ಲೈಫ್‌ಸ್ಟೈಲ್

ಮಾನವೀಯ ಮೌಲ್ಯ ಬದಲಾಗದಿರಲಿ

vijayavani
ಡಾ.ವಿ.ಎಚ್. ಮೂಲಿಮನಿ

ದೀಪಾವಳಿ ಹಬ್ಬದ ಸಂದರ್ಭ. ದೊಡ್ಡ ಮಳಿಗೆಯೊಂದರಲ್ಲಿ ಹಬ್ಬದ ಖರೀದಿಗಾಗಿ ಅನೇಕ ಜನ ಸೇರಿದ್ದರು. ಮಕ್ಕಳು ತಾಯಿ-ತಂದೆಯೊಂದಿಗೆ ಹೊಸ ಬಟ್ಟೆ ಖರೀದಿಯ ಸಂಭ್ರಮದಲ್ಲಿದ್ದರು. ಆ ಗುಂಪಿನಲ್ಲಿ ಒಬ್ಬ ಬಡ ಬಾಲಕ ಪ್ಯಾಂಟೊಂದನ್ನು ತೋರಿಸಿ ತನಗೆ ಬೇಕೆಂದು ತಂದೆಯನ್ನು ಕೇಳಿದ. ಆ ತಂದೆ ಅದರ ಬೆಲೆಯನ್ನು ನೋಡಿಯೇ ಸುಮ್ಮನಾಗಿಬಿಟ್ಟ. ಬಾಲಕನನ್ನು ಅತ್ತಕಡೆಗೆ ಎಳೆದುಕೊಂಡು ಹೋಗಿ ತನ್ನಲ್ಲಿರುವ ಹಣದಿಂದ ಇವುಗಳನ್ನು ಕೊಳ್ಳಲಾಗುವುದಿಲ್ಲ ಎಂದ. ಬಾಲಕನ ಮೋರೆ ಸಪ್ಪೆಯಾಯಿತು. ಈ ವಿದ್ಯಮಾನಗಳನ್ನೆಲ್ಲ ಅಲ್ಲಿದ್ದ ಒಬ್ಬ ಬಾಲಕಿ ಗಮನಿಸುತ್ತಿದ್ದಳು. ಆ ಬಾಲಕಿ ತನ್ನ ತಂದೆಯನ್ನು ಕರೆದು ಆ ಬಾಲಕ ಇಷ್ಟಪಟ್ಟಿದ್ದ ಪ್ಯಾಂಟನ್ನು ತೋರಿಸಿ ತನಗದು ಬೇಕೆಂದಳು. ಧನಿಕನಾದ ಬಾಲಕಿಯ ತಂದೆ ಅದನ್ನು ಕೊಡಿಸಿದ. ಬಾಲಕಿ ಓಡಿಹೋಗಿ ಹಣ ಕಟ್ಟಲು ಸಾಲಿನಲ್ಲಿ ನಿಂತಳು. ಅಷ್ಟರಲ್ಲಿ ಅತ್ತಿತ್ತ ಸುತ್ತಿ ಕೊನೆಗೆ ಬಾಲಕನಿಗೆ ಕಡಿಮೆದರದ ಬನಿಯನ್ ಒಂದನ್ನು ಅವರಪ್ಪ ಕೊಂಡ.

ಬಾಲಕ ಮತ್ತು ಅವನ ತಂದೆಯೂ ಸರತಿಯನ್ನು ಸೇರಿದರು. ಬಾಲಕಿ ಹಣ ಸಂದಾಯ ಮಾಡಿ ಅಲ್ಲಿದ್ದ ಕೆಲಸಗಾರನಿಗೆ ಏನನ್ನೋ ಹೇಳಿದಳು. ಬಾಲಕಿಯ ಅಪ್ಪನಿಗಂತೂ ಇವಳು ಏನು ಮಾಡುತ್ತಿರುವಳೆಂದೇ ತಿಳಿಯಲಿಲ್ಲ. ‘ಏನಮ್ಮಾ, ಏನ್ಮಾಡ್ತಿದ್ದೀಯ’ ಎಂದಾಗ, ‘ಸ್ವಲ್ಪ ಈ ಕಡೆ ಬಂದು ನಿಂತು ಆ ಹುಡುಗನನ್ನೇ ನೋಡುತ್ತಿರು’ ಎಂದಳು. ಬಾಲಕ ಮತ್ತು ಅವನ ತಂದೆಯ ಸರತಿ ಬಂದಾಗ, ಆ ಮಾರಾಟಗಾರನೆಂದ, ‘ನೀವು ಈ ದಿನದ 500ನೇ ಗಿರಾಕಿ ಹಾಗಾಗಿ ನಿಮಗಿದೋ ವಿಶೇಷ ಬಹುಮಾನ’. ಬಾಲಕನ ಕಣ್ಣುಗಳು ಆಶ್ಚರ್ಯದಿಂದ ಅರಳುತ್ತಿದ್ದಂತೆಯೇ ಮಾರಾಟಗಾರ ಒಂದು ಬ್ಯಾಗನ್ನು ಬಾಲಕನ ಕೈಗಿಟ್ಟ. ಆತ ಅದನ್ನು ತೆರೆದು ನೋಡಿದ. ಅದರಲ್ಲಿ ತಾನು ಇಷ್ಟಪಟ್ಟಿದ್ದ ಪ್ಯಾಂಟನ್ನು ಕಂಡು ಅವನ ಮೊಗ ತಾವರೆಯಂತೆ ಅರಳಿತು. ಅದ್ಭುತ ನಗೆ ಆವರಿಸಿತು. ಈ ದೃಶ್ಯವೈಭವಕ್ಕೆ ಕಾರಣೀಭೂತಳಾದ ಈ ಬಾಲಕಿಯ ಆನಂದಕ್ಕಂತೂ ಪಾರವೇ ಇರಲಿಲ್ಲ. ಬಾಲಕಿಯ ಮರ್ಮ ತಂದೆಗೆ ಅರ್ಥವಾಯಿತು.

‘ಏನಮ್ಮಾ, ಪ್ಯಾಂಟನ್ನು ನೀನೇ ಆ ಬಾಲಕನಿಗೆ ಕೊಡಬಹುದಿತ್ತಲ್ಲಾ’ ಎಂದ ಬಾಲಕಿಯ ತಂದೆ. ‘ಇಲ್ಲಪ್ಪಾ, ನಾನೇ ಕೊಟ್ಟಿದ್ದರೆ ಅವರು ಸ್ವಾಭಿಮಾನದಿಂದ ಸ್ವೀಕರಿಸುತ್ತಿದ್ದರೋ ಇಲ್ಲವೋ ತಿಳಿಯದು. ಜೊತೆಗೆ ನಾವು ಅವರಿಗೆ ಮುಜಗರ ಉಂಟುಮಾಡಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಆ ಬಾಲಕನ ಮೊಗದಲ್ಲಿ ಅದ್ಭುತ ನಗೆಯನ್ನು, ಆನಂದವನ್ನು ನೋಡಬೇಕಾಗಿತ್ತು. ಆ ನಗುವಿನ ಮೌಲ್ಯ ಪ್ಯಾಂಟಿನ ಬೆಲೆಗಿಂತ ಬಹುಪಾಲು ದೊಡ್ಡದು. ಅದಕ್ಕಾಗಿ ಹೀಗೆ ಮಾಡಿದೆ’ ಎಂದಳು. ಮತ್ತೊಬ್ಬರ ಆನಂದವನ್ನು ನಮ್ಮದೆಂದು ತಿಳಿದು, ಯಾವುದೇ ಪ್ರತಿಫಲಾಪೇಕ್ಷೆ ಯಿಲ್ಲದೆ, ಅಹಂಕಾರವಿಲ್ಲದೆ ಮತ್ತೊಬ್ಬರ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಸಹಾಯ ಮಾಡುವುದು ಈಶ್ವರ ಪ್ರಣೀಧಾನವೇ ಆಗಿದೆ. ಯಾವ ವ್ಯಕ್ತಿಯ ಹೃದಯದಲ್ಲಿ ಮಾನವೀಯತೆಯ ಪ್ರೀತಿ ತುಂಬಿರುತ್ತದೋ ಅವನೇ ನಿಜವಾದ ಶ್ರೀಮಂತ. ಬೇರೆಯವರಿಗೆ ಸಹಾಯ ಮಾಡುವುದೇ ದೇವರ ಕಾರ್ಯ. ಅಲ್ಲೇ ಇದೆ ಜೀವನದ ತಿರುಳು.

(ಲೇಖಕರು ನಿವೃತ್ತ ಪ್ರಾಧ್ಯಾಪಕರು)