ವನರಾಗ ಶರ್ಮಾ
ಮಧ್ಯರಾತ್ರಿಯ ಸಮಯ. ಫಕ್ಕನೆ ಎದ್ದ ಮುಲ್ಲಾ ನಸೀರುದ್ದೀನ್ ಹೆಂಡತಿಗೆ ಹೇಳಿದ-‘ಯಾವುದೇ ಪ್ರಶ್ನೆ ಕೇಳದೆ ಕೂಡಲೇ ನನ್ನ ಚಾಳೀಸು ತಂದುಕೊಡು. ವಿಷಯವೇನೆಂದು ಬೆಳಗ್ಗೆ ವಿವರಿಸುತ್ತೇನೆೆ.’ ಪತ್ನಿ, ‘ಈ ಮಧ್ಯರಾತ್ರಿಯಲ್ಲಿ ಕನ್ನಡಕದಿಂದ ನಿಮಗೇನು ಅಂಥ ಕೆಲಸ? ವಿಚಿತ್ರವಾಗಿದೆಯಲ್ಲ?’ ಎಂದು ಕೇಳಿದಳು. ‘ಮಾರಾಯ್ತಿ, ಮೊದಲು ಕನ್ನಡಕ ತಂದುಕೊಡು. ನನ್ನ ಸಮಯ ಹಾಳುಮಾಡಬೇಡ...’ ಎಂದ ಮುಲ್ಲಾ. ಅದ್ಭುತವೇನೋ ನಡೆಯಲಿಕ್ಕಿದೆ ಎಂದು ಹೆಂಡತಿ ಬೇಗ ಚಾಳೀಸು ತಂದುಕೊಟ್ಟಳು. ಮುಲ್ಲಾ ಕನ್ನಡಕ ಧರಿಸಿ ಸುತ್ತೆಲ್ಲ ನೋಡತೊಡಗಿದ. ಇಲ್ಲ, ಏನೂ ಇರಲಿಲ್ಲ. ಅವನು ನೋಡಲು ಇಚ್ಛಿಸಿದ ಚೆಲುವೆ ಅಲ್ಲಿರಲಿಲ್ಲ! ಕತ್ತಲೆ ಮಂದಬೆಳಕು ಮಾತ್ರ ಅಲ್ಲಿತ್ತು. ಅಜ್ಞಾತ ರೂಹೊಂದು ಆಸೆಗೆ ತಣ್ಣೀರು ಸುರಿದು ನಗುತ್ತಿರುವಂತೆ ಭಾಸವಾಯಿತು. ಆಗ ಮುಲ್ಲಾನ ಬಾಯಿಂದ ಉದ್ಗಾರ ಹೊರಬಿತ್ತು: ‘ಅದೆಂಥ ಸುಂದರ ಯುವತಿಯನ್ನು ನೋಡುತ್ತಿದ್ದೆ. ನನ್ನ ದೃಷ್ಟಿಮಾಂದ್ಯದ ಕಾರಣ ಆಕೆಯನ್ನು ಚೆನ್ನಾಗಿ ನೋಡಲು ಆಗಲಿಲ್ಲ’. ಮುಲ್ಲಾ ಕನ್ನಡಕ ಏರಿಸಿ ಆಕೆಯನ್ನು ಮರಳಿನೋಡಲು ಎಷ್ಟೇ ಪ್ರಯತ್ನಿಸಿದರೂ ಯಾವ ಸುಂದರಿಯೂ ಕಾಣಲಿಲ್ಲ.
ಎಲ್ಲರೂ ಇಂಥದೇ ಕನಸು ಕಾಣುತ್ತಾರೆ. ಆದರೆ ಕಣ್ದೆರೆದಾಗ ವಾಸ್ತವ ಎದುರು ನಿಂತಿರುತ್ತದೆ. ‘ಒಹೋ! ನಾನು ಕಂಡದ್ದು ಕನಸು!’ ಎಂದು ವಾಸ್ತವವನ್ನು ಅರ್ಥಮಾಡಿಕೊಂಡರೆ ಅವನೇ ಸುಖಿ. ಏಕೆಂದರೆ ಒಮ್ಮೆ ಕಂಡ ಕನಸನ್ನು ಮತ್ತೆ ಕಾಣಲಾಗುವುದಿಲ್ಲ. ಕನಸು ಮುರಿದರೆ ಮತ್ತೆ ಅದು ಕಾಣುವುದಿಲ್ಲ. ಅದೃಷ್ಟ ಒಮ್ಮೆ ಮಾತ್ರ ಬಾಗಿಲು ತಟ್ಟುತ್ತದೆ. ಅಧಿಕಾರ, ಸಂಪತ್ತು, ಹೆಂಡತಿ, ಮಕ್ಕಳು ಎಲ್ಲವೂ ಹೀಗೆಯೇ. ಅದಕ್ಕಾಗಿಯೇ ‘ಈ ಪ್ರಪಂಚವೇ ಮಾಯೆ ಬ್ರಹ್ಮವೊಂದೇ ಸತ್ಯ’ ಎಂದು ಆಚಾರ್ಯ ಶಂಕರರು ಹೇಳುತ್ತಾರೆ (‘ಜಗನ್ಮಿಥ್ಯಾ ಬ್ರಹ್ಮ ಸತ್ಯಮ್). ಕನಸು ವಾಸ್ತವವೂ ಅಲ್ಲ; ಕೈಗೆ ಸಿಗುವುದೂ ಅಲ್ಲ. ಅದು ಗಗನಕುಸುಮ. ಕನ್ನಡಿಯ ಗಂಟು. ಆದಕಾರಣ ಅದರ ಮೋಹಕ್ಕೆ ಒಳಗಾಗಿ ಪಥಭ್ರಷ್ಟರಾಗಬಾರದು ಎಂಬುದು ಇದರ ಮುಖ್ಯಸಂದೇಶ. ಹಾಗಾದರೆ ಕನಸೇ ಕಾಣಬಾರದೆ? ಕಾಣಬೇಕು; ಸಾಧನೆಯಿಂದ ಸಿದ್ಧಿಪಡೆಯುವ ಕನಸು ಕಾಣಬೇಕು. ಕವಿಯಾಗುವ, ಕಲಾವಿದನಾಗುವ, ದೊಡ್ಡ ಅಧಿಕಾರಿ, ಉತ್ತಮ ರೈತ, ವಿದ್ಯಾವಂತ, ಶ್ರೇಷ್ಠ ಪ್ರಧಾನಿ, ರಾಜಕಾರಣಿ, ನಟ, ಗಾಯಕ ಹೀಗೆ ಏನೆಲ್ಲ ಕನಸು ಕಾಣಬೇಕು. ಆದರೆ ಅದು ವಾಸ್ತವದ ನೆಲೆಗಟ್ಟಿನ ಮೇಲೆ ನಿಂತುದಾಗಿರಬೇಕು. ರಾತ್ರಿ ಮಲಗಿದಾಗ ಕಂಡ ಸ್ವಪ್ನಸುಂದರಿ ಆಗಿರಬಾರದು ಅಷ್ಟೆ.
ಕನಸಿನಲಿ ಸುಂದರಿಯು ಸಂಪತ್ತು ವಿಷ್ಟರವು |
ಮನದಂದದರಮನೆಯು ಪೂವನದ ಸಗ್ಗ ||
ನನಸಂತೆ ಕಂಡರೂ ಕಣ್ದೆರೆಯೆ ತಿರುಕನೊಲು |
ಮನೆದಾರಿಗತಿಯಲ್ತೆ ವನರಾಗಮಿತ್ರ ||
ಎಂಬಂತೆ ಇಹದಲ್ಲಿ ನಮ್ಮ ಮನೆ, ಹೆಂಡತಿ, ಪರದಲ್ಲಿ ಪರಂಧಾಮ, ಪರಮಾತ್ಮ ಇವೇ ನಮ್ಮ ನಿಜವಾದ ಗತಿ ಮತ್ತು ಆಪದ್ಬಂಧುಗಳು ಎಂಬುದನ್ನೂ ಇದು ಸಾರುತ್ತದೆ. ಇದನ್ನು ಅರ್ಥ ಮಾಡಿಕೊಂಡರೆ ಕನಸೆಂಬ ಮೃಗಮರೀಚಿಕೆ ಹಿಂದೆ ನಾವು ಧಾವಿಸುವುದಿಲ್ಲ. ಅರ್ಥವೆಂಬ ವೈಯ್ಯಾರಿಯ ಕುಡಿನೋಟಕ್ಕೆ ಮರುಳಾಗುವುದಿಲ್ಲ. ಮಿತಿದಾಟಿದ ಕಾಮನೆಯ ಬೆಂಕಿಗೆ ಪತಂಗದಂತೆ ಬಲಿಯಾಗುವುದಿಲ್ಲ.
(ಲೇಖಕರು ನಿವೃತ್ತ ಮುಖ್ಯೋಪಾಧ್ಯಾಯರು)