ರಾಮಾಯಣದಲ್ಲಿ ಉಲ್ಲೇಖವಾಗಿರುವ ಒಂದು ಕತೆ. ವನವಾಸಿಯಾಗಿದ್ದ ರಾಮ ಮತ್ತೆ ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾಗಿ ರಾಜ್ಯವಾಳುತ್ತಿದ್ದ ದಿನಗಳು. ಎಷ್ಟೇ ಆದರೂ ರಾಮನದು ರಾಮ ರಾಜ್ಯವಲ್ಲವೇ? ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುತ್ತಿದ್ದ. ಹೀಗೆ ಒಂದು ದಿನ ಆಸ್ಥಾನಿಕನಾಗಿ ಇರುವಾಗ ಲಕ್ಷ್ಮಣನನ್ನು ಹೊರ ಕಳಿಸಿ, ‘ಯಾರಾದರೂ ದೂರು ತೆಗೆದುಕೊಂಡು ಬಂದಿರುವರೇ ನೋಡಿಕೊಂಡು ಬಾ’ ಎಂದರೆ ಆತ ಹೊರಹೋಗಿ ನೋಡಿಕೊಂಡು ಬಂದು ‘ಇಲ್ಲ!’ ಎಂದ. ಮತ್ತೊಮ್ಮೆ ಲಕ್ಷ್ಮಣನನ್ನು ಹೊರಕಳಿಸಿದರೆ ಅವನು ನೋಡಲಾಗಿ ಅಲ್ಲಿ ನಾಯಿಯೊಂದು ಸಂಕಟದಿಂದ ಊಳಿಡುತ್ತಿತ್ತು. ಅದನ್ನು ರಾಮನಲ್ಲಿ ಕರೆತಂದರೆ ಅದು, ‘ಮಹಾಸ್ವಾಮಿ ನಾನು ದೇವಸ್ಥಾನದ ಹೊರಭಾಗದಲ್ಲಿ ಮಲಗಿದ್ದೆ. ಭಿಕ್ಷುವೊಬ್ಬ ನನ್ನನ್ನು ವಿನಾಕಾರಣ ಹೊಡೆದಿದ್ದಾನೆ. ನನಗೆ ನ್ಯಾಯ ಬೇಕು’ ಎನ್ನುತ್ತದೆ. ‘ಯಾರದು?’ ಎಂದಾಗ ಆ ಬ್ರಾಹ್ಮಣನ ಪರಿಚಯವನ್ನು ಹೇಳಿತು.
‘ಆ ಭಿಕ್ಷುವಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು ನೀನೇ ಹೇಳು’ ಎಂದ ರಾಮ. ಅದಕ್ಕೆ ಶ್ವಾನವು, ಆತನನ್ನು ಕಾಲಿಂಜರ ಮಠದ ಧರ್ಮದರ್ಶಿಗಳನ್ನಾಗಿ ಮಾಡಬೇಕೆಂದು ಕೇಳಿಕೊಳ್ಳುತ್ತದೆ. ಶ್ರೀರಾಮ ಆ ಭಿಕ್ಷುವನ್ನು ಸಕಲ ಮರ್ಯಾದೆಗಳೊಂದಿಗೆ ಕಾಲಿಂಜರ ಮಠದ ಧರ್ಮದರ್ಶಿಗಳನ್ನಾಗಿ ಮಾಡಿ ಅಧಿಕಾರ ವಹಿಸಿಕೊಡುತ್ತಾನೆ. ಆಗ ರಾಮನು ಶ್ವಾನವನ್ನು ಉದ್ದೇಶಿಸಿ, ‘ನಿನಗೆ ಆ ಭಿಕ್ಷು ಕೆಡುಕನ್ನೇ ಉಂಟು ಮಾಡಿದ್ದ. ಆದರೂ ನೀನು ಏಕೆ ಅವನಿಗೆ ಉನ್ನತ ಪದವಿ, ಅಧಿಕಾರ ಸಿಗುವಂತೆ ಮಾಡಿದೆ?’ ಎಂದು ಪ್ರಶ್ನಿಸಿದ. ಅದಕ್ಕೆ, ‘ಮಹಾಸ್ವಾಮಿ, ನಾನು ಈ ನಾಯಿಯ ಜನ್ಮಕ್ಕೆ ಬರುವ ಪೂರ್ವದಲ್ಲಿ ಇದೇ ಕಾಲಿಂಜರ ಮಠದ ಧರ್ಮದರ್ಶಿಯಾಗಿದ್ದೆ. ಅಲ್ಲಿ ಸಿಕ್ಕ ಘನತೆ, ಗೌರವ, ಆದಾಯ ನನ್ನನ್ನು ಅಹಂಕಾರಿಯಾಗಿ ಮಾಡಿತು. ನಾನು ಆ ದರ್ಪದಿಂದ ಮಾಡಬಾರದ ಕೆಟ್ಟ ಕೆಲಸ ಮಾಡಿಬಿಟ್ಟೆ. ಅದರ ಪರಿಣಾಮವೇ ಈ ಜನ್ಮ. ಅಂತೆಯೇ ಈ ಭಿಕ್ಷುವೂ ಆಗುತ್ತಾನೆ. ನನಗೆ ಸುಖಾಸುಮ್ಮನೆ ಹೊಡೆದಿದ್ದಾನೆ. ಅವನೂ ಮುಂದೊಂದು ದಿನ ನಾಯಿಯಾಗುತ್ತಾನೆ’ ಎನ್ನುತ್ತದೆ.
ಈ ಸನ್ನಿವೇಶ ಎಷ್ಟು ಮಾರ್ವಿುಕವಾಗಿದೆ ಅಲ್ಲವೇ? ನಮ್ಮ ಕರ್ಮ ನಮ್ಮನ್ನು ಯಾವಾಗಲೂ ಹಿಂಬಾಲಿಸುತ್ತಿರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಹಿರಿಯರು. ‘ಯದ್ಭಾವಂ ತದ್ಭವತಿ’ ಎಂಬಂತೆ ನಮ್ಮ ಕರ್ಮದ ಫಲವೇ ನಮ್ಮ ಬದುಕಿನ ಸ್ಥಿತಿಯಾಗಿರುತ್ತದೆ. ಒಳ್ಳೆಯದನ್ನು ಆಚರಿಸಿದರೆ ಒಳ್ಳೆಯದೇ ಆಗುತ್ತದೆ. ಕನ್ನಡಿ ನಮ್ಮ ಪ್ರತಿಬಿಂಬವನ್ನು ತೋರಿಸುವಂತೆ ನಮ್ಮ ಪಾಪ-ಪುಣ್ಯಗಳು ಬದುಕಿನ ಆಗುಹೋಗುಗಳಲ್ಲಿ ಬಿಂಬಿತವಾಗಿರುತ್ತವೆ. ಬದುಕು ಮೂರು ನಿಮಿಷದ್ದೋ ನೂರು ವರುಷದ್ದೋ ಗೊತ್ತಿಲ್ಲ! ಒಳ್ಳೆಯ ಆಚರಣೆ ಆಚರಿಸಬೇಕು. ಈರ್ಷ್ಯೆ ಇಲ್ಲದೆ ಇರಬೇಕು. ಇತರರ ಕುರಿತ ಸಲ್ಲದ ವಿಚಾರಗಳನ್ನು, ಇತರರಲ್ಲಿ ಕಿವಿತುಂಬಿ ಅವರ ತಾಳ್ಮೆಯನ್ನು ದುರಪಯೋಗಪಡಿಸಿಕೊಳ್ಳುವುದರ ಬದಲು, ಕಣ್ಣಾಮುಚ್ಚಾಲೆ ಆಡಿ, ವಿಶ್ವಾಸಘಾತುಕತನ ಮಾಡದೆ ಬದುಕನ್ನು ನಡೆಸಬೇಕು. ನಾವು ಮಾಡಿದ ಅಡುಗೆ ನಾವೇ ಊಟ ಮಾಡಬೇಕು. ಅನ್ಯರ ವಿಷಯಕ್ಕೆ ಎಳೆಸದಂತೆ ನಮ್ಮ ಬದುಕಿರಬೇಕು.
ಸುಮಾವೀಣಾ -ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ