ಡಾ.ಗಣಪತಿ ಆರ್.ಭಟ್
ಪೇಟೆಯ ಕಡೆಯಿಂದ ಹಳ್ಳಿಗೆ ಬಂದಿದ್ದ ಯುವಕ ತನ್ನ ಪರಿಚಿತರೊಂದಿಗೆ ಆ ಊರಿನ ಆಲೆಮನೆಯೊಂದನ್ನು ಸಂದರ್ಶಿಸಿದ. ತನ್ನ ಹಾಗೇ ತಂಡೋಪತಂಡವಾಗಿ ಅಲ್ಲಿಗೆ ಬರುತ್ತಿದ್ದ ಜನರನ್ನು ಆ ಯಜಮಾನನು ಪ್ರೀತಿಯಿಂದ ಮಾತನಾಡಿಸಿ ಅವರಿಗೆ ಬೇಕಾದಷ್ಟು ಕಬ್ಬಿನ ಹಾಲು ಬೆಲ್ಲ ಕೊಟ್ಟು ಸತ್ಕರಿಸುತ್ತಿದ್ದುದನ್ನು ಕಂಡು ಆ ಯುವಕ ಅಚ್ಚರಿಯಿಂದ ಕೇಳಿದ-‘ಹೀಗೆ ಬಂದು ಹೋಗುವವರಿಗೆಲ್ಲ ಪುಕ್ಕಟೆಯಾಗಿ ಕಬ್ಬಿನ ಹಾಲು, ಬೆಲ್ಲ ಹಂಚಿದರೆ ನಿಮ್ಗೆ ನಷ್ಟ ಆಗೊಲ್ವ?’ ಇಂಥ ಪ್ರಶ್ನೆಯನ್ನೇ ನಿರೀಕ್ಷಿಸದ ಆ ಯಜಮಾನ, ‘ಅದ್ರಲ್ಲಿ ನಷ್ಟದ ಮಾತೇನು ಬಂತು? ವರ್ಷದಲ್ಲಿ ಒಮ್ಮೆ ಮಾತ್ರ ಈ ಆಲೆಮನೆ ನಡೆಯೋದು. ಇಲ್ಲಿಗೆ ಬರುವ ಎಲ್ಲರನ್ನೂ ಅವರಿಚ್ಛಾನುಸಾರ ಸತ್ಕರಿಸುವುದು ನನ್ನ ಧರ್ಮವಷ್ಟೆ. ಆದಾಗ್ಯೂ ನನ್ನ ಮನೆಗೆ ವರ್ಷಕ್ಕೆ ಬೇಕಾಗುವಷ್ಟು ಬೆಲ್ಲ ಇಟ್ಟುಕೊಂಡು ಉಳಿದಿದ್ದನ್ನು ಮಾರುತ್ತೇನೆ. ಕಬ್ಬಿನ ಹಾಲು ಕುಡಿದಿದ್ದನ್ನು ನೆನಪಲ್ಲಿ ಇಟ್ಟುಕೊಂಡು ಜನ ಯಾವಾಗಲೂ ಪ್ರೀತಿಯಿಂದ ಮಾತನಾಡಿಸುತ್ತಾರೆ’ ಎಂದು ಹೇಳಿದ. ಯುವಕನಿಗೆ ಹಳ್ಳಿಯ ಜೀವನದ ಸೊಗಡು ಮನದಟ್ಟಾಯಿತು. ಜೀವನ ನಿರ್ವಹಣೆಗಾಗಿ ನಾನಾ ವ್ಯವಹಾರಗಳಿಗೆ ಬದ್ಧರಾದ ನಾವು ಎಲ್ಲೆಂದರಲ್ಲಿ ಅದೇ ಬುದ್ಧಿಯನ್ನು ತೋರಿಸಿ ಬಿಡುತ್ತೇವೆ. ಆದರೆ ನಮ್ಮೊಳಗಿನ ಪಾರಮಾರ್ಥಿಕ ದೃಷ್ಟಿಯು ನಮಗೆ ವ್ಯಾವಹಾರಿಕ ಜ್ಞಾನ ನೀಡುವುದಕ್ಕಿಂತಲೂ ದೊಡ್ಡ ಲಾಭವನ್ನು ನೀಡಬಲ್ಲದು ಎಂಬುದನ್ನು ಅರಿಯುವುದೇ ಇಲ್ಲ. ನಮ್ಮ ವ್ಯಾವಹಾರಿಕ ಪ್ರಜ್ಞೆ ಆ ಕಾಲದ ಜೀವನ ನಿರ್ವಹಣೆಗೆ ಮಾತ್ರವೇ ಪ್ರಯೋಜನಕಾರಿ. ಅದರಾಚೆ ಇರುವ ಪಾರಮಾರ್ಥಿಕ ದೃಷ್ಟಿಯು ನಮಗೆ ಬೇಕಾದ ಶಾಶ್ವತ ನೆಮ್ಮದಿಯನ್ನೋ, ಬದುಕಿನ ಸಾರ್ಥಕತೆಯನ್ನೋ ಪಡೆದುಕೊಳ್ಳಲು ಬೇಕಾದುದು. ಮಹಾಭಾರತದಲ್ಲಿ ಬರುವ ಧರ್ಮವ್ಯಾದನ ಪ್ರಸಂಗ ಇಲ್ಲಿ ಉಲ್ಲೇಖನೀಯ. ಮಾಂಸವನ್ನು ಕತ್ತರಿಸಿ, ಮಾರುವುದು ಧರ್ಮವ್ಯಾದನ ಕುಲ ಕಸುಬಾಗಿತ್ತು. ವೃತ್ತಿಸಹಜವಾಗಿ ಅವನೊಬ್ಬ ಕಟುಕ. ಆದರೆ ಮನೆಯೊಳಗೆ ಹೋದರೆ ಆತ ತೀರಾ ವಿಭಿನ್ನ. ಅತಿಥಿ ಸತ್ಕಾರ ಮಾಡುತ್ತ, ತನ್ನ ತಂದೆ-ತಾಯಿಯರನ್ನು ಗೌರವದಿಂದ ಕಾಣುತ್ತ, ಕೈಲಾದಷ್ಟು ದಾನಾದಿಗಳನ್ನು ಮಾಡುತ್ತ ತನ್ನ ಪಾಪದ ಹೊರೆಯನ್ನು ಇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಅವನ ಈ ಪಾರಮಾರ್ಥಿಕ ಗುಣದಿಂದಲೇ ಸಮಾಜದಲ್ಲಿ ಆತ ಮಾದರಿಯೆನಿಸಿಕೊಂಡ. ಹೊಟ್ಟೆಪಾಡಿಗಾಗಿ ನಿತ್ಯ ಮಾಡುವ ವ್ಯವಹಾರದ ಹೊರತಾಗಿಯೂ ಪರಹಿತಕ್ಕಾಗಿ ನಮ್ಮ ಬುದ್ಧಿಯನ್ನು ವಿನಿಯೋಜಿಸಿ ಕೊಳ್ಳುವ ಅನಿವಾರ್ಯತೆಯನ್ನೂ ಈ ಪ್ರಸಂಗ ನಮಗೆ ತಿಳಿಸುತ್ತದೆ.
ಡಿವಿಜಿ ಹೇಳುತ್ತಾರೆ-
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ|
ಹೊರಕೋಣೆಯಲಿ ಲೋಗರಾಟಗಳನಾಡು||
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ|
ವರಯೋಗಸೂತ್ರವಿದು ಮಂಕುತಿಮ್ಮ||
ಅಂದರೆ ನಮ್ಮ ಮನಸಿನ ಮನೆಯೊಳಗೆ ನಾವು ಎರಡು ಕೋಣೆಯನ್ನು ನಿರ್ವಿುಸಿ ಕೊಳ್ಳಬೇಕು. ಹೊರಕೋಣೆಯಲ್ಲಿ ಮಾತ್ರವೇ ಪ್ರಪಂಚದ ನಾನಾ ವ್ಯವಹಾರಗಳ ಜಂಜಾಟವನ್ನು ಇರಿಸಿಕೊಂಡು, ಒಳಕೋಣೆಯನ್ನು ಪಾರಮಾರ್ಥಿಕ ಚಿಂತನೆಗೆ ಮೀಸಲಾಗಿರಿಸಬೇಕು. ಪ್ರಾಪಂಚಿಕ ವ್ಯವಹಾರದ ಚಿಂತನೆಯ ಫಲಿತಾಂಶವು ಕೇವಲ ಸ್ವಾರ್ಥ, ರಾಗ, ದ್ವೇಷಾದಿಗಳು. ಹಾಗಾಗಿ ಆ ಚಿಂತನೆಯನ್ನು ಎಷ್ಟು ಬೇಕೋ ಅಷ್ಟು ಮಾತ್ರವೇ ಮಾಡಿ ದಯೆ, ದಾಕ್ಷಿಣ್ಯಾದಿಗಳನೊಳಗೊಂಡ ಪಾರಮಾರ್ಥಿಕ ಚಿಂತನೆಗೆ ಮನಸಿನಲ್ಲಿ ಹೆಚ್ಚಿನ ಜಾಗವಿರಿಸಬೇಕು. ಯಾಕೆಂದರೆ ಅದು ಮಾತ್ರವೇ ನಮ್ಮನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯ್ಯುತ್ತದೆ.
(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)