Mobile Addiction ಸಾಂದರ್ಭಿಕ ಚಿತ್ರ
Mobile Addiction: ಆಧುನಿಕ ಯುಗದಲ್ಲಿ ತಂತ್ರಜ್ಞಾನವು ವರದಾನವಾಗಿದ್ದರೂ, ಮಕ್ಕಳ ಪಾಲಿಗೆ ಅದು ಮೆಲ್ಲಗೆ ಹರಡುತ್ತಿರುವ ಸಾಂಕ್ರಾಮಿಕದಂತೆ ಭಾಸವಾಗುತ್ತಿದೆ. ಒಂದು ಕಾಲದಲ್ಲಿ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳು ಇಂದು ಸ್ಮಾರ್ಟ್‌ಫೋನ್ ಪರದೆಗಳಿಗೆ ಅಂಟಿಕೊಂಡಿದ್ದಾರೆ. ಕಲಿಕೆಯ ನೆಪದಲ್ಲಿ ಆರಂಭವಾಗುವ ಮೊಬೈಲ್ ಬಳಕೆ, ಕ್ರಮೇಣ ಗೀಳು ಅಥವಾ ಚಟವಾಗಿ ಬದಲಾಗುತ್ತಿರುವುದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಅನೇಕ ಪೋಷಕರು ತಮ್ಮ ಮಕ್ಕಳು ಮೊಬೈಲ್ ಫೋನ್ಗೆ ಅಂಟಿಕೊಂಡಿರುವುದನ್ನು ನೋಡಿ ಚಿಂತೆಗೆ ಜಾರುತ್ತಾರೆ. ನೀವು ಕೂಡಾ ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಅಭ್ಯಾಸವನ್ನು ತಡೆಗಟ್ಟಲು ಕೆಲವೊಂದು ಸರಳ ಮತ್ತು ಸಮಂಜಸವಾದ ಕ್ರಮಗಳಿವೆ ಅದನ್ನು ಬಳಸಿರಿ.
ಮಕ್ಕಳನ್ನು ಸಕ್ರಿಯವಾಗಿಡಿ
ಮಕ್ಕಳನ್ನು ಮೊಬೈಲ್ ಫೋನ್‌ಗಳಿಂದ ಬೇರೆಡೆಗೆ ಸೆಳೆಯಲು ಉತ್ತಮ ಮಾರ್ಗವೆಂದರೆ ಅವರನ್ನು ದೈಹಿಕವಾಗಿ ಸಕ್ರಿಯರನ್ನಾಗಿ ಮಾಡುವುದು. ಆದಾಗ್ಯೂ, ಆದಷ್ಟು ಮಕ್ಕಳು ಹೊರಗಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಅವರು ಮೊಬೈಲ್ ಚಟವನ್ನು ಸ್ವಲ್ಪ ಕಡಿಮೆ ಮಾಡುತ್ತಾರೆ. ಹಾಗಾಗಿ ನಿಮ್ಮ ಮಕ್ಕಳನ್ನು ಉದ್ಯಾನವನದಲ್ಲಿ ಆಟವಾಡಲು, ಸೈಕ್ಲಿಂಗ್ ಅಥವಾ ಅವರ ಸ್ನೇಹಿತರೊಂದಿಗೆ ಸ್ವಲ್ಪ ಹೊತ್ತು ಸಮಯ ಕಳೆಯಲು ಬಿಡಿ ಇದರಿಂದ ಅವರ ಮನಸ್ಸು ಹೊರಗಿನ ಪ್ರಪಂಚಕ್ಕೆ ಹೊಂದಿಕೊಳ್ಳಲು ಪ್ರಾರಂಭಿಸುತ್ತದೆ.
ಮಕ್ಕಳನ್ನು ಹೊಸ ಆಸಕ್ತಿಗಳಿಗೆ ಮಾರ್ಗದರ್ಶನ ನೀಡಿ
ಮಕ್ಕಳು ತಮ್ಮ ಬಿಡುವಿನ ಸಮಯದಲ್ಲೂ ಮೊಬೈಲ್ ಫೋನ್ಗಳ ಮೇಲೆ ಅವಲಂಬಿತರಾಗಿದ್ದರೆ ಅವರಿಗೆ ಬೇರೆ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲ ಎಂದರ್ಥ. ಹಾಗಾಗಿ ಅವರಿಗೆ ಬೇರೆ ವಿಚಾರದ ಮೇಲೆ ಆಸಕ್ತಿ ಬರುವಂತೆ ಮಾಡುವುದು ಕೂಡ ಪೋಷಕರ ಜವಬ್ದಾರಿಯಾಗಿರುತ್ತದೆ. ಹಾಗಾಗಿ ಅವರಿಗೆ ಹೊಸ ವಿಷಯಗಳನ್ನು ಕಲಿಯಲು ಮತ್ತು ಉತ್ಸಾಹವನ್ನು ಅನುಸರಿಸಲು ಮಾರ್ಗದರ್ಶನ ನೀಡುವುದು ಮುಖ್ಯವಾಗಿರುತ್ತದೆ.
ಮುಖ್ಯವಾಗಿ ಮಕ್ಕಳಿಗೆ ಪುಸ್ತಕ ಓದುವುದು, ಚಿತ್ರಕಲೆ, ಸಂಗೀತ, ನೃತ್ಯ ಅಥವಾ ಕರಕುಶಲ ವಸ್ತುಗಳಂತಹ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ. ಇದು ಮಕ್ಕಳು ಸೃಜನಶೀಲ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಸಹಾಯ ಮಾಡಿ ಅವರ ಗಮನ ಕ್ರಮೇಣ ಮೊಬೈಲ್ ಫೋನ್‌ಗಳಿಂದ ದೂರ ಸರಿಯುವಂತೆ ಮಾಡುತ್ತದೆ.
ವಿಷಯಗಳನ್ನು ಪ್ರೀತಿಯಿಂದ ವಿವರಿಸಿ
ಪೋಷಕರು ಹೆಚ್ಚಾಗಿ ಕೋಪದಿಂದ ಮಕ್ಕಳಿಂದ ಮೊಬೈಲ್ ಫೋನ್ಗಳನ್ನು ಕಸಿದುಕೊಳ್ಳುತ್ತಾರೆ. ಇದರಿಂದ ಮಕ್ಕಳು ಕೋಪಗೊಂಡು ಅದೇ ಹಠವನ್ನು ಮುಂದುವರೆಸುತ್ತಾರೆ. ಆದಾಗ್ಯೂ, ನಿಮ್ಮ ಮಕ್ಕಳಿಗೆ ಪ್ರೀತಿ ಮತ್ತು ತಿಳುವಳಿಕೆಯಿಂದ ವಿವರಿಸಿರಿ.
ಮೊಬೈಲ್ ಫೋನ್ ಇಸ್ಕೊಳ್ಳುವ ಮೊದಲು ಮೊಬೈಲ್ ಅತಿಯಾಗಿ ನೋಡುವುದರಿಂದ ಏನಾಗುತ್ತದೆ ಎಂಬುದನ್ನು ನಿಮ್ಮ ಮಕ್ಕಳಿಗೆ ಅರ್ಥ ಮಾಡಿಸಿ. ಈ ರೀತಿಯಾಗಿ ಅರ್ಥೈಸುವುದರಿಂದ ನಿಮ್ಮ ಮಕ್ಕಳು ಮೊಬೈಲ್ ನಿಯಂತ್ರಿಸಲು ಪ್ರಾರಂಭಿಸುತ್ತಾರೆ.
ಆದಾಗ್ಯೂ, ತಂತ್ರಜ್ಞಾನವು ಅನಿವಾರ್ಯ, ಆದರೆ ಅದು ಬಾಲ್ಯವನ್ನು ಕಿತ್ತುಕೊಳ್ಳಬಾರದು. ಡಿಜಿಟಲ್ ಯುಗದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡಲು ಮತ್ತು ಅವರ ಆರೋಗ್ಯವನ್ನು ಕಾಪಾಡಲು ಪೋಷಕರು ಮತ್ತು ಶಿಕ್ಷಕರು ಜಂಟಿಯಾಗಿ ಶ್ರಮಿಸಬೇಕಾದ ಅಗತ್ಯವಿದೆ. ಮಕ್ಕಳ ಕೈಯಲ್ಲಿ ಸ್ಮಾರ್ಟ್‌ಫೋನ್ ನೀಡುವ ಮೊದಲು, ಅವರಿಗೆ ಜೀವನದ ನೈಜ ಮೌಲ್ಯಗಳ ಅರಿವು ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.