ಲೈಫ್‌ಸ್ಟೈಲ್

ಸ್ವಚ್ಛತಾಪ್ರಜ್ಞೆಯ ಮಹತ್ವ

| ಡಾ.ಗಣಪತಿ ಹೆಗಡೆ

ಅದೊಂದು ಮಲೆನಾಡಿನ, ನದಿ ತಟದಲ್ಲಿರುವ ಸುಂದರ, ಪ್ರಕೃತಿರಮ್ಯ ತಾಣ. ದಿನದಲ್ಲಿ ನೂರಾರು ಪ್ರವಾಸಿಗರು ಬಂದು ಇಲ್ಲಿಯ ಸೌಂದರ್ಯವನ್ನು ಕಂಡು ಆನಂದಪಡುತ್ತಾರೆ. ಮೋಜುಮಸ್ತಿಗೆಂದೇ ಬಂದ ಯುವಕರ ಗುಂಪೊಂದು ಅಲ್ಲಿ ವಿಹರಿಸುತ್ತಿದೆ. ಅವರು ಅಲ್ಲಿನ ಪ್ರಕೃತಿಯೊಂದಿಗೆ ವಿಕೃತಿಯನ್ನು ಮೆರೆಯುತ್ತಿದ್ದಾರೆ. ತಂದು ತಿಂದು, ಕುಡಿದ ತ್ಯಾಜ್ಯಗಳನ್ನೆಲ್ಲ ನೀರಿಗೆಸೆದು ಕೇಕೆ ಹಾಕುತ್ತಿದ್ದಾರೆ. ಇದನ್ನೆಲ್ಲ ಬಹಳ ಹೊತ್ತಿನಿಂದ ನೋಡುತ್ತಿದ್ದ ಹಿರಿಯರೊಬ್ಬರಿಗೆ ತಾಳಲಾಗಲಿಲ್ಲ.

‘ಏನ್ರಯ್ಯಾ ಇಷ್ಟೊಂದು ಗಲಾಟೆ ಮಾಡ್ತಾ ಇದ್ದೀರಲ್ಲಾ, ಮನಸ್ಸಿಗೆ ಬಂದ ಹಾಗೆ ಆಡ್ತಾ ಇದ್ದೀರಲ್ಲಾ! ನೀವು ನಿಮ್ಮ ತಾಯಿಗೇನೇ ಅನಾಚಾರ ಮಾಡ್ತಿದ್ದೀರಲ್ಲಪ್ಪಾ!’ ಎಂದುಬಿಟ್ಟರು. ಸಿಟ್ಟಿಗೆದ್ದ ಯುವಕರು ಹಿರಿಯರಲ್ಲಿಗೆ ಬಂದು, ‘ಏನು ಹಾಗಂತೀರಾ? ನಾವು ನಮ್ಮಿಷ್ಟ, ನಮಗೆ ಬೇಕಾದ ಸಂತೋಷ ಪಡೋದಕ್ಕೇ ನಾವಿಲ್ಲಿಗೆ ಬಂದಿರೋದು, ನೀವು ಯಾರು ನಮಗೆ ಹೇಳೋಕೆ?’ ಎಂದು ರೇಗಿದರು. ಇದನ್ನೂ ಓದಿ: ಈ ಫೋಟೋ ನೋಡಿ ಇದೆನೆಂದು ಹೇಳಬಲ್ಲಿರಾ? ಜಗತ್ತನ್ನೇ ಕಾಡುತ್ತಿರುವ ಮಹಾಮಾರಿಯ ನಿಜರೂಪ ಬಯಲು…!

‘ಅಲ್ಲಪ್ಪ, ಭೂಮಿನ ತಾಯಿ ಅಂತೀರಾ, ನೀರನ್ನು ಜಲದೇವತೆ, ಗಂಗಾಮಾತೆ ಅಂತೀರಾ, ವರ್ಷಕ್ಕೊಮ್ಮೆ ಗಂಗಾಪೂಜೆ ಮಾಡ್ತೀರಾ. ಇಲ್ಲಿ ನೋಡಿದರೆ ಅದೇ ಗಂಗೆಯನ್ನು ಮಲಿನಮಾಡಿ ಸಂತೋಷಪಡ್ತಿದ್ದೀರಲ್ಲ!’ ಎಂದರು. ಆ ಯುವಕರ ಗುಂಪು ಈಗ ತಣ್ಣಗೆ ಕುಳಿತು ಹಿರಿಯರ ಮಾತನ್ನು ಕೇಳತೊಡಗಿತು. ‘ನೋಡಿ, ಮಾನವನು ತನ್ನ ಅವಜ್ಞೆ, ಅಹಂಕಾರ, ಸ್ವಾರ್ಥ, ಲೋಭದಿಂದ ಮೈಮರೆತು ಭವಿಷ್ಯದಲ್ಲಿ ಈ ಪ್ರಕೃತಿಯನ್ನು ನಾಶ ಮಾಡಬಹುದೆಂಬ ದೂರಾಲೋಚನೆಯಿಂದಲೇ ನಮ್ಮ ಪೂರ್ವಜರು ಸ್ವಚ್ಛತೆಯ ಪಾಠಗಳನ್ನು ವೈದಿಕಸಾಹಿತ್ಯದ ಮೂಲಕ ಕೊಟ್ಟಿದ್ದಾರೆ. ಅಂದು ಪ್ರಕೃತಿಯ ಶುದ್ಧತೆಯ ಕಡೆ ಹೆಚ್ಚಿನ ಗಮನವಹಿಸಲಾಗಿತ್ತು, ಇಂದು ನಾವೆಲ್ಲ ಮಾಡುತ್ತಿರುವ ಮಹತ್ವಪೂರ್ಣವಾದ ‘ಸ್ವಚ್ಛತಾ ಅಭಿಯಾನ’ದ ಪರಿಕಲ್ಪನೆ ಇಂದು ನೆನ್ನೆಯದಲ್ಲ. ಯಜುರ್ವೆದದ ಆರಣ್ಯಕದಲ್ಲಿ ಬರುವ-

‘ನಾಪ್ಸು ಮೂತ್ರಪುರೀಷಂ ಕುರ್ಯಾತ್| ನ ನಿಷ್ಠೀವೇತ್| ನ ವಿವಸನಸ್ನಾಯಾತ್’

ಅಂದರೆ-‘ನೀರಿನಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು, ಪವಿತ್ರವಾದ ಜಲದಲ್ಲಿ ಎಲ್ಲೆಂದರಲ್ಲಿ ಉಗುಳಬಾರದು, ವಿವಸ್ತ್ರನಾಗಿ ಸ್ನಾನವನ್ನು ಮಾಡಬಾರದು’ ಇತ್ಯಾದಿ ಮಂತ್ರಗಳಲ್ಲಿ ಕೆಲವು ನಿತ್ಯನಿಯಮಗಳನ್ನು ವಿಧಿಸಲಾಗಿದೆ. ಇಲ್ಲಿ ನಮಗೆಲ್ಲರಿಗೂ ಜೀವದಾಯಿನಿಯಾದ ನೀರಿನ ಪರಿಶುದ್ಧತೆ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಶುದ್ಧವಾದ ಜಲವೇ ನಮ್ಮ ಆರೋಗ್ಯಪೂರ್ಣ ಜೀವನದ ಮೂಲ. ಅದರಲ್ಲಿಯೇ ಸ್ವಚ್ಛತೆ ಇಲ್ಲದೇ ಹೋದರೆ ಖಂಡಿತವಾಗಿಯೂ ಅನಾರೋಗ್ಯ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತದೆ. ಆದ್ದರಿಂದ ಮೊದಲು ಕುಡಿಯುವ ನೀರಿನ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು. ಈ ಕಾರ್ಯವನ್ನು ವೇದಮಂತ್ರಗಳು ಮಾಡಿವೆ. ಅವುಗಳಲ್ಲಿ ಪ್ರಕೃತಿಯನ್ನು ದೈವಸಮಾನ ಎಂದಿದೆ. ಮತ್ತು ಮಹತ್ವಪೂರ್ಣವಾಗಿ ಜೀವಿಸಲು ಅನಿವಾರ್ಯವಾದ ಈ ಭೂಮಿಯನ್ನು, ಆಕಾಶವನ್ನು ಪವಿತ್ರ ಭಾವನೆಯಿಂದ ಕೊಂಡಾಡಲಾಗಿದೆ. ಋಗ್ವೇದದ ಮಂತ್ರದಲ್ಲಿ ‘ಪೃಥವಿ ಮೇ ಮಾತಾ ದ್ಯೌರ್ನಃ ಪಿತಾ’ ‘ಭೂಮಿಯೇ ನನ್ನ ತಾಯಿ, ಆಕಾಶವೇ ತಂದೆ’ ಎನ್ನಲಾಗಿದೆ. ವೇದಸಾಹಿತ್ಯ ಪ್ರಪಂಚದ ಪ್ರಾಚೀನವಾದ ಸಾಹಿತ್ಯ. ಈ ಅನಂತವಾದ ಸಾಹಿತ್ಯರಾಶಿ ಮಾನವನ ಜೀವನದ ಉದ್ದೇಶವನ್ನು, ಪ್ರಕೃತಿಯ ಯೋಗದಾನವನ್ನು, ಬದುಕಿಗೆ ಬೇಕಾಗುವ ಮಾರ್ಗದರ್ಶನವನ್ನು ಕೊಡುವಲ್ಲಿ ಸಫಲವಾಗಿದೆ’ ಎಂದು ಮಾತು ಮುಗಿಸಿದಾಗ, ಯುವಕರಲ್ಲಿ ಅರಿವಿನ ಬೆಳಕು ಕಾಣಿಸಿಕೊಂಡಿತು.

(ಲೇಖಕರು ಸಂಸ್ಕೃತ ಉಪನ್ಯಾಸಕರು)