ಲೈಫ್‌ಸ್ಟೈಲ್

ಮನೋಲ್ಲಾಸ; ಖಾಲಿ ಪುಟದ ಜೀವನ!

ಡಾ. ವಿ.ಎಚ್.ಮೂಲಿಮನಿ

ಒಂದು ದಿನ ಯಮಧರ್ಮ ವ್ಯಕ್ತಿಯೊಬ್ಬನ ಪ್ರಾಣ ಕೊಂಡೊಯ್ಯಲು ಭೂಮಿಗೆ ಬಂದ. ಆಕಸ್ಮಿಕವೆಂಬಂತೆ ಆ ವ್ಯಕ್ತಿಯೇ ಎದುರಾದ. ಯಮನಿಗೆ ಭೂಲೋಕ ಸುತ್ತಿ ಸುತ್ತಿ ದಾಹವಾಗಿರುತ್ತದೆ.ಕುಡಿಯಲು ನೀರು ಕೇಳಿದಾಗ ಆಗ ವ್ಯಕ್ತಿ ನೀರು ಕೊಟ್ಟು ದಾಹ ತೀರಿಸುತ್ತಾನೆ. ಆದರೆ, ತಾನು ಕೊಂಡೊಯ್ಯಬೇಕಾಗಿರುವ ವ್ಯಕ್ತಿ ಅವನೇ ಎಂದು ತಿಳಿದು, ಅವನಿಗೆ ಒಂದು ವರ ಕೊಡುತ್ತಾನೆ. ಒಂದು ಹಣೆಬರಹದ ಪುಸ್ತಕ ಕೊಟ್ಟು, ‘ಇದರಲ್ಲಿ ನಿನಗೆ ಅಂತ ಒಂದು ಹಾಳೆ ಇದೆ. ನಿನಗೆ ಏನು ಬೇಕೋ ಅದನ್ನು ಬರೆದುಕೋ. ಅದು ನೆರವೇರುವುದು. ಆದರೆ, ಬರೆದುಕೊಳ್ಳಲು ನಿನಗೆ ಐದು ನಿಮಿಷ ಮಾತ್ರ ಸಮಯ. ಆ ಐದು ನಿಮಿಷ ದಾಟಿದ ನಂತರ ನಿನ್ನ ಹಣೆಬರಹ ಹೇಗಿರುತ್ತೋ ಹಾಗಾಗುವುದು’ ಎಂದು ಹೇಳಿ ಪುಸ್ತಕ ಕೊಡುತ್ತಾನೆ.

ಆ ವ್ಯಕ್ತಿ ಪುಸ್ತಕ ತೆಗೆದು ಮೊದಲು ಪುಟ ಓದುತ್ತಾನೆ. ಅದರಲ್ಲಿ ನಿನ್ನ ಸ್ನೇಹಿತ ವಿದೇಶಕ್ಕೆ ಹೋಗುತ್ತಾನೆ ಎಂದಿರುತ್ತದೆ. ಅದಕ್ಕೆ ಅವನು ವಿದೇಶಕ್ಕೆ ಹೋಗಬಾರದೆಂದು ತಡೆಯುತ್ತಾನೆ. ಮತ್ತೊಂದು ಪುಟ ತೆರೆಯುತ್ತಾನೆ. ಅದರಲ್ಲಿ ಮತ್ತೊಬ್ಬ ಸ್ನೇಹಿತ ಲಕ್ಷಗಟ್ಟಲೆ ಲಾಟರಿ ಗೆಲ್ಲುತ್ತಾನೆಂದಿರುತ್ತದೆ. ಆ ವ್ಯಕ್ತಿಗೆ ಲಾಟರಿ ಸಿಗಬಾರದು ಎಂದು ಬರೆಯುತ್ತಾನೆ. ಮತ್ತೊಂದು ಪುಟದಲ್ಲಿ ಅವನ ಆಪ್ತ ಗೆಳತಿ ಆಗರ್ಭ ಶ್ರೀಮಂತನನ್ನು ಮದುವೆಯಾಗುತ್ತಿದ್ದಾಳೆ ಎಂದಿರುತ್ತದೆ. ಆಕೆ ಆ ಆಗರ್ಭ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಬಾರದೆಂದು ಬರೆಯುತ್ತಾನೆ. ಮತ್ತೊಂದು ಪುಟ ತೆರೆಯುತ್ತಾನೆ. ಪಕ್ಕದ ಮನೆಯ ರೈತ ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕು ಸಿರಿವಂತನಾಗುತ್ತಾನೆಂದು ಇರುತ್ತದೆ. ಅವನು ಸಿರಿವಂತನಾಗಬಾರದು ಎಂದು ಬರೆಯುತ್ತಾನೆ.

ಕೊನೆಯ ಹಾಳೆ ಖಾಲಿ ಇರುತ್ತದೆ. ಅದರಲ್ಲಿ ಬರೆಯಬೇಕೆನ್ನುಷ್ಟರಲ್ಲಿ ಯಮ ಪುಸ್ತಕವನ್ನು ಕಸಿದುಕೊಳ್ಳುತ್ತಾನೆ. ಏಕೆಂದರೆ ಅವನಿಗೆ ಕೊಟ್ಟ 5 ನಿಮಿಷ ಗಡುವು ಮುಗಿದುಹೋಗಿರುತ್ತದೆ. ಆಗ ಯಮ, ‘ನಿನ್ನ ಆಯುಷ್ಯ ಮುಗಿದಿದೆ ನಡೆ’ ಎನ್ನುತ್ತಾನೆ. ‘ನನಗೆ ಅಂತ ನಾ ಏನೂ ಬರೆದುಕೊಳ್ಳಲಿಲ್ಲ’ ಎಂದು ವ್ಯಕ್ತಿ ಹೇಳಿದಾಗ, ‘ನಿಮಗೆ ಅಂತ ಒಂದಿಷ್ಟು ವರ್ಷ ಆಯಸ್ಸು ಕೊಟ್ಟಿರುತ್ತೇನೆ. ಅದರಲ್ಲೂ ವರವೆಂದು ಬಂದ ಐದು ನಿಮಿಷ ಆಯಸ್ಸು ಕೊಟ್ಟರೂ ನಿನ್ನ ಬಗ್ಗೆ ಯೋಚಿಸದೇ ಪರರ ಅವನತಿಯ ಬಗ್ಗೆ ಯೋಚಿಸಿದೆ. ಜೀವನವಿಡಿ ಕೊಟ್ಟರೂ ನಿನ್ನ ಬಗ್ಗೆ ತಿಳಿಯದೆ ಪರರ ಬಗ್ಗೆ ಆಲೋಚಿಸುವವರಿಗೆ ಇಲ್ಲಿ ಬದುಕುವ ಹಕ್ಕಿಲ್ಲ’ ಎಂದು ಯಮ ಕರೆದೊಯ್ಯುತ್ತಾನೆ.

ಹೀಗೆ ಬದುಕಿನಲ್ಲಿ ನಮಗೆ ಅಂತ ಒಂದಿಷ್ಟು ಹಾಳೆಗಳಿವೆ; ಒಂದಿಷ್ಟು ದಿನಗಳಿವೆ. ನಮಗೆ ಅಂತ ಏನಿದೆಯೋ ಅದು ಸನ್ಮಾರ್ಗದಲ್ಲಿದಲ್ಲಿದ್ದರೆ ಆ ಬದುಕಿಗೆ ಸಾರ್ಥಕತೆ. ಆಶಾದಾಯಕವಾಗಿ ಯೋಚಿಸುವುದನ್ನೇ ಸಕಾರಾತ್ಮಕ ಚಿಂತನೆ ಎನ್ನುವುದು. ಸುರಂಗದಲ್ಲಿ ಕತ್ತಲೆ ಕವಿದಿದ್ದರೂ ಕೊನೆಯಲ್ಲಿ ಬೆಳಕು ಬಂದೇ ಬರುತ್ತದೆ ಎಂಬ ವಿಶ್ವಾಸ ನಮ್ಮನ್ನು ಮುನ್ನಡೆಸುತ್ತದೆ.

(ಲೇಖಕರು ನಿವೃತ್ತ ಉಪನ್ಯಾಸಕರು)