ಲೈಫ್‌ಸ್ಟೈಲ್

ಹಠಕ್ಕೆ ಬಿದ್ದು ವಾದಕ್ಕೆ ನಿಂತರೆ ಇರುವ ಸಂತೋಷವೂ ಮಾಯ: ಮನೋಲ್ಲಾಸ ಓದಿ

kumarvrl

ನರೇಂದ್ರ ಎಸ್.ಗಂಗೊಳ್ಳಿ

ವಿಶ್ವ ಕಂಡ ಅತ್ಯುತ್ತಮ ಧಾರ್ವಿುಕ ಚಿಂತಕ, ಸಂತರಲ್ಲಿ ಶ್ರೀರಾಮಕೃಷ್ಣ ಪರಮಹಂಸರು ಒಬ್ಬರೆಂದು ಹೆಸರುವಾಸಿ ಆದವರು. ಹಿಂದೂ ಧರ್ಮದ ಪುನರುಜ್ಜೀವನಕ್ಕಾಗಿ ಶ್ರಮಿಸಿದ ಮಹಾನ್ ಚೇತನ ಕೂಡ. ‘ರಾಮಕೃಷ್ಣರ ಜೀವನ ಚರಿತ್ರೆ ಎನ್ನುವುದು ಧರ್ಮದ ಪ್ರಾಯೋಗಿಕ ಚರಿತ್ರೆ. ಅವರ ಜೀವನದ ಮೂಲಕ ನಾವು ದೇವರಿಗೆ ಮುಖಾಮುಖಿ ಆಗಲು ಸಾಧ್ಯ’ ಎಂದು ಗಾಂಧೀಜಿ ಹೇಳಿದ್ದರು.

ಕಾಳಿದೇವಿಯ ಪರಮ ಆರಾಧಕರಾಗಿದ್ದ ರಾಮಕೃಷ್ಣರು ತಾವು ದೇವರನ್ನು ಕಂಡಿದ್ದಾಗಿ ಹೇಳುತ್ತಿದ್ದರು. ಅದೊಂದು ದಿನ ಒಬ್ಬಾತ ರಾಮಕೃಷ್ಣರ ಬಳಿಗೆ ಬಂದು ಹೇಳಿದ, ‘ಸ್ವಾಮೀ ನೀವು ದೇವರನ್ನು ನೋಡಿದ್ದೇನೆ ಎಂದು ಹೇಳುತ್ತೀರಲ್ಲ. ನನಗೆ ಅದರಲ್ಲಿ ಖಂಡಿತ ನಂಬಿಕೆಯಿಲ್ಲ. ನೀವು ದೇವರನ್ನು ನನಗೆ ತೋರಿಸಿದರೆ ಮಾತ್ರ ನಾನು ನಂಬುತ್ತೇನೆ’ ಎಂದ. ಅದಕ್ಕೆ ರಾಮಕೃಷ್ಣರು ಮುಗುಳ್ನಗುತ್ತ-‘ಅದರ ಅಗತ್ಯವಿಲ್ಲ. ನಾನು ದೇವರನ್ನು ಕಂಡಿದ್ದೇನೆ ಮತ್ತು ಅದನ್ನು ನಂಬುತ್ತೇನೆ. ನಿನಗೆ ಬೇಕಾದರೆ ನೀನೇ ಹುಡುಕಿಕೋ’ ಎಂದು ಹೇಳಿದರು. ಬಂದಾತ ಮರಳಿ ಮಾತನಾಡದೆ ಹೊರಟು ಹೋದ.

ಮೇಲ್ನೋಟಕ್ಕೆ ರಾಮಕೃಷ್ಣರ ಉತ್ತರದ ಬಗೆಗೆ ಸರಿಯೇ ಎಂದು ಪ್ರಶ್ನೆ ಮೂಡಬಹುದು. ಆದರೆ, ಯಾವುದೇ ವಿಚಾರಗಳಿಗೆ ಸಂಬಂಧಪಟ್ಟಂತೆ ‘ಈ ಜಗತ್ತಿನ ಎಲ್ಲರಿಗೂ ಮನಗಾಣಿಸುತ್ತೇನೆ ಮತ್ತು ಅವರು ಒಪ್ಪುವಂತೆ ಮಾಡುತ್ತೇನೆ’ ಎಂದು ಹೊರಡುವುದಿದೆಯಲ್ಲ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಎಲ್ಲರನ್ನೂ ಒಪ್ಪಿಸುತ್ತೇನೆ ಎಂದು ಹಠಕ್ಕೆ ಬಿದ್ದು ವಾದಕ್ಕೆ ಕುಳಿತರೆ ಜೀವನದಲ್ಲಿ ಇರುವ ಸಂತೋಷವನ್ನು ಕಳೆದುಕೊಳ್ಳುವುದು ಖಚಿತ. ಅಂತಹ ಪ್ರಯತ್ನಗಳು ನಮ್ಮ ಸಾಧನೆಯ ದಾರಿಯಲ್ಲಿ ಹಿನ್ನಡೆಯೇ ಆಗಿರುತ್ತವೆ. ಸ್ವಯಂ ಪರಿಶ್ರಮಪಡಲು ತಯಾರಿಲ್ಲದ ಜನರಿಗೆ ದಾರಿ ತೋರುವ ಪ್ರಯತ್ನದಿಂದ ಏನೂ ಪ್ರಯೋಜನವಿಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತ ಸಾಗೋಣ. ಅಗತ್ಯಬಿದ್ದಲ್ಲಿ ಮಾತ್ರ ತಿಳಿಸೋಣ. ಅದಕ್ಕೆ ಹೇಳಿದ್ದು ಸದ್ದಿಲ್ಲದೆ ಕೆಲಸ ಸಾಗಲಿ. ಯಶಸ್ಸು ತಾನಾಗಿಯೇ ಸದ್ದು ಮಾಡುತ್ತದೆ.

ಯಾವುದೇ ಮನುಷ್ಯನಿಗಾದರೂ ನಂಬಿಕೆ ಎನ್ನುವುದು ಬಹಳ ಮುಖ್ಯ. ಮತ್ತದು ಮೂಢವಾಗಿ ಇರಬಾರದು ಮತ್ತು ಸಮಾಜದ ಆರೋಗ್ಯವನ್ನು ಕೆಡಿಸುವಂತಿರಬಾರದು. ತನ್ನ ನಂಬಿಕೆಯನ್ನು ಉಳಿದವರ ಮೇಲೆ ಹೇರಲೂ ಬಾರದು. ಆ ನಂಬಿಕೆಯ ಜತೆಯಲ್ಲಿ ಉತ್ತಮ ಕೆಲಸಗಳು ಸಾಗಲಿ, ಬಾಳು ಬೆಳಗಲಿ ಎನ್ನುವುದು ಆಶಯ. ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡೋಣ. ಸಮಾಜಕ್ಕೆ ಹಿತಕ್ಕೆ ಪೂರಕವಾಗುವಂತೆ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳೋಣ. ನಮ್ಮ ವಿಚಾರ ಅಥವಾ ಸಿದ್ಧಾಂತ ಎಲ್ಲರೂ ಒಪ್ಪಲಿ ಎಂಬ ಸ್ಪರ್ಧೆಗೆ ಬೀಳದೆ ನಮ್ಮದೇ ಸಾರ್ಥಕ ದಾರಿಯಲ್ಲಿ ಜೀವನಪಯಣ ಮುಂದುವರಿಸೋಣ.

(ಲೇಖಕರು ವಾಣಿಜ್ಯಶಾಸ್ತ್ರ ಉಪನ್ಯಾಸಕರು)