ವಿದ್ವಾನ್ ನರಸಿಂಹ ಭಟ್ಟ
‘ಸಂಪ್ರೀತಿಭೋಜ್ಯಾನ್ಯನ್ನಾನಿ ಆಪದ್ಭೋಜ್ಯಾನಿ ವಾ ಪುನಃ |
ನ ಚ ಸಂಪ್ರಿಯಸೇ ತಾತ ನ ಚ ಆಪದ್ಗತಾ ವಯಮ್ ||’
‘ನೋಡಪ್ಪ! ದುರ್ಯೋಧನ! ಪ್ರೀತಿಯಿಂದ ಕೊಟ್ಟ ಅನ್ನ ಮತ್ತು ಹಸಿವಿನಿಂದ ಪ್ರಾಣಕ್ಕೆ ಆಪತ್ತು ಸನ್ನಿಹಿತವಾಗಿರುವಾಗ ಕೊಟ್ಟಿರುವ ಅನ್ನ, ಹೀಗೆ ಎರಡು ಸಂದರ್ಭಗಳಲ್ಲಿ ಅನ್ನಕ್ಕೆ ಕುಲ-ಗೋತ್ರ-ಪಾತ್ರ-ಜಾತಿ ಇದಾವುದನ್ನೂ ನೋಡಬಾರದು. ನೀನು ನನ್ನನ್ನು ಪ್ರೀತಿಸಿಲ್ಲ ಮತ್ತು ಅಂತಹ ಆಪತ್ತೂ ನನಗೆ ಬಂದಿಲ್ಲಪ್ಪ!’ ಇಲ್ಲಿ ದುರ್ಯೋಧನನು ತನ್ನ ಶ್ರೇಷ್ಠತೆಯನ್ನು ಮತ್ತು ವಿದುರನ ಕನಿಷ್ಠತೆಯನ್ನು ಅಂತಸ್ತಿನ ಮೂಲಕ ಅಳೆದ. ಆದರೆ ಆಹಾರ ಸ್ವೀಕಾರಕ್ಕೆ ಅಂತಸ್ತಿನ ಪರಿಧಿ ಇಲ್ಲ ಎಂಬುದನ್ನು ಶ್ರೀಕೃಷ್ಣನು ವಿವರಿಸಿದ.
ಇದನ್ನೂ ಓದಿ ನಾಳೆಯಿಂದಲೇ ಮನೆ ಬಾಗಿಲಿಗೆ ಮದ್ಯ ಸರಬರಾಜು!
ಊಟ ರುಚಿಸುವುದು ಅದಕ್ಕೆ ಬಳಸುವ ಪದಾರ್ಥದಿಂದ ಮಾತ್ರವಲ್ಲ, ಯಾವಾಗ ಅದರ ಜೊತೆ ಪ್ರೀತಿಯೂ ಸೇರುತ್ತದೆಯೋ ಆ ಊಟಕ್ಕೆ ಬೆಲೆ ಜಾಸ್ತಿ. ಹೋಟೆಲಲ್ಲೂ , ಮನೆಯಲ್ಲೂ ಊಟ ಸಿಗುತ್ತದೆ. ಎರಡೂ ಕಡೆ ಬಳಸುವ ಪದಾರ್ಥ ಒಂದೇ. ಆದರೆ ಅದರ ಒಳಗಿರುವ ಭಾವ ಭಿನ್ನ. ಅಮ್ಮ ಮಾಡಿದ ಅಡುಗೆಯಲ್ಲಿ ಮಗುವಿನ ಶಾರೀರಕ, ಮಾನಸಿಕ ಸ್ವಾಸ್ಥ್ಯಕ್ಕೆ ಬೆಲೆ. ಶ್ರೀರಂಗಮಹಾಗುರುಗಳು ‘ಅಡಿಗಡಿಗೂ ಭಗವಂತನನ್ನು ಸ್ಮರಣೆ ಮಾಡುತ್ತ ಅಡುಗೆ ಮಾಡಬೇಕಪ್ಪಾ’ ಎನ್ನುತ್ತಿದ್ದರು. ಪ್ರತಿಯೊಂದು ತುತ್ತನ್ನು ತಿನ್ನುವಾಗಲೂ ‘ಕವಲೇ ಕವಲೇ ಗೋವಿಂದಮ್ ಎಂದು ಭಗವಂತನನ್ನು ಸ್ಮರಿಸುತ್ತ ಆಹಾರವನ್ನು ಸ್ವೀಕರಿಸಬೇಕು ಎಂಬುದು ನಮ್ಮ ಋಷಿಮಹರ್ಷಿಗಳು ಕೊಟ್ಟ ಸಂಸ್ಕಾರ. ಊಟ ಎನ್ನುವುದು ಕೇವಲ ನಮ್ಮ ಶರೀರವನ್ನು ಬೆಳೆಸುವ ಪ್ರಕ್ರಿಯೆಯಲ್ಲದೆ, ಮನಸ್ಸನ್ನೂ, ಇದಕ್ಕೂ ಹಿಂದಿನ ಮನಸಸ್ಪತಿಯನ್ನೂ ಬೆಳಗಿಸುವ ದೀಪ. ಆಹಾರವನ್ನು ಹೇಗೆ, ಯಾವಾಗ, ಎಲ್ಲಿ ಸ್ವೀಕರಿಸಬೇಕು ಎಂಬುದಕ್ಕೆ ನಮ್ಮ ಪರಂಪರೆಯಲ್ಲಿ ಅನೇಕ ವಿಧಿ, ನಿಷೇಧಗಳಿದ್ದರೂ ಅದೆಲ್ಲವನ್ನೂ ಮೀರಿರುವ ಜಾಗ ಎಂದರೆ ಶ್ರೀಕೃಷ್ಣನೇ ಅಪ್ಪಣೆ ಕೊಡಿಸಿದಂತೆ ಪ್ರೀತಿ ಮತ್ತು ಪ್ರಾಣಾಪಾಯದ ಆಪತ್ತು. ಮನಸಸ್ಪತಿಯನ್ನು ಬೆಳಗಿಸುವ ಪ್ರೀತಿಯ ಭೋಜನವನ್ನು ಮಾಡೋಣ, ಮಾಡಿಸೋಣ. ಅಲ್ಲವೇ?
(ಲೇಖಕರು ಅಧ್ಯಾತ್ಮ ಚಿಂತಕರು)