ಲೈಫ್‌ಸ್ಟೈಲ್

ಮೆಹಂದಿ ಡಿಸೈನ್​ಕೂತಲ್ಲೇ ಕಲೆಕ್ಷನ್!

ದಕ್ಷಿಣ ಭಾರತದಲ್ಲಿ ಕೇವಲ ಔಷಧಿಗಾಗಿಯಷ್ಟೇ ಸೀಮಿತವಾಗಿದ್ದ ಮೆಹಂದಿ ಈಗ ಉತ್ತರ ಭಾರತದ ಸಂಪ್ರದಾಯದಂತೆ ಮಾಧ್ಯಮಗಳ ಪ್ರಭಾವದಿಂದ ಸೌಂದರ್ಯಸಾಧನವಾಗಿ ರೂಪು ಪಡೆದು ಹಲವು ದಶಕಗಳೇ ಕಳೆದಿವೆ. ಯಾವುದೇ ಶುಭ ಸಮಾರಂಭಕ್ಕೆ ಇದು ತೀರಾ ಅಗತ್ಯ ಎನಿಸಿಬಿಟ್ಟಿದೆೆ. ಆದ್ದರಿಂದ ಇದನ್ನೇ ಉದ್ಯೋಗವನ್ನಾಗಿಸಿಕೊಂಡು ಹಣ ಸಂಪಾದನೆ ಮಾಡಬಹುದಾಗಿದೆ.

ಮದರಂಗಿ, ಗೋರಂಟಿ ಅಥವಾ ಮೆಹಂದಿಗೆ ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಸ್ಥಾನಮಾನವಿದೆ. ಯಾವುದೇ ಶುಭ ಸಮಾರಂಭಗಳಲ್ಲಿಯೂ ಹೆಣ್ಣುಮಕ್ಕಳು ಕೈ-ಕಾಲುಗಳಿಗೆ ಮೆಹಂದಿ ಹಾಕಿಕೊಂಡರೆ ಆ ಕಾರ್ಯಕ್ರಮಗಳಿಗೂ ಒಂದು ರೀತಿಯ ಮೆರುಗು. ಮದುಮಗಳಿಗೆ ಹಾಕಿದ ಮೆಹಂದಿಯ ರಂಗು ಎಷ್ಟು ಚೆನ್ನಾಗಿ ಮೂಡುತ್ತದೆಯೋ ಅಷ್ಟು ಹೆಚ್ಚು ಆಕೆಯ ಗಂಡ ಪ್ರೀತಿಸುತ್ತಾನೆ ಎಂದು ಹಿರಿಯರೂ ಹೇಳುತ್ತಾರೆ. ಅದೇನೇ ಇರಲಿ. ಇಂದು ಮದರಂಗಿಯ ರಂಗಿನಿಂದಲೇ ಸಾಕಷ್ಟು ಸಂಪಾದನೆ ಮಾಡಬಹುದಾಗಿದೆ. ಮೆಹಂದಿಯ ಜೀವಾಳವೇ ಅದರ ಡಿಸೈನ್. ವಿನ್ಯಾಸವೂ ತುಂಬಾ ಸೂಕ್ಷ್ಮವಾಗಿಸಿ ಅಂಗೈ ಜಾಗದಲ್ಲಿ ಸುಂದರ ಕಲಾಕೃತಿಯ ಮೆಹಂದಿ ರಚಿಸುವುದು ಚಾಣಾಕ್ಷತನದ ಕೆಲಸವಾಗಿದೆ. ಅದೃಷ್ಟ ಚೆನ್ನಾಗಿದ್ದರೆ ಲಕ್ಷ ಲಕ್ಷದವರೆಗೂ ದುಡಿಯುವವರೂ ಇದ್ದಾರೆ. ಏಕೆಂದರೆ, ಮೆಹಂದಿ ಸಿರಿವಂತರಿಗೆ ಪ್ರೆಸ್ಟೀಜ್ ಪ್ರಶ್ನೆಯಾಗಿಯೂ ಇರುವ ಕಾರಣ, ಈ ಕಲೆಯಲ್ಲಿ ಚೆನ್ನಾಗಿ ನುರಿತರೆ, ಜತೆಗೆ ಸಿಕ್ಕ ಅವಕಾಶಗಳನ್ನು ಬಾಚಿಕೊಂಡದ್ದೇ ಆದಲ್ಲಿ, ಒಂದು ಕಾರ್ಯಕ್ರಮಕ್ಕೆ ಇಂತಿಷ್ಟು ಹಣ ಪಡೆದು, ಒಳ್ಳೆಯ ಗಳಿಕೆಯನ್ನು ಮಾಡಬಹುದು.

ಪುರುಷರಿಗೂ ಬೇಡಿಕೆ ಮೆಹಂದಿ ಹಚ್ಚಿಕೊಳ್ಳುವುದು ಸ್ತ್ರೀಯರಾದರೂ, ಅವರ ಕೈ-ಕಾಲುಗಳ ಮೇಲೆ ಸುಂದರ ಚಿತ್ತಾರ ಮೂಡಿಸುವಲ್ಲಿ ಪುರುಷರೇನೂ ಹಿಂದೆ ಬಿದ್ದಿಲ್ಲ. ಮಾಲ್​ಗಳಲ್ಲಿ ಮೆಹಂದಿ ಚಿತ್ತಾರ ಮಾಡುವ ಅಂಗಡಿಗಳು ಹೆಚ್ಚುತ್ತಿವೆ. ಅದರಲ್ಲಿ ಹೆಚ್ಚಿನಂಶ ಇರುವುದು ಯುವಕರೇ. ಅಷ್ಟೇ ಏಕೆ? ಮಹಾನಗರಗಳು ಮಾತ್ರವಲ್ಲದೇ, ಹಲವು ಪಟ್ಟಣಗಳಲ್ಲಿ ಮೆಹಂದಿ ಚಿತ್ತಾರ ಹಾಕುವ ಮಳಿಗೆಗಳನ್ನು ಅಥವಾ ರಸ್ತೆ ಬದಿಯಲ್ಲಿಯೇ ಕುಳಿತು ಡಿಸೈನ್ ಬಿಡಿಸು ವವರನ್ನು ಕಾಣಬಹುದು. ಅದಕ್ಕಾಗಿಯೇ ಸಂಪ್ರದಾಯ, ಫ್ಯಾಷನ್ ಇರುವವರೆಗೂ ಹೆಣ್ಣು- ಗಂಡು ಭೇದವಿಲ್ಲದೇ ಮೆಹಂದಿ ಚಿತ್ತಾರಕ್ಕೆ ಬೆಲೆ ಇದ್ದೇ ಇದೆ.ಮೆಹಂದಿಯ ರೆಡಿಮೇಡ್ ಕೋನ್​ಗಳು ಈಗ ಬಗೆಬಗೆ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ, ಕೆಲವು ವಿನ್ಯಾಸಕಾರರು ತಮಗೆ ಬೇಕಾದ ಟ್ಯೂಬ್ ತಾವೇ ತಯಾರಿಸಿಕೊಳ್ಳುತ್ತಿದ್ದಾರೆ. ಯಾವ ರೀತಿಯ ಕೋನ್​ಗಳನ್ನು ತಯಾರಿಸಿಕೊಂಡರೂ ಅವುಗಳಿಂದ ಸುಂದರ ವಿನ್ಯಾಸ ರಚಿಸಲು ಬರದಿದ್ದರೆ ಎಲ್ಲವೂ ವೇಸ್ಟ್. ಏಕೆಂದರೆ ಮೊದಲಿನಂತೆ ಈಗ ಮೆಹಂದಿ ಕೇವಲ ಒಂದೇ ರೀತಿಯ ಡಿಸೈನ್ ಆಗಿ ಉಳಿದಿಲ್ಲ. ಟ್ಯಾಟು ಸ್ಟೈಲ್, ಪಿಕಾಕ್ ಅರೇಬಿಕ್, ಹೆನ್ನಾ ಅರೇಬಿಕ್, ಬ್ರಾಸೆಲೆಟ್ ಸ್ಟೈಲ್, ಬ್ರೖೆಡಲ್ ಡಿಸೈನ್, ಪಾಕಿಸ್ತಾನಿ ಮೆಹಂದಿ... ಇತ್ಯಾದಿ ಡಿಸೈನ್​ಗಳ ಬಗ್ಗೆ ಅರಿವು ಬೇಕಾಗುತ್ತದೆ.

ಬೇಡಿಕೆ ಕುದುರಿಸಿಕೊಳ್ಳುವುದು ಹೇಗೆ?

ನೀವು ಮದರಂಗಿ ಡಿಸೈನ್​ಗಳ ರಚನೆಯನ್ನೇನೋ ಕಲಿತಿದ್ದೀರಿ. ಆದರೆ ಅದರ ಬಗ್ಗೆ ನೀವು ಪ್ರಚಾರ ಮಾಡಿಕೊಳ್ಳುವುದು ಹೇಗೆ? ಅಂದರೆ, ಗ್ರಾಹಕರನ್ನು ಸೆಳೆಯುವುದು ಹೇಗೆ ಎಂಬುದು ಮುಂದಿನ ಪ್ರಶ್ನೆ. ಮದುವೆ-ಸಮಾರಂಭಗಳನ್ನು ಆಯೋಜಿಸುವ ಇವೆಂಟ್ ಮ್ಯಾನೇಜರ್​ಗಳೊಂದಿಗೆ ಸಂಪರ್ಕವಿದ್ದಲ್ಲಿ, ಅವಕಾಶಗಳು ತಾವಾಗಿಯೇ ಅರಸಿ ಬರುತ್ತವೆ. ಆದರೆ ಇದು ಎಲ್ಲರಿಂದಲೂ ಸಾಧ್ಯವಾಗದ ಕೆಲಸವಲ್ಲ. ಆದ್ದರಿಂದ ಈಗ ನಿಮ್ಮ ನೆರವಿಗೆ ಬರುವುದು ಸಾಮಾಜಿಕ ಜಾಲತಾಣ. ಫೇಸ್​ಬುಕ್ ಹಾಗೂ ವಾಟ್ಸ್​ಆಪ್​ಗಳ ಮೂಲಕ ನೀವು ಮಾಡಿರುವ ಡಿಸೈನ್​ಗಳ ಬಗ್ಗೆ ಮಾಹಿತಿ ಹಂಚಿಕೊಂಡು ಅದನ್ನು ಜನರಿಗೆ ತಿಳಿಯುವಂತೆ ಮಾಡುವುದು ಒಂದು ಬಗೆಯಾದರೆ, ಇನ್ನೂ ಪರಿಣಾಮಕಾರಿಯಾದ ಮಾರ್ಗವೆಂದರೆ ಬ್ಲಾಗ್ ತಯಾರಿಕೆ. ನೀವು ಮಾಡಿದ ಡಿಸೈನ್ ಸಂಗ್ರಹವನ್ನು ಅದರಲ್ಲಿ ಅಪ್​ಲೋಡ್ ಮಾಡಿ ಅದನ್ನು ಫೇಸ್​ಬುಕ್ ಅಕೌಂಟ್​ಗೆ ಲಿಂಕ್ ಮಾಡಿ. ಇದರಿಂದ ಅನೇಕ ಮಂದಿ ನಿಮ್ಮ ಬ್ಲಾಗ್​ಗೆ ವಿಸಿಟ್ ಕೊಡುತ್ತಾರೆ. ನೀವು ಮಾಡಿರುವ ಡಿಸೈನ್​ಗಳು ತುಂಬಾ ಟ್ರೆಂಡಿ ಎನಿಸಿದರೆ ನಿಜಕ್ಕೂ ನಿಮಗೆ ಗ್ರಾಹಕರು ಸಿಕ್ಕಂತೆಯೇ. ಅದೇ ರೀತಿ ಇನ್ನೊಂದು ಮಾರ್ಗ ಯುಟ್ಯೂಬ್. ಯುಟ್ಯೂಬ್​ನಲ್ಲಿ ಮೆಹಂದಿ ಡಿಸೈನ್ ಬಿಡಿಸುವ ವೀಡಿಯೋ ಅಪ್​ಲೋಡ್ ಮಾಡಿ ಅದಕ್ಕೆ ಅತ್ಯಂತ ಆಪ್ತವಾಗಿರುವ ಹಾಗೂ ಸರಳವಾಗಿರುವ ಹೆಸರು ಕೊಡಿ. ಯಾರಾದರೂ ‘ಮೆಹಂದಿ ಡಿಸೈನ್’ ಎಂದು ಟೈಪ್ ಮಾಡಿದಾಗ ನೀವು ಅಪ್​ಲೋಡ್ ಮಾಡಿರುವ ಡಿಸೈನ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮ್ಮ ವಿಳಾಸ, ಫೋನ್ ನಂಬರ್ ಇತ್ಯಾದಿಗಳು ಇದ್ದರೆನಿಮ್ಮ ಸಂಪರ್ಕಕ್ಕೆ ಸಹಾಯವಾಗುತ್ತದೆ.

ಕೋರ್ಸ್ ಮಾಡಿದರೆ ಉತ್ತಮ

ಈಗ ಇಂಟರ್​ನೆಟ್ ಮೂಲಕ ಸಾಕಷ್ಟು ತೆರನಾದ ಡಿಸೈನ್​ಗಳು ನಿಮಗೆ ನೋಡಲು ಲಭ್ಯ ಇದ್ದರೂ, ಮೆಹಂದಿಯ ಕೋರ್ಸ್ ಮಾಡಿಕೊಂಡರೆ ತುಂಬಾ ಒಳ್ಳೆಯದು. ‘ಪೊ›ಫೆಷನಲ್ ಮೆಹಂದಿ ಡಿಸೈನರ್’ ಆಗಲು ಇದು ಸಹಾಯಕವಾಗುತ್ತದೆ. ಸಾಮಾನ್ಯವಾಗಿ ನುರಿತ ಬ್ಯೂಟಿಷಿಯನ್​ಗಳ ಹತ್ತಿರವೇ ಕಲಿಯುವುದು ಒಳಿತು. ಒಂದು ವಾರದಿಂದ ಹಿಡಿದು ಕೆಲವು ತಿಂಗಳುಗಳ ಕೋರ್ಸ್​ಗಳು ಹಲವೆಡೆ ಲಭ್ಯ ಇವೆ. ನುರಿತ ಬ್ಯೂಟಿಷಿಯನ್​ಗಳ ಬಳಿ ಕಲಿತಲ್ಲಿ, ಆದಷ್ಟೂ ಹೊಸ ಟ್ರೆಂಡಿ ಮೆಹಂದಿ ಚಿತ್ತಾರಗಳನ್ನು ಕಲಿಯಬಹುದು. ಒಂದು ವೇಳೆ ನೀವು ಇರುವ ಊರಿನಲ್ಲಿ ಇಂಥ ಕೋರ್ಸ್​ಗಳು ಅಥವಾ ಬ್ಯೂಟಿಷಿಯನ್​ಗಳು ಇಲ್ಲದೇ ಹೋದರೆ ಅಥವಾ ಇನ್ನಾವುದಾದರೂ ಕಾರಣಕ್ಕೆ ಕೋರ್ಸ್ ಸೇರಿಕೊಳ್ಳಲು ಸಾಧ್ಯವಾಗದಿದ್ದರೆ ಆನ್​ಲೈನ್ ಕೋರ್ಸ್​ಗಳ ಮುಖಾಂತರವೂ ತರಬೇತಿ ಪಡೆಯಬಹುದು. ‘ಮೆಹಂದಿ ಆನ್​ಲೈನ್ ಕೋರ್ಸ್’ ಎಂದು ಟೈಪಿಸಿದರೆ ನಿಮಗೆ ಹಲವಾರು ಕೋರ್ಸ್​ಗಳ ವಿವರ ಸಿಗುತ್ತದೆ. ಆದರೆ ಶುಲ್ಕ ಸಹಿತ ಕೋರ್ಸ್ ಆಗಿದ್ದರೆ ದುಡ್ಡು ಕೊಡುವ ಮುನ್ನ ಕೋರ್ಸ್ ನೀಡುವುದಾಗಿ ಹೇಳಿಕೊಂಡವರ ಸತ್ಯಾಸತ್ಯತೆಯನ್ನು ತಿಳಿದುಕೊಂಡು, ಆ ಕೋರ್ಸ್​ಗಳ ಕುರಿತಂತೆ ಬಂದ ರಿವ್ಯೂ ಓದಿಕೊಂಡು ಮುಂದಕ್ಕೆ ಹೋಗಿ.

ತಿಳಿವಳಿಕೆಯಿರಲಿ

ಮೆಹಂದಿ ರಚನೆಗೂ ಮುನ್ನ ಕೆಲವೊಂದು ಅಂಶಗಳ ತಿಳಿವಳಿಗೆ ಅಗತ್ಯವಾಗಿದೆ. ಅವೆಂದರೆ: ಹೊಸ ಟ್ರೆಂಡ್​ನಲ್ಲಿರುವ ಎಲ್ಲ ಬಗೆಯ ಡಿಸೈನ್​ಗಳನ್ನು, ಶೈಲಿಗಳನ್ನು ತಿಳಿದುಕೊಳ್ಳುವುದು ಅತಿ ಅವಶ್ಯಕ ಇದು ಅತ್ಯಂತ ಸೂಕ್ಷ್ಮ ಕಲೆಯೂ ಆಗಿರುವ ಕಾರಣ, ಆಸಕ್ತಿಯ ಜತೆ ತಾಳ್ಮೆ, ಏಕಾಗ್ರತೆಯೂ ಅಷ್ಟೇ ಮುಖ್ಯವಾಗಿ ಬೇಕಾಗುತ್ತದೆ. ಕ್ರಿಯಾಶೀಲತೆಯೂ ಅಷ್ಟೇ ಮುಖ್ಯ. ಮೆಹಂದಿಯನ್ನು ಅನೇಕ ಶುಭ ಕಾರ್ಯಗಳಿಗೆ ಬಳಸುವ ಕಾರಣ, ಯಾವ ಕಾರ್ಯಕ್ರಮಕ್ಕೆ ಯಾವುದು ಸೂಕ್ತ ಡಿಸೈನ್ ಎಂದು ತಿಳಿದಿರಬೇಕು. ಡಿಸೈನ್ ಬಿಡಿಸುವುದು ಕೈಯಲ್ಲಾದರೂ, ಮೆಹಂದಿಯಲ್ಲಿ ಬೇಡಿಕೆ ಕುದುರಿಸಿಕೊಳ್ಳಬೇಕೆಂದರೆ ಉತ್ತಮ ಮಾತುಗಾರಿಕೆ ಅಗತ್ಯವಾಗಿದೆ. ನೀವೇಷ್ಟೇ ಉತ್ತಮ ಡಿಸೈನರ್ ಆಗಿದ್ದರೂ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲರಾದರೆ ಎಲ್ಲವೂ ವೇಸ್ಟ್.