ಸಜ್ಜನನಾದ ಚಮ್ಮಾರನ ಕನಸಿನಲ್ಲಿ ಒಮ್ಮೆ ದೇವರು ಕಾಣಿಸಿಕೊಂಡು, ‘ನಿನ್ನ ಮನೆಗೆ ನಾನು ಬರುತ್ತೇನೆ’ ಎಂದ. ಚಮ್ಮಾರನಿಗೆ ಸಂತೋಷ ಸಂಭ್ರಮ. ಬಗೆಬಗೆಯ ತಿನಿಸುಗಳನ್ನು ಮಾಡಿ ದೇವರನ್ನು ಕಾಯುತ್ತ, ತನ್ನ ಕಾಯಕ ಮಾಡುತ್ತ, ನಿರೀಕ್ಷಿಸುತ್ತ ಕುಳಿತ. ಅಷ್ಟರಲ್ಲಿ ಜೋರಾಗಿ ಮಳೆ ಬಂತು. ಮಳೆಯಲ್ಲಿ ನೆನೆದ ಒಬ್ಬ ಬಡಪಾಯಿ ಚಳಿಯಿಂದ ನಡುಗುತ್ತ ಈತನ ಮನೆಬಾಗಿಲಿಗೆ ಬಂದ. ಊಟ ಮಾಡಿ ಎಷ್ಟು ದಿನವಾಗಿತ್ತೋ, ಚಮ್ಮಾರ ಅವನನ್ನು ಒಳ ಕರೆದು, ಕೂರಿಸಿ, ಊಟ ಕೊಟ್ಟ. ಹೊದೆಯಲು ಕಂಬಳಿ ಕೊಟ್ಟ. ಮಳೆ ನಿಂತ ಮೇಲೆ ಆ ಬಡಪಾಯಿ ಹೊರಟ. ಸ್ವಲ್ಪ ಹೊತ್ತಿನ ನಂತರ, ಒಂದು ನಾಯಿ ಬಂತು. ಅದಕ್ಕೀತ ಅನ್ನ, ಹಾಲು ಹಾಕಿದ. ಹಸಿದ ಆ ನಾಯಿ ಅದನ್ನು ತಿಂದು ಬಾಲ ಅಲ್ಲಾಡಿಸಿ ಕೃತಜ್ಞತೆ ತೋರಿಸಿತು. ರಾತ್ರಿಯಾಯಿತು, ದೇವರು ಬರಲಿಲ್ಲ. ಬಾಗಿಲು ಹಾಕಿ ಈತ ಮಲಗಲು ಸಿದ್ಧತೆ ಮಾಡಿದ. ಯಾರೋ ಬಾಗಿಲು ಬಡಿದರು. ‘ದೇವರು ಬಂದನೇನೋ’ ಎಂದು ಆತುರದಿಂದ ಬಾಗಿಲು ತೆರೆದು ನೋಡಿದರೆ, ಒಬ್ಬ ಗರ್ಭಿಣಿ ದಣಿದು ನಿಂತಿದ್ದಾಳೆ. ‘ಊರು ತಲುಪಲಾಗಲಿಲ್ಲ. ಕತ್ತಲಾಗಿದೆ. ನನಗೆ ಆಶ್ರಯ ಕೊಡುವಿರಾ’ ಎಂದು ಕೇಳಿದಳು. ಚಮ್ಮಾರ ಆಕೆಗೆ ಆಹಾರ ಕೊಟ್ಟು, ಮಲಗಲು ವ್ಯವಸ್ಥೆ ಮಾಡಿದ. ರಾತ್ರಿ ಕಳೆಯಿತು. ದೇವರು ಬರಲಿಲ್ಲ. ಮಾರನೇ ದಿನ ರಾತ್ರಿ ಕನಸಿನಲ್ಲಿ ದೇವರು ಬಂದ. ‘ದೇವರೇ ಕೊಟ್ಟ ಮಾತಿನಂತೆ ನೀನು ನನ್ನ ಮನೆಗೆ ಬರಲಿಲ್ಲ ಏಕೆ?’ ಎಂದು ಈತ ಕೇಳಿದ. ‘ಮೂರು ಸಲ ಬಂದೆ. ಮೂರು ಸಲ ಕೂಡ ನೀನು ನನಗೆ ಎಷ್ಟೊಂದು ಆರೈಕೆ ಮಾಡಿದೆಯಲ್ಲಾ, ತುಂಬ ಸಂತೋಷವಾಯಿತು’ ಎಂದ ದೇವರು. ಜನಸೇವೆಯೇ ಜನಾರ್ದನ ಸೇವೆ ಎಂಬುದು ಅರ್ಥಪೂರ್ಣ ನಾಣ್ಣುಡಿ. ‘ಮತ್ತೊಬ್ಬರ ಕಷ್ಟಕ್ಕೆ ಮರುಗುವವನೇ ಮಹಾತ್ಮ’ ಎಂಬುದು ಮತ್ತೊಂದು ಅರ್ಥಪೂರ್ಣ ಮಾತು. ದಯೆ, ಅನುಕಂಪ, ಸಹಾನುಭೂತಿಗಳನ್ನು ಮಾನವೀಯ ಗುಣಗಳೆಂದು ಕರೆಯುತ್ತಾರೆ. ಇತರ ಜೀವಿಗಳ ಬಗ್ಗೆ ಕರುಣೆ, ಅವರ ಕಷ್ಟ ನೋವಿಗೆ ಮರುಗುತ್ತ, ಕೈಲಾದ ನೆರವನ್ನು ನೀಡಿ ನೆಮ್ಮದಿ ನೀಡುವುದು, ಇನ್ನೊಬ್ಬರ ಭಾವನೆ, ಅನಿಸಿಕೆ ಅರ್ಥ ಮಾಡಿಕೊಂಡು ಸ್ಪಂದಿಸುವುದು ದೊಡ್ಡ ಹಾಗೂ ಅನುಕರಣೀಯ ಗುಣ ಎನಿಸಿಕೊಳ್ಳುತ್ತದೆ. ‘ದಯೆ ಇಲ್ಲದ ಧರ್ಮ ಆವುದಯ್ಯಾ?’ ಎಂದಿದ್ದಾರೆ ಬಸವಣ್ಣನವರು. ಎಲ್ಲ ಮತ ಧರ್ಮಗಳೂ ದೀನದಲಿತರಿಗೆ, ಅಸಹಾಯಕರಿಗೆ, ದುರ್ಬಲರಿಗೆ ಸಹಾಯ ಮಾಡುವುದೇ ಪೂಜೆ ಎನ್ನುತ್ತವೆ.
ಸುಖವಾಗಿ ಇರುವವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕಾದುದು ಮಾನವನ ಸಹಜ ಪ್ರವೃತ್ತಿ. ಅದೇ ಮಾನವೀಯತೆಯ ಜೀವನ. ‘ನರಸೇವೆಯೇ ನಾರಾಯಣನ ಸೇವೆ’, ‘ಪರೋಪಕಾರವೇ ಪುಣ್ಯ, ಪರಪೀಡನವೇ ಪಾಪ’ ಎಂಬ ನಾಣ್ಣುಡಿಗಳು ಜನಜನಿತ. ಇತರರಿಗೆ ಸಹಾಯ ಮಾಡುವ ಹೃದಯವಿರುವವರಿಗೆ ದೇವರು ಸಹೃದಯಿಗಳ ಮೂಲಕ ನೆರವಾಗುತ್ತಾನೆ. ‘ಪರೋಪಕಾರ್ಥಾಯ ಇದಂ ಶರೀರಂ’ ಎಂಬಂತೆ ಮಾನವ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ನಾವೆಲ್ಲ ಶಕ್ತಿ ಮೀರಿ ಪ್ರಯತ್ನಿಸೋಣ!
ಡಾ.ವಿ.ಎಚ್.ಮೂಲಿಮನಿ, (ಲೇಖಕರು ನಿವೃತ್ತ ಪ್ರಾಧ್ಯಾಪಕರು)