| ರೇಖಾ ಗಜಾನನ ಭಟ್ಟ
ಒಮ್ಮೆ ಒಂದು ಹಳ್ಳಿಯ ಒಂದು ಮನೆಯ ಎದುರು ಮೂವರು ಕುಳಿತಿದ್ದರು. ಯಾರೋ ಪ್ರಯಾಣಿಕರು ಹಸಿದಿರಬೇಕೆಂದು ಭಾವಿಸಿದ ಮನೆಯ ಒಡತಿ ಅವರಿಗೆ ಊಟ ನೀಡಬೇಕೆಂದುಕೊಂಡು ಮನೆಯೊಳಗೆ ಕರೆದಳು. ಆದರೆ ಅವರು ಒಳಬರಲು ಒಪ್ಪಲಿಲ್ಲ. ಗಂಡ-ಹೆಂಡತಿ ಇಬ್ಬರೂ ಕರೆದಾಗ ಅವರು ‘ನಾವು ಮೂವರು ಒಟ್ಟಿಗೆ ಎಲ್ಲಿಯೂ ಹೋಗುವುದಿಲ್ಲ’ ಎಂದರು. ಆಗ ಮನೆಯವರು ಆಶ್ಚರ್ಯ ಪಡುತ್ತ, ‘ನೀವು ಯಾರು’ ಎಂದು ಕೇಳಿದಾಗ ಅವರು ಕ್ರಮವಾಗಿ ತಮ್ಮ ಹೆಸರು ಯಶಸ್ಸು, ಸಮೃದ್ಧಿ ಮತ್ತು ಜೀವನಪ್ರೀತಿ ಎಂದು ಹೇಳಿ ‘ಒಬ್ಬರನ್ನು ಮಾತ್ರ ನಿಮ್ಮ ಮನೆಗೆ ಕರೆಯಬಹುದು. ನಮ್ಮಲ್ಲಿ ಒಬ್ಬರು ಮಾತ್ರ ನಿಮ್ಮ ಜೊತೆಯೇ ಇರಬಲ್ಲೆವು ಕೂಡ’ ಎಂದು ನುಡಿದರು. ಆಗ ಹೆಂಡತಿ ತನಗೆ ‘ಸಮೃದ್ಧಿ’ ಬೇಕೆಂದಳು. ಗಂಡ ಅದಕ್ಕೊಪ್ಪದೆ ‘ಯಶಸ್ಸು’ ಒಳಬರಲಿ ಎಂದ. ಜೀವನಪ್ರೀತಿಯೇ ಮನೆ ಒಳಗೆ ಬರಬೇಕೆಂದು ಮಗಳು ಹಠ ಹಿಡಿದು, ಜೀವನಪ್ರೀತಿಯ ಕೈ ಹಿಡಿದು ಒಳಕರೆದುಕೊಂಡು ಹೋದಳು. ಆಗ ಜೀವನಪ್ರೀತಿ ಹಿಂದೆಯೇ ಯಶಸ್ಸು, ಸಮೃದ್ಧಿಗಳೂ ಒಳಬಂದರು. ‘ನಾವು ಕರೆದದ್ದು ಪ್ರೀತಿಯನ್ನು ಮಾತ್ರ, ನೀವು ಏಕೆ ಒಳಬಂದಿರಿ?’ ಎಂದು ಪ್ರಶ್ನಿಸಿದಾಗ, ‘ನೀವು ಜೀವನಪ್ರೀತಿಯನ್ನು ಆರಿಸಿಕೊಂಡ ಮೇಲೆ ನಾವು ಒಳಬರಲೇಬೇಕಾಯಿತು. ಯಶಸ್ಸು, ಸಮೃದ್ಧಿಗಳೆರಡು ಎಂದಿಗೂ ಜೀವನಪ್ರೀತಿಯ ಹಿಂಬಾಲಕರು’ ಎಂದು ನುಡಿದರು.
ಯಾವುದೇನೆ ಇರಲಿ, ಪ್ರೀತಿಯಂಥ ವಸ್ತು ಭವದಲ್ಲಿ ಕಾಣೆ.. ಮನಗಂಡ ಮಾತು ಎಂಬ ಮಧುರಚೆನ್ನರ ನುಡಿಯಂತೆ ಪ್ರೀತಿಗಿಂತ ಅಮೂಲ್ಯವಾದದ್ದು ಬೇರೊಂದು ಇಲ್ಲ. ಪ್ರೀತಿ ಸರ್ವಚಲನೆಗಳ ಕೇಂದ್ರಶಕ್ತಿ. ಜಗತ್ತಿನ ಆಗುಹೋಗುಗಳಿಗೆ ಸೂರ್ಯ ಹೇಗೆ ಮೂಲಶಕ್ತಿಯೋ ಹಾಗೆ ನಮ್ಮ ಬದುಕಿಗೆ ಪ್ರೀತಿಯೇ ಮೂಲದ್ರವ್ಯ. ನಮ್ಮ ದಿನಚರಿ ಪ್ರೀತಿಯ ಆಧಾರದಿಂದ ಪ್ರಾರಂಭವಾಗುತ್ತದೆ. ಪ್ರೀತಿಯಿಂದ ಗಳಿಸಿದವುಗಳು ಮತ್ತು ಸೃಷ್ಟಿಸಿದವುಗಳು ಬೆಲೆ ಕಟ್ಟಲಾರದ ಮೌಲ್ಯ ಪಡೆಯುತ್ತವೆ. ಅವು ನಮಗೆ ನೆಮ್ಮದಿಯೆಂಬ ಯಶಸ್ಸನ್ನೂ, ಆತ್ಮತೃಪ್ತಿಯೆಂಬ ಸಿರಿತನವನ್ನೂ ನೀಡುತ್ತವೆ. ಇರುವ ಬದುಕನ್ನು ಪ್ರೀತಿಸದಿದ್ದರೆ ಹೊಸದೇನನ್ನೂ ಪಡೆಯಲಾರೆವು. ‘ಪ್ರೀತಿ ಇಲ್ಲದ ಮೇಲೆ ಮಾತಿಗೆ ಮಾತು ಕೂಡಿತು ಹೇಗೆ... ಅರ್ಥ ಹುಟ್ಟಿತು ಹೇಗೆ?’ ಎಂದು ಜಿ.ಎಸ್.ಶಿವರುದ್ರಪ್ಪ ಕವಿತೆ ಮೂಲಕ ವಿವರಿಸಿದಂತೆ ಪ್ರೀತಿ ಇಲ್ಲದೆ ಬದುಕು ಮುನ್ನಡೆಯದು. ಬದುಕಿನಲ್ಲಿ ಎಷ್ಟೋ ತೊಡಕುಗಳಿದ್ದರೂ, ದೈಹಿಕ ನ್ಯೂನತೆಗಳಿದ್ದರೂ ಎಲ್ಲವನ್ನೂ ಮೀರಿ ಸಾಧಿಸಿದ ವಿಶೇಷ ವ್ಯಕ್ತಿಗಳು ನಮ್ಮ ಮುಂದಿದ್ದಾರೆ. ಜೀವನಪ್ರೀತಿಯೇ ಅವರ ಸಾಧನೆಯ ಮೂಲಾಧಾರ. ಆದ್ದರಿಂದ ನಮ್ಮೆಲ್ಲರ ಮೊದಲ ಆದ್ಯತೆ ಜೀವನಪ್ರೀತಿಯೇ ಆಗಲಿ. ಬದುಕ ಪ್ರೀತಿಸೋಣ, ಪ್ರೀತಿಯಿಂದ ಬಾಳಿಸೋಣ
ಬಿತ್ತಿ ಬೆಳೆಯೋಣ ಪ್ರೀತಿಯೆಂಬ ಪೈರು / ಆಗ ಸುಖ ಸಂತೃಪ್ತಿಗಳಲ್ಲಿ ಹಾಜರು ಪ್ರೀತಿಯಿರದ ಬದುಕು ವ್ಯರ್ಥ ಬಂಜರು / ಪ್ರತಿ ನಡೆಗಿರಲಿ ಜೀವನಪ್ರೀತಿಯ ಮೊಹರು
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)