಿ ಸರ್ಕಾರ ಬಂಡವಾಳ ಹಿಂತೆಗೆಯುವ ನಿರ್ಧಾರ ಮಾಡಿದೆ. ಇದರಿಂದ ಎಲ್ ಐಸಿ ಪಾಲಿಸಿದಾರರಿಗೆ ತೊಂದರೆ ಇದೆಯೇ?

| ರುದ್ರೇಶ್ ಬಿ ಚಿತ್ರದುರ್ಗ

ಸರ್ಕಾರ ಎಲ್ ಐಸಿ ಯಲ್ಲಿ ಬಂಡವಾಳ ಹಿಂತೆಗೆಯುವುದರಿಂದ ಆತಂಕಪಡಬೇಕಾದ ಅಗತ್ಯವಿಲ್ಲ. ಸದ್ಯ ಎಲ್​ಐಸಿ ನಿಗಮ, ಎಲ್​ಐಸಿ ಕಾಯ್ದೆ 1956 ರ ಅನ್ವಯ ಕಾರ್ಯನಿರ್ವಹಿಸುತ್ತಿದೆ. ಕಾನೂನಿಗೆ ತಿದ್ದುಪಡಿ ತಂದು ಎಲ್ ಐಸಿಯನ್ನು ಪಬ್ಲಿಕ್ ಲಿಸ್ಟೆಡ್ ಕಂಪನಿಯಾಗಿ ಮಾಡಬೇಕು ಎಂಬುದು ಸರ್ಕಾರದ ನಿರ್ಧಾರ.

ಅಂದರೆ ಆರಂಭಿಕ ಸಾರ್ವಜನಿಕ ಬಂಡವಾಳದ (ಐಪಿಒ) ಮೂಲಕ ಎಲ್ ಐಸಿಯ ಪಾಲುದಾರಿಕೆಯನ್ನು ಸಾರ್ವಜನಿಕರೂ ನೀಡುವುದು ಇದರ ಉದ್ದೇಶ. ಎಲ್​ಐಸಿಯನ್ನು ಸ್ಟಾಕ್ ಮಾರ್ಕೆಟ್ ನಲ್ಲಿ ಲಿಸ್ಟ್ ಮಾಡುವುದರಿಂದ ಎಲ್ ಐಸಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವ ಮಾಹಿತಿ ಸಾರ್ವಜನಿಕರಿಗೆ ಸಿಗುತ್ತದೆ. ಸ್ಟಾಕ್ ಮಾರ್ಕೆಟ್ ನಲ್ಲಿರುವ ಬೇರೆ ಬೇರೆ ಕಂಪನಿಗಳ ರೀತಿ ಎಲ್​ಐಸಿ ಕೂಡ ತ್ರೖೆಮಾಸಿಕ ಸಾಧನೆಯ ಫಲಿತಾಂಶ ಪ್ರಕಟಿಸಬೇಕಾಗುತ್ತದೆ. ಹೀಗೆ ಮಾಡಿದಾಗ ಕಂಪನಿಯ ಏಳು ಬೀಳುಗಳು ಜನರಿಗೆ ತಿಳಿಯುತ್ತವೆ.

ಸ್ಟಾಕ್ ಮಾರ್ಕೆಟ್ ನಲ್ಲಿನ ಲಿಸ್ಟೆಡ್ ಕಂಪನಿಗಳು ಸೆಬಿ ನಿಯಮಾವಳಿಗಳಿಗೆ ಬದ್ಧವಾಗಿ ಕೆಲಸ ಮಾಡಬೇಕಿರುವುದರಿಂದ ಎಲ್​ಐಸಿಗೆ ತೊಂದರೆಯಾಗುತ್ತದೆ ಎನ್ನುವುದು ವಾಸ್ತವಕ್ಕೆ ದೂರವಾದ ಮಾತು. ಈಗಾಗಲೇ ಇರುವ ಎಲ್ ಐಸಿ ಕಾಯ್ದೆ 1956 ಸೆಕ್ಷನ್ 37 ರ ಅಡಿಯಲ್ಲಿ ಎಲ್​ಐಸಿ ಇನ್ಶೂರೆನ್ಸ್ ಪಾಲಿಸಿಯಲ್ಲಿ ಹೂಡಿಕೆ ಮಾಡಿರುವವರಿಗೆ ಮೆಚ್ಯೂರಿಟಿ ಮೊತ್ತ ಮತ್ತು ಬೋನಸ್ ನೀಡುವ ಗ್ಯಾರಂಟಿಯನ್ನು ಸರ್ಕಾರ ನೀಡುತ್ತಿದೆ. ಐಪಿಒ ಆರಂಭಿಸಿದ ಬಳಿಕವೂ ಈ ಬದ್ಧತೆ ನೀಡುವುದಾಗಿ ಸರ್ಕಾರ ತಿಳಿಸಿದೆ.