ಭಗವಂತನ ಒಲುಮೆಗೆ ಪರಿಶುದ್ಧ ಮನಸ್ಸೊಂದೇ ಸಾಕು, ನಿಷ್ಕಲ್ಮಷ ಭಕ್ತಿಯೊಂದೇ ಸಾಕು. ಮತ್ತೇನೂ ಬೇಕಿಲ್ಲ. ನಾವು ಅಂದುಕೊಳ್ಳುತ್ತೇವೆ ‘ಮಡಿ-ಮೈಲಿಗೆ ಹೊಂದಿದವರು ಭಗವಂತನಿಗೆ ಇಷ್ಟವಾಗುತ್ತಾರೆ’ ಅಂತ. ಇಲ್ಲ, ಇಂತಹ ಯಾವ ನಿಯಮವೂ ಇಲ್ಲ. ಭಗವದ್ಭಕ್ತ ವ್ಯಾಧನ ಬಳಿ ಯಾವ ಉತ್ತಮ ಆಚರಣೆ ಇತ್ತು? ತಾನು ತಿನ್ನುವ ಹಸಿಮಾಂಸವನ್ನೇ ಭಗವಂತನಿಗೆ ಅರ್ಪಿಸಿ, ಆತನನ್ನು ಒಲಿಸಿಕೊಳ್ಳಲಿಲ್ಲವೇ? ‘ಗಡ್ಡಬಿಟ್ಟು, ಗುಡ್ಡ ಹತ್ತಿ ಕೂತವರಿಗೆ, ವಯಸ್ಸಾದವರಿಗೆ ಮಾತ್ರ, ಭಗವಂತ ಪ್ರತ್ಯಕ್ಷನಾಗುತ್ತಾನೆ’ ಎಂಬ ಸಿದ್ಧಾಂತವೂ ಇಲ್ಲ.
ಧ್ರುವನಿಗೆ ಭಗವಂತ ಪ್ರತ್ಯಕ್ಷನಾದಾಗ ಆತನಿಗೆ ವಯಸ್ಸೆಷ್ಟು? ಆತ ಇನ್ನೂ ಚಿಕ್ಕ ಬಾಲಕ. ವಿದ್ಯಾವಂತರಿಗೆ, ವೇದ ಓದಿದವರಿಗಷ್ಟೇ ಭಗವಂತನ ಒಲುಮೆಯಾಗುತ್ತದೆ ಎಂಬುದೂ ಇಲ್ಲ. ಕಮಲದ ಕೊಳದಲ್ಲಿ ಮೊಸಳೆಯ ಬಾಯಿಗೆ ಸಿಲುಕಿದ ಗಜೇಂದ್ರನ ಬಳಿ ಯಾವ ವಿದ್ಯೆ ಇತ್ತು? ಭಗವಂತ ಗಜೇಂದ್ರನಿಗೆ ದರ್ಶನ ನೀಡಿ, ಮೋಕ್ಷ ಕರುಣಿಸಲಿಲ್ಲವೇ? ಮೇಲ್ಜಾತಿಯಲ್ಲಿ ಹುಟ್ಟಿದ, ಉತ್ತಮ ಕುಲದಲ್ಲಿ ಜನ್ಮ ತಳೆದವರಿಗಷ್ಟೇ, ಭಗವಂತ ಸಂತುಷ್ಟನಾಗುತ್ತಾನೆ ಎಂಬ
ಹೀಗೆ ಭಗವಂತನ ಒಲುಮೆಗೆ ಮಡಿ, ಜಾತಿ, ವಿದ್ಯೆ, ಸಂಪತ್ತು, ರೂಪ, ಪೌರುಷ ಯಾವುದೂ ಕಾರಣವಲ್ಲ. ಕೇವಲ ಭಕ್ತಿಯೊಂದೇ ಸಾಕು. ಭಗವಂತನ ಕುರಿತಾಗಿ ಭಕ್ತಿಯ ಬೀಜ, ಪ್ರತಿಯೊಬ್ಬರ ಆಂತರ್ಯದಲ್ಲೂ ಜನ್ಮ-ಜನ್ಮಾಂತರದಿಂದ ನೆಲೆಸಿದೆ. ಅದನ್ನು ಜಾಗೃತಗೊಳಿಸುವ ಕೆಲಸವನ್ನಷ್ಟೇ ಮಾಡಬೇಕು.
ಭಗವಂತನ ನಿರಂತರ ಸ್ಮರಣ-ಧ್ಯಾನದಿಂದ, ಭಗವಂತನನ್ನೇ ಭಕ್ತನು ಬಂಧಿಸುವನು. ಈ ಬಂಧನವೇ ಸಂಸಾರ ಬಂಧನದಿಂದ ಬಿಡುಗಡೆಗೆ ಕಾರಣವಾಗುವುದು. ಬೆಂಕಿ ಸಮೀಪಕ್ಕೆ ಹೋದಾಗ ಹೇಗೆ ಶೈತ್ಯ ದೂರವಾಗಿ, ಉಷ್ಣತೆಯ ಅನುಭವವಾಗುತ್ತದೆಯೋ, ಹಾಗೇ ಭಗವಂತನ ಸಮೀಪ, ನಿಜಭಕ್ತನ ದುಃಖನಿವೃತ್ತಿಯಾಗಿ ಆನಂದದ ಅನುಭೂತಿ ಉಂಟಾಗುವುದು. ಅದೆಷ್ಟೋ ವರ್ಷಗಳಿಂದ ಯತಿಗಳು-ಯೋಗಿಗಳು, ಋಷಿ-ಮುನಿಗಳು, ಸಾಧು-ಸಂತರು, ಸಿದ್ಧಪುರುಷರು, ತಪಸ್ಸನ್ನು-ಸಾಧನೆಯನ್ನು ಮಾಡುತ್ತಿರುವುದು ಯಾಕಾಗಿ? ಇದೇ ಆನಂದಕ್ಕಾಗಿ ಅಲ್ಲವೇ?
| ಗಣೇಶ ಭಟ್ಟ (ಲೇಖಕರು ಸಂಸ್ಕೃತ ಉಪನ್ಯಾಸಕರು)