ಒಂದೂರಿನಲ್ಲಿ ಒಬ್ಬ ಮಹಾ ಜಿಪುಣ ಇದ್ದ. ಯಾರೂ ಹುಟ್ಟುವಾಗಲೇ ಜಿಪುಣರಾಗಿರುವುದಿಲ್ಲ. ತುಂಬ ಬಡಮನೆತನದಲ್ಲಿ ಹುಟ್ಟಿದವನು ಆತ. ಒಂದು ಹೊತ್ತು ಊಟಕ್ಕೂ ಕಷ್ಟ. ಎಲ್ಲದಕ್ಕೂ ಪರದಾಟ. ಆ ವ್ಯಕ್ತಿ ತೀರ್ಮಾನ ಮಾಡಿದ. ‘ನಾನು ಹಣ ಗಳಿಸಬೇಕು. ಯಾವ ದಾರಿಯಿಂದ ಹಣ ಗಳಿಸುತ್ತೇನೆ ಎಂಬುದು ಮುಖ್ಯವಲ್ಲ. ಹಣ ಗಳಿಸುವುದಷ್ಟೇ ಮುಖ್ಯ’. ಹಾಗಾಗಿ, ಹಣ ಕೂಡಿಸಿಡಲು ಪ್ರಾರಂಭಿಸಿದ. ಗಳಿಸಿದ ಹಣವನ್ನು ಯಾರಿಗೂ ಕೊಡುತ್ತಿರಲಿಲ್ಲ. ಬಂದ ಹಣವನ್ನು ಬಡ್ಡಿಗೆಂದು ಬಿಟ್ಟು ಚೆನ್ನಾಗಿ ದುಡ್ಡು ಮಾಡಿದ.
ಒಂದು ದಿನ ರಾತ್ರಿ ಊಟಮಾಡಿ ಮಲಗಿದ. ಬೆಳಗ್ಗೆ ಎದ್ದಾಗ ಯಾರೋ ತನ್ನ ಮುಂದೆ ನಿಂತಂತೆ ಕಾಣಿಸಿತು. ‘ಯಾರು ಅಲ್ಲಿ’ ಎಂದು ಕೂಗಿದ. ಮುಂದೆ ನಿಂತ ವ್ಯಕ್ತಿ ಹೇಳಿದ ‘ನಾನು ಯಮದೂತ. ಈ ಕ್ಷಣಕ್ಕೆ ನಿನ್ನ ಆಯುಷ್ಯ ಮುಗಿಯಿತು. ಕರೆದುಕೊಂಡು ಹೋಗಲು ಬಂದಿದ್ದೇನೆ’ ಎಂದ. ಇವನ ಎದೆ ಒಡದು ಹೋಯಿತು. ‘70 ವರ್ಷ ಹಗಲಿರಳು ಕಷ್ಟಪಟ್ಟು ಹಣ ಕೂಡಿಟ್ಟಿದ್ದೇನೆ. ಅದೆಲ್ಲವನ್ನು ಬಿಟ್ಟು ನಾನು ಹೇಗೆ ಬರಲಿ? ಒಂದು ವರ್ಷವಾದರೂ ಅವಕಾಶ ಕೊಡು. ನಾನು ಈವರೆಗೆ ಗಳಿಸಿದ ನೂರಾರು ಕೋಟಿ ಹಣವನ್ನು ಭೋಗಿಸಿ ಬರುತ್ತೇನೆ’ ಎಂದ. ಅದಕ್ಕೆ ಯಮದೂತ, ‘ಅದಕ್ಕೆಲ್ಲ ಇಲ್ಲಿ ಅವಕಾಶ ಇಲ್ಲ. ಬೇಗನೆ ನಡೆ ಎಂದ’. ಆಗ ಜಿಪುಣ-‘ಒಂದು ನಿಮಿಷವಾದರೂ ನನಗೆ ಅವಕಾಶ ಕೊಡು. ಜನರಿಗೆ ಒಂದು ಸಂದೇಶವನ್ನು ನೀಡುವುದಿದೆ’ ಎಂದ. ಆಗ ಯಮದೂತನಿಗೆ ಕರುಣೆ ಹುಟ್ಟಿ, ‘ತಡ ಮಾಡಬೇಡ. ಬೇಗನೇ ಬಾ’ ಎಂದು ಹೇಳಿ ಕಳುಹಿಸಿದ.
ಆ ಜಿಪುಣ ತನ್ನ ಕೈಯನ್ನು ಕತ್ತರಿಸಿಕೊಂಡು ಅಲ್ಲಿ ಹರಿಯುವ ರಕ್ತದಿಂದ ಒಂದು ಮಾತನ್ನು ಬರೆದ. ‘ನಾನು ನೂರಾರು ಕೋಟಿ ಹಣ ಗಳಿಸಿದೆ. ಅದೆಲ್ಲವನ್ನೂ ಕೊಡುತ್ತೇನೆ ಎಂದರೂ ಮೃತ್ಯುವಿನಿಂದ ಒಂದು ನಿಮಿಷ ಆಯುಷ್ಯ ಪಡೆಯಲು ಆಗಲಿಲ್ಲ. ಪ್ರತಿಯೊಬ್ಬರೂ ಪ್ರತಿಕ್ಷಣವನ್ನು ಸರಿಯಾಗಿ ಬಳಸಬೇಕು. ಅದರ ಆನಂದವನ್ನು ಅನುಭವಿಸಬೇಕು. ಏಕೆಂದರೆ ಪ್ರತಿಕ್ಷಣದ ಬೆಲೆ ನೂರಾರು ಕೋಟಿಗಿಂತಲೂ ಅಧಿಕವಾದದ್ದು ಎಂಬುದನ್ನು ಇವತ್ತು ಅರ್ಥ ಮಾಡಿಕೊಂಡೆ’. ಮರುಕ್ಷಣವೇ ಅವನ ಪ್ರಾಣಪಕ್ಷಿ ಹಾರಿಹೋಯಿತು. ಇದರಿಂದ ಆ ಜಿಪುಣ ಜಗತ್ತಿಗೆ ಒಂದು ಸಂದೇಶವನ್ನು ನೀಡಿದ ನಾವು ಗಳಿಸಿದ ಹಣ ಎಂದಿಗೂ ದೊಡ್ಡದಲ್ಲ. ಪ್ರತಿಕ್ಷಣ ಆನಂದವನ್ನು ಅನುಭವಿಸುವಂತಾಗಬೇಕು. ಆಗಲೇ ಬದುಕು ಸಾರ್ಥಕ.
ಹೌದು, ಮನುಷ್ಯ ಪ್ರತಿಕ್ಷಣದ ಆನಂದವನ್ನು ಅನುಭವಿಸಲು ತಾನು ಬದುಕಬೇಕು. ತನ್ನ ಬದುಕು ಹಸನಾಗಿದೆ ಎನ್ನುವುದಕ್ಕೆ ಪ್ರತಿಕ್ಷಣದ ಸುಖಾನುಭವವೇ ಕಾರಣವಾಗಿ ನಿಲ್ಲುತ್ತದೆ. ಇವತ್ತು ದುಡ್ಡಿನಿಂದ ಎಲ್ಲವೂ ಸಿಗುತ್ತದೆ ಎನ್ನುವ ಭ್ರಮೆಯಲ್ಲಿ ನಾವು ಜೀವನ ಸಾಗಿಸುತ್ತಿದ್ದೇವೆ. ಇದು ಬಿಸಿಲುಕುದುರೆಯ ಬೆನ್ನು ಹತ್ತಿದಷ್ಟೇ ಹುಚ್ಚುತನದ ಮಾತು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.
| ಡಾ.ವೆಂಕಟೇಶಾಚಾರ್ಯ ಬಿ.ಆರ್.
(ಲೇಖಕರು ಸಂಸ್ಕೃತ ಸಂಶೋಧಕರು)