ಪೃಥ್ವಿರಾಜ ಹಾಗೂ ಮಹೋಬೆಯ ರಾಜ ಪರಿಮಾಲನ ನಡುವೆ ದೀರ್ಘಕಾಲದ ಶತ್ರುತ್ವವಿತ್ತು. ಅದೊಂದು ದಿನ ಪರಿಮಾಲ ಪೃಥ್ವಿರಾಜನ ಸೈನ್ಯದ ತುಕಡಿಯ ಮೇಲೆ ದಾಳಿ ನಡೆಸಿದ. ಆ ಸುದ್ದಿಯಿಂದ ಕುಪಿತನಾದ ಪೃಥ್ವಿರಾಜ ಮಹೋಬೆಯ ಮೇಲೆ ದಾಳಿ ಮಾಡಿದ. ಇಬ್ಬರ ನಡುವೆ ಘನಘೋರ ಯುದ್ಧವೇ ನಡೆಯಿತು. ಪೃಥ್ವಿರಾಜನ ಕೈ ಮೇಲಾಯಿತಾದರೂ ಕಾದಾಡಿ ಇಬ್ಬರೂ ನಿತ್ರಾಣರಾಗಿ ರಣರಂಗದಲ್ಲಿ ಕುಸಿದುಬಿಟ್ಟರು. ಆ ಯುದ್ಧದಲ್ಲಿ ಸಾವಿನ ಸಂಖ್ಯೆಗೆ ಲೆಕ್ಕವಿರಲಿಲ್ಲ. ಶವಗಳ ನಡುವೆ ಸಾವಿರಾರು ಗಾಯಾಳುಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಪೃಥ್ವಿರಾಜನ ಪಕ್ಕದಲ್ಲೇ ಸಂಯಮರಾಯನೆಂಬ ಸ್ವಾಮಿನಿಷ್ಠ ಅಂಗರಕ್ಷಕ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ. ಬಳಿಕ ಸಂಯಮರಾಯ ಚೇತರಿಸಿಕೊಂಡು, ಪಕ್ಕದಲ್ಲೇ ತನ್ನ ಸ್ವಾಮಿ ತೀವ್ರ ಗಾಯಗೊಂಡು ಬಿದ್ದಿದ್ದನ್ನು ಗಮನಿಸಿದ. ಕಾಗೆ, ಗೂಬೆ, ಹದ್ದುಗಳು ಪೃಥ್ವಿರಾಜನ ಹತ್ತಿರ ಬರಲಾರಂಭಿಸಿದ್ದವು. ‘ಆ ದೈತ್ಯ ಪಕ್ಷಿಗಳು ನನ್ನ ಸ್ವಾಮಿಯನ್ನು ಹರಿದು ತಿನ್ನುವುದನ್ನು ನೋಡುವ ನನ್ನ ಈ ಕಣ್ಣುಗಳಿಗೆ ಧಿಕ್ಕಾರವಿರಲಿ’ ಎಂದು ತನ್ನನ್ನೇ ಶಪಿಸಿಕೊಳ್ಳುತ್ತ ಎದ್ದೇಳುವ ಪ್ರಯತ್ನ ಮಾಡಿದನಾದರೂ ಸಾಧ್ಯವಾಗಲಿಲ್ಲ. ಕೂಡಲೇ ಸಂಯಮರಾಜನಿಗೆ ಉಪಾಯವೊಂದು ಹೊಳೆದು ಪಕ್ಕದಲ್ಲೇ ಬಿದ್ದಿದ್ದ ಕತ್ತಿಯೊಂದರಿಂದ ತನ್ನ ದೇಹದ ಮಾಂಸವನ್ನು ಕತ್ತರಿಸಿ ಆ ರಕ್ತಪಿಪಾಸು ಪಕ್ಷಿಗಳ ಕಡೆಗೆ ಎಸೆಯುತ್ತ ನಿಂತ. ಸಂಯಮರಾಯನ ಮಾಂಸವನ್ನು ಆ ಪಕ್ಷಿಗಳು ತಿನ್ನತೊಡಗಿದ್ದರಿಂದ ಅವು ಪೃಥ್ವಿರಾಜನ ಬಳಿ ಸುಳಿಯಲಿಲ್ಲ. ಸ್ವಲ್ಪ ಸಮಯದಲ್ಲೇ ಪೃಥ್ವಿರಾಜನಿಗೆ ಪ್ರಜ್ಞೆ ಬಂತು. ತನ್ನ
ಹೌದು, ಈ ನೆಲದ ಕೆಲ ಮಹನೀಯರೇ ಹಾಗೇ. ಉಪದೇಶದಿಂದಲ್ಲ, ಬದುಕಿನಿಂದ ಅಮರತ್ವದ ಸಂದೇಶ ಸಾರಿದ್ದಾರೆ. ತ್ಯಾಗ, ಬಲಿದಾನದ ಸಂದೇಶವನ್ನು ಬದುಕಿನಲ್ಲಿ ಅನುಷ್ಠಾನಕ್ಕೆ ತಂದು ಮಾದರಿ ಆಗಿದ್ದಾರೆ. ಈ ಕಾರಣಕ್ಕೆ ನಮ್ಮ ಪರಂಪರೆಯಲ್ಲಿ ತ್ಯಾಗ, ಬಲಿದಾನಕ್ಕೆ ಇನ್ನಿಲ್ಲದ ಮಹತ್ವವಿದೆ. ನಮ್ಮ ಪ್ರಾಚೀನರು ನಡೆ-ನುಡಿ, ಸಂಸ್ಕಾರದಿಂದ ಮಹಾನ್ ತ್ಯಾಗಿಗಳೆನಿಸಿಕೊಂಡಿದ್ದರು. ಕೆಲವರು ತಮ್ಮ ಪ್ರಾಣವನ್ನೇ ನೀಡಿ ಅಮರತ್ಯಾಗಿಗಳಾದರೇ ಹಲವರು ತಮ್ಮ ಬದುಕನ್ನು ಶ್ರೇಷ್ಠಕಾರ್ಯಕ್ಕೆ ಮೀಸಲಿಟ್ಟು ಮತ್ತಷ್ಟು ಜನರಿಗೆ ಪ್ರೇರಣೆಯಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರಲ್ಲಿ ಅನೇಕರು ನಿರಕ್ಷರಕುಕ್ಷಿಗಳಾಗಿದ್ದರೂ, ಅವರು ಅಳಿದ ಮೇಲೂ ಉಳಿದು ಬದುಕಿದವರಿಗೆ ಪ್ರೇರಣೆ ನೀಡಿದ್ದಾರೆ. ‘ತ್ಯಾಗೇನೈಕೇ ಅಮೃತತ್ವಮಾನುಶುಃ’ ಎಂಬ ಉಪನಿಷತ್ ವಾಣಿಯಂತೆ ಮಾನವ ಮಾಧವನಾಗ ಬಲ್ಲ ಎಂಬ ಅಮೃತವಾಣಿಯನ್ನು ನಿಜ ಬದುಕಿಗೆ ಅಳವಡಿಸಿಕೊಂಡು ತ್ಯಾಗದ ಬದುಕಿನ ಪರಂಪರೆಯನ್ನು ವಿಸ್ತರಿಸಿದ್ದಾರೆ. ಅವರೆಲ್ಲರ ಆದರ್ಶ ಮತ್ತು ತ್ಯಾಗದ ಬದುಕು ನಮಗೂ ಪ್ರೇರಣಾದಾಯಿ.
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)